ಗೆಲುವೆಂಬ ಅಂತ್ಯವಿಲ್ಲದ ಪಯಣಕ್ಕೆ ಏನೇನು ಬೇಕು?

November 18, 2009

’ಗೆಲುವು’ ಎಂಬ ಮೂರಕ್ಷರದ ಸಂಗತಿಗೆ ಸಂಬಂಧಿಸಿದಂತೆ ಅನೇಕ ದಶಕಗಳಿಂದ ರಿಸರ್ಚು ನಡೆಯುತ್ತಲೇ ಇದೆ. ಗೆಲುವೆಂಬುದು ಆಕಸ್ಮಿಕವಾ? ಖಂಡಿತ ಅಲ್ಲ. ಅವಿವೇಕಿಗಳು ಮಾತ್ರ ಬದುಕಿನಲ್ಲಿ ಆಕಸ್ಮಿಕದಂತಹುದೇನಾದರೂ ಘಟಿಸಲಿ ಎಂದು ಕಾಯುತ್ತ ಕೂಡುತ್ತಾರೆ. ತುಂಬ ಸುಂದರವಾದ ತೋಟವೊಂದರಿಂದ ಹೊರಬರುತ್ತಿದ್ದ ಅದರ ಒಡೆಯನನ್ನು ನಿಲ್ಲಿಸಿ ಪಾದ್ರಿ ಹೇಳಿದನಂತೆ, ’ದೇವರು ತುಂಬ ಹೃದಯವಂತ. ನಿನಗೆ ಅದ್ಬುತವಾದ ತೋಟ ಕೊಟ್ಟಿದ್ದಾನೆ. ಆತನಿಗೆ ನೀನು ಋಣಿಯಾಗಿರಬೇಕು.’ ಕೂಡಲೇ ತೋಟದ ಒಡೆಯ ವಿನೀತವಾದ ದನಿಯಲ್ಲಿ ಹೇಳಿದನಂತೆ: ’ನಿಜ, ದೇವರು ಹೃದಯವಂತ. ನನಗೆ ತೋಟ ಕೊಟ್ಟ. ಆದರೆ ಕೊಡುವ ಮುನ್ನ ಆತನ ಹತ್ತಿರವೇ ಇತ್ತಲ್ಲ ತೋಟ? ಆಗ ನೋಡಬೇಕಿತ್ತು ನೀವು ಆ ತೋಟವನ್ನ!’ ಮನುಷ್ಯನ ವಿಶ್ವಾಸವೆಂದರೆ ಅದು.

ಗೆಲುವು ಎಂಬುದು ಒಂದು ಕೊನೆಯಲ್ಲ, ಒಂದು ಗೋಲ್ ಅಲ್ಲ, ಹತ್ತಿನಿಂದ ಬೆಟ್ಟವಲ್ಲ. ಅದು ನಿರಂತರವಾಗಿ ಸಾಗುತ್ತಾ ಹೋಗುವಂತಹದು. ಅದಕ್ಕೆ ಕೊನೆಯೇ ಇಲ್ಲ. ಅದಕ್ಕೆ ಕೊನೆಯೇ ಇಲ್ಲ. ಮನುಷ್ಯ ಗೆಲುವಿನಿಂದ ಗೆಲುವಿಗೆ ನಡೆಯತ್ತ ಹೋಗಬೇಕು. ಗೆದ್ದ ಮನುಷ್ಯ ಹೋಗುತ್ತಿರುತ್ತಾನೆ. ಗೆಲ್ಲಲಾಗದವನು ಅದೃಷ್ಟಕ್ಕಾಗಿ ಕಾಯುತ್ತಾ ಕೊತಿರುತ್ತಾನೆ. ಮೊದಲಿನವನು ಅಡೆತಡೆಗಳನ್ನು ದಾಟಿ ಮುಂದಕ್ಕೆ ಹೋಗುತ್ತಿರುತ್ತಾನೆ. ಇನ್ನೊಬ್ಬ ಎಲ್ಲಿಯೂ ತಲುಪದೆ ನಿಂತಲ್ಲೇ ಗಿರಕಿ ಹೊಡೆಯುತ್ತಿರುತ್ತಾನೆ. ಇಬ್ಬರಿಗೂ ಕೆಲವು ವ್ಯತ್ಯಾಸಗಳಿವೆ. ಅಸಾಮಾನ್ಯ ಅನ್ನಿಸಿಕೊಂಡ ಮನುಷ್ಯ ಅವಕಾಶಗಳಿಗಾಗಿ ಎದುರು ನೋಡುತ್ತಿರುತ್ತಾನೆ., ಸಿದ್ಧನಾಗುತ್ತಿರುತ್ತಾನೆ. ಸಾಮಾನ್ಯ ಮನುಷ್ಯ ತನ್ನ ಸೇಫ್ಟಿ ನೋಡಿಕೊಂಡು ಬೆಚ್ಚಗೆ ಉಳಿದುಬಿಡುತ್ತಾನೆ.

ನೀವು ಇತಿಹಾಸವನ್ನೇ ನೋಡಿ, ಅಲ್ಲೆಲ್ಲೋ ಅಲೆ ಕ್ಝಾಂಡರ್‍ ಇದ್ದಾನೆ. ತಾಮರ್‍ಲೆನ್ ಇದ್ದಾನೆ. ಎಲ್ಲರೂ ಗೆಲುವಿನ ರುಚಿ ಕಂಡವರೆ. ಇವರೆಲ್ಲರ ವ್ಯಕ್ತಿತ್ವಗಳನ್ನೂ ಸ್ಟಡಿ ಮಾಡಿದಾಗ, ಎಲ್ಲರಲ್ಲೂ ಕೆಲವು ಕಾಮನ್ ಕ್ವಾಲಿಟಿಗಳಿದ್ದವು. ಅನಿಸುತ್ತದೆ. ಅವರು ಬದುಕಿದ್ದ ಕಾಲ ಯವುದೇ ಇರಲಿ. ಆಗುಣಗಳು ಮಾತ್ರ ಕಾಮನ್ನಾಗಿ ಇಲ್ಲರಲ್ಲೂ ಇರುತ್ತವೆ. ಆಗುಣಗಳನ್ನು ತಕ್ಷಣ ಅರ್ಥ ಮಾಡಿಕೊಳ್ಳಿ. ಅವುಗಳನ್ನು ನಿಮ್ಮವನ್ನಾಗಿ ಮಾಡಿಕೊಳ್ಳಿ. ಗೆಲುವು ಎಂಬುದು ಆನೆಯಂತಹುದು. ಅದು ಹೋದಲ್ಲೆಲ್ಲ ಹೆಜ್ಜೆ ಗುರುತು ಬಿಟ್ಟಿರುತ್ತದೆ. ಆಜಾಡು ಗಮನಿಸಿ. ಸೋಲು ಕೂಡ ಆನೆಯಂತಹುದೇ. ಅದೂ ಹೆಜ್ಜೆ ಜಾಡು ಬಿಟ್ಟಿರುತ್ತದೆ. ಅಂಥ ಗೆಲು ಗೆದ್ದ ಬಾಬರನನ್ನು ನೋಡುತ್ತೇವೆ. ಮರು ಘಳಿಗೆಯಲ್ಲೇ ದೊಡ್ಡ ಮಟ್ಟದಲ್ಲಿ ಅಸಫಲತೆಯನ್ನು ಕಂಡ ಹುಮಾಯೂನ ನನ್ನು ನೋಡುತ್ತೇವೆ. ಹುಮಾಯೂನನ ಬಲಹೀನತೆಗಳು ಏನಿದ್ದವು ಎಂಬುದನ್ನು ತಕ್ಷಣ ತಿಳಿದುಕೊಳ್ಳಿ. ಅವುಗಳನ್ನು ಅವೈಡ್ ಮಾಡಿ. ಬಾಬರನ ಗಟ್ಟಿತನ ನಿಮ್ಮದಾಗಲಿ. ಸೋಲು ನಿಮ್ಮನ್ನು ಹೆದರಿಸುವುದಿಲ್ಲ.

ಇಷ್ಟಕ್ಕೂ ಗೆಲುವೆಂಬುದು ಬಹಳ ನಿಘೂಡತೆಯೇ ಅಲ್ಲ. ಅದರಲ್ಲಿ ರಹಸ್ಯವೆಂಬ ಮಣ್ಣಂಗಟ್ಟಿಯೂಇಲ್ಲ. ಕೆಲುವು ಮೂಲಭೂತ ಸೂತ್ರಗಳಿರುತ್ತವೆ. ಅವುಗಳನ್ನು ಬದುಕಿಗೆ ಅನ್ವಯಿಸಿಕೊಳ್ಳುತ್ತಾ ಹೋಗುವುದೇ ಗೆಲುವಿನ ಗುಟ್ಟು. ಸೋಲು ಕೂಡ ಅಷ್ಟೆ. ಸೋತ ಮನುಷ್ಯ ದುರದ್ರುಷ್ಟವಂತನಾಗಿರುವುದಿಲ್ಲ. ಅವನು ಪ್ರತೀಸಲ ಮಾಡಿದತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಿರುತ್ತಾನೆ. ಕೆಲುವರಿಗೆ ’ಗೆಲುವು’ ಅಂದರೇನು ಎಂಬ ಬಗ್ಗೆಯೇ ಗೊಂದಲವಿರುತ್ತದೆ. ಕೆಲವರ ಮಟ್ಟಿಗೆ ದುಡ್ಡೇ ಗೆಲುವು. ದುಡ್ಡು ಸಂಪಾದಿಸಿದ ಮನುಷ್ಯನೇ ಯಶಸ್ವಿ ಮನುಷ್ಯ ಅಂದುಕೊಳ್ಳುತ್ತಾರೆ. ಮತ್ತೆ ಕೆಲವರಿಗೆ ಸಾಮಾಜಿಕ ಮನ್ನಣ್ಣೆ ಬೇಕು. ದೊಡ್ಡ ಹೆಸರು ಮಾಡಿದವರೇ ಯಶಸ್ವಿ ಪುರುಷರು ಅಂದುಕೊಳ್ಳುತ್ತಾರೆ. ಒಳ್ಳೆಯ ಆರೋಗ್ಯ, ಚೆಂದನೆಯ ಕುಟುಂಬ, ಸಮಾಧಾನ, ಸಂತೋಷ. ಮನಸ್ಸಿನ ನೆಮ್ಮದಿ ಇದ್ದರೆ ಅದೇ ಗೆಲುವು ಅಂದುಕೊಳ್ಳುತ್ತಾರೆ.  ಎಲ್ಲವೂ ನಿಜವಿರಬಹುದು. ಇವೆಲ್ಲ ಅಲ್ಲದೆ ಇನ್ನೆನ್ನೋ ಆಗಿರಲೂ ಬಹುದು. ಈ ಕ್ಷಣಕ್ಕೆ ಮಹಾನ್ ಗೆಲುವು ಅನ್ನಿಸಿದ್ದು ಮಾರನೆಯ ನಿಮಿಷಕ್ಕೆ ಏನೂ ಅಲ್ಲ ಅಂತ ಅನ್ನಿಸಿ ಬಿಡಲೂಬಹುದು ಆದರೆ ಕರಾರುವಕ್ಕಾಗಿ ಹೇಳುವುದಾದರೆ, ಗೆಲುವು ಎಂಬುದು ನಾವು ನಿರಂತರವಾಗಿ ಚೇಸ್ ಮಾಡುತ್ತಾ, ಗೆಲ್ಲುತ್ತಾ, ತಲುಪುತ್ತಾ ಹೋಗುವ ಅರ್ಥಪೂರ್ಣ ಗುರಿ.

ಹೇಳಿದೆನಲ್ಲ, ಗೆಲುವೆಂಬುದು ನಿರಂತರ ಪಯಣ. ಅಲ್ಲಿ ಖಾಯಂ ಆದ ಕೊನೆಯ ನಿಲ್ದಾಣವೆಂಬುದೇ ಇಲ್ಲ. ಅಂಥದೊಂದು ನಿಲುಗಡೆಗೆ ನಾವು ತಲುಪುವುದೂ ಇಲ್ಲ. ಒಂದು ನಿಲ್ದಾಣ ತಲುಪಿದ ಕೂಡಲೇ ಮತ್ತೊಂದು ನಿಲ್ದಾಣಕ್ಕೆ ಹೋಗಬೇಕು. ಒಂದು ನಿಲ್ದಾಣವನ್ನು ತಲುಪಿದಾಗ ಆಗುವ ಸಂತೋಷವೇ ಒಂದು ಅನುಭೂತಿ. ಅದನ್ನು ಒಳಗಿನಿಂದ ಫೀಲ್ ಮಾಡಬೇಕೇ ಹೊರತು ಬಾಹ್ಯ ಜಗತ್ತು ನಮಗೆ ಅದರ ಅನುಭವವನ್ನು ವಿವರಿಸಲಾರದು. ಹಾಗೇ ನಿಲ್ಧಾಣಗಳನ್ನು ದಾಟುತ್ತ, ದಾಟುತ್ತ ನಾವು ಹೋಗುತ್ತಿರುವುದು ಸರಿಯಾದ ಗಮ್ಯದ ಕಡೆಗೇನಾ? ಅದು ಆರೋಗ್ಯಕರ ಗಮ್ಯವೇನಾ? ಪಾಸಿಟೀವ್ ಆಗಿದೆಯಾ? ಕೇಳಿಕೊಳ್ಳಬೇಕು. ಪ್ರಯಾಣದಲ್ಲೇ ನಮಗದು ಗೊತ್ತಾಗಿ ಹೋಗುತ್ತದೆ. ಸರಿಯಾದ ದಾರಿಯಾಗಿದ್ದರೆ ನಾವಾಗಲೇ ಒಂದು ದುವ್ಯ ಅನುಭೂತಿಗೆ ಒಳಗಾಗಿರುತ್ತೇವೆ. ಅಂಥ ದಿವ್ಯಾನುಭೂತಿ ನಿಮಗೆ ಆಗದಿದ್ದರೆ, ನಿಮ್ಮ ಗೆಲುವು ನಿರರ್ಥಕ.

ಎಲ್ಲರೂ ಒಪ್ಪಿಕೊಂಡಿದ್ದಾರೆ ಅಂದಮಟ್ಟಿಗೆ ಅದು ಗೆಲುವಲ್ಲ. ಒಪ್ಪಿಕೊಳ್ಳದವರೂ ಅನೇಕರಿರಬಹುದು. ಇವತ್ತಿನ ನನ್ನ ಅಛೀವ್‌ಮೆಂಟ್‌ಗಳನ್ನು ’ಆಹಾ’ ಅಂತ ಮೆಚ್ಚಿ ಹೊಗಳುವ ಮೂರ್ಖರಿಗಿಂತ, ನನ್ನ ಗೆಲುವನ್ನು ಗೆಲುವೇ ಅಲ್ಲವೆಂದು ಗೇಲಿ ಮಾಡುವ ಬುದ್ದಿವಂತರು ನನಗೆ ಇಷ್ಟವಾಗುತ್ತಾರೆ. ಆದರೆ ಗೆಲುವು ಮತ್ತು ಸಂತೋಷಗಳೆರಡೂ ಕೈ ಕೈ ಹಿಡಿದು ನಡೆಯುತ್ತವೆ. ಗೆದ್ದ ಮನುಷ್ಯನಿಗೆ, ತಾನು ಕೇವಲ ಉಸಿರಾಡುತ್ತಿಲ್ಲ: ಬದುಕಿದ್ದೇನೆ ಅಂತ ಗೊತ್ತಾಗುತ್ತಿರುತ್ತದೆ. ಅದು ಕೇವಲ ಸ್ಪರ್ಷವಲ್ಲ. ಅನುಭೂತಿ ಅನ್ನಿಸುತ್ತಿರುತ್ತದೆ. ಆತ ಯಾವುದನ್ನೂ ಸುಮ್ಮನೆ ನೋಡುವುದಿಲ್ಲ: ಗಮನಿಸುತ್ತಿರುತ್ತಾನೆ.ಕೇವಲ ಓದುವುದಿಲ್ಲ. ಓದಿದ್ದು ಆತನಲ್ಲಿ ಮಿಳಿತವಾಗುತ್ತಿರುತ್ತದೆ. ಆತ ಕೇವಲ ಕೇಳುವುದಿಲ್ಲ: ಆಲಿಸುತ್ತಿರುತ್ತಾನೆ. ಅರ್ಥ ಮಾಡಿಕೊಳ್ಳುತ್ತಿರುತ್ತಾನೆ. ಗೆಲುವೆಂದರೆ, ಇವೆಲ್ಲವುಗಳ ಸಮಾಗಮ.

ಗೆಲ್ಲುವ ಎಲ್ಲ ಅವಕಾಶಗಳಿದ್ದೂ ಒಬ್ಬ ಮನುಷ್ಯ ಸೋಲುತ್ತಿದ್ದಾನೆ ಅಂದರೆ ಆತ ದುರದೃಷ್ಟವಂತ ಅನ್ನುತ್ತೀರಾ? ಖಂಡಿತ ಇಲ್ಲ. ಆತನಿಗೇ ಗೊತ್ತಿಲ್ಲದೆ ಆತನನ್ನು ಅನೇಕ ಸಂಗತಿಗಳು ಕೈಹಿಡಿದು ಜಗ್ಗುತ್ತಿರುತ್ತವೆ. ಅಹಂಕಾರವೊಂದೇ ಸಾಕು; ಅದು ಗೆಲುವಿನ ಮೊದಲ ಶತ್ರು . ಸೋತೇನೆಂಬ ಭಯ, ಆತ್ಮ ನಿಂದನೆ, ಕೀಳರಿಮೆ, ಸರಿಯಾದ ಪ್ಲಾನ್ ಇಲ್ಲದಿರುವುದು, ಖಚಿತವಾದ ಗೋಲ್‌ಗಳಿಲ್ಲದಿರುವುದು, ಮಾಡಬೇಕು ಎಂದುಕೊಂಡ ಕೆಲಸಗಳನ್ನು ಮುಂದಕ್ಕೆ ಹಾಕುತ್ತಾ ಹೋಗುವುದು, ಮನೆ ಮಂದಿಯೆಲ್ಲರ ಜವಾಬ್ದಾರಿಯನ್ನು ಹೊತ್ತು ಬಿಡುವುದು, ಯಾವುದರ ಮೇಲೂ ಗಮನ ಕೇಂದ್ರೀಕರಿಸಲು ಸಾದ್ಯವಾಗದೇ ಹೋಗುವುದು, ಚಿಕ್ಕ ಪುಟ್ಟ ಲಾಭಗಳಿಗಾಗಿ ದೊಡ್ಡ ಮಟ್ಟದ ದೂರದರ್ಶಿತ್ವ ಕಳೆದುಕೊಳ್ಳುವುದು, ಪ್ರತಿಯೊಂದನ್ನೂ ತಾನೇ ಮಾಡುತ್ತಾ ಹೋಗುತ್ತೇನೆನ್ನುವುದು, ಕಮಿಟ್‌ಮೆಂಟೇ ಇಲ್ಲದಿರುವುದು, ಸರಿಯಾದ ತರಬೇತಿ ಇಲ್ಲದೇ ಹೋಗುವುದು, ಹಿಡಿದ ಕೆಲದ ಮುಗಿಸಿ ತೀರುತ್ತೇನೆ ಎಂಬ ಹಟದ ಕೊರತೆ, ಯಾವುದನ್ನು ಮೊದಲು ಮಾಡಬೇಕು ಎಂಬ ಪರಿಜ್ಞಾನವಿಲ್ಲದಿರುವುದು-ಇವೆಲ್ಲವೂ ಒಬ್ಬ ಮನುಷ್ಯನನ್ನು ಗೆಲುವಿನಿಂದ ಹೊಂದಕ್ಕೆ ಎಳೆದುಬಿಡುತ್ತವೆ.

ಕ್ಷಮಿಸಿ, ಮೊನ್ನೆ ಗೆಲುವಿನ ಬಗ್ಗೆ ಪುಸ್ಕವೊಂದನ್ನು ಓದುತ್ತಿದ್ದಾಗ ನಾನು ಮಾಡಿಕೊಂಡ ಚಿಕ್ಕ ಟಿಪ್ಪಣಿಯದು. ಪುಸ್ತಕವನ್ನು ಬರೆದವರು ಶಿವ್‌ಖೇರಾ.


ದೊಡ್ಡ ತಪ್ಪು ತಿದ್ದಿಕೊಳ್ಳುತ್ತೇವೆಂದು ಹೊರಡುವ ಭರದಲ್ಲಿ…

October 4, 2009

smoking

“ಅದೊಂದು ಇಲ್ದೆ ಹೋದ್ರೆ ಅವನು ದೇವರಂಥ ಮನುಷ್ಯ. ಏನು ಮಾಡೋದು ಹೇಳಿ? ವಿಪರೀತ ಕುಡೀತಾನೆ…” ಎಂಬ ಧಾಟಿಯ ಮಾತು ಸಾಕಷ್ಟು ಕೇಳಿರುತ್ತೀರಿ. “ಅದೊಂದು ಇಲ್ಲದೆ ಹೋದರೆ” ಎಂಬುದಕ್ಕೆ ಹೆಚ್ಚಿನ ಮಹತ್ವವಿರುತ್ತದೆ ಮಾತುಗಳಲ್ಲಿ. ಅವನು ಕುಡುಕ, ಕೃಪಣ, ಕೋಪಿಷ್ಟ, ಲಂಪಟ, ಜುಗಾರಿ ಇತ್ಯಾದಿ ಇತ್ಯಾದಿ. ಈ ಪೈಕಿ ಯಾವುದಿರುತ್ತದೋ ಅದನ್ನು ಹೆಸರಿಸಿ, “ಅದೊಂದು” ಇಲ್ದೆ ಹೋಗಿದ್ರೆ ದೇವರಂಥ ಮನುಷ್ಯ ಅನ್ನುವುದು ಲೋಕಾರೂಢಿ. ಇದು ಪರಂಪರಾಗತವಾಗಿ ಬಂದ ಮೂರ್ಖತನವೂ ಹೌದು.

ದುಶ್ಚಟಗಳನ್ನು ನಾನು ಬೆಂಬಲಿಸುತ್ತೇನೆ ಅಂದುಕೊಳ್ಳಬೇಡಿ. ಆದರೆ ನಿಜಕ್ಕೂ ದುಶ್ಚಟಗಳು ನಮಗೆ ಮಾಡಬಹುದಾದ ಹಾನಿಗಳೇನು ಅನ್ನೋದನ್ನು ನೋಡೋಣ ಬನ್ನಿ. ಮೊದಲನೆಯದಾಗಿ ಕುಡಿತವನ್ನೇ ತೆಗೆದುಕೊಳ್ಳಿ. ಕುಡಿತ ಆರೋಗ್ಯ ಕೆಡಿಸುತ್ತದೆ, ಮರ್ಯಾದೆ ಕಳೆಯುತ್ತದೆ, ಸ್ಥಿಮಿತ ಹಾಳು ಮಾಡುತ್ತದೆ ಅಂತೆಲ್ಲಾ ಅಂತಾರೆ. ಇವೆಲ್ಲಕ್ಕಿಂತ ಹೆಚ್ಚಿನ ಅಪಾಯವನ್ನು ಜನ ಗಮನಿಸಿರುವುದಿಲ್ಲ. “ಕುಡಿತ ಮನುಷ್ಯನನ್ನು ಸೋಮಾರಿಯನ್ನಾಗಿ ಮಾಡುತ್ತದೆ” ಎಂಬುದು ಹೆಚ್ಚು ನಿಜ. ವಿಪರೀತ ಕುಡಿರುವವರು ಕೆಲಸಗಳನ್ನು ಮುಂದೂಡುತ್ತಾ ಹೋಗುತ್ತಾರೆ. ಆರರಿಂದ ಹನ್ನೆರಡು ತಾಸು ಕುಡಿತಕ್ಕೆ ಖರ್ಚಾಗಿ ಹೋಗುತ್ತದೆ. ಕುಡಿದಾಗ ಸೊಗಸಾದ ಐಡಿಯಾಗಳು ಬರುತ್ತವಾದರೂ, ಅವುಗಳನ್ನು ಕಾರ್ಯರೂಪಕ್ಕೆ ತುವಷ್ಟರಲ್ಲಿ ಮನುಷ್ಯ ಮತ್ತೆ ಕುಡಿದಿರುತ್ತಾನೆ ಅಥವಾ ಕಾರ್ಯರೂಪಕ್ಕೆ ತರುವಷ್ಟು ಸಹನೆ ಮತ್ತು ಎನರ್ಜಿ ಉಳಿದಿರುವುದಿಲ್ಲ. ವಿಪರೀತ ಧಾರಾಳಿಯಾಗುತ್ತಾನೆ. ಗಿಲ್ಟ್ ಮುಚ್ಚಿಡುವುದಕ್ಕಾಗಿ ಅವಮಾನಿತನಾಗುತ್ತಾನೆ. ಸಾಲಗಾರನಾಗುತ್ತಾನೆ.  ಕೊನೆಯಲ್ಲಿ ಕೂತು ಲೆಕ್ಕ ಹಾಕಿದರೆ ಒಬ್ಬ ಕುಡುಕ ವಿಫಲಜೀವಿಯಾಗಿರುತ್ತಾನೆ. ಇವೆಲ್ಲವೂ ಆತ ತನಗೆ ತಾನು ಮಾಡಿಕೊಳ್ಳುವ ಅಪಚಾರಗಳು. ಇದರಿಂದ ಆತನ ಮನೆ ಮಂದಿಗೆ ಸಮಸ್ಯೆಯಾಗಬಹುದೇ ಹೊರತು, ಬೇರೆ ತರಹದ ನಷ್ಟಗಳಿರುವುದಿಲ್ಲ. “ಕುಡಿದು ಅತ್ಯಾಚಾರ ಮಾಡಿದ, ಕೊಲೆ ಮಾಡಿದ” ಅಂದರೆ ನಾನು ಒಪ್ಪುವುದಿಲ್ಲ. ಅಲ್ಲಿ ಅವನಲ್ಲಿನ Instinct ಗಳು. “ಅತ್ಯಾಚಾರ ಮಾಡುವಾಗ ಆತ ಕುಡಿದಿದ್ದ ಅಥವಾ ಕೊಲೆ ಮಾಡುವಾಗ ಆತ ಕುಡಿದಿದ್ದ” ಎಂಬುದು ಹೆಚ್ಚುವರಿ. ಅಲ್ಲಿ ದೋಷ ಕುಡಿತದ್ದಲ್ಲ.

ಹಾಗೇನೇ ಇಸ್ಪೀಟು ಅದೂ ಕೂಡ ತನಗೆ ತಾನೇ ಮಾಡಿಕೊಳ್ಳುವ ಅಪಚಾರ. ದುರಾಸೆಗೆ ಬಿದ್ದ ಮನುಷ್ಯ ಇಸ್ಪೀಟಿನ ಚಟಕ್ಕೆ ಬಳಿತ್ತಾನೆ. ದುಡ್ಡಿಗಿಂತ ಹೆಚ್ಚಾಗಿ ಬದುಕಿನ ಅಮೂಲ್ಯ ಗಂಟೆಗಳನ್ನು, ದಿನಗಳನ್ನು ಚಕ್ಕಂಬಟ್ಲೆ ಹಾಕಿಕೊಂಡು ಕೂತು ಪೋಲು ಮಾಡಿ ಬಿಡುತ್ತಾನೆ. “ಸ್ಕರ್ಟ್ ಚೇಸಿಂಗ್” ಅಂತ ಇಂಗ್ಲಿಷಿನಲ್ಲಿ ಅನ್ನೋದು: ಹೆಂಗಸರ (ಮತ್ತು ಗಂಡಸರ) ಬಲಹೀನತೆಗೆ ಸಂಬಂಧಿಸಿದ ಹಾಗೆ. ಈ ಚಟವಿರುವವರು ವಿಪರೀತ ಸುಳ್ಳು ಹೇಳುತ್ತಾರೆ ಮೋಸ ಮಾಡುತ್ತಾರೆ ಎಂಬುದು ಬಿಟ್ಟರೆ ಈ ಚಟವೂ ಕೂಡ ತನಗೆ ತಾನು ಮಾಡಿಕೊಳ್ಳುವ ಅಪಚಾರವೇ. ಲೋಲುಪತೆಯ ಗುಂಗಿಗೆ ಬಿದ್ದು ರಾಜ್ಯಗಳನ್ನೇ ಕಳೆದುಕೊಂಡವರನ್ನು ನೋಡಿದ್ದೇನೆ. ಹೆಂಗಡ ಖಯಾಲಿಗೆ ಬಿದ್ದು ಹಣ, ಗೌರವ, ನೆಮ್ಮದಿ ಕಳೆದುಕೊಂಡವರಿದ್ದಾರೆ. ಆರೋಗ್ಯವನ್ನು ರಿಸ್ಕಿಗೆ ತಳ್ಳಿದವರೂ ಕಡಿಮೆಯಿಲ್ಲ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಈ ಚಟವೂ ಮನುಷ್ಯನ ಸಮಯವನ್ನು ಹಾಳು ಮಾಡುತ್ತದೆ. ಅತಿ ದೊಡ್ಡ ರಿಸ್ಕೆಂದರೆ ಅದೇ.

ಬಿಡಿ, ತಪ್ಪುಗಳ ಪಟ್ಟಿ ಮಾಡುತ್ತಾ ಹೋದರೆ ಬೆಳೆಯುತ್ತಲೇ ಹೋದೀತು. ಆದರೆ ಇವೆಲ್ಲವೂ ಮೇಜರ್‍ ಮಿಸ್ಟೇಕ್‌ಗಳು. ಕೆಲವೊಮ್ಮೆ ಅಕ್ಷಮ್ಯ ಅಂತ ಪರಿಗಣಿಸಲ್ಪಡುವಂತಹವು. ಇವು ಕೊಡುವ ಆನಂದ ಎಂಥದ್ದೇ ಆಗಿರಲೀ ಕಟ್ಟಿಸಿಕೊಳ್ಳುವ ಕಂದಾಯ ಮಾತ್ರ ಬಹಳ ದೊಡ್ಡದಾಗಿರುತ್ತದೆ. ನನ್ನ ಮಟ್ಟಿಗೆ ಒಬ್ಬ ಮನುಷ್ಯ ತನ್ನ ಚಟಗಳಿಗಾಗಿ ಕಟ್ಟುವ ಅತೀ ದೊಡ್ಡ ಕಂದಾಯವೇನೆಂದರೆ-ಸಮಯ. ನಿಜಕ್ಕೂ ಅಕ್ಷಮ್ಯವಾದುದು ಅದೇ: ಚಟವಲ್ಲ. ಒಂದು ಪೆಗ್ ವಿಸ್ಕಿ, ಒಂದು ಸುತ್ತು ಇಸ್ಪೀಟು, ಚಿಕ್ಕದೊಂದು ಸರಸ ಯಾರನ್ನೂ ಈತನಕ ಕೊಂದಿಲ್ಲ.

ಆದರೆ ತಪ್ಪುಗಳು ಕೊಲ್ಲಲೇ ಬೇಕು ಎಂದಿಲ್ಲವಲ್ಲ? ಲೆಕ್ಕ ಹಾಕಿದರೆ, ನಾವು ಯಾವ್ಯಾವುದನ್ನು ತಪ್ಪು-ಅಪರಾಧ ಅಥವಾ ದುಷ್ಚಟ ಅನ್ನುತ್ತೇವೆಯೋ, ಅವುಗಳಿಗಿಂತ ಹೆಚ್ಚು ತಪ್ಪುಗಳನ್ನು ದಿನವಿಡೀ ಮಾಡುತ್ತಿರುತ್ತೇವೆ. ಆದರೆ ದೊಡ್ಡ ತಪ್ಪಿನ ಅಥವಾ ದುಷ್ಚಟದ Glare ನಲ್ಲಿ ಅದರ ಝಳದಲ್ಲಿ ಚಿಕ್ಕ ತಪ್ಪುಗಳೂ ಮರೆಯಾಗಿ ಬಿಡುತ್ತವೆ. ವಿಪರೀತ ಕುಡಿಯುವ ಗಂಡ “ ಅದನ್ನೊಂದು ಬಿಟ್ರೆ ಸಾಕು, ನನ್ನ ಗಂಡ ದೇವರಂಥವನು” ಅಂತ ಅವನ ಹೆಂಡತಿ ಅಂದು ಕೊಳ್ಳುತ್ತಿರುತ್ತಾಳೆ. ಅವನು ಮಾಡುವ ಪ್ರತಿಯೊಂದು ಕೂಡಾ “ಕುಡಿದದ್ದರಿಂದಲೇ ಮಾಡುತ್ತಾನೆ” ಅಂತ ತಪ್ಪು ತಿಳಿದಿರುತ್ತಾಳೆ. ಆದರೆ ಅವನ ಶ್ವಪಚತನ, ಮುಂಗೋಪ, ಅಸಹನೆ, ಪೆಡಸು ಮಾತು, ಸೋಮಾರಿತನ, ಸಾಲಕೋರತನ, ಲಂಚಕೋರತನ, ಲಂಪಟತೆ ಮುಂತಾದವು ಕುಡಿತಕ್ಕೆ ರಿಲೇಟ್ ಆಗದೆಯೂ ಅವನಲ್ಲಿ ಮನೆ ಮಾಡಿಕೊಂಡಿರಬಹುದು ಅಂತ ಆಕೆಗೆ ಅನ್ನಿಸಿರುವುದಿಲ್ಲ. ಕುಡಿಯೋದೊಂದು ಬಿಟ್ಟು ಬಿಟ್ಟರೆ ನನ್ನ ಗಂಡನಿಗಿಂತ ದೇವರಿಲ್ಲ ಅಂದುಕೊಂಡಿರುತ್ತಾಳೆ. ದೇವರ ಪಾತ್ರದಾರಿಯಾದ ಗಂಡನೂ ಹಾಗಂತಲೇ ಅಂದುಕೊಂಡಿರುತ್ತಾನೆ. ಸುತ್ತಲಿನವರೂ ಕೂಡ “ಅದೊಂದು” ತಿದ್ದಿ ಸರಿಪಡಿಸಿ ಬಿಟ್ಟರೆ ಸಾಕು ಅಂದುಕೊಂಡಿರುತ್ತಾರೆ.

ಎಲ್ಲರೂ ಮಾಡುವ ತಪ್ಪೇ ಅದು. ಮನುಷ್ಯನ ಅತಿ ದೋಡ್ಡ ತಪ್ಪನ್ನು ತಿದ್ದಲು ಹೋಗುತ್ತಾರೆ. ಅಥವಾ ತಮ್ಮ ಮೇಜರ್‍ ಬಲಹೀನತೆಯನ್ನು ಸರಿಪಡಿಸಿಕೊಳ್ಳಲು ಹೆಣಗುತ್ತಾರೆ. ಕುಡಿತ ಬಿಡಲು ಆಸ್ಪತ್ರೆ ಸೇರಿಕೊಳ್ಳುವುದರಿಂದ ಹಿಡಿದು ಹೆಂಗಸರ ಖಯಾಲಿ ಬಿಡಲು ಅಯ್ಯಪ್ಪ ಸ್ವಾಮಿಯ ಮಾಲೆ ಹಾಕುವ ತನಕ ಸರದಿ.

ಆದರೆ ಫ್ರೆಂಡ್ಸ್, ಓದು ಸಲ ಈ ಮೇಜರ್‍ ತಪ್ಪುಗಳನ್ನು ಪಕ್ಕಕ್ಕಿಟ್ಟು ಯೋಚಿಸಿ. ನಮ್ಮಲ್ಲಿ ಎಷ್ಟೊಂದು ಚಿಕ್ಕ ಚಿಕ್ಕ ತಪ್ಪು, ಬಲಹೀನತೆ, ಅಪಸವ್ಯಗಳಿವೆಯಲ್ಲವೇ? ನನಗಂತೂ ನಾನೊಂದು ಬೃಹತ್ ತಪ್ಪುಗಳ ಮೂಟೆ ಅನ್ನಿಸಿಬಿಡುತ್ತದೆ. Actually ಇವು ಸುಲಭಕ್ಕೆ ಸರಿಪಡಿಸಬಹುದಾದ, ತಿದ್ದುಕೊಳ್ಳಬಹುದಾದ ಚಿಕ್ಕ ಚಿಕ್ಕ ತಪ್ಪುಗಳೇ. ಆದರೆ, ಮೊದಲು ದೊಡ್ಡ ತಪ್ಪು ಸರಿಪಡಿಸಿಕೊಳ್ಳೋಣ. ಆಮೇಲೆ ಉಳಿದವು ತಂತಾನೆ ಸರಿಹೋಗುತ್ತದೆ ಎಂಬ ಮೂರ್ಖ ತೀರ್ಮಾನಕ್ಕೆ ಬರುತ್ತೇವೆ. ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಬೇಕಾದ ಹುಡುಗ ನಾನು ಐ.ಎ.ಎಸ್ ಮಾಡುವುದರ ಮೇಲೆ ಗಮನವಿಟ್ಟಿದ್ದೇನೆ ಅಂದುಕೊಳ್ಳುವ ಹಾಗೆ.

ಉಹೂಂ, ಬದುಕು ಹಾಗೆಲ್ಲ ಒಂದು ದೊಡ್ಡ ತಪ್ಪು ಸರಿಪಡಿಸಿದ ಮಾತ್ರಕ್ಕೇ ತಂತಾನೇ ಚಿಕ್ಕಪುಟ್ಟ ತಪ್ಪುಗಳನ್ನು ಸರಿಗೊಳಿಸುವುದಿಲ್ಲ. ಪ್ರತೀ ತಪ್ಪನ್ನೂ ನಾವು ಪ್ರಯತ್ನಪೂರ್ವಕವಾಗಿ ತಿದ್ದಿಕೊಳ್ಳಬೇಕಾಗುತ್ತದೆ. ಯಾವತ್ತೋ ಒಂದು ದಿನ ಕುಡಿತ ಬಿಟ್ಟ ಮೇಲೆ ಅದು ಕಂಟ್ರೋಲಿಗೆ ಬಂದ ಮೇಲೆ ಸಿಗರೇಟು ಬಿಟ್ಟರಾಯಿತು ಅಂತ ಹೊಸ ಸಿಗರೇಟಿಗೆ ಕಡ್ಡಿ ಗೀರುವುದಿದೆಯಲ್ಲ ಮೂರ್ಖತನವೆಂದರೆ ಅದೇ.

-ರವಿ


ನಂಗ್ಯಾವತ್ತೂ ಯಾಕೆ ಬೋರು ಹೊಡಿಯಲ್ಲ…

September 3, 2009

bored_man

“I was never bored because I was never being bored” ಅಂತ ಒಂದು ಅದ್ಬುತವಾದ ಮಾತಿದೆ. ಪದೇಪದೆ ಓದಿಕೊಂಡರೆ ನಿಮಗೇ ಈ ಸೆಂಟೆನ್ಸು ಸರಿಯಾಗಿ ಅರ್ಥವಾದೀತು.

’ತುಂಬಾ ಬೋರು’ ಅನ್ನುವುದು ಆಗೊಮ್ಮೆ ಈ ಗೊಮ್ಮೆ ಎಲ್ಲರಿಗೂ ಅನುಭವಕ್ಕೆ ಬರುವಂತಹುದೇ. ಆದರೆ ನಿರಂತರವಾಗಿ ಬೋರಿ ಅನುಭವಿಸುವ ಜನ ಇರುತ್ತಾರಲ್ಲ? ಗಮನಿಸಿ ನೋಡಿದರೆ ಅವರೇ ಪರಮ ಬೋರಿಂಗ್ ಪಾರ್ಟಿಗಲಾಗಿರುತ್ತಾರೆ. ತಮ್ಮ ಬೋರು ಜಾಡ್ಯವನ್ನು ಕೈಗೆ ಸಿಕ್ಕ, ಎದುರಿಗೆ ಬಂದ, ಜೊತೆಯಲ್ಲಿ ಕುಳಿತ ಪ್ರತಿಯೊಬ್ಬರಿಗೂ ಹಂಚಿ ಪರಚುವುದೇ ಪರಧರ್ಮ ಎಂಬಂತೆ ವರ್ತಿಸುತ್ತಿರುತ್ತಾರೆ. ತಮಗೆ ತಾವು ಬೋರ್‍ ಆಗದಿರುವವರು, ಇನ್ನೊಬ್ಬರಿಗೆ ಬೋರ್‍ ಆಗಲಾರರು? ಇನ್ನೊಬ್ಬರಿಗೆ ವಿಪರೀತ ಬೋರು ಹೊಡೆಸುವವರು ತಮ್ಮನ್ನು ತಾವು ಸಂತೋಷವಾಗಿ ಇರಿಸಿಕೊಳ್ಳಲಾರರು! ಇದು ಬದುಕಿನ ಅನಿವಾರ್ಯ ನಿಯಮ.

ಹಾಗಾದರೆ ಬೋರ್‍ ಆಗದಂತಿರಬೇಕು ಅಂದರೆ ಏನು ಮಾಡಬೇಕು?

ಮುಖ್ಯವಾಗಿ, ನಮ್ಮ ವ್ಯಕ್ತಿತ್ವವನ್ನು ಇಂಟರೆಸ್ಟಿಂಗ್ ಆಗಿ ಇಟ್ಟುಕೊಳ್ಳಬೇಕು. ಸಾಮಾನ್ಯವಾಗಿ ನಾವೆಲ್ಲ ಒಳ್ಳೆಯ ಮಾತುಗಾರರು ಅಂತ ನಮಗೆ ನಾವೇ ಅಂದುಕೊಂಡು ಬಿಟ್ಟಿರುತ್ತೇವೆ. ಆದರೆ ಒಳ್ಳೆಯ ಮಾತುಗಾರ, ಒಳ್ಳೆಯ ಕೇಳುಗನೂ ಆಗಿರಬೇಕು ಎಂಬ ರೂಲ್ಸು ಮರೆತು ಬಿಟ್ಟಿರುತ್ತೇವೆ. ಹೀಗಾಗಿ ಸುಮ್ಮನೇ ಮಾತಾಡುತ್ತಾ ಹೋಗುತ್ತೇವೆ. ಒಂದು ಚಿಕ್ಕ, ಆರೋಗ್ಯವಂತ ನಿಗೂಢತೆ (not in negative sense) ಉಳಿಸಿಕೊಳ್ಳುವುದೇ ಇಲ್ಲ. ಮಾತಾಡುತ್ತಾ ಆಡುತ್ತಾ, ಬಟಾ ಬಯಲಾಗಿ ಹೋಗುತ್ತೇವೆ.

ಆದರೆ ಬೋರ್‍ ಆಗದಂಥ ವ್ಯಕ್ತಿತ್ವ ರೂಪಿಸಿಕೊಳ್ಳುವುದೆಂದರೆ ಕೇವಲ ಚೆಂದಾಗಿ ಮಾತನಾಡುವುದು ಮತ್ತು ಚೆನ್ನಾಗಿ ಕೇಳಿಸಿಕೊಳ್ಳುವುದು ಎಂದಷ್ಟೇ ಅರ್ಥವಲ್ಲ. ಅತ್ಯಂತ ಕಡಿಮೆ ಮಾತನಾಡುವವನೂ, ಮಹಾ ಮೌನಿಯೂ ಕೂಡ ಇಂಟರೆಸ್ಟಿಂಗ್ ಆಗಿರಬಲ್ಲ. ಸುಮ್ಮನೇ ಅರ್ಥಹೀನ ತಮಾಷೆ ಮಾಡುವವನು ಕೇವಲ ಜೋಕರ್‍ ಅನ್ನಿಸಿಕೊಂಡುಬಿಡುವ ಅಪಾಯವಿದೆ. ಆದ್ದರಿಂದ ಮಾತಿನಿಂದಾಚೆಗೂ ನಮ್ಮ ವ್ಯಕ್ತಿತ್ವವನ್ನು ರುಚಿಕಟ್ಟಾಗಿಸಿಕೊಳ್ಳಬೇಕು. ನೂರಾರು ಸಂಗತಿಗಳನ್ನು ತಿಳಿದುಕೊಂಡಿರಬೇಕು. ಹೀರೇಕಾಯಿಯ ಸಿಪ್ಪೆಯಲ್ಲಿ ಚಪ್ಪರಿಸಿ ತಿನ್ನುವಂತಹ ಚಟ್ನಿ ಮಾಡುವುದು ಹೇಗೆ ಎಂಬುದರಿಂದ ಹಿಡಿದು, ಗೂಗಲ್ ಸರ್ಚ್ ಮಷಿನ್ ಹೇಗೆ ಕೆಲಸ ಮಾಡುತ್ತದೆ ಎಂಬುದರ ತನಕ ಎಲ್ಲವನ್ನೂ ತಿಳಿದುಕೊಳ್ಳುವ ಆಸಕ್ತಿ ಬೆಳೆಸಿಕೊಂಡರೆ ಸಾಕು, ಕ್ರಮೇಣ ನಾವು ಇಂಟರೆಸ್ಟಿಂಗ್ ಆಗಿ ಬಿಡುತ್ತೇವೆ.

ಮಕ್ಕಳು ತಾಯಿಯಿಲ್ಲದ ವೇಳೆ ಅಡುಗೆ ಮನೆ ಹೊಕ್ಕು ತಿನ್ನಲು ಏನಾದರೂ ಸಿಗುತ್ತಾ ಅಂತ ಡಬ್ಬಿ ಡಬ್ಬಿ ಹುಡುಕುತ್ತಿರುತ್ತವೆ, ಗಮನಿಸಿದ್ದೀರಾ? ನನ್ನದು ಇವತ್ತಿಗೂ ಅದೇ ಮನಸ್ತತ್ವ. ಓದಲಿಕ್ಕೆ ಏನಾದರೂ ಸಿಗುತ್ತದಾ ಅಂತ ಅಂಗಡಂಗಡಿ, ಷೆಲ್ಪು ಷೆಲ್ಪು, ನನ್ನ ಲೈಬ್ರೆರಿಯ ರಾಕ್ ರಾಕು, ಇಂಟರ್‍‌ನೆಟ್ಟಿನ ಸೈಟು ಸೈಟು ಹುಡುಕುತ್ತಿರುತ್ತೇನೆ. ನನ್ನ ಇಡೀ ಚಟುವಟಿಕೆ ನೋಡಿದರೆ, ದಿನವಿಡೀ ಕಾಡುವ ಹಸಿವೆಯಿಂದ ತಪ್ಪಿಸಿಕೊಳ್ಳುವ ’ಅಮ್ಮಾ ತಾಯಿ’ ಹುಡುಗನೊಬ್ಬ ಮನೆ ಮನೆ ತಿರುಗುವ ದೃಶ್ಯವನ್ನದು ಹೋಲಬಹುದು.

ನಂಗೊತ್ತು, ಎಲ್ಲರ ಮನೆಯಲ್ಲೂ ಪುಸ್ತಕಗಳಿದ್ದೇ ಇರುತ್ತವೆ. ಆದರೆ ಇರುವ ಎಲ್ಲಾ ಪುಸ್ತಕಗಳನ್ನು ನಾವು ಓದಿರುವುದಿಲ್ಲ. ಊರಲ್ಲಿನ ಸಾರ್ವಜನಿಕ ಪುಸ್ತಕಾಲಯವನ್ನು ಒಳಹೊಕ್ಕು ನೋಡಿರಿಯೇ ಇರುವುದಿಲ್ಲ. ಸಿನೆಮಾ ಹಾಡುಗಳ ಹಂತ ದಾಟಿ ಹೋಗಿ, ವಚನ-ಶಾಸ್ತ್ರೀಯ ಸಂಗೀತ, ಗಝಲು, ಠುಮರಿ ಕೇಳಿರುವುದಿಲ್ಲ. ಎದುರಿಗೆ ಯಾರು ಸಿಕ್ಕರೂ “ನನ್ಗಂಡ ನನ್ನನ್ನ ಪ್ರೀತ್ಸಲ್ಲ ಗೊತ್ತಾ?” ಅಂತ ಪರಚುತ್ತೇವೆಯೋ ಹೊರತು, ನಾನು ಇತ್ತೀಚೆಗೆ ಓದಿದ ಬಯೋಗ್ರಫಿಯೊಂದರ ಒಂದು ಛಾಪ್ಟರ್‍ ಎಷ್ಟೊಂದು ಇಂಟರೆಸ್ಟಿಂಗ್ ಆಗಿತ್ತು ಗೊತ್ತಾ. ಅಂತ ಮಾತಿಗಿಳಿರುವ ಸಿದ್ದರೆ ಮಾಡಿಕೊಂಡೇ ಇರುವುದಿಲ್ಲ.

ಇಂಟರೆಸ್ಟಿಂಗ್ ಆಗಿರುವುದು ಅಂದರೆ ತುಂಬ ಚೆನ್ನಾಗಿರುವುದು ಅಂತ ಅಲ್ಲ. ಹಲಸಿನ ಹಣ್ಣು ನಿಜಕ್ಕೂ ನೋಡಲಿಕ್ಕೆ ಚೆನ್ನಾಗಿರುವುದಿಲ್ಲ. ಆದರೆ ಯಾವತ್ತಾದರೂ ರುಚಿಹೀನ ಘಮಹೀನ ಹಲಸಿನ ತೊಳೆ ತಿಂದಿದ್ದೀರಾ?

Be interesting.

-ಬೆಳಗೆರೆ


ನೆನಪಿರಲಿ: ಒಳ್ಳೆಯತನ ಕೂಡ ಪ್ರೇಮದಂತೆಯೇ ಭಾಸವಾಗುತ್ತದೆ…

July 21, 2009

Loveforever

ಮೇಡ್ ಫಾರ್‍ ಈಚ್ ಅದರ್‍.

ಕೆಲವು ಜೋಡಿಗಳು ನಿಜಕ್ಕೂ ಹಾಗಿರುತ್ತವೆ. ಅವರು ಸುಳ್ಳೇ ರೇಗುವುದಿಲ್ಲ. ಜೋರಾಗಿ ಮಾತಾಡುವುದಿಲ್ಲ. ಹತ್ತು  ಮಂದಿ ಕೆಟ್ಟ ಕುತೂಹಲದಿಂದ  ನೋಡುವಂತೆ ವರ್ತಿಸುವುದಿಲ್ಲ. ತಮ್ಮ ಗೆಳೆತನವನ್ನು ಮನೆಮಂದಿಯವರಿಂದ, ಗೆಳೆಯರಿಂದ ಮುಚ್ಚಿಟ್ಟಿರುವುದೂ ಇಲ್ಲ. ಅವನು ಅವಳಿಗೋಸ್ಕರ ಎಂದು ಬದುಕುತ್ತಿರುತ್ತಾನೆ. ಅವಳನ್ನು ಮೆಚ್ಚಿಸಲಿಕ್ಕೆಂದೇ ಓದುತ್ತಿರುತ್ತಾನೆ. ಅವಳಿಗಿಷ್ಟ ಎಂಬ ಕಾರಟಕ್ಕೇ ಸಾಲ ಮಾಡಿ ಬೈಕು ಖರೀದಿಸಿರುತ್ತಾನೆ. ಅವಳಿಗೆ ಇಷ್ಟವಾಗೋದಿಲ್ಲ ಎಂಬ ಕಾರಣದಿಂದಲೇ  ಸಿಗರೇಟು ಬಿಟ್ಟಿರುತ್ತಾನೆ. ಶಿಸ್ತಿನ ಜೀವನಕ್ಕೆ ಒಗ್ಗಿಕೊಂಡಿರುತ್ತಾನೆ. ಅವಳು ಮಾತಿನ ಮಧ್ಯೆ- ’ಮದುವೆಯಾದ ಎರಡೇ ವರ್ಷದಲ್ಲಿ ಮನೆ ಕಟ್ಟಿಸಿ ಬಿಡೋಣ ’ಅಂದರೆ, ಪ್ಯಾದೆಯಂತೆ ಅದಕ್ಕೂ ಒಪ್ಪಿರುತ್ತಾನೆ. ಭೂಪ ಅಷ್ಟಕ್ಕೇ  ಸುಮ್ಮನಾಗದೆ, ಹತ್ತು ಮಂದಿಯ ಮುಂದೆ ತನ್ನ ಪ್ರೇಮಾಯಣದ ಕಥೆಯನ್ನು ಹೇಳಿಕೊಂಡಿರುತ್ತಾನೆ. ನಾವಿಬ್ರೂ ಒಟ್ಟಿಗೇ ದೇವಸ್ಥಾನಕ್ಕೆ ಹೋಗಿ ಬಂದಿದೀವಿ ಕಣ್ರೋ. ಅವಳ ಹಣೇಗೆ ನಾನು  ಕುಂಕುಮ  ಇಟ್ಟೀದಿನಿ. ಅಂದ ಮೇಲೆ ನಮ್ದು ಮದುವೆ ಆಗೇ ಹೋಯ್ತು ಎಂದರ್ಧ ಎಂದೂ ಕೊಚ್ಚಿಕೊಂಡಿರುತ್ತಾನೆ.

ಈ ಕಡೆ ಹುಡುಗಿಯಾದರೂ ಅಷ್ಟೆ: ಅವಳಿಗೂ ಅವನೇ ಪ್ರಪಂಚ. ಅವನಿಲ್ಲದ ಬದುಕನ್ನು ಅವಳು ಕನಸಲ್ಲೂ ಕಲ್ಪಿಸಿಕೊಂಡವಳಲ್ಲ. ಬದುಕು ಅನ್ನೋದಿದ್ರೆ ಅವನ ಜೊತೇಲಿ. ಅವನು ದುಡಿದ್ರೂ ಸೈ. ಒಂದು ವೇಳೆ ಆತ ದುಡಿಮೆಗೆ ಹೋಗಲಿಲ್ಲ ಅಂದ್ರೆ ನಾನೇ ದುಡಿತೇನೆ. ಗಂಡ ಅನ್ನಿಸಿಕೊಂಡವನನ್ನು ಸಾಕಿದ್ರೆ ತಪ್ಪೇನು ಎಂದೂ ಮಾತಾಡುತ್ತಾಳೆ. ಮದುವೆಯ ನಂತರದ ಬದುಕಿನ ಬಗ್ಗೆ ಹತ್ತು ಮಂದಿಯ ಗೆಳತಿಯರೊಂದಿಗೆ ಹೇಳಿಕೊಂಡು ಖುಷಿಪಟ್ಟಿರುತ್ತಾಳೆ.

ಆದರೆ, ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕೆ ಆ ಮಧುರ ಸಂಬಂಧ ಕಿತ್ತು ಹೋಗುತ್ತದೆ. ಪ್ರೇಮ ರದ್ದಾಗುತ್ತದೆ. ಆಟ ಕೊನೆಯಾಗುತ್ತದೆ. ಮಾತು ನಿಂತುಹೋಗುತ್ತದೆ. ಅದುವರೆಗೂ ಪ್ರತಿ ದಿನ ಬೆಳೆಗ್ಗೆ ಮತ್ತು ಸಂಜೆ ಪಾರ್ಕಿನ ಹೊರಗೆ ಮೂಲೆಯೊಂದರಲ್ಲಿ  ಸ್ಕೂಟಿ ನಿಲ್ಲಿಸಿಕೊಂಡು ಹರಟೆಗೆ ಸಿಗುತ್ತಿದ್ದ ಹುಡುಗಿ: ಹುಡುಗನ ಕೈ ಬೆರಳುಗಳೊಂದಿಗೆ ಆಟವಾಡುತ್ತಿದ್ದ ಹುಡುಗಿ ದಿಢೀರನೆ ವರಸೆ ಬದಲಿಸುತ್ತಾಳೆ. ಅದೇ ದಾರಿಯಲ್ಲಿ ಕಾದು ನಿಂತ ಹುಡುಗನತ್ತ ತಿರುಗಿ ಕೂಡ ನೋಡದೆ ಎಕ್ಸ್ ಪ್ರೆಸ್ ವೇಗದಲ್ಲಿ ಸ್ಕೂಟಿ ಓಡಿಸುತ್ತಾಳೆ. ಸ್ವಲ್ಪ ಬುದ್ಧಿವಂತೆಯಾಗಿದ್ದರೆ, ಸೀದಾ ಹುಡುಗನ ಬಳಿ ಬಂದು, ಕೈ ಮುಗಿದು, ನಂಗೆ ಯಾಕೋ ಈ ಸಂಬಂಧ ಇಷ್ಟವಾಗ್ತಾ ಇಲ್ಲ. ಹಾಗಾಗಿ ಎದ್ದು ಹೋಗ್ತಾ ಇದೀನಿ. ತಪ್ಪು ತಿಳ್ಕೋಬೇಡ. ಬೇಸರ ಮಾಡ್ಕೋಬೇಡ. ಖುಷಿಯಾಗಿರು. ನೆಮ್ಮದಿಯಾಗಿರು. ಬದುಕಲ್ಲಿ ಮಹತ್ವದನ್ನು ಸಾಧಿಸು. ನಾನು ಅದನ್ನು ದೂರದಿಂದ್ಲೇ ನೋಡಿ ಖುಷಿ ಪಡ್ತೀನಿ’ ಎಂದು ವೇದಾಂತದ ಮಾತಾಡಿ ಹೋಗಿ ಬಿಡುತ್ತಾಳೆ.

ಹೀಗೆ, ಬೇಡ ಅನ್ನಿಸಿದ ಸಂಬಂಧಗಳನ್ನು ದೂರಾಮಾಡಿಕೊಳ್ಳುವುದರಲ್ಲಿ ಹುಡುಗರೇನೂ ಕಡಿಮೆ ಇಲ್ಲ. ಒಂದು ಕಾಲದಲ್ಲಿ ನೀನಿಲ್ಲ ಅಂದ್ರೆ ಸತ್ತೇ ಹೋಗ್ತೀನಿ ಅನ್ನುತ್ತಿದ್ದ ಹುಡುಗನೇ- ’ಮನೇಲಿ ಕಷ್ಟ ಇದೆ. ತಂಗಿಗೆ ಮದುವೆಯಾಗಿಲ್ಲ. ಅಪ್ಪ ಹಾರ್ಟ್ ಪೇಷೆಂಟು. ನಮ್ಮಮ್ಮ ನಿನಗೆ ಹೊಂದಿಕೆಯಾಗಲ್ಲ. ಹಾಗಾಗಿ ನಾವು ದೂರ ಆಗೋಣ’ ಎಂದೇ ಬಿಡುತ್ತಾರೆ.

ಹೀಗೆ, ಬದುಕೆಂದರೆ ಇಷ್ಟೇ ಎಂದು ಭಾವಿಸಿರುತ್ತೇವಲ್ಲ? ಅದು ಕೈ ತಪ್ಪಿ ಹೋದಾಗ ಆಗುವ ನೋವನ್ನು ಭರಿಸುವುದು ಕಷ್ಟ-ಕಷ್ಟ ಅಂದಿರುತ್ತಾರೆ. ದೇವಸ್ಥಾನಕ್ಕೆ ಕರೆದೊಯ್ದು ಅರ್ಚನೆ ಮಾಡಿಸಿರುತ್ತಾರೆ. ಕುಟುಂಬದ ಗ್ರೂಫ್ ಫೋಟೋ ಸೆಷನ್ ನಲ್ಲಿ ಒತ್ತಿಕೊಂಡು ನಿಂತಿರುತ್ತಾರೆ ಮತ್ತು ಮೇಲಿಂದ ಮೇಲೆ ಕಣ್ಣು ಹೊಡೆದಿರುತ್ತಾರೆ.

ಉಹುಂ, ಅಲ್ಲಿ ಆಸೆಯಿರುವುದಿಲ್ಲ. ’ಐ ಲವ್ ಯೂ’ ಎಂಬಂಥ ಭಾವವಿರುವುದಿಲ್ಲ. ಬದಲಿಗೆ ಅಲ್ಲಿ ಶುದ್ದ ಸ್ನೇಹವಿರುತ್ತದೆ. ಗೆಳೆತನವಿರುತ್ತದೆ. ಒಡಹುಟ್ಟಿದವರಿಂದ ಬಯಸುವಂಥ ಮಮತೆಯಿರುತ್ತದೆ.

ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಮುಕ್ತವಾಗಿ ಮಾತಾಡುವುದನ್ನು, ನೀನಿಲ್ಲದಿದ್ರೆ ತುಂಬಾ ಹಿಂಸೆ ಅನಿಸುತ್ತೆ ಎಂಬ ಆರ್ದ್ರತೆಯನ್ನು ತುಂಬ ಜನ ತಪ್ಪಾಗಿಯೇ ಅರ್ಥ ಮಾಡಿಕೊಳ್ಳುತ್ತಾರೆ. ನಂತರ ಮೊದಲೇ ನಿರ್ಧರಿಸಿದವರಂತೆ ಅದೊಂದು ದಿನ ಹೋಗಿ ಒಗರೊಗರು, ಒರಟೊರಟು ದನಿಯಲ್ಲಿ ’ಐ ಲವ್ ಯೂ’ ಅಂದುಬಿಡುತ್ತಾರೆ.

ಪರಿಣಾಮ, ಒಂದು ಮಧುರವಾದ ಸಂಬಂಧ ವಿನಾಕಾರಣ ಸತ್ತು ಹೋಗುತ್ತದೆ. ಆ ನಂತರದ ಯಾತನೆ ಬಿಡಿ , ಅದು ಬದುಕಿಡೀ ನಮ್ಮ ಜೊತೆಗೇ ಇರುತ್ತದೆ, ತೋಳ ಮೇಲಿನ ಮಚ್ಚೆಯಂತೆ!

ಇಂಥ ಯಡವಟ್ಟಿನ ಕೈಗೆ ಬುದ್ದಿ ಕೊಡದೇ ಬದುಕುವುದಿದೆಯಲ್ಲ-ಅದೇ ಜೀವನ Try that.

-ಬೆಳಗೆರೆ


ಒಬ್ಬ ಗಂಡಸಾಗಿ ಹುಟ್ಟಿ ಮತ್ತೊಬ್ಬ ಗಂಡಸಿಗೆ ಹೇಳಬಹುದಾದ್ದು!

May 22, 2009

ರವಿಬೆಳಗೆರೆಯವರ ಸಾರಥ್ಯದ ಹಾಯ್ ಬೆಂಗಳೂರ್‍! ವಾರಪತ್ರಿಕೆಯ ಅತ್ಯಂತ ಪ್ರಸಿದ್ದವಾದ ಅಂಕಣ ಬಾಟಮ್ ಐಟಮ್.  ಓದುಗರಿಗೆ ಜೀವನಕ್ಕೆ ಬೇಕಾದ ಕೆಲವು ಉಪಯುಕ್ತ ಸಲಹೆಗಳು ಅಥವಾ ಟಿಪ್ಸ್ ಗಳ ಬಗ್ಗೆ, ಮನುಷ್ಯ ಸಂಬಂಧಗಳ ನಿರ್ವಹಣೆಯ ಬಗ್ಗೆ, ಕನಸುಗಳ ಸಕಾರದ ಬಗ್ಗೆ, ಪ್ರೀತಿ-ಪ್ರೇಮಗಳನ್ನು ಉಳಿಸುವ ಬೆಳೆಸುವ ಬಗ್ಗೆ, ಮಕ್ಕಳನ್ನು ಪೋಷಿಸುವ ಬಗ್ಗೆ, ಹಿರಿಯರನ್ನು ಆಧರಿಸುವ ಬಗ್ಗೆ, ಇತ್ಯಾದಿ ಇತ್ಯಾದಿ ಏನಿಲ್ಲ ಈ ಅಂಕಣದಲ್ಲಿ. ಆದುದರಿಂದಲೇ ವೈಯಕ್ತಿಕವಾಗಿ ನನಗೆ ಅತ್ಯಂತ ಪ್ರಿಯವಾದ ಈ ಅಂಕಣದ ನೈಜತೆಗೆ ಹತ್ತಿರವಾದ, ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.  ತಮ್ಮ ಎಂದಿನ ಶೈಲಿಗೆ ತುಸು ಬಿನ್ನವಾಗಿ ಆದರೆ ಓದುಗರ ಮನಸ್ಸಿಗೆ ಅತ್ಯಂತ ಹತ್ತಿರವಾದ ಲೇಖವನ್ನು ರವಿ ಬೆಳಗೆರೆಯವರು ನೀಡಿದ್ದಾರೆ. ಸಮಾಜದಲ್ಲಿ ಒಬ್ಬ ಗಂಡಸು ತನ್ನ ಬಾಲ್ಯಾವಸ್ಥೆಯಿಂದ ಹಿಡಿದು ಪ್ರತೀ ಘಟ್ಟದಲ್ಲಿ ಅನುಭವಿಸುವ ಮನಸ್ಸಿನ ತಳಮಳಗಳು, ಆತನ ಜವಾಬ್ದಾರಿಗಳು, ಕನಸುಗಳು, ಆತಂಕಗಳು, ಬಯಕೆಗಳು, ಪ್ರಯೊಂದರ ಬಗ್ಗೆ ಅತ್ಯಂತ ನೈಜವಾಗಿ ಓದುಗರ ಮನಮುಟ್ಟುವಂತೆ, ಅನುಭವವೇದ್ಯವಾಗುವಂತೆ ರವಿಬೆಳಗೆರೆಯವರು ಬರೆದಿದ್ದಾರೆ. ಪ್ರತಿಯೊಬ್ಬ ಗಂಡಸೂ ತಪ್ಪದೇ ಓದಬೇಕಾದ ಲೇಖನ. ಓದಿದ ನಂತರ ಕಣ್ತುಂಬಿ ಬರುವುದರಲ್ಲಿ ಸಂದೇಹವಿಲ್ಲ. ಒಮ್ಮೆ ಓದಿ ಭೈ..ನಿಮಗೇ ತಿಳಿಯುತ್ತದೆ..

-ಅಭಿಮಾನಿ

Man

ನಮಸ್ಕಾರ ಬ್ರದರ್‍,

ಕುಶಲವೇ? ಹಾಗಂತ ನಿನ್ನನ್ನು ಕೇಳಲಿಕ್ಕೆ ಇದ್ದಾರಾದರೂ ಯಾರಯ್ಯ? ಈ ದೇಶದಲ್ಲಿ ದಲಿತರು ಮತ್ತು ಸ್ತ್ರೀಯರು ಇಬ್ಬರನ್ನೂ ಶೋಷಿತರು ಅಂತ ಪರಿಗಣಿಸಬೇಕು ಎಂಬ ವಾದವೊಂದಿದೆ. ಅದು ಸರಿಯೇ ಇರಬಹುದು ಭೈ. ಆದರೆ ನಿನ್ನನ್ನು ಕೇಳುವರು ಯಾರು ಪುರುಷಪುಂಗವಾ?.

ಗಂಡಸಾಗಿ ಹುಟ್ಟಿದ ಒಂದೇ ತಪ್ಪಿಗೆ (ಅದು ಪಾಪ ನಿನ್ನ ತಪ್ಪೂ ಅಲ್ಲ!) ಚಿಕ್ಕಂದಿನಿಂದಲೇ ನಿಂಗೆ ನೂರಾರು ಪಡಿಪಾಟಲು. ಹೊರಗೆಲ್ಲೋ ಸಿಟ್ಟು ಮಾಡಿಕೊಂಡು ಬಂದ ಅಪ್ಪ ವಿನಾಕಾರಣ ಸಿಡಿಮಿಡಿಗುಟ್ಟುತ್ತಾನೆ. ಪಾಪ ಅವನಾದರೂ ಗಂಡಸೇ ಅಲ್ವೇ? ಹೆಣ್ಣು ಮಕ್ಕಳನ್ನು ಹೇಗೆ ಹೊಡೆದಾನು? ಕೈಗೆ ಸಿಗೋನೆ ನೀನು. ಎರಡು ಬಾರಿಸುತ್ತಾನೆ. “ಹ್ಞಾಂ ಹೊಡೆದೆಯಾ” ಅಂತ ನೀನು ಅಳೋಹಂಗಿಲ್ಲ ಭೈ. ಗಂಡಸರು ಎಲ್ಲಾದರೂ ಅಳ್ತಾರಾ? ಅಳುವುದೇನಿದ್ದರೂ ಹೆಂಗಸರ ಫೆಸಿಲಿಟಿ. ಅವರಿಗದು ಬರ್ಥ್ ರೈಟು. ಹುಟ್ಟುತ್ತಲೇ ಸಿಗುವ ರಿಸರ್ವೇಷನ್. ನೀನು ಗಂಡಸಲ್ವಾ? ಎಷ್ಟು ಒದೆ ಬಿದ್ದರೂ ಅಳಬಾರದು.ವೀರಾದಿ ವೀರನ ಹಾಗೆ ಸಮಸ್ತ ಒದೆಗಳನ್ನೂ ಪಾಂಗಿತವಾಗಿ ತಿಂದು, ಅಮ್ಮನ ಅಪ್ಪಣೆಯಂತೆ ಕೊತ್ತಂಬರಿಸೊಪ್ಪು ತರಲು ಹತ್ತಿರದ ಜನರಲ್ ಸ್ಟೋರಿಗೆ ನಿನ್ನದೇ ಕಲ್ಪತ ಕುದುರೆಯ ಮೇಲೋ, ಟಿ.ವಿ ಯಲ್ಲಿ ನೋಡಿದ ರೇಸು ಬೈಕಿನ ಮೇಲೋ ಕುಳಿತು ಓಡಬೇಕು….ಡೀಂ..ಚುಕ..ಡೀ…ಡೀಂ…ಚುಕ…ಡೀ…!

ಮನೆಯ ಹಿಂಸೆ ಮನೆಯಲ್ಲೇ ಮುಗಿಯುತ್ತದಾ ಅಂದುಕೊಂಡರೆ, ನೋ ಚಾನ್ಸ್. ಶಾಲೆಯಲ್ಲಿ ಹೆಡ್ ಮಾಸ್ಟರೂ ಗಂಡಸು. ಮಿಸ್ಸುಗಳ ಮೇಲೆ ರೇಗಲಾರ ಮತ್ತೆ ಒದೆ ಬೀಲುವುದು ಪುಲ್ಲಿಂಗಕ್ಕೆ. ಅಷ್ಠೆಲ್ಲಾ ಒದೆ ತಿಂದು ತೂಕಡಿಕೆಯ ಸುಖವನ್ನು ಮರೆತು, ರಾತ್ರಿಯಿಡೀ ಓದಿದರೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರದೇ ಮೇಲು ಗೈಯಿ. ನೌಕರಿಗೆ ಅಂತ ಹೋಗಿ ಕೈ ಚಾಚಿದರೆ “ಅನುಭವವಿದೆಯಾ”? ಎಂಬ ಮೊದಲ ಪ್ರಶ್ನೆಯೇ ಮುಖಕ್ಕೆ ರಾಚುತ್ತದೆ. ಪಾಪ ಸೋದರಾ, ಏನನುಭವ ಇರಲು ಸಾಧ್ಯ ಆ ವಯಸ್ಸಿನಲ್ಲಿ? ಅದೇ ಪ್ರಶ್ನೆಯನ್ನು ಹುಡುಗಿಯರಿಗೆ ಹಾಕಿದರೆ ಸುಮ್ಮನಿದ್ದಾರ? ಜಗತ್ತಿನಲ್ಲಿ ಯಾರಿಗೂ “ಅನುಭವ” ಇರುವ ಹುಡುಗಿಯರು ಬೇಡ. ಅದೇ ಜಗತ್ತು ಪ್ರತೀ ಹುಡುಗನನ್ನು “ಅನುಭವವಿದೆಯಾ?” ಅಂತ ಕೇಳಿ ಪೀಡಿಸಿ ಪ್ರಾಣ ತಿನ್ನುತ್ತದೆ. ಏನನ್ಯಾಯ ಬ್ರದರ್‍? ಛಾನ್ಸು ಕೊಟ್ಟು ನೋಡಿದರೆ ತಾನೇ ಯಾರಿಗಾದರೂ ಅನುಭವ ಅಂತ ಆಗುವುದು?

ಹೇಗೋ “ಅಣ್ಣ” “ಅಪ್ಪ” ಎಂದು  ಅವರಿವರ ಕಾಲು ಹಿಡಿದು, ಇರುವ ಅರ್ಹತೆಗಿಂತ ಕಡಿಮೆ ಧರ್ಜೆಯ ನೌಕರಿಯೊಂದನ್ನು ಕಡೆಗೂ ಹಿಡಿದೆ ಅಂತಿಟ್ಟುಕೊ: ಪಕ್ಕದ ಖುರ್ಚಿಯಲ್ಲೇ ಸ್ತ್ರೀ ಮೂರ್ತಿ ಆಕೆಗೆ ಮೂವತ್ಮೂರು ಪರ್ಸೆಂಟ್ ರಿಸರ್ವೇಷನ್. ಏನೋ ಪಕ್ಕದಲ್ಲಿದ್ದಾಳಲ್ಲಾ ಅಂದುಕೊಂಡು ಕಣ್ಣೆತ್ತಿ ನೋಡಿದೆಯೋ: ಕೆಲಸ ಮಾಡುವ ಜಾಗದಲ್ಲಿ ಲೈಂಗಿಕ ದುರ್ವರ್ತನೆ ಎಸಗಿದ ಕೇಸು ತಪ್ಪಿದ್ದಲ್ಲ. ಹೋಗಲು ಪ್ರಾಮಾಣಿಕವಾಗಿ ಲವ್ವು ಮಾಡಿದೆಯಾ ಅಲ್ಲಿ ಒನ್ಸ್ ಎಗೈನ್, ಪ್ರಪೋಸ್ ಮಾಡುವ ಜವಾಬ್ದಾರಿ ನಿಂದೆ. ಬರೆದಿಟ್ಟುಕೊಂಡ ಲವ್ ಲೆಟರ್‍ ಕಿಸೆಯಿಂದ ತೆಗೆದು ಕೊಡಲಾಗದೇ ಇರುವಲ್ಲೇ ಇಟ್ಟುಕೊಳ್ಳಲಾಗದೇ ತಿಂಗಳು ಗಟ್ಟೆಲೆ ಕಂಗೆಟ್ಟು ಕಬೋಜಿಯಂತೆ ತಿರುಗುವ ನಿನ್ನ ಪಾಡು ಪಾಡೇನಯ್ಯಾ? ಲವ್ ಅಟ್ ಫಸ್ಟ್ ಸೈಟ್ ಅನ್ನೋದೆಲ್ಲಾ ಕಥೆ, ಕಾದಂಬರಿಗಳ ಮಾತು ಭಯ್ಯಾ; ಫಸ್ಟು ಸೈಟು ತೋರಿಸು ಆಮೇಲೆ ಲವ್ವು ಅಂತಾರೆ. ಅಲ್ಲಿಂದ ಶುರು ನೋಡು, ಶುಭ್ರ ಜಾತಕದೊಳಕ್ಕೆ ಶನಿ ಪ್ರವೇಶ ’ನೀನು ನಂಗಿಷ್ಟ ಕಣೇ’ ಅಂದ ತಪ್ಪಿಗೆ ಇಡೀ ಜೀವನ ಅವಳನ್ನು ಕಟ್ಟಿಕೊಂಡು ಹೆಣಗಲೇ ಬೇಕು. ವರದಕ್ಷಿಣೆ ಕೇಳೋ ಹಂಗಿಲ್ಲ. ಮದುವೆ ಅದ್ದೂರಿಯಾಗಿ ಮಾಡಿಕೊಡಿ ಅಂತ ಕೇಳಂಗಿಲ್ಲ. ಪ್ರೀತಿಸಿದ ತಪ್ಪಿಗೆ ಗುಡಿಯೋ, ಗುಂಡಾರವೋ, ಸಬ್ ರಿಜಿಸ್ಟಾರ್‍ ಆಫ್‌ಈಸೋ, ಪೊಲೀಸ್ ಸ್ಟೇಷನ್ನೋ,; ಒಂದು ತಾಳಿ ಅಂತ ಕಟ್ಟಿ ಯಾಬ್ರಾಸಿಯಂತೆ ನಿಂತುಕೊಂಡು ಫೋಟೋ ತೆಗೆಸಿಕೊಂಡರೆ ಮಾತ್ರ ಅವತ್ತಿನಿಂದ ನೀನು ಗೃಹಸ್ಥ.

ಹುಡುಗಿಯಾದವಳು ಮೊದಲ ರಾತ್ರಿ ಮಾತ್ರ ತನ್ನ ನೀತಿ, ನಿಯತ್ತು, ಶೀಲ, ಚಾರಿತ್ಯ್ರ, ಇತ್ಯಾದಿಗಳನ್ನು ಪ್ರೂವ್ ಮಾಡಿಬಿಟ್ಟರೆ ಗೆದ್ದಳು ಅಂತಲೇ ಅರ್ಥ. ಅರ್ಧ ಚಟಾಕು ರಕ್ತ, ಅವಳ ಒಟ್ಟಾರೆ ವ್ಯಕ್ತಿತ್ವಕ್ಕೆ ಕ್ಯಾರೆಕ್ಟರ್‍ ಸರ್ಟಿಫಿಕೇಟು. ಆದರೆ ನಿನ್ನ ಕಥೆ ಹೇಳು ಭೈ. ಪ್ರತಿ ಸಲವೂ ಅಳುಕು, ಸೋತೆನೆಂಬ ಭಯ, ಜೀವನ ಪರ್ಯಂತ ಯಾವುದೆ ಮೇಲೆ ನಂಬಿಕೆಯಿಟ್ಟುಕೊಂಡಿರುತ್ತೀಯೋ ಐನ್ ಟೈಮಿಗೆ ಅದೇ ಕೈಕೊಡುತ್ತದೇನೋ ಎಂತ ಆತಂಕ! ಪಾಪ ಕತ್ತಲ ರಾತ್ರಿಯಲ್ಲಿ, ಪಕ್ಕದಲ್ಲಿರುವ ಸ್ತ್ರೀ ಮೂರ್ತಿಗೂ ಗೊತ್ತಾಗದಂತೆ ವಯಾಗ್ರ ನುಂಗಿ ಏದುಸಿರು ಬಿಡುವ ನಿನ್ನ ಪಾಡು ಯಾವ ಶತ್ರುವಿಗೂ ಬೇಡ ಕಣಯ್ಯಾ.

ಆಯ್ತು , ಆ ಹಂತವೂ ದಾಟಿತು ಅಂತಲೇ ಇಟ್ಟುಕೊಳ್ಳೋಣ. ಅಂದುಕೊಂಡ ಅವಧಿಯೊಳಗೆ ಹೆಂಡತಿ ಬಸುರಾಗದಿದ್ದರೆ ಅಕ್ಕಪಕ್ಕದ ಮನೆಯವರು ಎಗಾದಿಗಾ ನಿನ್ನನ್ನೇ ನೋಡುತ್ತಾರೆ. ಆಫೀಸಿನಲ್ಲಿ ಪ್ರತಿಯೊಬ್ಬರೂ ಕೇಳುವವರೇ: ಏನಾದ್ರೂ ವಿಶೇಷಾನಾ? ಇನ್ನು ಅದೃಷ್ಠ ಪಲಿಸಿ ಆಯಮ್ಮ ಗರ್ಭವತಿಯಾದಳೂ ಅಂತಿಟ್ಕೋ. ಪೆದ್ದು ಮುಂಡೇದರ ಹಾಗೆ ನಿನ್ನ ಸಂಭ್ರಮವೇ ಸಂಭ್ರಮ, ಹೂವು ತಂದುಕೊಡುವುದೇನೂ, ಚೆಕ್ಕಪ್ಪುಗಳೇನೂ, ವಾಕಿಂಗುಗಳೇನೂ, ಮನೆಯಲ್ಲಿ ಇರೋ ಬರೋ ಕೆಲಸವೆಲ್ಲಾ ನೀನೇ ಮಾಡುವುದೇನೂ, ಕೊಡಗಟ್ಟಲೆ ನೀರು ಹೊರುವುದೇನೂ, ಮೈಕ್ ಟೈಸನ್ ಥರಾ ಭಾರ ಎತ್ತುವುದೇನೂ..ಅಬ್ಬಬ್ಬಬ್ಬ! ನೋಡ್ತಾ ನೋಡ್ತಾ ಮಕ್ಕಳಾಗಿ, ಸಾಲವಾಗಿ, ಪ್ರಮೋಷನ್ನಿಗಾಗಿ ಯುದ್ದಗಳಾಗಿ, ಆಫೀಸಿನಲ್ಲಿ ಛೀಮಾರಿಗಳಾಗಿ, ಪುಟಿಯುತ್ತಿದ್ದ ದೇಹಕ್ಕೆ ಮೂವತ್ತಾಗಿ, ನಲವತ್ತಾಗಿ, ಮಿಡ್ಲ್ ಕ್ಲಾಸ್ ಆಸೆಗಳೆಲ್ಲಾ ಕಂದಾಯವೆಂಬಂತೆ ಅದೊಂದು ದಿನ ಸುಮ್ಮನೆ ಹೋಗಿ ರಕ್ತ ಅದೂ-ಇದೂ ಪರೀಕ್ಷೆ ಮಾಡಿಸಿಕೊಂಡರೇ ಒಂದೇಟಿಗೆ ಬಿ.ಪಿ., ಅದರ ಮೇಲೆ ಡಯಾಬಿಟೀಸು!

ಒಂದೇ ಒಂದು ಸಲ ಗವರ್‍ನಮೆಂಟ್ ಆಸ್ಪತ್ರೆಯ ಜನರಲ್ ವಾರ್ಡಿಗೆ ಹೋಗಿ ನೋಡು ಬ್ರದರ್‍, ಸ್ಟ್ರೋಕು-ಹಾರ್ಟ್ ಅಟ್ಯಾಕು ಅಂತ ಸಾಲುಗಟ್ಟಿ ಮಲಗಿರುವ ಪೇಷೆಂಟುಗಳ ಪೈಕಿ ಹೆಂಗಸರಿಗಿಂತ ಗಂಡಸರೇ ಜಾಸ್ತಿ. ಅವರಿಗೆ ಅರವತ್ತನೇ ವಯಸ್ಸಿಗೆ ಬರುವ ಖಾಯಿಲೆ ಕಸಾಲೆಗಳೆಲ್ಲಾ ನಿನಗೆ ನಲವತ್ತಕ್ಕೇ ಬರ್‍ತವೇ ಕಣೋ. ಅದೇ ನನ್ನ worry. ಗಾಡಿ ಓಡಿಸುವಾಗ ಜೋಪಾನ ಮಗಾ. ಮೆಜೆಸ್ಟಿಕ್ಕಿನಲ್ಲಿ ರಷ್ಷು ಜಾಸ್ತಿ, ಸಿಗರೇಟಿಗೆ ಬೆಂಕಿ ಕೊಡುವಾಗ, ಮನೆಯಲ್ಲಿ ನಿನಗೋಸ್ಕರ ಕಾಯ್ತಿರೋ ಕಂದ ಒಬ್ಬನಿದ್ದಾನೆ ಅನ್ನೋದು ನೆನಪಿರಲಿ ಭೈ. ಕಾಂಪಿಟೇಷನ್ನು, ಕನ್ಸ್ಯೂಮರಿಸ್ಸಮ್, ನಗರೀಕರಣ, ಗ್ಲೋಬಲೈಸೇಷನ್, ಅಣುಒಪ್ಪಂದ, ವರದಕ್ಷಿಣೆ ಕಾಯ್ದೆ, ರಸ್ತೆ ಜಗಳ, ಹೆಂಡತಿಗೇ ಯಾವನೋ ಲಫಂಗ ಕಳುಹಿಸೋ ಪೋಲಿ ಎಸ್ಸೆಮ್ಮೆಸ್, ಮದ್ಯಾಹ್ನಗಳಲ್ಲಿ ಅವಳು ಮನೇಲಿರ್ತಾಳಾ-ಎಲ್ಲಿಗಾದರೂ ಹೋಗ್ತಾಳಾ ಎಂಬ ಅನುಮಾನ-ಇವೆಲ್ಲ ನಿನ್ನನ್ನೇ ಕಾಡಿ ಮೆತ್ತಗೆ ಮಾಡಬೇಕಾ ಮಿತ್ರಾ? Take care. ಬಸ್ಸಿಳಿಯುವಾಗ ಹುಶಾರು. ರಸ್ತೆ ದಾಟುವಾಗ ಎಚ್ಚರವಿರಲಿ. ಯಾವುದರಲ್ಲಿ ಸೋತರೂ ಅಳತೆ ಮೀರಿ ಡಿಸಪಾಯಿಂಟ್ ಆಗಬೇಡ. ಸಾಲ ತೀರಿಸಲಾಗಲಿಲ್ಲ ಅಂತ ಗೌರವಕ್ಕೆ ಹೆದರಿ ಬದುಕು ಮುಗಿಸಿಕೊಳ್ಳುವ ಯೋಚನೆ ಮಾಡಲೇ ಬೇಡ ಡಿಯರ್‍.

ಗಂಡಸಾಗಿ ಹುಟ್ಟಿದ ಮೇಲೆ ಪ್ರಪಂಚದಲ್ಲಿ ಇದನ್ನೆಲ್ಲಾ ಅನುಭವಿಸಬೇಕು. ಹಾಗಂತ ಒಬ್ಬ ಗಂಡಸಾಗಿ ಇದನ್ನೆಲ್ಲ ಹೇಳಿದ್ದೀನಿ ಭೈ. ಬೇಜಾರು ಮಾಡ್ಕಬ್ಯಾಡ.

-ರವೀ.


Follow

Get every new post delivered to your Inbox.

Join 109 other followers