ಕಳೆದ ತಿಂಗಳು ನೀರು ತಪ್ಪಿ ಹೋಗಿ ಕಿಬ್ಬೊಟ್ಟೆಯಾಳದಲ್ಲೆಲ್ಲೋ ಹೊರಳು!

October 2, 2009

lovers

ಮೆಲ್ಲನೆ ನೀ ಬಂದು ಕೈ ಮುಟ್ಟಿದೇ

ನಲ್ಲೆಯ ಈ ದೇಹ ಝಲ್ಲೆನ್ನದೇ…

ಬೆಳಗ್ಗೆ ಹಿತ್ತಿಲಲ್ಲಿ ನಿನ್ನ ಕೆಂಪು ಚೆಕ್ಸ್ ಅಂಗಿ ಒಗೆದು ಹಾಕುತ್ತಿದ್ದಾಗ ಪಕ್ಕದ ಮನೆಯ ರೇಡಿಯೋದಲ್ಲಿ ಕೇಳಿಸಿದ ಹಾಡು. ಮನಸ್ಸಿಗೆ ನೂರು ನೆನಪು. ಒಂದೊಂದ್ಸಲ ನನ್ನ ಮೇಲೆ ನಂಗೇ ಸಿಟ್ಟು ಬರುತ್ತೆ. ಯಾಕೆ ಹೀಗೆ ಜಗತ್ತಿನಲ್ಲಿರುವ ಮತ್ತೆಲ್ಲವನ್ನೂ ಮರೆತು ಬೆಳಗ್ಗೆ ಎದ್ದವಳೇ ನಿನ್ನಲ್ಲಿಗೆ ಓಡಿ ಬರಬೇಕು ನಾನು? ಎಚ್ಚರವಾಗಿ ಕಣ್ಣು ಬಿಟ್ಟ ತಕ್ಷಣ ಅಮ್ಮನ ಫೋಟೋ ನೋಡುತ್ತೇನೆ. ಅವಳ ಶುಭ್ರ ಮಂದಹಾಸದಲ್ಲಿ ನೀನೇ ಕಂಡಂತಾಗುತ್ತದೆ. ಇದ್ದಿದ್ದರೆ ನಿನ್ನನ್ನು ನೋಡಿ ಅದೆಷ್ಟು ಸಂತೋಷ ಪಡುತ್ತಿದ್ದಳೋ ಅಂತ ಅಂದುಕೊಳ್ಳುತ್ತಳೇ ಸ್ನಾನ. ಇವತ್ತ್ಯಾಕೋ ಹಾಕಿಕೊಳ್ಳುವಾಗ ಬಟ್ಟೆ ಕೊಂಚ ಬಿಗಿಯೆನ್ನಿಸಿದವು. ನೀನು ಮೊದಲೇ ಡುಮ್ಮೀ ಅಂತ ರೇಗಿಸ್ತಿರ್‍ತೀಯ. ಸೀರೆಯುಟ್ಟುಕೊಳ್ಳುವಾಗ ಹೊಟ್ಟೆಯ ಪುಟ್ಟ ಮಡತೆಯ ಮೇಲಿನ ಹುಟ್ಟು ಮಚ್ಚೆ ಕಾಣಿಸಿತು. ನಿನಗೆ ಅದನ್ನು ಕಂಡರೆ ಎಂಥ ಹುಚ್ಚು ಪ್ರೀತಿಯೋ, ಕೆನ್ನೆಗೆ ಕೊಟ್ಟದ್ದಕ್ಕಿಂತ ಹೆಚ್ಚಿನ ಮುತ್ತು ನನ್ನ ಹೊಟ್ಟೆಯ ಮೇಲಿನ ಮಚ್ಚೆಯೇ ನುಂಗಿತು. ಸರಸರನೆ ಅಡುಗೆಗಿಟ್ಟು ಅಪ್ಪನಿಗೆ ತಿಂಡಿ ಮಾಡಿಕೊಟ್ಟೆ. ಜಗತ್ತಿಗೇ ರಜೆಯಿದೆಯೇನೋ ಎಂಬಂತೆ ಮಲಗಿದ್ದ ತಮ್ಮನನ್ನು ಎಬ್ಬಿಸುವ ಹೊತ್ತಿಗಾಗಲೇ ಮನೆಯ ಅಂಗಳದಲ್ಲಿ ಘಳ ಘಳ ಸೂರ್ಯ. ಮಾಡಿಟ್ಟದ್ದನ್ನೇ ಡಬ್ಬಿಗೆ ಹಾಕಿಕೊಂಡು ಇನ್ನಿಲ್ಲದ ಸಡಗರದೊಂದಿಗೆ ನಿನ್ನಲ್ಲಿಗೆ ಹೊರಡುತ್ತೇನೆ. ದಾರಿಯುದ್ದಕ್ಕೂ ಯಾವುದೋ ಹಾಡಿನ ಗುನುಗು. ಮೂರು ಹಾಡು ಮುಗಿಯುವಷ್ಟರಲ್ಲಿ ನಿನ್ನ ಮನೆ.

ಪೂಜಿಸಲೆಂದೇ ಹೂಗಳ ತಂದೆ

ದರುಶನ ಕೋರಿ ನಾನಿಂದೇ

ತೆರೆಯೋ ಬಾಗಿಲನೂ..

ಚಿರಂತ್, ಬೆಳಗ್ಗೆ ನಿನ್ನನ್ನ ಎಬ್ಬಿಸುವುದರಲ್ಲೇ ಒಂದು ಮಜವಿದೆ ನೋಡು. ನನ್ನ ಹತ್ತಿರ ತಲಬಾಗಿಲಿನದೊಂದು ಕೀ ಇರದೇ ಹೋಗಿದ್ದಿದ್ದರೆ, ಪುಣ್ಯಾತ್ಮ! ಮದ್ಯಾಹ್ನದ ತನಕ  ಬಾಗಿಲಲ್ಲೇ ನಿಂತಿರಬೇಕಾಗುತ್ತಿತ್ತೇನೋ.ಇಂನ್‌ಸ್ಟಾಲ್‌ಮೆಂಟಿನಲ್ಲಿ ಏಳೋ ಮಹಾಶಯ ನೀನು. ಆದರೂ ನಿದ್ದೆಯಲ್ಲಿ ನಿನ್ನನ್ನು ನೋಡುವುದೇ ಒಂದು ಚೆಂದ.  ತುಂಬ ನೀಟಾಗಿ ಬಟ್ಟೆ ಹಾಕಿಕೊಂಡು, ತಲೆ ಬಾಚಿಕೊಂಡು ಊಹುಂ, ನಿನ್ನ ಕೆದರಿದ ಕ್ರಾಪೇ ಚಂದ. ನುಣ್ಣಗೆ ಷೇವ್ ಮಾಡಿಕೊಂಡಿರುತ್ತೀಯಲ್ಲ? ಅದಕ್ಕಿಂತ ಚೂರು ಚೂರು ಗಡ್ಡ ಬೆಳೆದಿದ್ದರೇನೇ ಸರಿ. ಇನ್ನೊಂದೇ ಒಂದು ಸಲ ಮೀಸೆ ತೆಗೆದರೆ ನೋಡು, ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಬಿಡುತ್ತೇನೆ. ಬರೀ ಒಂದು ಟ್ರಾಕ್ ಪ್ಯಾಂಟ್ ಹಾಕಿಕೊಂಡು ಮಲಗಿದವನ ಎದೆ ಮೇಲಿನ ಪೊದೆಗೂದಲು ನೇವರಿಸಿ ನನ್ನ ಪುಸ್ತಕಗಳನ್ನು ಒಂದು ಕಡೆ ಎತ್ತಿಟ್ಟು ನಿನಗೋಸ್ಕರ ಕಾಫಿ ಮಾಡಲು ನಿಲ್ಲುತ್ತೇನೆ. ನಂಗೊತ್ತು, ನಿನಗೆ ರಾತ್ರಿ ಹಾಕಿಟ್ಟ ಡಿಕಾಕ್ಷನ್ನಿನ ಕಾಫಿಯೇ ಬೇಕು. ನಿದ್ರೆಯಲ್ಲೇ ಇದ್ದಿಯೇನೋ ಎಂಬಂತೆ ದಿಂಬಿಗೆ ಒರಗಿ ಕುಳಿತು ದೊಡ್ಡ ಕಪ್ಪಿನ ತುಂಬಾ ಹಾಕಿಕೊಟ್ಟ ಕಾಫಿ ಕುಡಿಯುತ್ತಿಯ. ನಿನ್ನ ಕಡುಗಪ್ಪು ಕಣ್ಣು ನನಗೊಂದು Thanks ಹೇಳಿ ಕಿಟಕಿಯಾಚೆಗೆ ಹೊರಳುತ್ತವೆ. ಅವುಗಳಲ್ಲಿನ ಸೈಲೆನ್ಸ್ ನನಗೆ ತುಂಬ ಇಷ್ಟವಾಗುತ್ತದೆ. ಜಗತ್ತಿನೊಂದಿಗೆ ಯಾವುದೇ ದೂರು, ತಕರಾರುಗಳಿಲ್ಲದ ತಣ್ಣಗಿನ ಕಣ್ಣು ಅವು.

ಹಮ್ ನೇ ದೇಖೀ ಹೈಂ

ಇನ್ ಆಂಖೋಮೆ ಮೆಹಕತೇ ಖುಷಬೂ….

ಏಳುವ ತನಕ ತಕರಾರೇ ಹೊರತು ಎದ್ದ ಮೇಲೆ ನೀನು ಪಾದರಸ. ಬೆಚ್ವಗೆ ಗೀಝರಿನಲ್ಲಿ ಕಾದ ನೀರು ನಿನ್ನ ಬಂಡೆಗಲ್ಲಿನಂತಹ ಬೆನ್ನಿಗೆ ಚೆಲ್ಲಿ ಸೋಪು ಉಜ್ಜುತ್ತಿದ್ದರೆ ಕೈ ತಡವರಿಸುತ್ತದೆ. ಎದೆ, ಭುಜ, ತೋಳು-ವಿಗ್ರಹ ಕಣೋ ನೀನು.ಟವೆಲ್ಲು ಸುತ್ತಿ ಈಚೆಗೆ ಕರೆದುಕೊಂಡು ಬರುವ ಹೊತ್ತಿಗೆ ನನಗೇ ಅರ್ಧ ಸ್ನಾನ. ಇವೆಲ್ಲ ನನಗೆ Best moments of our life ಅನ್ನಿಸುತ್ತಿರುತ್ತದೆ. ಹತ್ತೋ, ಇಪ್ಪತ್ತೋ,ಐವತ್ತೋ ವರ್ಷಗಳಾದ ಮೇಲೆ ಹೇಗಿರುತ್ತೀವೋ ಗೊತ್ತಿಲ್ಲ ಚಿರಂತ್: ಈ ಕ್ಷಣಕ್ಕೆ ಮಾತ್ರ ಭಗವಂತ ಅತ್ಯಂತ ಶ್ರದ್ದೆಯಿಂದ ಕೂತು ಮದುವೆ ಮಾಡಿಸಿದ ಅದ್ಬುತ ದಂಪತಿಗಳಂತಿದ್ದೇವೆ. ಸ್ನಾನವಾದ ಮೇಲೆ ಹತ್ತು ನಿಮಿಷ ನೀನುಂಟು, ನಿನ್ನ ದೇವರುಂಟು. ಅಷ್ಟೊತ್ತಿಗೆ ಮಾಡಿಕೊಂಡು ತಂದ ತಿಂಡಿ ಬಿಸಿ ಮಾಡಿಕೊಂಡು ನಿನಗೋಸ್ಕರ ಎತ್ತಿಟ್ಟರೆ, ಮಗುವಿನ ಹಾಗೆ ಇಷ್ಟಿಷ್ಟೇ ತಿನ್ನುವ ನೀನು.

ಸಂಕೇತ್ ಮಿಲನ್ ಕಾ

ಭೂಲ್ ನ ಜಾನಾ

ಮೇರಾ ಪ್ಯಾರ್‍‌ನ ಬಿಸರಾನಾ…

ಹೊರಡುವ ಹೊತ್ತಿಗೆ ಬಾಗಿಲ ಮರೆಯಲ್ಲಿ ನಿಂತು ಬರಸೆಳೆದೆ ನೀನು ಕೊಡುವ ಮುತ್ತು, ಅದೇ ನನಗೆ ಸಂಜೆ ಕಾಲೇಜು ಮುಗಿಯುವವರೆಗಿನ ಮುತ್ತು ಬುತ್ತಿ. ಕಾಳೇಜಿನ ಬಳಿ  ಬೈಕು ನಿಲ್ಲಿಸಿ ಇಳಿಸಿ ಹೋಗುವ ನಿನ್ನನ್ನು, ತಿರುವಿನಲ್ಲಿ ಮರೆಯಾಗುವ ತನಕ ನೋಡುತ್ತಾ ನಿಲ್ಲುತ್ತೇನೆ. ಗೆಳತಿಯರು ಛೇಡಿಸುತ್ತಾರೆ. ಮೊದಲ ಪಿರಿಯಡ್‌ನಲ್ಲಿ ನಾನೆಲ್ಲೋ, ಮನಸೆಲ್ಲೋ, ಪಾಠವೆಲ್ಲೋ..? ಮದ್ಯಾಹ್ನ ಗೆಳತಿಯರೊಂದಿಗೆ ಕೂತು ಊಟ ಮಾಡುವಾಗ ನಿನು ಆಫೀಸಿನಲ್ಲಿ ಏನು ತರಿಸಿಕೊಂಡಿರುತ್ತೀಯೋ ಅಂತ ಯೋಚನೆ. ನೋಡ ನೋಡುತ್ತಾ ಸಂಜೆಯಾಗಿಬಿಡುತ್ತದೆ. ಇಳಿಸಿ ಹೋದ ಜಾಗದಲ್ಲೇ ನೀನು, ನಿನ್ನ ಬೈಕು.

ಜಬ್ ದೀಪ್ ಜಲೇ ಆನಾ

ಜಬ್ ಶಾಮ್ ಢಲೇ ಆನಾ

ದಿನಗಳು ಹೀಗೇ ಕಳೆದುಹೋಗಿ ಬಿಡುತ್ತವೇನೋ ಅಂತ ಕಳವಳಗೊಳ್ಳುತ್ತೇನೆ ಚಿರಂತ್. ನಂಗೊತ್ತು, ನಿನ್ನ ಮನಸ್ಸು ನನ್ನ ವಿಷಯದಲ್ಲಿ ನಿಚ್ಚಳ. ನಂಗೆ ಬೇಕು ಅಂದಿದ್ಯಾವುದನ್ನೂ ನೀನು ಇಲ್ಲವೆಂದಿಲ್ಲ. ಇರುವ ಅತ್ಯುತ್ತಮ ರೆಸ್ಟುರಾಂಟ್ಸ್ ಗೆ ಕರೆದುಕೊಂಡು ಹೋಗಿದ್ದೀಯ. ಕೇಳುವುದಿರಲಿ, ಸುಮ್ಮನೆ ಆಸೆ ಪಟ್ಟ ಪ್ರತಿಯೊಂದನ್ನೂ ತೆಗೆಸಿಕೊಟ್ಟಿದ್ದೀಯ. ನಾವು ಒಟ್ಟಿಗೆ ಹೋಗದ ಜಾಗಗಗಳಿಲ್ಲ. ಆದರೂ ಒಂದು ಮದುವೆ ಅಂತ ಆಗಿಬಿಟ್ಟರೆ ಮನಸ್ಸಿನ ಈ ಕಳವಳಗಳೂ ದೂರವಾಗುತ್ತವೇನೋ? ಅಪ್ಪ ಮೇಲಿಂದ ಮೇಲೆ ಎರಡು ಸಲ ಕರೆದು ಕೇಳಿದರು. ಒಮ್ಮೆ ನೀನು ಬಂದು ಮಾತನಾಡು. ನಿಜ ಹೇಳಲಾ ಚಿರಂತ್, ಕಳೆದ ತಿಂಗಳು ನಾನು ನೀರು ಹಾಕಿಕೊಂಡಿಲ್ಲ. ಕಿಬ್ಬೊಟ್ಟೆಯಾಳದಲ್ಲೆಲ್ಲೋ ಸಣ್ಣ ಹೊರಳು. ಇನ್ನು ತಡಮಾಡಬೇಡ ಕಣೋ….

-ನಿನ್ನವಳು.


ಪ್ರೀತ್ಸೋ ಮನಸು ಮುನಿಯಲು ನೂರು ಕಾರಣ…ಅರಳಲು ಒಂದೇ ಕಾರಣ..ಅದೇ ಪ್ರೀತಿ

July 13, 2009

ಪ್ರೀತಿಯಲ್ಲಿ ಮನಸುಗಳು ಅರಳಬೇಕು, ಮುಳುಗೇಳಬೇಕು, ತೇಲಿ ತೀರ ತಲುಪಬೇಕು. ಪ್ರೀತಿಯ ಉನ್ಮತ್ತತೆಯಲ್ಲಿ ಮನಷ್ಯ ತೀರಾ ಪೊಸೆಸೀವ್ ಗೆ ಈಡಾಗುವುದು ಸಹಜ. ಅಂತಿಮವಾಗಿ ಈ ಪೊಸೆಸೀವ್ ನೆಸ್ಸನ್ನು ಪ್ರೀತಿ ಗೆಲ್ಲಬೇಕೆ ಹೊರತು, ಪ್ರೀತಿ ಪೊಸೆಸಿವ್ ನಲ್ಲಿ ಕರಗಿ ಹೋಗಬಾರದು. ಪ್ರೀತಿ ಉಸಿರಲ್ಲಿ ಉಸಿರಾಗಬೇಕೇ ಹೊರತು, ಉಸಿರುಗಟ್ಟಿಸುವಂತಿರ ಬಾರದು. ಅಂತೆಯೇ ಪೊಸೆಸೀವ್ ಮನಸ್ಸುಗಳಿಗೆ ಸ್ವಲ್ಪ ಭದ್ರತೆ, ಇನ್ನಷ್ಟು ಪ್ರೀತಿ, ಒಂದು ಅಪ್ಪುಗೆ ಸಾಕು ಪೊಸೆಸೀವ್ ಕರಗಲು. ಪ್ರೇಮಿಗಳಲ್ಲಿ ಸಮಾನ್ಯವಾದ ಇದರಲ್ಲಿ ಬಿದ್ದ ಪ್ರೇಮಿಯೊಬ್ಬನ ಮನಸ್ಥಿತಿ ಇಲ್ಲಿದೆ…

-ಭಾಸ್ಕರ್‍.

ಏನು ಮಾಡಲಿ ಗೆಳತೀ, ಪೊಸೆಸಿವ್ ಮನಸ್ಸು ಲೂಸ್ ಮಾದ!

Possesive

ನನ್ನ ಒಲವಿನ ಜಾನ್ಸ್,

ಬೆಳಗ್ಗೆಯಿಂದ ನಿನಗೆ ಏನೋ ಹೇಳಬೇಕು ಅಂದುಕೊಂಡದ್ದು ಈಗ ನೆನಪಾಯ್ತು ನೋಡು. ಮತ್ತೇನಿಲ್ಲ, ನಂಗೆ ನೀನು ಅಂದ್ರೆ ಇಷ್ಟ. ನಿನ್ನ ಪುಟ್ಟ ಪಾದ ಇಷ್ಟ. ಅದರ ಕಿರುಬೆರಳು ಮುದ್ದು. ಮೈಯ ಮಚ್ಚೆಗೆಲ್ಲ ಒಂದು ಕಡೆಯಿಂದ, ತಲಾ ಒಂದಕ್ಕೆ ನೂರರನಂತೆ ಮುತ್ತಿಟ್ಟುಕೊಂಡು ಬಂದರೆ ಒಟ್ಟಿನಲ್ಲಿ ಎಷ್ಟು ಸಾವಿರವೋ? ನಿನ್ನ ತುದಿಗೋಪ ನಂಗಿಷ್ಟ. ಕಣ್ಣ ಹೊರಳಿಗೆ ಅಲ್ಲೇ ಬಿದ್ದು ಸಾಯ್ತೇನೆ. ಮೈಯ ಮಾಟಕ್ಕೆ ನಿಂತಲ್ಲೇ ಮಟಾಷ್. ಆಕ್ಸಿಡೆಂಟಾಗಿ ಸಾಯುವುದೇ ಹಣೆಯಲ್ಲಿ ಬರೆದಿದ್ದರೆ, ನಿನ್ನ ಹುಬ್ಬಿ ತಿರುವಿನಲ್ಲಿ ಆಗಲಿ ಅಪಘಾತ. ಕೊರಳ ಇಳಿಜಾರಿನಲ್ಲಿ ಸಂಭವಿಸಲಿ ಆಕ್ಸಿಡೆಂಟ್. ತೋಳ ತಿರುವಿನಲ್ಲಿ ಬ್ರೇಕು ಫೇಲಾಗಲಿ. ಕಿಬ್ಬೊಟ್ಟೆಯ ನುಣಿಪಿನಲ್ಲಿ ಸ್ಕಿಡ್ಡಾಗಿ ಹೋದೆನು. ಐ ಲವ್ ಯೂ ಕಣೆ.

ನಾನೇನು ಮಾಡಲಿ? ನೀನು ಯಾರೊಂದಿಗಾದರೂ ಮಾತನಾಡಿದರೆ ನಂಗೆ ಬೇಜಾರಾಗುತ್ತೆ. ಸೋಶಿಯಾಲಜಿ ಮೇಷ್ಟ್ರು, ಪೈನಲ್ ಇಯರ್‍ ಶಿವು, ಸ್ಪೋರ್ಟ್ಸ್ ಸೆಕ್ರೇಟರಿ ಈರಣ್ಣ ಕಡೆಗೆ ಅಟೆಂಡರ್‍ ಹನುಮಂತಿವಿನೊಂದಿಗೆ ನೀನು ನಗುನಗುತ್ತಾ ಮಾತನಾಡಿದರೂ,. ಬೆರಳ ತುದಿಗೆ ಚೇಳ ಕುಟುಕು. ನಾನದರೂ ಏನು ಮಾಡಲಿ? ಎ ದಿಲ್ ತೋ ಪಾಗಲ್ ಹೈ….

ಹೀಗೆ ಪೊಸೆಸೀವ್ ಆಗಿರೋದು ತಪ್ಪು. ಎಷ್ಠಾದರೂ ನೀನು ನನ್ನವಳು. ನನ್ನ ಪ್ರೀತಿಗೆ, ವಿನಂತಿಗೆ ಸಮ್ಮತಿ ಸಲ್ಲಿಸಿದವಳು. ನನ್ನನ್ನು ತುಂಬಾಪ್ರೀತಿಸುವಳು. ಇಂದಲ್ಲಾ ನಾಳೆ ಮದುವೆಯಾಗಲಿರುವಳು. ನೀನು ನಾಲ್ಕು ಮಂದಿಯೊಂದಿಗೆ ಮಾತನಾಡಿದರೆ ತಪ್ಪೇನಿದೆ? ನಿಂಗೂ ಒಂದು ಸೋಶಿಯಲ್ ಲೈಫ್ ಬೇಡವಾ? ಗೆಳೆಯರು ಬೇಡವಾ? ನೂನು ಮೊದಲಿನಂತೆಯೇ ಇರಬೇಕು. ನನ್ನ ಪ್ರೀತಿ ನಿನಗೆ ಬಂಧನವಾಗಬಾರದು. ಎಸ್, ಹಾಗಂತೆಲ್ಲಾ ಯೋಚಿಸುತ್ತೇನೆ. ತುಂಬಾ ಸ್ಪುಟವಾಗಿ ಯೋಚಿಸಿ, ಇನ್ಮೇಲಿಂದ ಹಾಗೆಲ್ಲಾ ಪೊಸೆಸೀವ್ ಆಗಿ ಆಡಬಾರದು ಎಂತ ನಿರ್ಧರಿಸುತ್ತೇನೆ. ಆದರೆ ಏನು ಮಾಡಲಿ ಜಾನ್ಸ್? ಮನಸ್ಸು ಲೂಸ್ ಮಾದ! ಬೆಳಗ್ಗೆ ನೀನು ಕಾರಿಡಾರಿನಲ್ಲಿ ನಿಂತು ಕನ್ನಡಕ ಮೇಷ್ಟ್ರು ಜೊತೆಯಲ್ಲಿ ನಗ ನಗ್ತಾ ಮಾತಾಡ್ತಾ ನಿಂತಿದ್ದು ನೋಡಿದೆ. ರಾತ್ರಿ ಯೋಚಿಸಿದ್ದಲ್ಲಾ ಮರೆತು ಹೋಗಿ ಅಂಗಾಲಿನ ಸಿಟ್ಟು ನೆತ್ತಿಗೇರಿಕೊಂಡು ಬಂದು, ಐ ಆಮ್ ಸಾರಿ….ಆ ಹೊತ್ತಿನಲ್ಲಿ ನಾನು ಮನುಷ್ಯನಾಗಿರಲಿಲ್ಲ.

ಜಾನ್ಹವಿ, ನಿನ್ನೊಂದಿಗೆ ತುಂಬಾ ಒರಟಾಗಿ ಮಾತನಾಡಿಬಿಟ್ಟೆ. ಹಾಗೆಲ್ಲಾ ಮಾತನಾಡುವುದು ನನ್ನ ಸ್ವಭಾವವೇ ಅಲ್ಲ. ಮನೆಯಲ್ಲೂ ನಾನು ಉಳಿದೆಲ್ಲರಿಗಿಂತ ಸ್ಮೂತ್ ಫೆಲೋ. ಅಪ್ಪನೆದುರು ನಿಂತು ಪಾಕೆಟ್ ಮನಿ ಕೇಳುವುದಕ್ಕೂ ಅಳಕುತ್ತೇನೆ. ಅಣ್ಣ ನನ್ನ ಪಾಲಿಗೆ ಡೆಡ್ಲಿ. ಅತ್ತಿಗೆಯೊಂದಿಗೂ ನನಗೆ ಅಂತ ಸಲಿಗೆಯಿಲ್ಲ. ಏನು ಮಾಡಲಿ ಹೇಳು, ನನಗೆ ಅಕ್ಕ ತಂಗಿಯರಿಲ್ಲ. ಹಠ ಮಾಡಿ ಮುದ್ದು ಮಾಡಿಸಿಕೊಳ್ಳೋಣವೆಂದರೆ ಚಿಕ್ಕಂದಿನಲ್ಲೇ ಅಮ್ಮ ತೀರಿಹೋದಳು. ಐ ಆಮ್ ಸಾರಿ ಜಾನ್ಸ್, ಅಭದ್ರತೆ ಯೆಂಬುದು ಚಿಕ್ಕಂದಿನಿಂದಲೂ ನನ್ನ ಬೆನ್ನತ್ತಿದ ಪೀಡೆ. ನನಗೆ ಸಿಗಬೇಕಾದ ಪ್ರೀತಿ ಎಲ್ಲಿ ಸಿಗದೇ ಹೋಗುತ್ತದೋ, ಎಲ್ಲಿ ಇನ್ನೊಬ್ಬರ ಪಾಲಾಗುತ್ತದೋ ಅಂತ ಅಟಮಟಿಸುತ್ತೇನೆ. ಈ ಕಾರಣಕ್ಕಾಗಿಯೇ ಮಧ್ಯಾಹ್ನ ನಿನ್ನೊಂದಿಗೆ ಒರಟಾಗಿ ಮಾತನಾಡಿದ್ದು.

ಬೇಸರ ಮಾಡಿಕೊಳ್ಳಬೇಡ ಜಾನ್ಸ್, ನನ್ನ ಸೆಡವು, ನನ್ನ ಮುನಿಸು, ಒರಟು ಮಾತು, ಹಠ, ಜಗಳ ಇವೆಲ್ಲಾ ತುಂಬಾ ತಾತ್ಕಾಲಿಕ. “ನೀನು ನನ್ನವನು, ಫಾರೆವರ್‍” ಅಂತ ಎದೆಯ ಮೇಲೆ ಒಂದು ಸಲ ನಿನ್ನ ಪುಟ್ಟ ಕೈಯಿಟ್ಟು ಹೇಳು, ಮತ್ತೆ ನಾನು ಬೇರೆಯದೇ ಮನುಷ್ಯ. ಒಂದೇ ಒಂದು ಮುಟಿಗೆಯಷ್ಟು ಪ್ರೀತಿ ಸಿಕ್ಕರೂ ಚಲಿಸಿಹೋಗುವುವನು ನಾನು. ನನಗೆ ತುಂಬಾ ಅತಿರೇಕವೆನಿಸುವಂತಹ ಡಿಮ್ಯಾಂಡ್ ಗಳಿಲ್ಲ. ನೀನು ನನಗೋಸ್ಕರ ಏನೂ ಮಾಡಬೇಕಾಗಿಲ್ಲ. ಒಂದು ಹಿಡಿ ಪ್ರೀತಿ ಕೊಡು; ನಂಗ್ ನಂಗೇ ಅಂತ ಕೊಡು. ನನ್ನದು ಹುಚ್ಚು ಬಡಬಡಿಕೆ ಅನ್ನಿಸಿದರೂ ಸಹನೆಯಿಂದ ಕೇಳಿಸಿಕೋ. ನನ್ನಲ್ಲೊಂದು ವಿಶ್ವಾಸ ಮೂಡಿಸು. “ಬದುಕಿದರೂ ಬಾಳಿದರೂ, ಸತ್ತರೂ, ಸರ್ವನಾಶವಾದರೂ-ಒಟ್ಟಿಗೆ” ಅಂತ ಆಣೆ ಮಾಡು. ಐ ಪ್ರಾಮಿಸ್, ಇನ್ನು ಮೇಲೆ ಯಾವತ್ತೂ ಪೊಸೆಸೀವ್ ಆಗಿ ಆಡುವುದಿಲ್ಲ. ನಿಜ ಹೇಳಬೇಕೆಂದರೆ, ನಿನ್ನ ಬಗ್ಗೆ ಅನುಮಾನ ನನಗೆ ಖಂಡಿಯ ಇಲ್ಲ. ಇವೆಲ್ಲಾ ಹುಚ್ಚು ಮನಸ್ಸಿನ ಆಟ: ಪ್ಲೀಸ್, ನಂಬು.

ನಾಳೆ ಸಿಗೋಣ.

ನಿನ್ನನ್ನು ಎಂದಿನಂತೆಯೇ ಪ್ರೀತಿಸುತ್ತೇನೆ, ಆರಾಧಿಸುತ್ತೇನೆ. ಹೇಯ್ ಜಾನ್ಸ್, ಈ ಜಗತ್ತಿನಲ್ಲಿ ನನಗೆ ಬೇರೆ ಇದ್ದಾರಾದರೂ ಯಾರು ಹೇಳು? ಜಗಳಕ್ಕೂ ನೀನೇ ಬೇಕು: ನಂಗ್ ನಂಗೇ ಬೇಕು. ಇಡಿ ಇಡಿಯಾಗಿ ಬೇಕು.

-ನಿನ್ನವನು.


ಮನದ ಮೂಲೆಯಲ್ಲಿ ಹುದುಗಿರುವ ಪ್ರೀತಿಯನ್ನೊಮ್ಮೆ ನೇವರಿಸಿ..

May 28, 2009

love

ಮನತುಂಬಿ ಬಂದ ಪ್ರೀತಿ ಕಣ್ಣ ತುದಿಯವರೆಗೂ ಬಂದು ಕಣ್ಣ ಹನಿಯಾದಾಗ, ಪ್ರಿಯತಮೆಯ ಸಾಮೀಪ್ಯಕ್ಕಾಗಿ ಮನ ಹಂಬಲಿಸುವಾಗ , ಪ್ರೀತಿಯ ಸಿಹಿ ನೆನಪುಗಳು, ಹಿತ ಗುರುತುಗಳು ಪದೇ ಪದೇ ಮನಸ್ಸನ್ನು ತೋಯಿಸಿದಾಗ, ಪ್ರೀತಿಯ ಕಾವಿಗೆ ಮನಸ್ಸು ಅರಳಿದಾಗ, ಪ್ರೇಮಭರಿತ ಆ ನೋಟ ಮತ್ತೆ ಮತ್ತೆ ಮನಸ್ಸಿಗೆ ತಿವಿದಾಗ, ಜೀವನದ ಸರ್ವಸ್ವ ಅವಳೆಂದು ಅನಿಸಿದಾಗ……

ಪ್ರೀತಿಯ ಮತ್ತೊಂದು ಮುಖ ಅರಿವಿಗೆ ಬಂದಾಗ, ಮನ ತಣಿಸುವ ಆ ಪ್ರೀತಿ ಮನ ನೋಯಿಸಿದಾಗ, ನಲ್ಮೆಯ ಸವಿಮಾತಿನ ನೆನಪುಗಳು ಬೆನ್ನತ್ತಿ ಬೆನ್ನತ್ತಿ ತಿವಿದಾಗ, ಮಲಗಿರುವ ತಲೆದಿಂಬು ಕಣ್ಣೀರಿನಿಂದ ತೋಯ್ದಾಗ, ಕಣ್ಣೀರಾದ ಪ್ರತೀ ಹನಿ ಕೂಡಾ ಸಂತೈಸದಿದ್ದಾಗ, ಪ್ರತೀ ಮಾತಿನಲ್ಲೂ ಮೌನ ಇಣುಕಿದಾಗ, ನಿನ್ನ ಗೆಜ್ಜೆಯ ಸದ್ದು ಇನ್ನು ಕೇಳೆನೆಂಬ ಸತ್ಯ ಅರಿವಿಗೆ ಬಂದಾಗ….

ಪ್ರತಿಯೊಬ್ಬ ಪ್ರೇಮಿಯೂ ಈ ಎರಡೂ ಬಗೆಯ ಸಂಧರ್ಭಗಳಲ್ಲಿ ತಾನು ತಾನಾಗದೇ, ತನ್ನಲ್ಲಿಲ್ಲದೇ, ತನದೆಲ್ಲವೂ ತನದಾಗಿರದೇ ಅನುಭವಿಸಿರುತ್ತಾನೆಂಬುದು ನನ್ನ ಅಭಿಪ್ರಾಯ. ಪ್ರೀತಿ ಮನುಷ್ಯನನ್ನು ಭಾವುಕನನ್ನಾಗಿಸುತ್ತದೆ. ಒಮ್ಮೆ ಭಾವುಕತೆಗೆ ಬಿದ್ದ ಮನಸ್ಸು ಪದೇ ಪದೇ ಅದೇ ಪ್ರೀತಿಯನ್ನು ಹಂಬಲಿಸುತ್ತದೆ. ಪ್ರೀತಿಗಾಗಿ, ಪ್ರಿಯತಮೆಯ ಕಣ್ಣ ಒಂದು ನೋಟಕ್ಕಾಗಿ, ಪ್ರೀತಿಯಿಂದಾಡುವ ಒಂದು ಸವಿಮಾತಿಗಾಗಿ, ಹಿತವಾದ ಒಂದು ಸ್ಪರ್ಷಕ್ಕಾಗಿ, ಒಂದು ಅಪ್ಪುಗೆಗಾಗಿ, ತುಟಿಯಂಚಿನ ಆ ಸಿಹಿಗಾಗಿ, ಜೊತೆಯಾಗಿರುವ ಆ ಘಳಿಗೆಗಾಗಿ ಭಾವುಕ ಮನಸ್ಸು ತವಕಿಸುತ್ತದೆ. ಪ್ರೀತಿಯ ಪ್ರತೀ ನೆನಪೂ ನಿದ್ದೆಗೆಡಿಸುತ್ತದೆ, ಹನಿ ಮೂಡಿಸುತ್ತದೆ. ಪ್ರೀತಿಯ ಸೆಳೆತವೇ ಹೀಗೆ, ಒಮ್ಮೆ ಪ್ರೀತಿಸಲು ಪ್ರಾರಂಭಿಸಿದ ಮನಸ್ಸು ಇನ್ನಷ್ಟು ಪ್ರೀತಿಗಾಗಿ ಹಾತೊರೆಯುತ್ತದೆ. ಪ್ರೀತಿಯ ಜಾತ್ರೆಯಲ್ಲಿ ಸಂಭ್ರಮಿಸುತ್ತದೆ. ಭವಿಷ್ಯದಲ್ಲಿ ಇಡೀ ಜೀವನಕ್ಕಾಗುವಷ್ಟು ಪ್ರೀತಿ ತನಗಾಗಿ ಇರಲೆಂದು, ಕನಸು ಕಟ್ಟುತ್ತದೆ. ಕನಸಿನಲ್ಲೇ ಮುಳುಗಿರುತ್ತದೆ.

ಇದೇ ಪ್ರೀತಿ ತನ್ನಿಂದ ದೂರವಾಗುತ್ತಿದೆಯೆಂದು ಅನಿಸಲು ಶುರುವಾದಾಗ ಯಾಕೋ ಮನಸ್ಸು ಚಡಪಡಿಸಲು ಪ್ರಾರಂಭಿಸುತ್ತದೆ. ತನಗೆ ತಾನೇ ಸಾಂತ್ವನ ಹೇಳುತ್ತಾ ’ಛೇ ಹಾಗಿರೋದಿಲ್ಲ ಬಿಡು, ಅವಳು ಹಾಗೆ ಮಾಡುವುದಿಲ್ಲ’ ಎಂದು ತನಗೆ ತಾನೇ ಧೈರ್ಯ ತುಂಬುತ್ತಾ ಸಾಗುತ್ತದೆ. ಪ್ರೀತಿಯ ಆ ಇನ್ನೊಂದು ಮುಖ ಸ್ವಲ್ಪ ಸ್ವಲ್ಪ ಅರಿವಿಗೆ ಬರತೊಡಗಿದಾಗ ಮನ ಮುದುಡಲು ಪ್ರಾರಂಭಿಸುತ್ತದೆ. ಮುಗಿಯದ ಕಣ್ಣೀರಾಗುತ್ತದೆ, ಮೌನವೇ ತಾನಾಗುತ್ತದೆ. ಆ ಸಿಲ್ಲಿ ಸಿಲ್ಲಿ ಜಗಳಗಳು, ಅವಳನ್ನು ಮೊದಲು ಕಂಡ ಆ ದೇವಾಲಯ, ಅವಳ ಬೆರಳ ತುದಿಯ ಸ್ಪರ್ಷ ನೀಡುವ ಹಿತ, ಜೊತೆಯಾಗಿ ಹೋದ ಆ ಪಾರ್ಕು ಅಲ್ಲಿರುವ ಕಲ್ಲಿನ ಬೆಂಚು, ಪ್ರೀತಿಯ ಮಾತುಗಳಿಗೆ ಹಿನ್ನೆಲೆ ಸಂಗೀತ ನೀಡುವ ಹಕ್ಕಿಗಳ ಆ ಚಿಲಿಪಿಲಿ ಸದ್ದು, ಹೀಗೆ ಪ್ರತೀ ನೆನಪೂ ಭಾವುಕ ಮನಸ್ಸನ್ನು ಮತ್ತಷ್ಡು ಕುಗ್ಗಿಸುತ್ತದೆ. ಇದ್ದಕ್ಕಿದ್ದಂತೆ ಕೋಪ, ಕ್ರೋಧ, ದ್ವೇಷ ಬಂದು ಮರೆಯಾಗುತ್ತದೆ. ಏನೂ ಮಾಡದಾಗದೇ, ಏನೂ ಕೇಳಲಾಗದೇ, ಏನೂ ಹೇಳಲಾಗದೇ, ಏನನ್ನೂ ಭರಿಸಲಾಗದೇ ತನ್ನಲ್ಲಿ ತಾನೇ ಕರಗುತ್ತದೆ. ಕಣ್ಣೀರು ಮಾತ್ರ ನಿರಂತರವಾಗುತ್ತದೆ.

ಒಮ್ಮೆ ಪ್ರೀತಿ ಮನಸ್ಸಿಗೆ ಸಾಕೆನ್ನುವಷ್ಟು ಹಿತವನ್ನು ನೀಡಿದರೆ ಅದೇ ಪ್ರೀತಿ ಮನಸ್ಸಿಗೆ ಬರಿಸಲಾಗದಷ್ಟು ನಿರಂತರ ದುಃಖವನ್ನು ಸಹಾ ನೀಡಬಲ್ಲದು. ಪ್ರೀತಿಯ ತಂಗಾಳಿಯಲ್ಲಿ ತೊಯ್ದ ಮನುಷ್ಯ ಅದೇ ಪ್ರೀತಿಯ ಹೊಡೆತಕ್ಕೆ ಸಿಕ್ಕು ನಲಗುತ್ತಾನೆ.

ಪ್ರೀತಿಯ ವಿವಿಧ ಹಂತಗಳಲ್ಲಿ,  ಪ್ರತೀ ಮೌನದಲ್ಲಿ ಹುಟ್ಟುವ ಅಕ್ಷರ ಸರಮಾಲೆಯೇ ಈ ಲವ್ ಲವಿಕೆ.

ರವಿಬೆಳಗೆರಯವರ ಅತ್ಯಂತ ಜನಪ್ರಿಯವಾದ ಅಂಕಣಗಳಲ್ಲಿ ಈ ಲವ್ ಲವಿಕೆಗೆ ಮೊದಲ ಸ್ಥಾನ. ’ ಯಾವುದೇ ಒಬ್ಬ ವ್ಯಕ್ತಿ ಆತನಿಗೆ ಎಷ್ಟೇ ವಯಸ್ಸಾದರೂ ವಾರಕ್ಕೊಮ್ಮೆಯಾದರೂ ಒಂದು ಪ್ರೇಮ ಪತ್ರ ಬರೆಯುತ್ತಿದ್ದರೆ ಆತ ಚಿರಯುವಕ ಎಂದು ಹೇಳಬಹುದು’ ಇದು ರವಿಬೆಳಗೆರೆಯವರೇ ಹೇಳಿದ ಮಾತು. ರವಿ ಬೆಳಗೆರೆಯವರ ’ಲವ್ ಲವಿಕೆ’ ಯನ್ನು ಓದಿ ಕಣ್ಣೀರಾದದ್ದು ಅದೆಷ್ಟು ಬಾರಿಯೋ..ನೆನಪಿಲ್ಲ. ನೀವೇ ಪ್ರೇಮಿಯಾಗಿದ್ದರೆ, ನಿಮ್ಮಲ್ಲೊಬ್ಬ ಪ್ರೇಮಿಯಿದ್ದರೆ, ಪ್ರೀತಿಗಾಗಿ ಹಾತೊರೆಯುವ ಹೃದಯ ನಿಮದಾಗಿದ್ದರೆ, ಈ ಅಂಕಣ ನಿಮ್ಮ ಮನ ತಣಿಸುವಲ್ಲಿ ಕಣ್ ತೋಯಿಸುವಲ್ಲಿ ಸಂಶಯವಿಲ್ಲ. ಈ ಅಂಕಣದ ಆಯ್ದ ಬರಹವೊಂದನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ಮರೆಯದ, ಮರೆತುಹೋದ, ಮನದ ಯಾವು ದೋ ಮೂಲೆಯಲ್ಲಿ ಹುದಗಿದ್ದ, ನಿಮ್ಮ ಪ್ರೀತಿಯನ್ನೊಮ್ಮೆ ನೇವರಿಸಿ….

ರವಿಬೆಳಗೆರೆಯವರು ತಮ್ಮ ’ಲವ್ ಲವಿಕೆ’ ಅಂಕಣಗಳನ್ನು ಸಂಗ್ರಹಿಸಿ ಹಲವು ಆವೃತ್ತಿಗಳಲ್ಲಿ ಬಿಡುಗಡೆ ಮಾಡಿದ್ದಾರೆ. ದಿನನಿತ್ಯದ ಜಂಜಾಟದ ನಡುವೆ ಮನಸ್ಸಿನಲ್ಲಿ ಲವಲವಿಕೆಯನ್ನು ಮೂಡಿಸುವ ಈ ಪುಸ್ತಕ ನಿಮ್ಮ ಆಫೀಸ್ ಬ್ಯಾಗಿನಲ್ಲಿದ್ದರೆ..ನಿಮ್ಮ ಪ್ರೀತಿಯ ನೆನಪು ಶಾಶ್ವತವಾದೀತು..

-ಅಭಿಮಾನಿ

ನಂಗೊತ್ತು, ಅಂಗಳದಲ್ಲಿ ಇನ್ನು ಯಾರ ಮಾತೂ ಕೇಳಿಸುವುದಿಲ್ಲ!

love2

ಚಿನ್ನಿ,

ಒಂದು ಮುಟಿಗೆಯಷ್ಟು ವಿಷಾದಕ್ಕೆ ಎರಡು ತೆಕ್ಕೆಯಷ್ಟು ನಿರಾಸೆ ಸೇರಿದರೆ ಒಟ್ಟು ಎಷ್ಟು ಬೊಗಸೆ ದುಃಖ ತಯಾರಾಗುತ್ತದೆ? ನೀನೇ ಹೇಳಬೇಕು. ಲೆಕ್ಕದಲ್ಲೂ, ಲೆಕ್ಕಾಚಾರದಲ್ಲೂ ಜಾಣೆ. ನಾನು ಎಲ್ಲಾ ಬಿಟ್ಟು ಎಕನಾಮಿಕ್ಷಿನಲ್ಲೂ ಫೇಲು. ಬದುಕಿನಲ್ಲಿ ಸ್ಟಾರ್‍ ಗಳತ್ತ ಕೈಚಾಚಿದಾಗಲೆಲ್ಲಾ ಬದುಕು ನನಗೆ ಕರೆದುಕೊಟ್ಟದ್ದು ಮೂನ್. ಉಹುಂ, ಒಳ್ಳೆಯವನೆನೆಸಿಕೊಂಡನೇ ಹೊರತು ಜಾಣ ಅನ್ನಿಸಿಕೊಳ್ಳಲಿಲ್ಲ. ನೀನೆಷ್ಟು ಜಾಣೆ ಅನ್ನುವುದು ಪ್ರಪಂಚಕ್ಕೇ ಗೊತ್ತು: ಎಷ್ಟು ಒಳ್ಳೆಯವಳು ಎಂಬುದು ನಿನಗಿಂತ ಚೆನ್ನಾಗಿ ನನಗೆ ಗೊತ್ತು. ನನಗಷ್ಟೇ ಗೊತ್ತು.

ಮೊದಲು ನೀನು ಹೀಗಿರಲಿಲ್ಲ. ಅಥವಾ ನನಗದು ಗೊತ್ತಿರಲಿಲ್ಲ. ಅಸಲಿಗೆ ನೀನು ನನ್ನನ್ನು ಎಲ್ಲಿ ನೋಡಿದೆಯೋ? ನನಗೆ ಅದೂ ಗೊತ್ತಿರಲಿಲ್ಲ. ಆವತ್ತು ನಾನು ಮನೆಯ ಹಿತ್ತಿಲಲ್ಲಿದ್ದೆ. ಪನ್ನೇರಳೆ ಸಸಿಗೆ ಪಾತಿ ಮಾಡುತ್ತಿದ್ದೆ. ಅದು ಆ ತಿಂಗಳ ಎರಡನೇ ಭಾನುವಾರ. ಬೆಳಗ್ಗೆ ಹನ್ನೊಂದಾಗಿರಬಹುದು. ಅಂಗಳದಲ್ಲಿ ಅಮ್ಮ ಯಾರೊಂದಿಗೋ ಮಾತನಾಡುತ್ತಿದ್ದಾಳೆ ಅನ್ನಿಸಿತು. ಮಾತಿನ ಮದ್ಯೆ ನನ್ನ ಹೆಸರು ಕೇಳಿಸಿದಂತಾಗಿ ಹೊರಬಂದರೆ, ನೀನು. ಕಾಮನಬಿಲ್ಲು ಇಳಿದು ಬಂದು ಕದ ತಟ್ಟಿದಂತಿತ್ತು. ಅಮ್ಮ ಒಳಕ್ಕೆ ಕರೆದಳು. ನಾನು ಅಂಗಿ ಹಾಕಿಕೊಂಡು ಬಂದೆ. ಒಳ ಬಂದು ಕುಳಿತವಳು ಇಡೀ ಮನೆಯನ್ನು ಒಮ್ಮೆ ಕಣ್ಣಲ್ಲೇ ನಿರುಕಿಸಿದೆ. Of course, ತುಂಬಾ ಹೊತ್ತು ನೋಡಲಿಕ್ಕೆ ಮನೆಯಲ್ಲಿ ಇತ್ತಾದರೂ ಏನು? ಬದುಕಿನ ಎಲ್ಲಾ ಭೀಭತ್ಸಗಳೀಗೆ ಸಿಕ್ಕು ಹೈರಾಣಾಗಿದ್ದಂತ ಅಮ್ಮ. ಗೋಡೆಯ ಮೇಲಿನ ಚಿತ್ರವಾಗಿ ಹೋಗಿದ್ದ ಅಪ್ಪ. ಮೂಲೆಯಲ್ಲಿ ನಿಲ್ಲಿಸಿದ್ದ ನನ್ನ ಸೈಕಲ್ಲು. ಅಲ್ಲೇ ಒಂದು ಪುಟ್ಟ ರೇಡಿಯೋ. ಅದರಲ್ಲಿ ಇಳಿದನಿಯ ಹಾಡು.

ಜರಾಸೀ ಆಹಟ್ ಹೋತೀ ಹೈ

ತೋ ದಿಲ್ ಸೋಚ್ತಾ ಹೈ

ಕಹೀಂ ಏ ವೋ ತೊ ನಹೀ?

ಮೊದಲ ಸಲ ಬಂದಿದ್ದೀರಿ, ಕಾಫಿ ಮಾಡುತ್ತೇನೆ ಅನ್ನುತ್ತ ಅಮ್ಮ ಒಳಕ್ಕೆ ಹೋದಳು. ’ನಾನು ತುಂಬ ಸಲ ಬರ್‍ತೀನಿ’ ಅಂದ ನೀನು ಪಳ್ಳನೆ ನಕ್ಕಾಗ ದೇವತೆಗಳ ಕಣ್ಣು ಮಾತ್ರ ಇಷ್ಟೊಂದು ಸುಂದರವಾಗಿರುತ್ತದೆ ಅನ್ನಿಸಿತು. ಅಷ್ಟು ಹೊತ್ತು ಕುಳಿತಿದ್ದೆಯಾದರೂ ಕಡೆಗೆ ನೀನು ನನ್ನನ್ನು ಮನೆ ತನಕ ಹುಡುಕಿಕೊಂಡು ಯಾಕೆ ಬಂದೆ ಎಂಬುದನ್ನು ಹೇಳಲೇ ಇಲ್ಲ. ಯಾಕೇ ಬಂದೆ ಎಂಬುದು ಬಹುಶಃ ನಿನಗೂ ಗೊತ್ತಿರಲಿಲ್ಲ. ನೀನು ತುಂಬಾ ಸ್ಕೀಮಿ ಹುಡುಗಿ ಅಂತೇನೂ ಆವತ್ತು ನನಗನ್ನಿಸಲಿಲ್ಲ. ಸ್ವಲ್ಪ ಭಾವುಕಳು, ನನ್ನ ಹಾಗೇ ಥವಾ ಅಮ್ಮನ ಹಾಗೆ ಅನ್ನಿಸಿತ್ತು. ’ಬಂದರೆ ಈ ಮನೆಗೆ ಇಂಥ ಹುಡುಗಿ ಸೊಸೆಯಾಗಿ ಬರಬೇಕು ನೋಡು’ ಅಂದವಳು ಅಮ್ಮ. ಅವಳ ಮುಖದ ಅಮಾಯಕ ಸುಕ್ಕುಗಳಲ್ಲಿ ಆಸೆ ಹೊರಳುತ್ತಿತ್ತು.

ಆಮೇಲೂ ನೀನು ನನ್ನ ಮನೆಗೆ ತುಂಬ ಸಲ ಬಂದೆ. ನನಗಿಂತ ಹೆಚ್ಚಾಗಿ ಅಮ್ಮನಿಗೇ ನಿನ್ನ ನಿರೀಕ್ಷೆಯಿರುತ್ತಿತ್ತು. ’ಸಾಯಂಕಾಲ ಇಬ್ಬರೂ ಒಂದಷ್ಟು ದೂರು ತಿರುಗಾಡಿಕೊಂಡು ಬನ್ನಿ’ ಅಂತ ಅಮ್ಮ ಅಂದಾಗ, ಮನುಷ್ಯರನ್ನೂ ಅರ್ಥ ಮಾಡಿಕೊಳ್ಳಲಿಕ್ಕೆ ತುಂಬ ಎಜುಕೇಷನ್ ಬೇಕಾಗಿಲ್ಲ ಅಂತ ಮನವರಿಕೆಯಾಗಿತ್ತು. ಆವತ್ತು ನೀನು ದಾರಿಯಲ್ಲಿ ಕೇಳಿದ ಪ್ರಶ್ನೆ ಇವತ್ತಿಗೂ ನೆನಪಿದೆ. “ನಾನು ಮನೆಗೆ ಬಂದರೆ ಸಂತೋಷವಾಗುತ್ತಾ? ಅಕಸ್ಮಾತ್ ಬಾರದೆ ಇದ್ದರೆ, ಸಂತೋಷವನ್ನು ಹುಡುಕಿಕೊಂಡು ನೀನೇ ನಮ್ಮ ಮನೆಯ ತನಕ ಬರ್‍ತೀಯಾ?” ಮೊದಲ ಬಾರಿಗೆ ನನ್ನ ಭುಜ ಹಿಡಿದು ಮಾತನಾಡಿಸಿದ್ದೆ ನೀನು. ಹತ್ತಿಕ್ಕೆ ಬಂದವಳ ಮೈಯಲ್ಲಿ ಕಾಮ ಕಸ್ತೂರಿಯ ಗಂಧ.

ದೂರ್‍ ರೆಹಕರ್‍ ನ ಕರೋ ಬಾತ್

ಕರೀಬ್ ಆಜಾವೋ….

ನನ್ನ ಹುಚ್ಚು ಭಾವುಕತೆಗೊಂದು ದಿಕ್ಕಿ ಸೂಚಿಸಿದ ಹುಡುಗಿ ನೀನು. ಆವತ್ತಿನಿಂದಲೇ ನಿನಗೆ ಬರೆಯತೊಡಗಿದೆ. ಫಿವರಿಷ್ ಅನ್ನುಸುವಂತಹ ಅವೆಷ್ಟು ಪತ್ರಗಳು ನಿನ್ನನ್ನು ತಲುಪಿದ್ದು ? ನರ್ತಕಿಯ ಮೃದು ಪಾದಗಳಿಗೆ ಹುಚ್ಚು ಅಭಿಮಾನಿಯೊಬ್ಬ ಚಿಲ್ಲಿದ ಬೊಗಸೆ ಪಾರಿಜಾತದಂಥ ಪತ್ರಗಳು. ಪ್ರತಿ ಪತ್ರ ಕೈಗಿತ್ತಾಗಲೂ ನಿನ್ನೆದೆ ಝಲ್ಲೆನ್ನುತ್ತಿತ್ತು. ಕಣ್ಣು ಇಷ್ಟಗಲ. ನಿನಗೆ ಅಲ್ಲೇ ಎಲ್ಲಾದರೂ ನಿಂತು ಸರಸರ ಓದಿಕೊಂಡು ಬಿಡುವ ಹಂಬಲ. ರವಿಕೆಯ ಮುದುವಿನಲ್ಲಿ ಮಟ್ಟಸವಾಗಿ ಇಮುಡುತ್ತಿತ್ತು ಪತ್ರ. ನನ್ನ ಬೆರಳುಗಳಿಗೆ ಸಿತಾರ್‍ ನ ತಂತಿ ತಾಖಿದ ಅನುಭವ.

ಮನಸೇ, ನಗಲೇಕೆ

ಹರಿಷದಿ ನೀನು ಈ ದಿನ

ನುಡಿ ಕಾರಣ……

ಬಹುಶಃ ಬದುಕಿನಲ್ಲಿ ನಾನು ಮರೆಯಲಾಗದ ರಾತ್ರಿಯದು. ಊರಲ್ಲಿ ನವಮಿಯ ಉತ್ಸವ. ಮನೆಯಲ್ಲಿ ನಾವಿಬ್ಬರೇ ಇದ್ದೆವು. ಇಬ್ಬರದೂ ಸೈರಣೆ ಮುಗಿದಿತ್ತು. ಆಕಾಶ ನೀಲಿ ಸೀರೆಯುಟ್ಟು ಬಂದಿದ್ದವಳು ಅಡಿಯಿಂದ ಮುಡಿಯ ತನಕ ಅಪ್ಸರೆ. ಒಮ್ಮೆ ಬಾಚಿ ತಬ್ಬಿಕೊಂಡ ಮೇಲೆ ಇಬ್ಬರ ಮದ್ಯೆ ಸರಹದ್ದುಗಳಿರಲಿಲ್ಲ. ನೀನು ವೀಣೆಯಾಗಿ ಝೇಂಕರಿಸಿದೆ. ನಾನು ಸಾವಿರ ಕಣ್ಣಿನ ಗಂಡು ನವಿಲು. ಆ ರಾತ್ರಿಯ ನಮ್ಮ ಮಿಲನಕ್ಕೆ ನಕ್ಷತ್ರದ ಗಣ ಸಂಭ್ರಮಿಸಿ ಹೇಳಿತ್ತು: ಚಿಯರ್‍ಸ್! ಮರೆತ ಈಜು ಮತ್ತೆ ಮದ್ಯೆ ಹೊಳೆಯಲ್ಲಿ ನೆನೆಪಾದಂತೆ ಉನ್ಮತ್ತನಾಗಿ ಈಜಿ ಬಿಟ್ಟೆ. ಆ ಸಂತಸವನ್ನು ನಿರಂತರವಾಗಿ ಜಾರಿಯಲ್ಲಿಡು ಭಗವಂತಾ..ಅಂತ ಒಂದು ಮಾತು ಕೇಳಿಕೊಳ್ಳಬೇಕಿತ್ತು. ಕೇಳಿದ್ದಿದ್ದರೆ ತಥಾಸ್ತು ಅನ್ನುತ್ತಿದ್ದನೇನೋ? ನಾನು ನಿನ್ನನ್ನೇ ನೋಡುತ್ತಿದ್ದೆ. ನಿನ್ನೆದೆಯ ಮಿದುವಿಗೆ ಕಿವಿಯಿಟ್ಟು ಎದೆ ಬಡಿತವನ್ನೇ ಕೇಳಿಕೊಳ್ಳುತ್ತಿದ್ದೆ. ಬೆವರ ಬಿಂದುವೊಂದು ನಿನ್ನ ಕೊರಳಗುಂಟ ಇಳಿದು ಅಲ್ಲೇ ಲೀನವಾಗುತ್ತಿತ್ತು.

ಯಹೀ ವೋ ಜಗಾಹೈ

ಯಹೀ ವೋ ಫಿಜಾಯೇಂ

ಯಹೀ ಪರ್‍ ಕಭೀ ಆಫ್

ಹಮ್ ಸೇ ಮಿಲೇಥೆ…

ಅಂಥ ಎಷ್ಟೋ ಉನ್ಮತ್ತ ರಾತ್ರಿಗಳು ನಮ್ಮ ದಾದವು. ಹಗಲು ಈ ಮನೆಯಲ್ಲಿ ಗಾಢ ಮೌನವಿರುತ್ತಿತ್ತು. ”ಸೊಸೆಯಾಗಿ ಬರುತ್ತಾಳಂತ?” ಅಮ್ಮನ ಕಣ್ಣು ಕೇಳುತ್ತಿದ್ದವು. ಅವು ಈಗಲೂ ಕೇಳುತ್ತವೆ. ಏನು ಉತ್ತರ ಹೇಳಲಿ? ನಿನ್ನ ಮದುವೆ ನಿಶ್ಚಯವಾಗಿರುವುದು ಊರಿಗೆಲ್ಲಾ ಗೊತ್ತಿದೆ, ಅಮ್ಮ ಅಮಾಯಕಳು,. ಮತ್ತೆ ನೀನು ಮೊದಲಿನಂತೆಯೇ ಮನೆಗೆ ಬರುತ್ತೀಯ ಅಂತ ಕಾಯುತ್ತಾಳೆ. ಶ್ರೀಮಂತಿಕೆಯ ಪಂಜರ ಸೇರಲಿರುವವಳಿಗೆ ಪನ್ನೇರಳೆಯ  ನೆರಳಿನ ಮೇಲೆ ಆಸೆಯಾದರೂ ಹೇಗೆ ಉಳಿದೀತು.ಉಪಯೋಗಿಸಿ ಬಿಟ್ಟು ಹೋದ ಸಂಗತಿ ನಾನು. ನನ್ನ ನೆನಪೂ ಕೂಡ ನಿನ್ನು ಕಾಡುವುದಿಲ್ಲ. ಈಗ ನೀನೆ ಬೇರೆ, ನಿನ್ನ ಬದುಕೇ ಬೇರೆ. ಅವತ್ತು ರಾತ್ರಿಯ ಆ ದಿವ್ಯ ಏಕಾಂತಕ್ಕಿಂತಲೂ ನಿತ್ಯ ಶ್ರೀಮಂತಿಕೆಯ ಝಣತ್ಕಾರ ತುಂಬ ಹಿತವಾಗಿರುತ್ತದಾ? ಗೊತ್ತಿಲ್ಲ. ನಿನ್ನನ್ನು ಶಪಿಸಲಿಕ್ಕೂ ಮನಸ್ಸಾಗುವುದಿಲ್ಲ. ಆಟ ಕೆಡಿಸಿ ಅರ್ಧಕ್ಕೇ ಎದ್ದ ಹುಡುಗಿಗೆ ನಾನು ಬೇಸರಾದೆನೇನೋ?

ನೀನು ಬಯಸಿದ್ದು ನಿನಗೆ ಸಿಗಲಿ. ನಾನು ಮತ್ತೆ ಹಿತ್ತಲಿಗೆ ಸರಿದು ಹೋಗುತ್ತೇನೆ.ನನಗೆ ಗೊತ್ತು: ಅಂಗಳದಲ್ಲಿ ಇನ್ನು ಯಾರ ಮಾತೂ ಕೇಳಿಸುವುದಿಲ್ಲ.

-ನಿನ್ನವನು


Follow

Get every new post delivered to your Inbox.

Join 109 other followers