ಇದು ಹದಿನೈದನೇ ವರ್ಷದ ಅಫಿಡವಿಟ್ಟು

September 30, 2009

rbimg

ದುಡ್ಡು ಕಾಸಿನ ವಿಷಯದ ಬಗ್ಗೆ ಹೇಳುವುದಾದರೆ, ಇದು ನಿವೃತ್ತಿಗೆ ಅಣಿಯಾಗುವ ಸಮಯ, ಮನುಷ್ಯ ಐವತ್ತೆಂಟಕ್ಕೆ ನಿವೃತ್ತಬಾಗಬೇಕು. ಆದರೆ ನಿನ್ನಂಥವನು ಯಾವತ್ತಿಗಾದರೂ ನಿವೃತ್ತನಾಗುವುದು ಸಾಧ್ಯವೇ ರವೀ, ಅಂತ ಗೆಳೆಯರು ತಮಾಷೆ ಮಾಡುತ್ತಾರೆ. ವೃತ್ತ ಪತ್ರಿಕೆಯವರಿಗೆ ನಿವೃತ್ತಿ ಇರುವುದಿಲ್ಲ ಎಂಬ ಮಾತು ಸತ್ಯ.

ಈ ವರ್ಷ ಒಂದು ವೋಕ್ಸ್ ವ್ಯಾಗನ್ ಕಾರು ಮತ್ತು ಆಫೀಸಿನ ಬಳಕೆಗಾಗಿ ಒಂದು ಮಾರುತಿ ಓಮ್ನಿ ಖರೀದಿಸಿದೆ. ಮಗಳ ಸೀಮಂತಕ್ಕೆ ಅಂತ ಖರೀದಿಸಿದ ಚಿನ್ನದ ಬೆಲೆ ಒಂದೂವರೆ ಲಕ್ಷ ರುಪಾಯಿ ಯಷ್ಟಾಯಿತು. ಇಂಗ್ಲೆಂಡಿನಿಂದ ಹಿಂತಿರುಗಿದ ನನ್ನ ಮಗ ಕರ್ಣ ತಾನೊಂದು ವೋಕ್ಸ್ ವ್ಯಾಗನ್ ಕಾರು ಖರೀದಿಸಿದ್ದಾನೆ. ಉಳಿದಂತೆ, ರಿಸೆಷನ್ ಕಾರಣವೋ ಏನೋ, ಹೆಚ್ಚಿನ ಖರೀದಿಗಳಾಗಿಲ್ಲ. ಹಾಗೆ ಹೇರಳವಾಗಿ ನಾನು ಖರೀದಿಸಿರುವ ವಸ್ತುಗಳೆಂದರೆ ಟೀವಿ ಕಾರ್ಯಕ್ರಮಗಳಿಗಾಗಿ ಹೊಸ ಷರ್ಟುಗಳು, ಪುಸ್ತಕಗಳು ಮತ್ತು ಸಂಗೀತದ ಸಿ.ಡಿ ಗಳು. ಆಸ್ತಿ ಖರೀದಿಯ ಗೋಜಿಗೆ ಈ ಸಲ ಹೋಗಲಿಲ್ಲ.

ಪದ್ಮನಾಭ ನಗರದ ’ಅಮ್ಮ’ ಮನೆ ಹಾಗೂ ಒಂದು ಫ್ಲಾಟ್ ಭಾವನಾಗೆ ಉಡುಗೊರೆಯಾಗಿ ಕೊಟ್ಟಿದ್ದೇನೆ. ಶೇಷಾದ್ರಿಪುರದ ಮನೆಯನ್ನು ಚೇತನಾಗೆ ಉಡುಗೊರೆಯಾಗಿ ಕೊಟ್ಟಿದ್ದೇನೆ. ಬನಶಂಕರಿಯ ಮನೆ ’ಅಮ್ಮೀಜಾನ್’ ಅವತ್ತಿಗೂ ಇವತ್ತಿಗೂ ಲಲಿತೆಯ ಸುಪರ್ದಿಯಲ್ಲಿದೆ. ನಾನು ಕುಳಿತು ಕೆಲಸ ಮಾಡುವ ಆಫೀಸು ಸ್ವಂತದ್ದು. ಇಲ್ಲಿ ಸುಮಾರು ಏಳು ಕಂಪ್ಯೂಟರ್‍‌ಗಳ ಖರೀದಿಯಾಗಿದೆ. ನಿವೇದಿತಾಳ ಮನೆಯೊಂದನ್ನು ನಾನು ಖರೀದಿಸಿದ್ದೇನೆ. ಬ್ಯಾಂಕಿನಲ್ಲಿ ಕೊಂಚ ಸಾಲವಿದೆ. ನನ್ನ ದುಡಿಮೆ ಅದನ್ನು ತೀರಿಸುತ್ತಿದೆ.

’ಹಾಯ್ ಬೆಂಗಳೂರ್‍!’ ಮತ್ತು ’ಓ ಮನಸೇ..’ ಎರಡೂ ಲಾಭದಲ್ಲಿದೆ. ಪ್ರತೀ ತಿಂಗಳು ಪತ್ರಿಕೆಯ ಸಿಬ್ಬಂದಿಗೆ ನಾನು ಕೊಡುವ ಸಂಬಳ ಐದು ಲಕ್ಷ ರುಪಾಯಿ. ಅತಿ ಹೆಚ್ಚಿನ ಸಂಬಳ ಪಡೆಯುತ್ತಿರುವಾಕೆ ನಿವೇದಿತಾ.

ನೀವೆಲ್ಲಕೊಟ್ಟ ಹಣದಿಂದ ನಾನು ಕಟ್ಟಿದ ಶಾಲೆ ’ಪ್ರಾರ್ಥನಾ’. ಇವತ್ತು ಅಲ್ಲಿ ೫೫೦೦ ಮಕ್ಕಳು ಓದುತ್ತಿದ್ದಾರೆ. ಸುಮಾರು ೩೦೦ ಜನ ಸಿಬ್ಬಂದಿಯವರಿದ್ದಾರೆ. ಅವರಿಗೆ ನಾವು ಪ್ರತಿ ತಿಂಗಳು ಕೊಡೆ ಮಾಡುವ ಸಂಬಳ ಹದಿನೇಳು ಲಕ್ಷ ರೂಪಾಯಿ. ನಾಲ್ಕು ಸ್ವಂತ ಕಟ್ಟಡಗಳಲ್ಲಿ, ಒಂದು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ’ಪ್ರಾರ್ಥನಾ’ ತನ್ನ ಸಾಲ ತೀರಿಸಿಕೊಂಡು ಲಾಭದಲ್ಲಿ ನಡೆದಿದೆ. ಅದರ ಲಾಭವನ್ನೆಲ್ಲ ಶಾಲೆಯ ಮೇಲೆಯೇ ಮತ್ತೆ ತೊಡಗಿಸುವ ಸಂಪ್ರದಾಯ ಮುಂದುವರೆಸಿಕೊಂಡು ಬಂದಿದ್ದೇನೆ.

ನನ್ನಲ್ಲಿ ಕಪ್ಪು ಹಣವಿಲ್ಲ. ’ಪತ್ರಿಕೆ’ ಪ್ರಾರಂಭವಾದಾಗಿನಿಂದ ನಿಗದಿತವಾಗಿ ಆದಾಯ ತೆರಿಗೆ ತುಂಬುತ್ತಿದ್ದೇನೆ. ಪತ್ರಿಕೆಗಳು, ಟೀವಿ ಕಾರ್ಯಕ್ರಮ, ಪುಸ್ತಕ ಪ್ರಕಾಶನ ಇವುಗಳಿಂದ ಬರುವ ಲಾಭಕ್ಕೆ ಈ ಬಾರಿ ನಾನು ತುಂಬಿರುವ ಆದಾಯ ತೆರಿಗೆ ೫೨.೪೭ ಲಕ್ಷ ರುಪಾಯಿಗಳು.

ನೀವು ಕೊಡುವ ಹಣದಲ್ಲೇ ’ಸೀತಾನದಿ ಸುರೇಂದ್ರನ ಹೆಸರಿನ ಸ್ಕಾಲರ್‌ಷಿಪ್ ಯೋಜನೆ’ ಮುಂದುವರೆದಿದೆ. ಆ ಹಣದಲ್ಲಿ ಕೆಲವು ಬಡ ಪ್ರತಿಭಾವಂತ ಮಕ್ಕಳು ಪಿ.ಯು.ಸಿ, ಬಿ.ಇ, ಎಂ.ಬಿ.ಬಿ.ಎಸ್, ಮುಂತಾದ ಕೋರ್ಸುಗಳಿಗೆ ಓದುತ್ತಿದ್ಧಾರೆ. ಅದೇ ಲಾಭದ ಹಣದಲ್ಲಿ ಕಿಡ್ನಿ ಕಾಯಿಲೆಯವರಿಗೆ, ಕ್ಯಾನ್ಸರ್‍ ರೋಗಿಗಳಿಗೆ, ಅನಾಥ ವೃದ್ದರಿಗೆ, ಎಚ್.ಐ.ವಿ ಸೋಂಕು ತಗುಲಿದವರಿಗೆ ಉಚಿತವಾಗಿ ಔಷಧಿ ಕೊಡಿಸುತ್ತಿದ್ದೇನೆ.

ಲೆಕ್ಕಾಚಾರದ ವಿಷಯದಲ್ಲಿ ನ್ನಿಂದ ಪೊರಪಾಟುಗಳಾಗಿರಬಹುದು. ಆದರೆ ಲೆಕ್ಕ ಪತ್ರದ ವಿಷಯದಲ್ಲಿ ಎಲ್ಲವೂ ನಿಸೂರು. ನಮ್ಮ ಸಂಸ್ಥೆಗಳ ಪ್ರತಿ ನೌಕರನಿಗೂ ಪ್ರಾವಿಡೆಂಟ್ ಫಂಡ್ ದೊರೆಯುತ್ತದೆ.

ನನಗೆ ದಕ್ಕುತ್ತಿರುವುದು: ಸಮಾಧಾನ.

-ಬೆಳಗೆರೆ


ಓ ಮನಸೇ ಎಪ್ಪತ್ಮೂರನೇ ಸಂಚಿಕೆ ಇದೀಗ ಮಾರುಕಟ್ಟೆಯಲ್ಲಿ

September 3, 2009

ಓ ಮನಸೇ..೭೩

ಇದೆಂಥ ವಿಚಿತ್ರವೋ!

ಎರಡು ತಲೆಯ ಹಾವಿಗೆ, ಹದಿನಾರು ಕಾಲುಗಳ ಆಮೆಗೆ, ಕರಿ ಬೆಕ್ಕಿಗೆ, ಎಡಮುರಿ ಅಥವಾ ಬಲಮುರಿ ಶಂಖಕ್ಕೆ ಕೋಟಿ ಕೋಟಿ ರುಪಾಯಿ ಸಿಗುತ್ತಾ?

’ಸಿಗುತ್ತೇನೋ’ ಅಂತ ಅವುಗಳ ಬೆನ್ನು ಬಿದ್ದವರೆಷ್ಟೋ?

ಹಾಗಾದ್ರೆ, ಎರಡು ತಲೆ ಹಾವಿರೋದು ನಿಜಾನಾ ?

ಕರಿಬೆಕ್ಕಿನ ನಾಲಗೆ ಕಪ್ಪಗೇ ಏಕಿರಬೇಕು?

ಆ ಐನೂರು ನಾಣ್ಯಗಳು ಸಿಕ್ಕಿಬಿಟ್ಟರೆ ಇಂದಿರಾಗಾಂಧಿಯ ಸ್ವಿಸ್ ಬ್ಯಾಂಕ್ ಅಕೌಂಟ್ ನಂಬರ್‍ ಸಿಗುತ್ತಾ?

ಈ ಸಲದ ಓ ಮನಸೇ ಅತ್ಯಂತ ಕುತೂಹಲಭರಿತವಾಗಿದೆ.

ಜೊತೆಗೇ…

  • ’ಲವ್ ಲಿಕ್ವಿಡ್’ ಎಂಬ ಮಧುರ ಔಷಧ!
  • ಗ್ರಾಮೋಫೋನ್ ಯುಗದ ಸಾಮ್ರಾಜ್ಞಿ ಶಂಷಾದ್ ಬೇಗಂ!
  • ಜಗದ್ವಿಖ್ಯಾತ ಪತ್ರಿಕೆ ರೀಡರ್‍ಸ್ ಡೈಜೆಸ್ಟ್ ಮುಚ್ಚಿ ಹೋಗುತ್ತಾ?
  • ಮಹಿಳೆಯರು ಹತ್ತು ಜನ ಹೇಳಿದ್ದನ್ನೇ ಯಾಕೆ ಹೇಳ್ತಾರೆ?
  • ಇನ್ನೂ ಅಷ್ಟು ವಿಷಯ ವೈವಿಧ್ಯತೆಗಳು.

ಬದುಕಿನ ಪಾಸಿಟಿವ್ ಸೈಡನ್ನೇ ಹೆಚ್ಚಾಗಿ ಹೇಳುವ ’ಓ ಮನಸೇ’ ಖಂಡಿತಾ ನಿಮ್ಮ ಕುತೂಹಲಗಳಿಗೆ ಕನ್ನಡಿಯಾಗುತ್ತದೆ.

ಓ ಮನಸೇ ಓದಿ, ನಿಮ್ಮ ಸ್ನೇಹಿತರಿಗೂ ಪರಿಚಯಿಸಿ


ಕಳೆದ ವಾರ ಬಂದಿದ್ದ ಮೆಸೇಜು ಓದಿದ ಮೇಲೆ!

September 3, 2009

ಓ ೭೩

’ಉಹುಂ, ಸಾಲದು. ’ಓ ಮನಸೇ…’ ಪತ್ರಿಕೆಯಲ್ಲಿ ಇನ್ನೂ ಉತ್ತಮ ಮಟ್ಟದ ಲೇಖನಗಳನ್ನು ನಿರೀಕ್ಷಿಸುತ್ತೇನೆ’ ಎಂದು ಅಪರಿಚಿತ. ಅಗೋಚರ ಓದುಗರೊಬ್ಬರು ನನಗೆ ಕಳೆದ ವಾರ ಮೆಸೇಜ್ ಕಳುಹಿಸಿದ್ದರು. ಅಲ್ಲಿಂದ ಶುರುವಾಯಿತು ನನ್ನ ಚಡಪಡಿಕೆ. ನೀವು ಎಷ್ಟರ ಮಟ್ಟಿಗೆ ನಂಬುತ್ತೀರೋ ಬಿಡುತ್ತೀರೋ ಗೊತ್ತಿಲ್ಲ: ನನ್ನ ಪತ್ರಿಕೆಯ ನಿಲುವನ್ನು ಯಾರಾದರೂ ಖಂಡಿಸಿದರೆ ನಾನು ಅದನ್ನು ಸ್ವಾಗತಿಸುತ್ತೇನೆ, ಟೀಕಿಸಿ ಬರೆದ ಪತ್ರಗಳನ್ನು ಶ್ರದ್ದೆಯಿಂದ ಓದಿಕೊಳ್ಳುತ್ತೇನೆ. ನಾನು ತಪ್ಪು ಮಾಡಿದ್ದೇನೆ ಅಂತ ಓದುಗ ಸೂಚಿಸಿದಾಗ ತಿದ್ದುಕೊಳ್ಳುತ್ತೇನೆ, ಕ್ಷಮೆ ಕೇಳುತ್ತೇನೆ. ಆದರೆ ನಾನು ಕೈಗಿತ್ತ ’ಪತ್ರಿಕೆ’ ಸಂತೃಪ್ತಿಕರವಾಗಿಲ್ಲ ಅನ್ನಿಸಿದಾಗ ಮಾತ್ರ ತಳಮಳಗೊಂಡು ಬಿಡುತ್ತೇನೆ. ಅದು ನನ್ನ Product. ಕಳೆದ ಇಪ್ಪತ್ತೈದು ಮೂವತ್ತು ವರ್ಷಗಳಲ್ಲಿ ನಾನು ಮಾಡಿದ ಅತ್ಯಂತ ಶ್ರದ್ದಾವಂತ ಕೆಲಸವೆಂದರೆ, ಬರವಣಿಗೆಯೊಂದೇ. ನನ್ನ ಈ ಕೆಲಸದ ಬಗ್ಗೆ ನಾನು ಭಯಂಕರ ಪೊಸೇಸೀವ್. ಅಷ್ಟೂ ನಾನೇ ಬರೆಯಬೇಕು, ನನ್ನ ಕಣ್ತಪ್ಪಿ ಯಾವುದೂ ಪ್ರಿಂಟಿಗೆ ಹೋಗಬಾರದು, ಎಲ್ಲೂ ರುಚಿ ಕೆಡಬಾರದು ಅಂತ ಹಟಕ್ಕೆ ಬೀಳುವುದರಿಂದಲೇ ಕೆಲವೊಮ್ಮೆ ಪತ್ರಿಕೆ, ಪುಸ್ತಕ ತಡವಾಗಿ ಅಚ್ಚಿಗೆ ಹೋಗುತ್ತವೆ. ಅದರಿಂದ ಪ್ರಸಾರ ಸಂಖ್ಯೆಯ ಮೇಲೆ ಪರಿಣಾಮವಾಗುತ್ತದೆ ಅಂತ ನಿವೇದಿತಾ ಬಯ್ಯುತ್ತಾಳೆ. ಆದರೆ ಕಳೆದ ಹದಿನೈದು ವರ್ಷಗಳಲ್ಲಿ ನಾನು ನನ್ನ ಓದುಗರನ್ನು ಕಳೆದುಕೊಂಡಿಲ್ಲ. ಹೋಟೇಲಿನ ಬಾಗಿಲು ತೆರೆಯುವುದು ಕೊಂಚ ತಡವಾದರೇನಂತೆ? ಕಾಫಿಯ ಸೊಗಸು ನಿರೀಕ್ಷಿಸಿದಂತೇ ಇದ್ದರೆ ಬೇಸರಿಸದ ದೊರೆ, ಕಾಫಿ ಕುಡಿದುಕೊಂಡೇ ಮುನ್ನಡೆಯುತ್ತಾನೆ.

ಅದಿರಲಿ, ಕಳೆದವಾರ ಬಂದ ಮೆಸೇಜು ನನ್ನನ್ನು ನಿಜಕ್ಕೂ ತಳಮಳಕ್ಕೆ ಈಡು ಮಾಡಿತ್ತು. ಒಂದು ಸಲ ಕುಳಿತು ಹಳೆಯ ಸಂಚಿಕೆಗಳನ್ನೆಲ್ಲ ತಿರುವಿ ಹಾಕಿದೆ. ಓದುಗ ದೊರೆ ಯಾವುದನ್ನು miss ಮಾಡಿಕೊಳ್ಳುತ್ತಿದ್ದಾನೆ ಅಂತ ಗಮನಿಸಿದೆ. ಆಮೇಲೆ ಬೇರೆ ಬೇರೆ ಭಾಷೆಗಳ ಕೆಲವು ಪತ್ರಿಕೆಗಳನ್ನು ತರಿಸಿಕೊಂಡು ನೋಡಿದೆ. ಇಂಟರ್‍‌ನೆಟ್‌ನಲ್ಲಿ ಸಿಗುವ ವಿಶೇಷ ಮ್ಯಾಗಝೀನ್‌ಗಳನ್ನು ಓದಿಕೊಂಡೆ. ಆ ನಂತರವೇ ನಾನು ’ಓ ಮನಸೇ..’ ಪತ್ರಿಕೆಯ ೭೩ ನೇ ಸಂಚಿಕೆಯ ಸೃಷ್ಟಿಗೆ ಕುಳಿತಿದ್ದು. ಈಗಾಗಲೇ ಅದು ಮಾರುಕಟ್ಟೆಯಲ್ಲಿದೆ. ನೀವು ಪ್ರೀತಿಯಿಂದ ಓದುತ್ತೀರಿ ಎಂಬ ವಿಶ್ವಾಸ ನನಗಿದೆ. ಸಧಬಿರುಚಿಯ, ವಿಷಯ ವೈವಿದ್ಯತೆಯುಳ್ಳ ಆ ಪತ್ರಿಕೆ ಬೆಳೆಯಬೇಕು. ನನ್ನ ನಂತರವೂ ಅದು ನನ್ನ ನೆನಪಾಗಿ ಉಳಿಯಬೇಕು.

ನಿಮ್ಮಲ್ಲಿ ಮತ್ತೆ ಅದನ್ನೇ ವಿನಂತಿಸಿಕೊಳ್ಳುತ್ತೇನೆ. ನಿಮ್ಮ ಮೂವರ ಮಿತ್ರರಿಗೆ ’ಓ ಮನಸೇ…’ ಪತ್ರಿಕೆಯನ್ನು ಪರಿಚಯಿಸಿ.

-ಬೆಳಗೆರೆ


ಕಡೆಗೂ ಮನಸು ಮಾರುಕಟ್ಟೆಗೆ ಬಂತು..

June 30, 2009
ಮರಳಿ ಬಂದ ಮನಸು

ಮರಳಿ ಬಂದ ಮನಸು

ನಾನು ಪ್ರತಿನಿತ್ಯ ಎರಡು ಕನ್ನಡ ಹಾಗೂ ಒಂದು ಇಂಗ್ಲಿಷ್ ದಿನ ಪತ್ರಿಕೆಯನ್ನು ಓದುತ್ತೇನೆ. ಉಳಿದಂತೆ, ಒಂದು ತೆಲುಗು ದೈನಿಕ ಸೇರಿ ನಾಲ್ಕು ಪತ್ರಿಕೆಗಳನ್ನು ’ನೋಡುತ್ತೇನೆ’. ಮತ್ತೆ ಸಾಯಂಕಾಲ ಎರಡು ಪತ್ರಿಕೆಗಳು ನೋಡಲು ಸಿಗುತ್ತವೆ. ಕಛೇರಿಗೆ ಮೂರು ಇಂಗ್ಲಿಷ್ ವಾರಪತ್ರಿಕೆಗಳು ಬರುತ್ತವೆ. ಇವೆಲ್ಲವುಗಳ ನಡುವೆ ಮೊನ್ನೆ ಮಾರುಕಟ್ಟೆಯಿಂದ ಕನ್ನಡದ ಅಷ್ಟೂ ಮ್ಯಾಗಝೀನುಗಳನ್ನು ತರಿಸಿದೆ. ಸುಧಾ, ಮಯೂರ, ತುಷಾರ ಮುಂತಾದವು ನನ್ನನ್ನು ಓದುಗನನ್ನಾಗಿ, ಲೇಖಕನನ್ನಾಗಿ ಬೆಳೆಸಿದ ಪತ್ರಿಕೆಗಳು. ಅವುಗಳನ್ನು ನೋಡಿಯೇ ಯಾವುದೋ ಕಾಲವಾಗಿ ಹೋಗಿತ್ತು. ಈಗ ಮತ್ತೆ ’ಓ ಮನಸೇ..’ ಮಾರುಕಟ್ಟೆಗೆ ಕೊಡುತ್ತಿದ್ದೇನಲ್ಲ? ಒಮ್ಮೆ ಉಳಿದ ಪತ್ರಿಕೆಗಳ ಮೇಲೂ ಕಣ್ಣಾಡಿಸೋಣವೆಂದು ಅವನ್ನೆಲ್ಲ ತರಿಸಿದೆ. ಗಮನಾರ್ಹವಾದ ಪಾಕ್ಷಿಕ ಪತ್ರಿಕೆಯಂತೂ ಯಾವುದೂ ಕಾಣಲಿಲ್ಲ. ಬಹುಶಃ ಕರ್ನಾಟಕದಲ್ಲಿ ಪಾಕ್ಷಿಕ ಪತ್ರಿಕೆಗಳನ್ನು ಪ್ರಕಟಿಸುವ ಸಂಪ್ರದಾಯ ನಿಂತುಹೋಗಿದೆ. ಉಳಿದ ಫ್ಯಾಮಿಲಿ ಮ್ಯಾಗಝೀನುಗಳಲ್ಲಾದರೂ ’ಓ ಮನಸೇ..’ ಪತ್ರಿಕೆಗೆ ಹೋಲಿಕೆ ಸಿಗುವಂಥ ಸಂಗತಿಗಳಿವೆಯಾ ಅಂತ ನೋಡಿದೆ. ಹೋಲಿಕೆಯೇ ಇಲ್ಲ. ’ಮನಸೇ..’ ಕೆಲ ಕಾಲ ಸ್ಥಗಿತಗೊಂಡಾಗ ಅದನ್ನು ಹೋಲುವಂತಹ, ಅದರ ಹೆಸರನ್ನು ಹೋಲುವಂತಹ ಒಂದಷ್ಟು ಪತ್ರಿಕೆಗಳು ಬಂದವು. ಯಾವುದಾದರೂ ಒಂದು, At least ಒಂದು ಪತ್ರಿಕೆಯ ಹಿಂದೆ ಸೂಕ್ಷ್ಮ ಸಂವೇದನೆಗಳಿರುವ ಮನಸ್ಸು ಕೆಲಸ ಮಾಡುತ್ತಿದೆಯಾ ಅಂತ ನೋಡಿದೆ. ಕಾಪಿ ಮಾಡುವ, ಕಳಪೆ ಶೈಲಿಯ. playing to the gallery ಎನ್ನಿಸುವಂತಹ ಬರಹಗಳು ಕಾಣಿಸಿದವೇ ಹೊರತು- ಒಂದು ಬುದ್ದಿವಂತ ಮನಸು ಸ್ಪರ್ದೆಗೆ ಬಿದ್ದಿದೆ ಅಂತ ಅನ್ನಿಸಲೇ ಇಲ್ಲ.

ನನಗೆ ’ಓ ಮನಸೇ..’ ಪತ್ರಿಕೆಯನ್ನು ಪುನರಾರಂಭ ಮಾಡಲೇ ಬೇಕಾದ ಜರೂರತ್ತುಗಳಿವೆ. ಮಾರುಕಟ್ಟೆಯಲ್ಲಿ ಅಂತಹ ಇನ್ನೊಂದು ಪತ್ರಿಕೆ ಇಲ್ಲವೆಂಬುದು ಒಂದು ಕಾರಣವಾದರೆ, ಆ ಜಾಯಮಾನದ ಪತ್ರಿಕೆಗಾಗಿ ಪರಿತಪಿಸುವ ಓದುಗರ ದೊಡ್ಡ ಸಮೂಹವಿರುವುದೂ ಇನ್ನೊಂದು ಕಾರಣ. ಕೇಳುವವರಿಗೆಲ್ಲ ಉತ್ತೆ ಕೊಟ್ಟು ಸಾಕಾಗಿತ್ತು. ಹಿರಿಯರಾದ ಶರತ್  ಕಲ್ಕೋಡ್ ಮತ್ತು ಗೆಳೆಯ ರವಿಅಜ್ಜೀಪುರ-ಇಬ್ಬರೂ ನನ್ನೊಂದಿಗೆ ಮುನಿದಿದ್ದರು. ಆರ್ಥಿಕವಾಗಿಯೂ ’ಓ ಮನಸೇ..’ ಮಾರುಕಟ್ಟೆಗೆ ಬರುವುದು ನಮ್ಮ ಸಂಸ್ಥೆಯ ಗಾತ್ರಕ್ಕೆ ಅವಶ್ಯಕವಾಗಿತ್ತು. ಕಡೆಗೊಂದು ತೀರ್ಮಾನಕ್ಕೆ ಬಂದು ಎಲ್ಲ ಲೆಕ್ಕಾಚಾರ ಹಾಕಿ ಕಡೆಗೂ ’ಮನಸು’ ಕೊಡಲು ನಿರ್ಧರಿಸಿದೆ. ವಿಚಾರಿಸಿ ನೋಡಿದರೆ ಹಾಳೆ, ಮುದ್ರಣ, ಸಾರಿಗೆ – ಎಲ್ಲವುಗಳದೂ ಬೆಲೆ ಗಗನಕ್ಕೇರಿದೆ. ಹೀಗಾಗಿ, ಅನಿವಾರ್ಯವಾಗಿ ’ಮನಸೇ’ ಪತ್ರಿಕೆಯ ಬೆಲೆಯನ್ನು ೧೫/- ರುಪಾಯಿಗಳಿಗೆ ನಿಗದಿಗೊಳಿಸಿದ್ದೇನೆ. ಪಾಕ್ಷಿಕ ಪತ್ರಿಕೆಯಾದ್ದರಿಂದ ತಿಂಗಳಿಗೆ ೩೦ ರುಪಾಯಿ ನಿಮಗೆ ಹೊರೆಯಾಗಲಾರದು. ದಯವಿಟ್ಟು ಆದರದಿಂದ ಸ್ವೀಕರಿಸಿ.

ಅಂದಹಾಗೆ, ಸಂಚಿಕೆ ಮಾರುಕಟ್ಟೆಯಲ್ಲಿದೆ.

-ಬೆಳಗೆರೆ.


Follow

Get every new post delivered to your Inbox.

Join 109 other followers