ಕೃಷ್ಣಸುಂದರಿ

ಹಾಯ್ ಬೆಂಗಳೂರ್‍! : ಇದು ಪ್ರತಿ ವಾರದ ಅಚ್ಚರಿ

hb

ಇಡೀ ರಾಜ್ಯದಾಧ್ಯಂತ ಕೃಷ್ಣಸುಂದರಿ ಎಂದೇ ಮನೆ ಮಾತಾಗಿರುವ ವಾರ ಪತ್ರಿಕೆ ಹಾಯ್ ಬೆಂಗಳೂರ್‍! ರವಿ ಬೆಳಗೆರೆಯವರ ಸಾರಥ್ಯದಲ್ಲಿ ಮೂಡಿ ಬರುವ ಈ ವಾರಪತ್ರಿಕೆಯ ಕಪ್ಪು-ಬಿಳುಪಿನ ರೂಪವೇ ಈ ನಾಮಧೇಯಕ್ಕೆ ಕಾರಣ. ೧೯೯೫ ರಲ್ಲಿ ಆರಂಭವಾದ ಈ ಪತ್ರಿಕೆಗೆ ಸರಿಸಮನಾದ ಅಥವಾ ಪ್ರತಿಸ್ಪರ್ಧೆ ಒಡ್ಡುವಂತ ಮತ್ತೊಂದು ಪತ್ರಿಕೆ ಇಲ್ಲ ಎಂಬುದು ಅಕ್ಷರಶಃ ನಿಜ. ಹಾಯ್ ಬೆಂಗಳೂರ್‍! ಕೇವಲ ಕ್ರೈಂಗೆ ಸೀಮಿತವಾದ ವಾರಪತ್ರಿಕೆ ಎಂಬುದು ಇನ್ನೂ ಹಲವರ ತಪ್ಪು ಅಭಿಪ್ರಾಯವಾಗಿದೆ. ಓದುಗರ ಮನಸ್ಸಿನ ಮೇಲೆ ಪ್ರಭಾವ ಬೀರುವ ಆ ಮೂಲಕ ಮನಸ್ಸಿನಲ್ಲಿ ಚಿರಕಾಲ ಉಳಿಯುವ ಅಲ್ಲದೇ ಓದುಗರನ್ನು ಚಿಂತನೆಗೆ ಹಚ್ಚುವ, ಜೀವನಕ್ಕೆ ಮಾರ್ಗದರ್ಶಿಯಾಗುವ, ಕಚಗುಳಿ ಇಡುವ ಹಲವು ಲೇಖನಗಳನ್ನೊಳಗೊಂಡ ಪತ್ರಿಕೆ ಈ ಹಾಯ್ ಬೆಂಗಳೂರ್‍!. ಯಾವುದೇ ಪಕ್ಷದ ಅಥವಾ ನಾಯಕನ ಅಥವಾ ಜಾತಿಯ-ಲಾಭಿಯ ಪರವಾಗಿ ನಿಲ್ಲದೇ ಭ್ರಷ್ಠ ರಾಜಕಾರಣಿಗಳ, ಸಮಾಜ ಕಂಠಕರ ನಿಜ ಬಣ್ಣವನ್ನು ಬಯಲು ಮಾಡುತ್ತಾ ಸಮಾಜವನ್ನು ಆದಷ್ಟು ಮಟ್ಟಿಗೆ ಶುದ್ದಿಗೊಳಿಸಿವಲ್ಲಿ ತನ್ನ ಅಳಿಲು ಸೇವೆ ಸಲ್ಲಿಸುತ್ತಿರುವ ಪತ್ರಿಕೆ ಇದು. ರಾಜಕೀಯ ದೊಂಬರಾಟದ ತೆರೆಮರೆಯ ಸಂಗತಿಗಳನ್ನು, ರಾಜಕೀಯ ನಾಯಕರ ಅಪ್ರಾಮಾಣಿಕತೆ ಹಾಗೂ ಅವರ ಭ್ರಷ್ಠತೆಯನ್ನು ನಿರ್ಭಯವಾಗಿ ಯಾವುದೇ ಮುಲಾಜಿಲ್ಲದೇ ಜನರಿಗೆ ಬಿಂಬಿಸುವ ಬೆಳಗೆರೆಯವರ ಧೈರ್ಯ ಮೆಚ್ಚಬೇಕಾದದ್ದು. ಯಾವುದೇ ರೀತಿಯ ಜಾಹೀರಾತುಗಳಿಲ್ಲದೇ ಸಂಪೂರ್ಣ ಮಾಹಿತಿ ಭರಿತವಾದ ಪತ್ರಿಕೆ ಎಂದರೆ ಇದೊಂದೇ. ಇದರಲ್ಲಿ ಪ್ರಕಟವಾಗುವ ಪ್ರತೀ ಅಂಕಣವೂ ವಿಶಿಷ್ಠ ಹಾಗೂ ವಿಭಿನ್ನ.

ಹಾಯ್ ಬೆಂಗಳೂರ್‍! ಪತ್ರಿಕೆಯಲ್ಲಿ ಪ್ರಕಟವಾಗುವ ಹಲವು ರೀತಿಯ ಲೇಖನಗಳು, ಇವುಗಳಲ್ಲಿನ ಹೂರಣದ ಬಗ್ಗೆ ಸಂಕ್ಷಿಪ್ತವಾಗಿ ಇಲ್ಲಿ ವಿವರಿಸಲಾಗಿದೆ.

ಖಾಸ್ ಬಾತ್

khas bat

ಎಲ್ಲೋ ಹುಟ್ಟಿ ಮತ್ತಿನ್ನೆಲ್ಲೋ ಹರಿದು ಕೊನೆಗಿನ್ನೆಲ್ಲೋ ಸೇರುವ ನದಿಯಂತೆ ರವಿಬೆಳಗೆರೆಯವರ ಜೀವನ ಹಲವು ಏಳುಬೀಳುಗಳನ್ನು ಕಂಡಿದೆ. ಅವರ ಅನುಭವಗಳೇ ಅವರ ಮಾರ್ಗದರ್ಶಿಗಳು, ಅವರು ಕಲಿತ ಪಾಠಗಳು. ಇದುವರೆಗಿನ ೫೦ ವರ್ಷದ ಇವರ ಜೀವನದಲ್ಲಿ ಇವರು ಕಂಡ ಏಳು ಬೀಳುಗಳು, ಸವೆಸಿದ ಹಾದಿಗಳು, ಪ್ರೀತಿಸಿದ ಹುಡುಗಿಯರು, ಆರಾಧಿಸಿದ ವ್ಯಕ್ತಿಗಳು, ಕಂಡ ಘಟನೆಗಳು, ಅನಿರೀಕ್ಷಿತವಾಗಿ ಭೇಟಿಯಾದ ವ್ಯಕ್ತಿಗಳು, ಓದಿದ ಪುಸ್ತಕಗಳು, ಓಡಾಡಿದ ಸ್ಥಳಗಳು, ಸುತ್ತಾಡಿದ ದೇಶಗಳು, ಇವರ ಜೀವನದಲ್ಲಿ ಬಂದು ಹೋದವರು, ಇತ್ಯಾದಿ..ಇತ್ಯಾದಿ ಪ್ರತೀವಾರ ತಮ್ಮ ಓದುಗರೊಡನೆ ಹಾಗೇ ಸ್ವಾಭಾವಿಕವಾಗಿ ಹರಟುತ್ತಾ, ನಗಿಸುತ್ತಾ, ಅಳಿಸುತ್ತಾ, ಸಾಗುವಂತ ಲೇಖನವೇ ಖಾಸ್ ಬಾತ್.

ಒಂದು ರೀತಿಯಲ್ಲಿ ಈ ಖಾಸ್ ಬಾತ್ ರವಿಯವರ ವೈಯಕ್ತಿಕ ಡೈರಿಯೇನೋ ಅನ್ನಿಸಿದರೆ ಮತ್ತೊಂದು ಬಾರಿ ಇದು ಅವರ ಆತ್ಮಕಥೆಯ ಬಿಡಿ ಬಿಡಿ ಲೇಖನಗಳೋ ಎಂದೆನ್ನಿಸುತ್ತದೆ. ತಮ್ಮ ವಾರ್ಷಿಕ ವರಮಾನ, ಪತ್ರಿಕೆ ಹಾಗೂ ಇತರೇ ಕಡೆಯಿಂದ ಬರುವ ಆದಾಯ ಇವರ ಖರ್ಚು, ಉಳಿತಾಯ ಇವುಗಳ ವಿವರಗಳನ್ನು ಯಾವುದೇ ಮುಚ್ಚುಮರೆ ಇಲ್ಲದೇ ಇವರು ಈ ಅಂಕಣದಲ್ಲಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಇವರ ಆರೋಗ್ಯ-ಅನಾರೋಗ್ಯ, ಮಕ್ಕಳು-ಕುಟುಂಬ, ಪ್ರೀತಿಸುವ ಹೆಂಡತಿ, ಇವರ ತಾಯಿ ಅವರು ಉಳಿಸಿಹೋದ ನೆನಪುಗಳು ಕಲಿಸಿಕೊಟ್ಟ ಪಾಠಗಳು, ಇವರು ನಡೆಸುವ ಪ್ರಾರ್ಥನಾ ಶಾಲೆ ಪ್ರತಿಯೊಂದರ ಬಗ್ಗೆ ರವಿಬೆಳಗೆರೆಯವರು ಇಲ್ಲಿ ಬರೆಯುತ್ತಾರೆ. ಓದುಗರನ್ನು ಓದಿಸುತ್ತಾ ಹೋಗುತ್ತಾರೆ. ರವಿಬೆಳಗರೆಯವರು ಏನೆಂಬುದನ್ನು ತಿಳಿದುಕೊಳ್ಳಲು (ಅದು ಇದುವರೆಗೆ ಯಾರಿಗೂ ಸಾಧ್ಯವಾಗಿಲ್ಲ ಎಂಬುದು ನನ್ನ ಅಭಿಪ್ರಾಯ) ಸ್ಪಲ್ಪ ಮಟ್ಟಿಗೆ ಈ ಲೇಖನ ಸಹಕಾರಿ.

ವಾರಪತ್ರಿಕೆಯ ಮೊದಲನೇ ಪುಟದಲ್ಲೇ ಈ ಲೇಖನವನ್ನು ಕಾಣಬಹುದು. ಖಾಸ್ ಬಾತ್ ನ ಕೆಲ ಸ್ಯಾಂಪಲ್ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಹಲೋ!

helloಪ್ರತೀ ವಾರ ರವಿಬೆಳಗೆರೆಯವರು ತಮ್ಮ ಓದುಗರನ್ನು ಸಂಭೋದಿಸುತ್ತಾ ಬರುವುದು ಹೀಗೆ. ಹಲೋ! ಇದು ವಾರಪತ್ರಿಕೆಯ ಸಂಪಾದಕೀಯ ಅಂಕಣ. ರಾಜಕೀಯವೂ ಸೇರಿದಂತೆ ಇನ್ನಿತರೇ ಪ್ರಸ್ತುತ ಘಟನೆಗಳ ಬಗ್ಗೆ ಪತ್ರಿಕೆಯ ಆ ಮೂಲಕ ತಮ್ಮ ನಿಲುವನ್ನು ಬೆಳಗೆರೆಯವರು ಈ ಅಂಕಣದಲ್ಲಿ ವ್ಯಕ್ತ ಪಡಿಸುತ್ತಾರೆ. ಇವರ ರಾಜಕೀಯ ವಿಮರ್ಷೆ The Best ಎನ್ನುವಂತಹದ್ದು. ೧೯೯೫ ರಲ್ಲಿ ಆರಂಭವಾದ ಪತ್ರಿಕೆ ಇಂದಿನವರೆಗೂ ಯಾವುದೇ ಪಕ್ಷದ ಅಥವಾ ನಾಯಕನ ಅಥವಾ ಜಾತಿಯ-ಲಾಬಿಯ ಪರವಾಗಿ ನಿಲ್ಲದೇ ಪಕ್ಷಾತೀತವಾಗಿ ತನ್ನ ಧೋರಣೆಗಳನ್ನು ಈ ಲೇಖನದ ಮೂಲಕ ಪ್ರತಿಬಿಂಬಿಸುತ್ತಾ ಬಂದಿದೆ. ನಿಜಸಂಗತಿಗಳನ್ನು ರಾಜಕೀಯ ನಾಯಕರ ನಿಜ ರೂಪವನ್ನು ಜನರೆದುರು ತೆರೆದಿಡುವಲ್ಲಿ ಬೆಳಗೆರೆಯವರು ಯಶಸ್ವಿಯಾಗಿದ್ದಾರೆ. ಈಗಲೂ ಭ್ರಷ್ಠ ಅಧಿಕಾರಿಗಳು, ರಾಜಕೀಯ ನಾಯಕರುಗಳ ಪಾಲಿಗೆ ಪತ್ರಿಕೆ ಸಿಂಹಸ್ವಪ್ನ. ರಾಜಕೀಯದಲ್ಲಿನ ಅಥವಾ ಸಮಾಜದಲ್ಲಿನ ಅನೀತಿಯ ಬಗ್ಗೆ ನಿರ್ಭಯದಿಂದ ಯಾವುದೇ ಮುಲಾಜಿಲ್ಲದೇ ಇವರು ಠೀಕಿಸುವ ರೀತಿ ಜನಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚಿನ ಸಂಪಾದಕೀಯದ ಕೆಲವು ಸಾಲುಗಳನ್ನು ಉದಾಹರಣೆಯಾಗಿ ಇಲ್ಲಿ ಕೊಡುತ್ತಿದ್ದೇನೆ ಓದಿ ನೋಡಿ….

“ ಪತ್ರಿಕೆಯ ಪೊಲಿಟಿಕಲ್ ಪಾಲಿಸಿಯ ಬಗ್ಗೆ ಬರೆಯುವ ಸಂದರ್ಭ ಬಂದಿದೆ. ೧೯೯೫ ರಲ್ಲಿ ಆರಂಭವಾದ ಪತ್ರಿಕೆ ಯಾವತ್ತೂ ಯಾವುದೇ ಪಕ್ಷದ ಅಥವಾ ನಾಯಕನ ಅಥವಾ ಜಾತಿಯ-ಲಾಬಿಯ ಪರವಾಗಿ ನಿಂತಿಲ್ಲವೆಂಬುದು ನನಗಿಂತ ಚೆನ್ನಾಗಿ ನಿಮಗೆ ಗೊತ್ತು. ಆದರೂ ಇತ್ತೀಚೆಗೆ ನೀವು ಬಿ.ಜೆ.ಪಿ ಯ ಪರ ನಿಲ್ಲತೊಡಗಿದ್ದೀರಿ ಅಂತ ಕೆಲವರು ಆಕ್ಷೇಪಿಸಿದರು. ಬಳ್ಳಾರಿಯ ರೆಡ್ಡಿಗಳೊಂದಿಗೆ ನಿಮ್ಮ ಗೆಳತನವಿದೆ ಎಂದರು. ನೀವು ಸರ್ಕಾರದ ಪರ ಬರೆಯುತ್ತೀರಿ ಅಂತಲೂ ಟೀಕಿಸಿದರು.

ಇವತ್ತು ನಿಚ್ಚಳವಾಗಿ ಉತ್ತರಿಸುತ್ತೇನೆ ಕೇಳಿ. ಮೂಲತಃ ನಾನು ಸಂಘ ಪರಿವಾರಿ ಚಿಂತಕನಲ್ಲ, ರಾಷ್ಟ್ರದ ಗಡಿಯ, ಭಾರತೀಯ ಬದುಕಿನ ಅಸ್ತಿತ್ವದ ಪ್ರಶ್ನೆ ಬಂದಾಗ ತುಂಬಾ ಸಹಜವಾಗಿಯೇ ನನ್ನೊಳಗಿನ ರಾಷ್ಟ್ರೀಯತಾವಾದಿ ಎದ್ದು ನಿಲ್ಲುತ್ತಾನೆ. ಮನುಷ್ಯತ್ವವನ್ನು ಮೀರುದ್ದು ಯಾವುದೂ ಇಲ್ಲ ಎಂದು ನಂಬುತ್ತೇನಾದರೂ, ಈ ದೇಶ ನನ್ನನ್ನು ಮಾನವನನ್ನಾಗಿ ಮಾಡಿದೆ ಅಂತ ಹೆಚ್ಚು ನಂಬುತ್ತೇನೆ. ಭಾರತಕ್ಕಿಂತ ದೊಡ್ಡದು ನನಗೆ ಯಾವುದೂ ಇಲ್ಲ.

ಇನ್ನು ಬಿ.ಜೆ.ಪಿ ಸರ್ಕಾರ. ಇದಕ್ಕೆ ಒಂದು ವರ್ಷ ತುಂಬಲಿ ಎಂದು ನಾನೇ ನನ್ನ ವರದಿಗಾರರಿಗೆ ಸೂಚನೆ ನೀಡಿದ್ದೆ. ವ್ಯಕ್ತಿಗತವಾಗಿ ಯಡಿಯೂರಪ್ಪನ ವಿರುದ್ದ ನನಗೆ ಯಾವ ದೂರೂ ಇಲ್ಲ. ಆತ ದಶಕಗಟ್ಟಲೆ ಜನರನ್ನ, ರೈತರನ್ನ, ಪಕ್ಷವನ್ನ ಕಟ್ಟಿಕೊಂಡು ಬಡಿದಾಡಿದ ಮನುಷ್ಯ. ಒಂದು ವರ್ಷ ಸರ್ಕಾರವನ್ನು ಹೇಗೆ ನಡೆಸಿಕೊಂಡು ಹೋಗುತ್ತಾರೋ-ನೋಡುವ ತವಕ ನನ್ನಲ್ಲಿತ್ತು. ಇನ್ನು ನೋಡಬೇಕಾಗಿಲ್ಲ. ಮನೆ, ಸರ್ಕಾರ, ಪಕ್ಷ ಎಲ್ಲವನ್ನೂ ಅತ್ಯಂತ ಕೆಟ್ಟ ರೀತಿಯಲ್ಲಿ ನಡೆಸಿಕೊಂಡು ಬರುತ್ತಿರುವ ವಿಫಲ ನಾಯಕ ಯಡಿಯೂರಪ್ಪ”

(ಹಾಯ್ ಬೆಂಗಳೂರ್‍! ಸೃಷ್ಟಿ ೭೧೪  ರ ಸಂಪಾದಕೀಯ ಲೇಖನದ ಸಾಲುಗಳು)

….ಹೀಗೆ ಸಾಗುತ್ತದೆ ಇವರ ನಿರ್ಭಯ ಹಾಗೂ ನೇರವಂತಿಕೆಯ ಅಕ್ಷರಗಳು.

ಬಾಟಮ್ ಐಟಮ್

bottom item

ಜೀವನದ ಕವಲುದಾರಿಯಲ್ಲಿ ದಿಕ್ಕುಕಾಣದೇ ನಿಂತಿದ್ದೀರಾ, ನಿರ್ಧಾರಗಳನ್ನು ಮಾಡುವಲ್ಲಿ ಗೊಂದಲಕ್ಕೆ ಬಿದ್ದಿದ್ದೀರಾ, ಸೋಲಿನ ಹತಾಶೆ ನಿಮ್ಮನ್ನು ಕಾಡುತ್ತಿದ್ದೆಯಾ, ಗೆಲುವಿಗಾಗಿ ನೀವು ಪರಿತಪಿಸುತ್ತಿದ್ದೀರಾ, ಮನುಷ್ಯ ತನ್ನ ಜೀವನದಲ್ಲಿ ಹಲವಾರು ಸಮಯಗಳಲ್ಲಿ ಗೊಂದಲಕ್ಕೆ ಬೀಳುತ್ತಾನೆ. ಸೋಲಿನ ಸುಳಿಯಲ್ಲಿ ಸಿಲುಕಿ ದಿಕ್ಕುತಪ್ಪಿದಂತಾಗುತ್ತಾನೆ. ಏನನ್ನೂ ನಿರ್ಧರಿಸದೇ ಹೋಗುತ್ತಾನೆ. ಇಂತಹ ಹಲವು ಸಮಯಗಳಲ್ಲಿ ದಾರಿದೀಪವಾಗುವ, ಮಾರ್ಗದರ್ಶಿಯಾಗುವ,  ಉತ್ಸಾಹವರ್ದಕವಾಗುವ, ಕಳಕೊಂಡ ಆತ್ಮವಿಶ್ವಾಸವನ್ನು ಪುನಃ ಮೂಡಿಸುವ ಲೇಖನವೇ ಈ ಬಾಟಮ್ ಐಟಮ್.

ಸ್ನೇಹ, ಆಕರ್ಷಣೆ, ಪ್ರೀತಿ, ವಿವಾಹ, ಮಾನವ ಸಂಬಂಧಗಳು, ಇವುಗಳ ನಿರ್ವಹಣೆ, ಮನುಷ್ಯ ಸಹಜವಾದ ಜವಾಬ್ದಾರಿಗಳು, ಕರ್ತವ್ಯಗಳು, ಸಮಸ್ಯೆಗಳು, ಬಯಕೆಗಳು, ಮಕ್ಕಳ ಪೋಷಣೆ, ವಿಧ್ಯಾಭ್ಯಾಸ, ಏನಿಲ್ಲಾ ಈ ಅಂಕಣದಲ್ಲಿ ಪ್ರತಿಯೊಂದೂ ವೈವಿಧ್ಯ ಹಾಗೂ ಅಪೂರ್ವ ಎಲ್ಲಕ್ಕಿಂತ ಮುಖ್ಯವಾಗಿ ಅತ್ಯುಪಯುಕ್ತ.

ಬೆಳಗೆರೆಯವರು ತಮ್ಮ ಜೀವನದಲ್ಲಿ ಅನುಭವಿಸಿದ ಅನುಭವಗಳೇ ಈ ಲೇಖನಗಳಲ್ಲಿ ತಿರುಳಾಗಿ ಕಾಣಸಿಗುತ್ತದೆ ಎಂಬುದು ನನ್ನ ಅನಿಸಿಕೆ. ಪ್ರತಿಯೊಬ್ಬರಿಗೂ ಅನುಭವ ವೇದ್ಯವಾಗುವಂತಹ ಅಂಕಣಗಳಿವು. ಇದನ್ನು ಓದಿದ ಹಲವಾರು ಬಾರಿ ಈ ಅಂಕಣವನ್ನು ನನ್ನನ್ನು ಕುರಿತಾಗಿಯೇ ಬರೆಯಲಾಗಿದೆಯೇ? ಎಂಬ ಅನುಮಾನ ನನ್ನನ್ನು ಕಾಡಿದೆ.  ಹಲವಾರು ಬಾರಿ ನನ್ನ ಆತಂಕಗಳನ್ನು ದೂರ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು, ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಿದೆ. ಜೀವನದ ಹಲವು ತಿರುವುಗಳಲ್ಲಿ ಕೈಹಿಡಿದು ನಡೆಸಿದೆ. ಆದುದರಿಂದ ವೈಯಕ್ತಿಕವಾಗಿ ನನಗೆ ತೀರಾ ಇಷ್ಠವಾದ ಅಂಕಣ ಇದೇ. ಪತ್ರಿಕೆ ತೆಗೆದುಕೊಂಡು ಮೊದಲು ಓದುವ ಅಂಕಣವೂ ಇದೇ. ಕೆಲವು ಆಯ್ದ ಬಾಟಮ್ ಐಟಮ್ ಅಂಕಣಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಲವ್ ಲವಿಕೆ

ll

ಪ್ರೀತಿ ಮನುಷ್ಯನನ್ನು ಭಾವುಕನನ್ನಾಗಿಸುತ್ತದೆ. ಒಮ್ಮೆ ಭಾವುಕತೆಗೆ ಬಿದ್ದ ಮನಸ್ಸು ಪದೇ ಪದೇ ಅದೇ ಪ್ರೀತಿಯನ್ನು ಹಂಬಲಿಸುತ್ತದೆ. ಪ್ರೀತಿಗಾಗಿ, ಪ್ರಿಯತಮೆಯ ಕಣ್ಣ ಒಂದು ನೋಟಕ್ಕಾಗಿ, ಪ್ರೀತಿಯಿಂದಾಡುವ ಒಂದು ಸವಿಮಾತಿಗಾಗಿ, ಹಿತವಾದ ಒಂದು ಸ್ಪರ್ಷಕ್ಕಾಗಿ, ಒಂದು ಅಪ್ಪುಗೆಗಾಗಿ, ತುಟಿಯಂಚಿನ ಆ ಸಿಹಿಗಾಗಿ, ಜೊತೆಯಾಗಿರುವ ಆ ಘಳಿಗೆಗಾಗಿ ಭಾವುಕ ಮನಸ್ಸು ತವಕಿಸುತ್ತದೆ. ಪ್ರೀತಿಯ ಪ್ರತೀ ನೆನಪೂ ನಿದ್ದೆಗೆಡಿಸುತ್ತದೆ, ಹನಿ ಮೂಡಿಸುತ್ತದೆ. ಪ್ರೀತಿಯ ಸೆಳೆತವೇ ಹೀಗೆ, ಒಮ್ಮೆ ಪ್ರೀತಿಸಲು ಪ್ರಾರಂಭಿಸಿದ ಮನಸ್ಸು ಇನ್ನಷ್ಟು ಪ್ರೀತಿಗಾಗಿ ಹಾತೊರೆಯುತ್ತದೆ. ಪ್ರೀತಿಯ ಜಾತ್ರೆಯಲ್ಲಿ ಸಂಭ್ರಮಿಸುತ್ತದೆ. ಭವಿಷ್ಯದಲ್ಲಿ ಇಡೀ ಜೀವನಕ್ಕಾಗುವಷ್ಟು ಪ್ರೀತಿ ತನಗಾಗಿ ಇರಲೆಂದು, ಕನಸು ಕಟ್ಟುತ್ತದೆ. ಕನಸಿನಲ್ಲೇ ಮುಳುಗಿರುತ್ತದೆ.

ಇದೇ ಪ್ರೀತಿ ತನ್ನಿಂದ ದೂರವಾಗುತ್ತಿದೆಯೆಂದು ಅನಿಸಲು ಶುರುವಾದಾಗ ಯಾಕೋ ಮನಸ್ಸು ಚಡಪಡಿಸಲು ಪ್ರಾರಂಭಿಸುತ್ತದೆ. ತನಗೆ ತಾನೇ ಸಾಂತ್ವನ ಹೇಳುತ್ತಾ ’ಛೇ ಹಾಗಿರೋದಿಲ್ಲ ಬಿಡು, ಅವಳು ಹಾಗೆ ಮಾಡುವುದಿಲ್ಲ’ ಎಂದು ತನಗೆ ತಾನೇ ಧೈರ್ಯ ತುಂಬುತ್ತಾ ಸಾಗುತ್ತದೆ. ಪ್ರೀತಿಯ ಆ ಇನ್ನೊಂದು ಮುಖ ಸ್ವಲ್ಪ ಸ್ವಲ್ಪ ಅರಿವಿಗೆ ಬರತೊಡಗಿದಾಗ ಮನ ಮುದುಡಲು ಪ್ರಾರಂಭಿಸುತ್ತದೆ. ಮುಗಿಯದ ಕಣ್ಣೀರಾಗುತ್ತದೆ, ಮೌನವೇ ತಾನಾಗುತ್ತದೆ. ಆ ಸಿಲ್ಲಿ ಸಿಲ್ಲಿ ಜಗಳಗಳು, ಅವಳನ್ನು ಮೊದಲು ಕಂಡ ಆ ದೇವಾಲಯ, ಅವಳ ಬೆರಳ ತುದಿಯ ಸ್ಪರ್ಷ ನೀಡುವ ಹಿತ, ಜೊತೆಯಾಗಿ ಹೋದ ಆ ಪಾರ್ಕು ಅಲ್ಲಿರುವ ಕಲ್ಲಿನ ಬೆಂಚು, ಪ್ರೀತಿಯ ಮಾತುಗಳಿಗೆ ಹಿನ್ನೆಲೆ ಸಂಗೀತ ನೀಡುವ ಹಕ್ಕಿಗಳ ಆ ಚಿಲಿಪಿಲಿ ಸದ್ದು, ಹೀಗೆ ಪ್ರತೀ ನೆನಪೂ ಭಾವುಕ ಮನಸ್ಸನ್ನು ಮತ್ತಷ್ಡು ಕುಗ್ಗಿಸುತ್ತದೆ. ಇದ್ದಕ್ಕಿದ್ದಂತೆ ಕೋಪ, ಕ್ರೋಧ, ದ್ವೇಷ ಬಂದು ಮರೆಯಾಗುತ್ತದೆ. ಏನೂ ಮಾಡದಾಗದೇ, ಏನೂ ಕೇಳಲಾಗದೇ, ಏನೂ ಹೇಳಲಾಗದೇ, ಏನನ್ನೂ ಭರಿಸಲಾಗದೇ ತನ್ನಲ್ಲಿ ತಾನೇ ಕರಗುತ್ತದೆ. ಕಣ್ಣೀರು ಮಾತ್ರ ನಿರಂತರವಾಗುತ್ತದೆ.

ಒಮ್ಮೆ ಪ್ರೀತಿ ಮನಸ್ಸಿಗೆ ಸಾಕೆನ್ನುವಷ್ಟು ಹಿತವನ್ನು ನೀಡಿದರೆ ಅದೇ ಪ್ರೀತಿ ಮನಸ್ಸಿಗೆ ಬರಿಸಲಾಗದಷ್ಟು ನಿರಂತರ ದುಃಖವನ್ನು ಸಹಾ ನೀಡಬಲ್ಲದು. ಪ್ರೀತಿಯ ತಂಗಾಳಿಯಲ್ಲಿ ತೊಯ್ದ ಮನುಷ್ಯ ಅದೇ ಪ್ರೀತಿಯ ಹೊಡೆತಕ್ಕೆ ಸಿಕ್ಕು ನಲಗುತ್ತಾನೆ.

ಪ್ರೀತಿಯ ವಿವಿಧ ಹಂತಗಳಲ್ಲಿ,  ಪ್ರತೀ ಮೌನದಲ್ಲಿ ಹುಟ್ಟುವ ಅಕ್ಷರ ಸರಮಾಲೆಯೇ ಈ ಲವ್ ಲವಿಕೆ.

ರವಿಬೆಳಗೆರಯವರ ಅತ್ಯಂತ ಜನಪ್ರಿಯವಾದ ಅಂಕಣಗಳಲ್ಲಿ ಈ ಲವ್ ಲವಿಕೆಗೆ ಮೊದಲ ಸ್ಥಾನ. ’ ಯಾವುದೇ ಒಬ್ಬ ವ್ಯಕ್ತಿ ಆತನಿಗೆ ಎಷ್ಟೇ ವಯಸ್ಸಾದರೂ ವಾರಕ್ಕೊಮ್ಮೆಯಾದರೂ ಒಂದು ಪ್ರೇಮ ಪತ್ರ ಬರೆಯುತ್ತಿದ್ದರೆ ಆತ ಚಿರಯುವಕ ಎಂದು ಹೇಳಬಹುದು’ ಇದು ರವಿಬೆಳಗೆರೆಯವರೇ ಹೇಳಿದ ಮಾತು. ರವಿ ಬೆಳಗೆರೆಯವರ ’ಲವ್ ಲವಿಕೆ’ ಯನ್ನು ಓದಿ ಕಣ್ಣೀರಾದದ್ದು ಅದೆಷ್ಟು ಬಾರಿಯೋ..ನೆನಪಿಲ್ಲ. ನೀವೇ ಪ್ರೇಮಿಯಾಗಿದ್ದರೆ, ನಿಮ್ಮಲ್ಲೊಬ್ಬ ಪ್ರೇಮಿಯಿದ್ದರೆ, ಪ್ರೀತಿಗಾಗಿ ಹಾತೊರೆಯುವ ಹೃದಯ ನಿಮದಾಗಿದ್ದರೆ, ಈ ಅಂಕಣ ನಿಮ್ಮ ಮನ ತಣಿಸುವಲ್ಲಿ ಕಣ್ ತೋಯಿಸುವಲ್ಲಿ ಸಂಶಯವಿಲ್ಲ.

ಕೇಳಿ…

ಇಲ್ಲಿ ನೀವು ಯಾವುದಾದರೂ ಪ್ರಶ್ನೆಯನ್ನು ಕೇಳಬಹುದು. ಪ್ರೀತಿ, ಪ್ರಣಯ, ಸ್ನೇಹ, ದಾಂಪತ್ಯ, ರಾಜಕೀಯ, ಸಿನಿಮಾ, ಸಿನಿಮಾನಟರು, ಯಾವುದೇ ನಿಂಬಂಧನೆಗಳಿಲ್ಲ. ಉತ್ತರಿಸುವವರು ಸ್ವತಃ ಬೆಳಗೆರೆಯವರೇ.

ರವಿ ಬೆಳಗೆರೆಯವರಿಗಿರುವ ಅನನ್ಯವಾದ ಹಾಸ್ಯ ಪ್ರಜ್ಞೆಯನ್ನು ತಿಳಿಯಬೇಕಾದಲ್ಲಿ ಕೇಳಿ..ಯ ಅಂಕಣವನ್ನೊಮ್ಮೆ ಓದಬೇಕು. ಪ್ರಶ್ನೋತ್ತರ ಸರಮಾಲೆಗಳ ಅಂಕಣವೇ ಈ ಕೇಳಿ. ಇಂದಿನ ಹಲವಾರು ಪತ್ರಿಕೆಗಳಲ್ಲಿ ಈ ರೀತಿಯ ಪ್ರಶ್ನೋತ್ತರ ಸರಮಾಲೆಯ ಅಂಕಣಗಳೂ ಬರುತ್ತಿದ್ದರೂ ಎಲ್ಲವೂ ಸಪ್ಪೆ ಸಪ್ಪೆ. ಆದರೆ ಹಾಯ್ ಬೆಂಗಳೂರ್‍! ನ ಕೇಳಿ ಮಾತ್ರ ಇದಕ್ಕೆ ಹೊರತಾಗಿ ಓದುಗರಲ್ಲಿ ಕಚಗುಳಿಯನ್ನು ಇಡುತ್ತಾ ಬರುತ್ತಿದೆ.

ಕೇಳಿ..ಯ ಅಂಗಳದಲ್ಲಿ ರಾಜಕೀಯ ಭ್ರಷ್ಟರು ಇವರ ರಾಜಕೀಯವೆಂಬ ದೊಂಬರಾಟ, ಸಮಯಸಾಧಕ ತನ ಇತ್ಯಾದಿಗಳನ್ನು ಬೆಳಗೆರೆಯವರು ತಮ್ಮ ಉತ್ತರಗಳ ಮೂಲಕ ಫುಟ್ ಬಾಲ್ ನಂತೆ ಆಡುವ ರೀತಿ ಓದಲು ರಸವತ್ತಾಗಿರುತ್ತದೆ.

ಇಷ್ಟೇ ಅಲ್ಲದೇ ಇನ್ನೂ ವೈವಿದ್ಯಮಯವಾದ ಅಸಂಖ್ಯ ಅಂಕಣಗಳು ಈ ಪತ್ರಿಕೆಯಲ್ಲಿ ಲಭ್ಯವಿರುತ್ತದೆ.

ಓದುಗರೊಡನೆ  ಉತ್ತಮ ಬಾಂದವ್ಯ ಬೆಸೆಯುವ ನಿಟ್ಟಿನಲ್ಲಿ ಓದುಗರೇ ತಮ್ಮ ಅನುಭವಗಳ ಬಗ್ಗೆ ಬರೆಯಲು ವೇದಿಕೆ ಕಲ್ಪಿಸುವ ಅಂಕಣವಾದ “ದಿಲ್ ನೆ ಫಿರ್‍ ಯಾದ್ ಕಿಯಾ”

ಪ್ರಸಿದ್ದ ನಿರ್ದೇಶಕರು, ಸಾಹಿತಿಗಳೂ ಆದ ನಾಗತಿಹಳ್ಳಿ ಚಂದ್ರಶೇಖರ್‍ ರವರು ಬರೆಯುವ ಹೊಳೆ ದಂಡೆ ಲೇಖನಮಾಲೆ.

ಅತ್ಯಂತ ಜನಪ್ರಿಯವಾಗಿರುವ ಜಾನಕಿಯವರ ಅಂಕಣ

ಆ ಕ್ಷಣ ನಮ್ಮ ಹುಬ್ಬೇರಿಸುವಂತೆ ಮಾಡುವ ಮುತ್ತಿನಂತ ಹತ್ತು ನೀತಿಗಳು ಅಥವಾ ಪ್ರಪಂಚದಲ್ಲಿನ ನಿಜಾಂಶಗಳು ಇವೇ ಹತ್ತು-ಮುತ್ತು.

ಹಾಸ್ಯ ಚಟಾಕಿಗಳ ಎಸ್ಸೆಮ್ಮೆಸ್ಸು, ಓದುಗರ ಫೀಡ್ ಬ್ಯಾಕ್, ಹನಿಗವನಗಳು, ಸಿನಿಮಾ ಸಂಬಂಧಿ ವರದಿಗಳು, ಆರೋಗ್ಯದ ಬಗ್ಗೆ ಪ್ರತಿವಾರ ಮಾಹಿತಿ ನೀಡುವ ಡಾ. ವೆಂಕಟಸುಬ್ಬಾರಾವ್ ರವರ ಜನರಲ್ ಚಕಪ್, ಇವುಗಳೊಡನೆ ಅಪರಾಧಿಕ ವರದಿಗಳು ಹೀಗೆ ನೂರೆಂಟು

ಪತ್ರಿಕೆಯಲ್ಲಿನ ಪ್ರತಿ ವರದಿ, ಲೇಖನ, ಕವನ  ಪ್ರತಿಯೆಲ್ಲವೂ ಓದುಗರು ತೆತ್ತುವ ಹಣಕ್ಕೆ ಮೌಲ್ಯ ಕೊಡುವಲ್ಲಿ ಸಂದೇಹವಿಲ್ಲ.  ಇವಕ್ಕೆಲ್ಲಾ ನೀವು ತೆರಬೇಕಾದದ್ದು ವಾರಕ್ಕೆ ಕೇವಲ ರೂ. ೧೪/.

Advertisements

13 Responses to ಕೃಷ್ಣಸುಂದರಿ

 1. Krishna Swamy M B ಹೇಳುತ್ತಾರೆ:

  Krishna sundari kappage irali, yakendare naanu bili !

  Krishna.

 2. Shyam ಹೇಳುತ್ತಾರೆ:

  ದಯವಿಟ್ಟು ಹಾಯ್ ಬೆಂಗಳೂರ್ ಅಂತರ್ಜಾಲದಲ್ಲಿ (Internet) ಲಭ್ಯವೇ? .. ಇದ್ದರೆ ಎಲ್ಲಿ ಎಂಬುದನ್ನು ತಿಳಿಸುವಿರಾ?

 3. santhosh kumar ಹೇಳುತ್ತಾರೆ:

  hi ravi sir

 4. balakrishna ಹೇಳುತ್ತಾರೆ:

  ಮುಖ್ಯಮಂತ್ರಿ ಇ ಲವ್ ಯೌ ಪಿಕ್ಚರ್ ಯಾಕೆ ರಿಲೀಸ್ ಆಗ್ತಾ ಇಲ್ಲಾ heli ravi

  • ravibelagere ಹೇಳುತ್ತಾರೆ:

   “ಚಿತ್ರ ಬಿಡುಗಡೆಯಾಗದಿರುವಂತೆ ದೇವೇಗೌಡರು ನ್ಯಾಯಾಲಯದಲ್ಲಿ ದಾವೆ ಹೂಡಿರುತ್ತಾರೆ. ಈ ಬಗ್ಗೆ ನ್ಯಾಯಾಲಯದ ವಿಚಾರಣೆಯಲ್ಲಿರುವುದರಿಂದ ಚಿತ್ರ ಬಿಡುಗಡೆ ವಿಳಂಬವಾಗಿದೆ” ಈ ಬಗ್ಗೆ ಬೆಳಗೆರೆಯವರು ತಮ್ಮ ಪ್ರತಿಕ್ರಿಯೆಯನ್ನು ಪತ್ರಿಕೆಯಲ್ಲಿ ಓದುಗರಿಗೆ ತಿಳಿಸಿದ್ದಾರೆ.
   -ಭಾಸ್ಕರ್‍

 5. Ranganath ಹೇಳುತ್ತಾರೆ:

  Hi Ravi Belagere Sir,
  i’m great fan of your tabloid. I was a regular reader when i was in India. I’m in Scotland from 2years and have really lost the touch of what is happening in Banglore. Even though i browse various sites for news but i’m really missing the type of news which Hi Bangalore use to provide. Is it possible for me to read or get access to news paper??
  I hope you read this message..
  Waiting for your reply..

  cheers,
  ranganath

 6. mahipalreddy munnur ಹೇಳುತ್ತಾರೆ:

  ನಮಸ್ತೆ ಅಣ್ಣಾ,
  ಮೊದಲ ಹಾಯ್ ಸಂಚಿಕೆಯಿಂದ ಇವತ್ತಿನವರೆಗೂ ಓದುತ್ತ ಬಂದವ ನಾನು. ಅದು ನಿಮಗೂ ಗೊತ್ತಿದೆ. ‘ ನಬೀ.. ಕಬಿ..ಕಬಿ ಏ ಕಯಾಲ್ ಕ್ಯಾ ಹೈ’ ಅನ್ನೋದು ಸೃಷ್ಟಿ -1 ಹೆಡ್ ಲೈನ್. ಅಂದಿನಿಂದ ಖಾಸ್ ಬಾತ್, ಹಾಯ್, ಬಾಟಮ್ ಐಟಂ, ಲವಲವಿಕೆ, ರವಿ ಕಾಣದ್ದು, ನಾಗತಿಹಳ್ಳಿ ಚಂದ್ರಶೇಖರ ಅಂಕಣ, ಕೇಳಿ, ಮುಂತಾದ ನಿಮ್ಮ ಲೇಖನಗಳು, ಕೃತಿಗಳು ಚಾಚು ತಪ್ಪದೇ ಓದಿದ್ದೇನೆ. ಅದು ಕೂಡ ಗೊತ್ತಿದೆ. ಆದರೆ, ಕಳೆದ ಅನೇಕ ದಿನಗಳಿಂದ ಕೇಳುತ್ತಿರುವ ನನ್ನ ಮನವಿಗೆ ಯಾಕೆ ಸ್ಪಂದಿಸುತ್ತಿಲ್ಲ ಎನ್ನೋದು ಅರ್ಥವಾಗುತ್ತಿಲ್ಲ.
  ಏನೆಂದರೆ, ತಮ್ಮ ಪುಸ್ತಕಗಳ ಕುರಿತು ಗುಲ್ಬರ್ಗದಲ್ಲಿ ವಿಚಾರ ಸಂಕಿರಣ ಮಾಡುವ ನನ್ನಾಸೆಗೆ ತಣ್ಣೀರು ಎರಚುತ್ತಿದ್ದೀರಿ. ಇದಕ್ಕೆ ಸಕಾರಣ ಕೊಡಬೇಡಿ.

  ಇನ್ನೊಂದು ಮಾತು ನೆನಪಿಸಲೇಬೇಕು.
  ಈ ಬಾರಿ ಅಮ್ಮ ಪ್ರಶಸ್ತಿಗೆ ದಶಮಾನೋತ್ಸವ.
  ನವೆಂಬರ್ 26, 2010ಕ್ಕೆ ಕಾರ್ಯಕ್ರಮ. ಬನ್ನಿ ಅನ್ನೋದು ಪ್ರತಿ ವರ್ಷದ ನನ್ನ ಅಭಿಮಾನದ ಕರೆಗೆ ಈ ಬಾರಿ ಓಗೊಡದೇ ಹೋದರೆ….!?

  ನಾನೀಗ ಸಮಯ ನ್ಯೂಸ್ ಚಾನೆಲ್ಲಿನಲ್ಲಿ ಗುಲ್ಬರ್ಗ ಬ್ಯೂರೋ ಚೀಫ್ ಆಗಿ ಕಳೆದ 6 ತಿಂಗಳಿಂದ ಕೆಲಸ ಮಾಡುತ್ತಿದ್ದೇನೆ. ಇದು ತಮ್ಮ ಅವಗಾಹನೆಗೆ ಇರಲಿ.

  ನಿನ್ನ ತಮ್ಮ
  ಮಹಿಪಾಲರೆಡ್ಡಿ ಮುನ್ನೂರ್
  ಸೇಡಂ-ಗುಲ್ಬರ್ಗ ಜಿಲ್ಲೆ
  ಜಂಗಮ- 9611365002

 7. Anilkumar.B.kote ಹೇಳುತ್ತಾರೆ:

  hi ravi uncle…..
  i am great fan of u and i red ur all books and articles i requesting u plz plz take care of ur health becz ur an precious daimond for us so it’s my humble request to u plz take crae of ur health ………

  urs faithfully,
  Anilkumar.B.Kote

 8. Lakshmi ಹೇಳುತ್ತಾರೆ:

  Hai Ravi Sir,

  i have some problem sir that i want to share with u pls give me ur mail id or mobile no pls pls pls sir. i am ur great fan……..

 9. shesh ಹೇಳುತ್ತಾರೆ:

  Hi Mr Belagere,

  Is there any option of reading Hi Bangalore weekly in the net ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: