ಒಬ್ಬ ಗಂಡಸಾಗಿ ಹುಟ್ಟಿ ಮತ್ತೊಬ್ಬ ಗಂಡಸಿಗೆ ಹೇಳಬಹುದಾದ್ದು!

ರವಿಬೆಳಗೆರೆಯವರ ಸಾರಥ್ಯದ ಹಾಯ್ ಬೆಂಗಳೂರ್‍! ವಾರಪತ್ರಿಕೆಯ ಅತ್ಯಂತ ಪ್ರಸಿದ್ದವಾದ ಅಂಕಣ ಬಾಟಮ್ ಐಟಮ್.  ಓದುಗರಿಗೆ ಜೀವನಕ್ಕೆ ಬೇಕಾದ ಕೆಲವು ಉಪಯುಕ್ತ ಸಲಹೆಗಳು ಅಥವಾ ಟಿಪ್ಸ್ ಗಳ ಬಗ್ಗೆ, ಮನುಷ್ಯ ಸಂಬಂಧಗಳ ನಿರ್ವಹಣೆಯ ಬಗ್ಗೆ, ಕನಸುಗಳ ಸಕಾರದ ಬಗ್ಗೆ, ಪ್ರೀತಿ-ಪ್ರೇಮಗಳನ್ನು ಉಳಿಸುವ ಬೆಳೆಸುವ ಬಗ್ಗೆ, ಮಕ್ಕಳನ್ನು ಪೋಷಿಸುವ ಬಗ್ಗೆ, ಹಿರಿಯರನ್ನು ಆಧರಿಸುವ ಬಗ್ಗೆ, ಇತ್ಯಾದಿ ಇತ್ಯಾದಿ ಏನಿಲ್ಲ ಈ ಅಂಕಣದಲ್ಲಿ. ಆದುದರಿಂದಲೇ ವೈಯಕ್ತಿಕವಾಗಿ ನನಗೆ ಅತ್ಯಂತ ಪ್ರಿಯವಾದ ಈ ಅಂಕಣದ ನೈಜತೆಗೆ ಹತ್ತಿರವಾದ, ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.  ತಮ್ಮ ಎಂದಿನ ಶೈಲಿಗೆ ತುಸು ಬಿನ್ನವಾಗಿ ಆದರೆ ಓದುಗರ ಮನಸ್ಸಿಗೆ ಅತ್ಯಂತ ಹತ್ತಿರವಾದ ಲೇಖವನ್ನು ರವಿ ಬೆಳಗೆರೆಯವರು ನೀಡಿದ್ದಾರೆ. ಸಮಾಜದಲ್ಲಿ ಒಬ್ಬ ಗಂಡಸು ತನ್ನ ಬಾಲ್ಯಾವಸ್ಥೆಯಿಂದ ಹಿಡಿದು ಪ್ರತೀ ಘಟ್ಟದಲ್ಲಿ ಅನುಭವಿಸುವ ಮನಸ್ಸಿನ ತಳಮಳಗಳು, ಆತನ ಜವಾಬ್ದಾರಿಗಳು, ಕನಸುಗಳು, ಆತಂಕಗಳು, ಬಯಕೆಗಳು, ಪ್ರಯೊಂದರ ಬಗ್ಗೆ ಅತ್ಯಂತ ನೈಜವಾಗಿ ಓದುಗರ ಮನಮುಟ್ಟುವಂತೆ, ಅನುಭವವೇದ್ಯವಾಗುವಂತೆ ರವಿಬೆಳಗೆರೆಯವರು ಬರೆದಿದ್ದಾರೆ. ಪ್ರತಿಯೊಬ್ಬ ಗಂಡಸೂ ತಪ್ಪದೇ ಓದಬೇಕಾದ ಲೇಖನ. ಓದಿದ ನಂತರ ಕಣ್ತುಂಬಿ ಬರುವುದರಲ್ಲಿ ಸಂದೇಹವಿಲ್ಲ. ಒಮ್ಮೆ ಓದಿ ಭೈ..ನಿಮಗೇ ತಿಳಿಯುತ್ತದೆ..

-ಅಭಿಮಾನಿ

Man

ನಮಸ್ಕಾರ ಬ್ರದರ್‍,

ಕುಶಲವೇ? ಹಾಗಂತ ನಿನ್ನನ್ನು ಕೇಳಲಿಕ್ಕೆ ಇದ್ದಾರಾದರೂ ಯಾರಯ್ಯ? ಈ ದೇಶದಲ್ಲಿ ದಲಿತರು ಮತ್ತು ಸ್ತ್ರೀಯರು ಇಬ್ಬರನ್ನೂ ಶೋಷಿತರು ಅಂತ ಪರಿಗಣಿಸಬೇಕು ಎಂಬ ವಾದವೊಂದಿದೆ. ಅದು ಸರಿಯೇ ಇರಬಹುದು ಭೈ. ಆದರೆ ನಿನ್ನನ್ನು ಕೇಳುವರು ಯಾರು ಪುರುಷಪುಂಗವಾ?.

ಗಂಡಸಾಗಿ ಹುಟ್ಟಿದ ಒಂದೇ ತಪ್ಪಿಗೆ (ಅದು ಪಾಪ ನಿನ್ನ ತಪ್ಪೂ ಅಲ್ಲ!) ಚಿಕ್ಕಂದಿನಿಂದಲೇ ನಿಂಗೆ ನೂರಾರು ಪಡಿಪಾಟಲು. ಹೊರಗೆಲ್ಲೋ ಸಿಟ್ಟು ಮಾಡಿಕೊಂಡು ಬಂದ ಅಪ್ಪ ವಿನಾಕಾರಣ ಸಿಡಿಮಿಡಿಗುಟ್ಟುತ್ತಾನೆ. ಪಾಪ ಅವನಾದರೂ ಗಂಡಸೇ ಅಲ್ವೇ? ಹೆಣ್ಣು ಮಕ್ಕಳನ್ನು ಹೇಗೆ ಹೊಡೆದಾನು? ಕೈಗೆ ಸಿಗೋನೆ ನೀನು. ಎರಡು ಬಾರಿಸುತ್ತಾನೆ. “ಹ್ಞಾಂ ಹೊಡೆದೆಯಾ” ಅಂತ ನೀನು ಅಳೋಹಂಗಿಲ್ಲ ಭೈ. ಗಂಡಸರು ಎಲ್ಲಾದರೂ ಅಳ್ತಾರಾ? ಅಳುವುದೇನಿದ್ದರೂ ಹೆಂಗಸರ ಫೆಸಿಲಿಟಿ. ಅವರಿಗದು ಬರ್ಥ್ ರೈಟು. ಹುಟ್ಟುತ್ತಲೇ ಸಿಗುವ ರಿಸರ್ವೇಷನ್. ನೀನು ಗಂಡಸಲ್ವಾ? ಎಷ್ಟು ಒದೆ ಬಿದ್ದರೂ ಅಳಬಾರದು.ವೀರಾದಿ ವೀರನ ಹಾಗೆ ಸಮಸ್ತ ಒದೆಗಳನ್ನೂ ಪಾಂಗಿತವಾಗಿ ತಿಂದು, ಅಮ್ಮನ ಅಪ್ಪಣೆಯಂತೆ ಕೊತ್ತಂಬರಿಸೊಪ್ಪು ತರಲು ಹತ್ತಿರದ ಜನರಲ್ ಸ್ಟೋರಿಗೆ ನಿನ್ನದೇ ಕಲ್ಪತ ಕುದುರೆಯ ಮೇಲೋ, ಟಿ.ವಿ ಯಲ್ಲಿ ನೋಡಿದ ರೇಸು ಬೈಕಿನ ಮೇಲೋ ಕುಳಿತು ಓಡಬೇಕು….ಡೀಂ..ಚುಕ..ಡೀ…ಡೀಂ…ಚುಕ…ಡೀ…!

ಮನೆಯ ಹಿಂಸೆ ಮನೆಯಲ್ಲೇ ಮುಗಿಯುತ್ತದಾ ಅಂದುಕೊಂಡರೆ, ನೋ ಚಾನ್ಸ್. ಶಾಲೆಯಲ್ಲಿ ಹೆಡ್ ಮಾಸ್ಟರೂ ಗಂಡಸು. ಮಿಸ್ಸುಗಳ ಮೇಲೆ ರೇಗಲಾರ ಮತ್ತೆ ಒದೆ ಬೀಲುವುದು ಪುಲ್ಲಿಂಗಕ್ಕೆ. ಅಷ್ಠೆಲ್ಲಾ ಒದೆ ತಿಂದು ತೂಕಡಿಕೆಯ ಸುಖವನ್ನು ಮರೆತು, ರಾತ್ರಿಯಿಡೀ ಓದಿದರೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರದೇ ಮೇಲು ಗೈಯಿ. ನೌಕರಿಗೆ ಅಂತ ಹೋಗಿ ಕೈ ಚಾಚಿದರೆ “ಅನುಭವವಿದೆಯಾ”? ಎಂಬ ಮೊದಲ ಪ್ರಶ್ನೆಯೇ ಮುಖಕ್ಕೆ ರಾಚುತ್ತದೆ. ಪಾಪ ಸೋದರಾ, ಏನನುಭವ ಇರಲು ಸಾಧ್ಯ ಆ ವಯಸ್ಸಿನಲ್ಲಿ? ಅದೇ ಪ್ರಶ್ನೆಯನ್ನು ಹುಡುಗಿಯರಿಗೆ ಹಾಕಿದರೆ ಸುಮ್ಮನಿದ್ದಾರ? ಜಗತ್ತಿನಲ್ಲಿ ಯಾರಿಗೂ “ಅನುಭವ” ಇರುವ ಹುಡುಗಿಯರು ಬೇಡ. ಅದೇ ಜಗತ್ತು ಪ್ರತೀ ಹುಡುಗನನ್ನು “ಅನುಭವವಿದೆಯಾ?” ಅಂತ ಕೇಳಿ ಪೀಡಿಸಿ ಪ್ರಾಣ ತಿನ್ನುತ್ತದೆ. ಏನನ್ಯಾಯ ಬ್ರದರ್‍? ಛಾನ್ಸು ಕೊಟ್ಟು ನೋಡಿದರೆ ತಾನೇ ಯಾರಿಗಾದರೂ ಅನುಭವ ಅಂತ ಆಗುವುದು?

ಹೇಗೋ “ಅಣ್ಣ” “ಅಪ್ಪ” ಎಂದು  ಅವರಿವರ ಕಾಲು ಹಿಡಿದು, ಇರುವ ಅರ್ಹತೆಗಿಂತ ಕಡಿಮೆ ಧರ್ಜೆಯ ನೌಕರಿಯೊಂದನ್ನು ಕಡೆಗೂ ಹಿಡಿದೆ ಅಂತಿಟ್ಟುಕೊ: ಪಕ್ಕದ ಖುರ್ಚಿಯಲ್ಲೇ ಸ್ತ್ರೀ ಮೂರ್ತಿ ಆಕೆಗೆ ಮೂವತ್ಮೂರು ಪರ್ಸೆಂಟ್ ರಿಸರ್ವೇಷನ್. ಏನೋ ಪಕ್ಕದಲ್ಲಿದ್ದಾಳಲ್ಲಾ ಅಂದುಕೊಂಡು ಕಣ್ಣೆತ್ತಿ ನೋಡಿದೆಯೋ: ಕೆಲಸ ಮಾಡುವ ಜಾಗದಲ್ಲಿ ಲೈಂಗಿಕ ದುರ್ವರ್ತನೆ ಎಸಗಿದ ಕೇಸು ತಪ್ಪಿದ್ದಲ್ಲ. ಹೋಗಲು ಪ್ರಾಮಾಣಿಕವಾಗಿ ಲವ್ವು ಮಾಡಿದೆಯಾ ಅಲ್ಲಿ ಒನ್ಸ್ ಎಗೈನ್, ಪ್ರಪೋಸ್ ಮಾಡುವ ಜವಾಬ್ದಾರಿ ನಿಂದೆ. ಬರೆದಿಟ್ಟುಕೊಂಡ ಲವ್ ಲೆಟರ್‍ ಕಿಸೆಯಿಂದ ತೆಗೆದು ಕೊಡಲಾಗದೇ ಇರುವಲ್ಲೇ ಇಟ್ಟುಕೊಳ್ಳಲಾಗದೇ ತಿಂಗಳು ಗಟ್ಟೆಲೆ ಕಂಗೆಟ್ಟು ಕಬೋಜಿಯಂತೆ ತಿರುಗುವ ನಿನ್ನ ಪಾಡು ಪಾಡೇನಯ್ಯಾ? ಲವ್ ಅಟ್ ಫಸ್ಟ್ ಸೈಟ್ ಅನ್ನೋದೆಲ್ಲಾ ಕಥೆ, ಕಾದಂಬರಿಗಳ ಮಾತು ಭಯ್ಯಾ; ಫಸ್ಟು ಸೈಟು ತೋರಿಸು ಆಮೇಲೆ ಲವ್ವು ಅಂತಾರೆ. ಅಲ್ಲಿಂದ ಶುರು ನೋಡು, ಶುಭ್ರ ಜಾತಕದೊಳಕ್ಕೆ ಶನಿ ಪ್ರವೇಶ ’ನೀನು ನಂಗಿಷ್ಟ ಕಣೇ’ ಅಂದ ತಪ್ಪಿಗೆ ಇಡೀ ಜೀವನ ಅವಳನ್ನು ಕಟ್ಟಿಕೊಂಡು ಹೆಣಗಲೇ ಬೇಕು. ವರದಕ್ಷಿಣೆ ಕೇಳೋ ಹಂಗಿಲ್ಲ. ಮದುವೆ ಅದ್ದೂರಿಯಾಗಿ ಮಾಡಿಕೊಡಿ ಅಂತ ಕೇಳಂಗಿಲ್ಲ. ಪ್ರೀತಿಸಿದ ತಪ್ಪಿಗೆ ಗುಡಿಯೋ, ಗುಂಡಾರವೋ, ಸಬ್ ರಿಜಿಸ್ಟಾರ್‍ ಆಫ್‌ಈಸೋ, ಪೊಲೀಸ್ ಸ್ಟೇಷನ್ನೋ,; ಒಂದು ತಾಳಿ ಅಂತ ಕಟ್ಟಿ ಯಾಬ್ರಾಸಿಯಂತೆ ನಿಂತುಕೊಂಡು ಫೋಟೋ ತೆಗೆಸಿಕೊಂಡರೆ ಮಾತ್ರ ಅವತ್ತಿನಿಂದ ನೀನು ಗೃಹಸ್ಥ.

ಹುಡುಗಿಯಾದವಳು ಮೊದಲ ರಾತ್ರಿ ಮಾತ್ರ ತನ್ನ ನೀತಿ, ನಿಯತ್ತು, ಶೀಲ, ಚಾರಿತ್ಯ್ರ, ಇತ್ಯಾದಿಗಳನ್ನು ಪ್ರೂವ್ ಮಾಡಿಬಿಟ್ಟರೆ ಗೆದ್ದಳು ಅಂತಲೇ ಅರ್ಥ. ಅರ್ಧ ಚಟಾಕು ರಕ್ತ, ಅವಳ ಒಟ್ಟಾರೆ ವ್ಯಕ್ತಿತ್ವಕ್ಕೆ ಕ್ಯಾರೆಕ್ಟರ್‍ ಸರ್ಟಿಫಿಕೇಟು. ಆದರೆ ನಿನ್ನ ಕಥೆ ಹೇಳು ಭೈ. ಪ್ರತಿ ಸಲವೂ ಅಳುಕು, ಸೋತೆನೆಂಬ ಭಯ, ಜೀವನ ಪರ್ಯಂತ ಯಾವುದೆ ಮೇಲೆ ನಂಬಿಕೆಯಿಟ್ಟುಕೊಂಡಿರುತ್ತೀಯೋ ಐನ್ ಟೈಮಿಗೆ ಅದೇ ಕೈಕೊಡುತ್ತದೇನೋ ಎಂತ ಆತಂಕ! ಪಾಪ ಕತ್ತಲ ರಾತ್ರಿಯಲ್ಲಿ, ಪಕ್ಕದಲ್ಲಿರುವ ಸ್ತ್ರೀ ಮೂರ್ತಿಗೂ ಗೊತ್ತಾಗದಂತೆ ವಯಾಗ್ರ ನುಂಗಿ ಏದುಸಿರು ಬಿಡುವ ನಿನ್ನ ಪಾಡು ಯಾವ ಶತ್ರುವಿಗೂ ಬೇಡ ಕಣಯ್ಯಾ.

ಆಯ್ತು , ಆ ಹಂತವೂ ದಾಟಿತು ಅಂತಲೇ ಇಟ್ಟುಕೊಳ್ಳೋಣ. ಅಂದುಕೊಂಡ ಅವಧಿಯೊಳಗೆ ಹೆಂಡತಿ ಬಸುರಾಗದಿದ್ದರೆ ಅಕ್ಕಪಕ್ಕದ ಮನೆಯವರು ಎಗಾದಿಗಾ ನಿನ್ನನ್ನೇ ನೋಡುತ್ತಾರೆ. ಆಫೀಸಿನಲ್ಲಿ ಪ್ರತಿಯೊಬ್ಬರೂ ಕೇಳುವವರೇ: ಏನಾದ್ರೂ ವಿಶೇಷಾನಾ? ಇನ್ನು ಅದೃಷ್ಠ ಪಲಿಸಿ ಆಯಮ್ಮ ಗರ್ಭವತಿಯಾದಳೂ ಅಂತಿಟ್ಕೋ. ಪೆದ್ದು ಮುಂಡೇದರ ಹಾಗೆ ನಿನ್ನ ಸಂಭ್ರಮವೇ ಸಂಭ್ರಮ, ಹೂವು ತಂದುಕೊಡುವುದೇನೂ, ಚೆಕ್ಕಪ್ಪುಗಳೇನೂ, ವಾಕಿಂಗುಗಳೇನೂ, ಮನೆಯಲ್ಲಿ ಇರೋ ಬರೋ ಕೆಲಸವೆಲ್ಲಾ ನೀನೇ ಮಾಡುವುದೇನೂ, ಕೊಡಗಟ್ಟಲೆ ನೀರು ಹೊರುವುದೇನೂ, ಮೈಕ್ ಟೈಸನ್ ಥರಾ ಭಾರ ಎತ್ತುವುದೇನೂ..ಅಬ್ಬಬ್ಬಬ್ಬ! ನೋಡ್ತಾ ನೋಡ್ತಾ ಮಕ್ಕಳಾಗಿ, ಸಾಲವಾಗಿ, ಪ್ರಮೋಷನ್ನಿಗಾಗಿ ಯುದ್ದಗಳಾಗಿ, ಆಫೀಸಿನಲ್ಲಿ ಛೀಮಾರಿಗಳಾಗಿ, ಪುಟಿಯುತ್ತಿದ್ದ ದೇಹಕ್ಕೆ ಮೂವತ್ತಾಗಿ, ನಲವತ್ತಾಗಿ, ಮಿಡ್ಲ್ ಕ್ಲಾಸ್ ಆಸೆಗಳೆಲ್ಲಾ ಕಂದಾಯವೆಂಬಂತೆ ಅದೊಂದು ದಿನ ಸುಮ್ಮನೆ ಹೋಗಿ ರಕ್ತ ಅದೂ-ಇದೂ ಪರೀಕ್ಷೆ ಮಾಡಿಸಿಕೊಂಡರೇ ಒಂದೇಟಿಗೆ ಬಿ.ಪಿ., ಅದರ ಮೇಲೆ ಡಯಾಬಿಟೀಸು!

ಒಂದೇ ಒಂದು ಸಲ ಗವರ್‍ನಮೆಂಟ್ ಆಸ್ಪತ್ರೆಯ ಜನರಲ್ ವಾರ್ಡಿಗೆ ಹೋಗಿ ನೋಡು ಬ್ರದರ್‍, ಸ್ಟ್ರೋಕು-ಹಾರ್ಟ್ ಅಟ್ಯಾಕು ಅಂತ ಸಾಲುಗಟ್ಟಿ ಮಲಗಿರುವ ಪೇಷೆಂಟುಗಳ ಪೈಕಿ ಹೆಂಗಸರಿಗಿಂತ ಗಂಡಸರೇ ಜಾಸ್ತಿ. ಅವರಿಗೆ ಅರವತ್ತನೇ ವಯಸ್ಸಿಗೆ ಬರುವ ಖಾಯಿಲೆ ಕಸಾಲೆಗಳೆಲ್ಲಾ ನಿನಗೆ ನಲವತ್ತಕ್ಕೇ ಬರ್‍ತವೇ ಕಣೋ. ಅದೇ ನನ್ನ worry. ಗಾಡಿ ಓಡಿಸುವಾಗ ಜೋಪಾನ ಮಗಾ. ಮೆಜೆಸ್ಟಿಕ್ಕಿನಲ್ಲಿ ರಷ್ಷು ಜಾಸ್ತಿ, ಸಿಗರೇಟಿಗೆ ಬೆಂಕಿ ಕೊಡುವಾಗ, ಮನೆಯಲ್ಲಿ ನಿನಗೋಸ್ಕರ ಕಾಯ್ತಿರೋ ಕಂದ ಒಬ್ಬನಿದ್ದಾನೆ ಅನ್ನೋದು ನೆನಪಿರಲಿ ಭೈ. ಕಾಂಪಿಟೇಷನ್ನು, ಕನ್ಸ್ಯೂಮರಿಸ್ಸಮ್, ನಗರೀಕರಣ, ಗ್ಲೋಬಲೈಸೇಷನ್, ಅಣುಒಪ್ಪಂದ, ವರದಕ್ಷಿಣೆ ಕಾಯ್ದೆ, ರಸ್ತೆ ಜಗಳ, ಹೆಂಡತಿಗೇ ಯಾವನೋ ಲಫಂಗ ಕಳುಹಿಸೋ ಪೋಲಿ ಎಸ್ಸೆಮ್ಮೆಸ್, ಮದ್ಯಾಹ್ನಗಳಲ್ಲಿ ಅವಳು ಮನೇಲಿರ್ತಾಳಾ-ಎಲ್ಲಿಗಾದರೂ ಹೋಗ್ತಾಳಾ ಎಂಬ ಅನುಮಾನ-ಇವೆಲ್ಲ ನಿನ್ನನ್ನೇ ಕಾಡಿ ಮೆತ್ತಗೆ ಮಾಡಬೇಕಾ ಮಿತ್ರಾ? Take care. ಬಸ್ಸಿಳಿಯುವಾಗ ಹುಶಾರು. ರಸ್ತೆ ದಾಟುವಾಗ ಎಚ್ಚರವಿರಲಿ. ಯಾವುದರಲ್ಲಿ ಸೋತರೂ ಅಳತೆ ಮೀರಿ ಡಿಸಪಾಯಿಂಟ್ ಆಗಬೇಡ. ಸಾಲ ತೀರಿಸಲಾಗಲಿಲ್ಲ ಅಂತ ಗೌರವಕ್ಕೆ ಹೆದರಿ ಬದುಕು ಮುಗಿಸಿಕೊಳ್ಳುವ ಯೋಚನೆ ಮಾಡಲೇ ಬೇಡ ಡಿಯರ್‍.

ಗಂಡಸಾಗಿ ಹುಟ್ಟಿದ ಮೇಲೆ ಪ್ರಪಂಚದಲ್ಲಿ ಇದನ್ನೆಲ್ಲಾ ಅನುಭವಿಸಬೇಕು. ಹಾಗಂತ ಒಬ್ಬ ಗಂಡಸಾಗಿ ಇದನ್ನೆಲ್ಲ ಹೇಳಿದ್ದೀನಿ ಭೈ. ಬೇಜಾರು ಮಾಡ್ಕಬ್ಯಾಡ.

-ರವೀ.

Advertisements

3 Responses to ಒಬ್ಬ ಗಂಡಸಾಗಿ ಹುಟ್ಟಿ ಮತ್ತೊಬ್ಬ ಗಂಡಸಿಗೆ ಹೇಳಬಹುದಾದ್ದು!

 1. ಶೆಟ್ಟರು (Shettaru) ಹೇಳುತ್ತಾರೆ:

  ಚೆನ್ನಾಗಿ ಬರೆದಿದ್ದಾರೆ “ಗಂಡಸರ ಗೋಳು”

  ಅಂಥದೆ ಮತ್ತೊಂದು ಗಂಡಸ್ರ ಗೋಳು ಇಲ್ಲಿದೆ:

  http://somekanasu.wordpress.com/2008/04/17/%e0%b2%97%e0%b3%8a%e0%b2%82%e0%b2%a6%e0%b2%b2%e0%b2%97%e0%b2%b3-%e0%b2%a8%e0%b2%a1%e0%b3%81%e0%b2%b5%e0%b3%86-%e0%b2%af%e0%b3%8c%e0%b2%b5%e0%b2%a8/

  -ಶೆಟ್ಟರು

 2. Jayasimha ಹೇಳುತ್ತಾರೆ:

  Sir, This book is really very good…
  This gives the fluctuations of Human mind…
  All the characters in Heli hogu karana are really impressive…
  But I had a small question to you…
  Dont you feel this is a defeat of true love?
  Himavantha loved Prarthana to maximum extent,
  But whats the result??
  He finally lost her,

  He wanted to become a sweet dream in her life..
  But she became a night mare for him..

  He wanted to build her future..
  But she destryed his future

  He trusted her to maximum extent..
  But she killed his trust

  Does this mean Love is just materialistic and depends only on external appearence…

 3. VIjay Durgraj ಹೇಳುತ್ತಾರೆ:

  Please upload some new articals

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: