ಮನತುಂಬಿ ಬಂದ ಪ್ರೀತಿ ಕಣ್ಣ ತುದಿಯವರೆಗೂ ಬಂದು ಕಣ್ಣ ಹನಿಯಾದಾಗ, ಪ್ರಿಯತಮೆಯ ಸಾಮೀಪ್ಯಕ್ಕಾಗಿ ಮನ ಹಂಬಲಿಸುವಾಗ , ಪ್ರೀತಿಯ ಸಿಹಿ ನೆನಪುಗಳು, ಹಿತ ಗುರುತುಗಳು ಪದೇ ಪದೇ ಮನಸ್ಸನ್ನು ತೋಯಿಸಿದಾಗ, ಪ್ರೀತಿಯ ಕಾವಿಗೆ ಮನಸ್ಸು ಅರಳಿದಾಗ, ಪ್ರೇಮಭರಿತ ಆ ನೋಟ ಮತ್ತೆ ಮತ್ತೆ ಮನಸ್ಸಿಗೆ ತಿವಿದಾಗ, ಜೀವನದ ಸರ್ವಸ್ವ ಅವಳೆಂದು ಅನಿಸಿದಾಗ……
ಪ್ರೀತಿಯ ಮತ್ತೊಂದು ಮುಖ ಅರಿವಿಗೆ ಬಂದಾಗ, ಮನ ತಣಿಸುವ ಆ ಪ್ರೀತಿ ಮನ ನೋಯಿಸಿದಾಗ, ನಲ್ಮೆಯ ಸವಿಮಾತಿನ ನೆನಪುಗಳು ಬೆನ್ನತ್ತಿ ಬೆನ್ನತ್ತಿ ತಿವಿದಾಗ, ಮಲಗಿರುವ ತಲೆದಿಂಬು ಕಣ್ಣೀರಿನಿಂದ ತೋಯ್ದಾಗ, ಕಣ್ಣೀರಾದ ಪ್ರತೀ ಹನಿ ಕೂಡಾ ಸಂತೈಸದಿದ್ದಾಗ, ಪ್ರತೀ ಮಾತಿನಲ್ಲೂ ಮೌನ ಇಣುಕಿದಾಗ, ನಿನ್ನ ಗೆಜ್ಜೆಯ ಸದ್ದು ಇನ್ನು ಕೇಳೆನೆಂಬ ಸತ್ಯ ಅರಿವಿಗೆ ಬಂದಾಗ….
ಪ್ರತಿಯೊಬ್ಬ ಪ್ರೇಮಿಯೂ ಈ ಎರಡೂ ಬಗೆಯ ಸಂಧರ್ಭಗಳಲ್ಲಿ ತಾನು ತಾನಾಗದೇ, ತನ್ನಲ್ಲಿಲ್ಲದೇ, ತನದೆಲ್ಲವೂ ತನದಾಗಿರದೇ ಅನುಭವಿಸಿರುತ್ತಾನೆಂಬುದು ನನ್ನ ಅಭಿಪ್ರಾಯ. ಪ್ರೀತಿ ಮನುಷ್ಯನನ್ನು ಭಾವುಕನನ್ನಾಗಿಸುತ್ತದೆ. ಒಮ್ಮೆ ಭಾವುಕತೆಗೆ ಬಿದ್ದ ಮನಸ್ಸು ಪದೇ ಪದೇ ಅದೇ ಪ್ರೀತಿಯನ್ನು ಹಂಬಲಿಸುತ್ತದೆ. ಪ್ರೀತಿಗಾಗಿ, ಪ್ರಿಯತಮೆಯ ಕಣ್ಣ ಒಂದು ನೋಟಕ್ಕಾಗಿ, ಪ್ರೀತಿಯಿಂದಾಡುವ ಒಂದು ಸವಿಮಾತಿಗಾಗಿ, ಹಿತವಾದ ಒಂದು ಸ್ಪರ್ಷಕ್ಕಾಗಿ, ಒಂದು ಅಪ್ಪುಗೆಗಾಗಿ, ತುಟಿಯಂಚಿನ ಆ ಸಿಹಿಗಾಗಿ, ಜೊತೆಯಾಗಿರುವ ಆ ಘಳಿಗೆಗಾಗಿ ಭಾವುಕ ಮನಸ್ಸು ತವಕಿಸುತ್ತದೆ. ಪ್ರೀತಿಯ ಪ್ರತೀ ನೆನಪೂ ನಿದ್ದೆಗೆಡಿಸುತ್ತದೆ, ಹನಿ ಮೂಡಿಸುತ್ತದೆ. ಪ್ರೀತಿಯ ಸೆಳೆತವೇ ಹೀಗೆ, ಒಮ್ಮೆ ಪ್ರೀತಿಸಲು ಪ್ರಾರಂಭಿಸಿದ ಮನಸ್ಸು ಇನ್ನಷ್ಟು ಪ್ರೀತಿಗಾಗಿ ಹಾತೊರೆಯುತ್ತದೆ. ಪ್ರೀತಿಯ ಜಾತ್ರೆಯಲ್ಲಿ ಸಂಭ್ರಮಿಸುತ್ತದೆ. ಭವಿಷ್ಯದಲ್ಲಿ ಇಡೀ ಜೀವನಕ್ಕಾಗುವಷ್ಟು ಪ್ರೀತಿ ತನಗಾಗಿ ಇರಲೆಂದು, ಕನಸು ಕಟ್ಟುತ್ತದೆ. ಕನಸಿನಲ್ಲೇ ಮುಳುಗಿರುತ್ತದೆ.
ಇದೇ ಪ್ರೀತಿ ತನ್ನಿಂದ ದೂರವಾಗುತ್ತಿದೆಯೆಂದು ಅನಿಸಲು ಶುರುವಾದಾಗ ಯಾಕೋ ಮನಸ್ಸು ಚಡಪಡಿಸಲು ಪ್ರಾರಂಭಿಸುತ್ತದೆ. ತನಗೆ ತಾನೇ ಸಾಂತ್ವನ ಹೇಳುತ್ತಾ ’ಛೇ ಹಾಗಿರೋದಿಲ್ಲ ಬಿಡು, ಅವಳು ಹಾಗೆ ಮಾಡುವುದಿಲ್ಲ’ ಎಂದು ತನಗೆ ತಾನೇ ಧೈರ್ಯ ತುಂಬುತ್ತಾ ಸಾಗುತ್ತದೆ. ಪ್ರೀತಿಯ ಆ ಇನ್ನೊಂದು ಮುಖ ಸ್ವಲ್ಪ ಸ್ವಲ್ಪ ಅರಿವಿಗೆ ಬರತೊಡಗಿದಾಗ ಮನ ಮುದುಡಲು ಪ್ರಾರಂಭಿಸುತ್ತದೆ. ಮುಗಿಯದ ಕಣ್ಣೀರಾಗುತ್ತದೆ, ಮೌನವೇ ತಾನಾಗುತ್ತದೆ. ಆ ಸಿಲ್ಲಿ ಸಿಲ್ಲಿ ಜಗಳಗಳು, ಅವಳನ್ನು ಮೊದಲು ಕಂಡ ಆ ದೇವಾಲಯ, ಅವಳ ಬೆರಳ ತುದಿಯ ಸ್ಪರ್ಷ ನೀಡುವ ಹಿತ, ಜೊತೆಯಾಗಿ ಹೋದ ಆ ಪಾರ್ಕು ಅಲ್ಲಿರುವ ಕಲ್ಲಿನ ಬೆಂಚು, ಪ್ರೀತಿಯ ಮಾತುಗಳಿಗೆ ಹಿನ್ನೆಲೆ ಸಂಗೀತ ನೀಡುವ ಹಕ್ಕಿಗಳ ಆ ಚಿಲಿಪಿಲಿ ಸದ್ದು, ಹೀಗೆ ಪ್ರತೀ ನೆನಪೂ ಭಾವುಕ ಮನಸ್ಸನ್ನು ಮತ್ತಷ್ಡು ಕುಗ್ಗಿಸುತ್ತದೆ. ಇದ್ದಕ್ಕಿದ್ದಂತೆ ಕೋಪ, ಕ್ರೋಧ, ದ್ವೇಷ ಬಂದು ಮರೆಯಾಗುತ್ತದೆ. ಏನೂ ಮಾಡದಾಗದೇ, ಏನೂ ಕೇಳಲಾಗದೇ, ಏನೂ ಹೇಳಲಾಗದೇ, ಏನನ್ನೂ ಭರಿಸಲಾಗದೇ ತನ್ನಲ್ಲಿ ತಾನೇ ಕರಗುತ್ತದೆ. ಕಣ್ಣೀರು ಮಾತ್ರ ನಿರಂತರವಾಗುತ್ತದೆ.
ಒಮ್ಮೆ ಪ್ರೀತಿ ಮನಸ್ಸಿಗೆ ಸಾಕೆನ್ನುವಷ್ಟು ಹಿತವನ್ನು ನೀಡಿದರೆ ಅದೇ ಪ್ರೀತಿ ಮನಸ್ಸಿಗೆ ಬರಿಸಲಾಗದಷ್ಟು ನಿರಂತರ ದುಃಖವನ್ನು ಸಹಾ ನೀಡಬಲ್ಲದು. ಪ್ರೀತಿಯ ತಂಗಾಳಿಯಲ್ಲಿ ತೊಯ್ದ ಮನುಷ್ಯ ಅದೇ ಪ್ರೀತಿಯ ಹೊಡೆತಕ್ಕೆ ಸಿಕ್ಕು ನಲಗುತ್ತಾನೆ.
ಪ್ರೀತಿಯ ವಿವಿಧ ಹಂತಗಳಲ್ಲಿ, ಪ್ರತೀ ಮೌನದಲ್ಲಿ ಹುಟ್ಟುವ ಅಕ್ಷರ ಸರಮಾಲೆಯೇ ಈ ಲವ್ ಲವಿಕೆ.
ರವಿಬೆಳಗೆರಯವರ ಅತ್ಯಂತ ಜನಪ್ರಿಯವಾದ ಅಂಕಣಗಳಲ್ಲಿ ಈ ಲವ್ ಲವಿಕೆಗೆ ಮೊದಲ ಸ್ಥಾನ. ’ ಯಾವುದೇ ಒಬ್ಬ ವ್ಯಕ್ತಿ ಆತನಿಗೆ ಎಷ್ಟೇ ವಯಸ್ಸಾದರೂ ವಾರಕ್ಕೊಮ್ಮೆಯಾದರೂ ಒಂದು ಪ್ರೇಮ ಪತ್ರ ಬರೆಯುತ್ತಿದ್ದರೆ ಆತ ಚಿರಯುವಕ ಎಂದು ಹೇಳಬಹುದು’ ಇದು ರವಿಬೆಳಗೆರೆಯವರೇ ಹೇಳಿದ ಮಾತು. ರವಿ ಬೆಳಗೆರೆಯವರ ’ಲವ್ ಲವಿಕೆ’ ಯನ್ನು ಓದಿ ಕಣ್ಣೀರಾದದ್ದು ಅದೆಷ್ಟು ಬಾರಿಯೋ..ನೆನಪಿಲ್ಲ. ನೀವೇ ಪ್ರೇಮಿಯಾಗಿದ್ದರೆ, ನಿಮ್ಮಲ್ಲೊಬ್ಬ ಪ್ರೇಮಿಯಿದ್ದರೆ, ಪ್ರೀತಿಗಾಗಿ ಹಾತೊರೆಯುವ ಹೃದಯ ನಿಮದಾಗಿದ್ದರೆ, ಈ ಅಂಕಣ ನಿಮ್ಮ ಮನ ತಣಿಸುವಲ್ಲಿ ಕಣ್ ತೋಯಿಸುವಲ್ಲಿ ಸಂಶಯವಿಲ್ಲ. ಈ ಅಂಕಣದ ಆಯ್ದ ಬರಹವೊಂದನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ಮರೆಯದ, ಮರೆತುಹೋದ, ಮನದ ಯಾವು ದೋ ಮೂಲೆಯಲ್ಲಿ ಹುದಗಿದ್ದ, ನಿಮ್ಮ ಪ್ರೀತಿಯನ್ನೊಮ್ಮೆ ನೇವರಿಸಿ….
ರವಿಬೆಳಗೆರೆಯವರು ತಮ್ಮ ’ಲವ್ ಲವಿಕೆ’ ಅಂಕಣಗಳನ್ನು ಸಂಗ್ರಹಿಸಿ ಹಲವು ಆವೃತ್ತಿಗಳಲ್ಲಿ ಬಿಡುಗಡೆ ಮಾಡಿದ್ದಾರೆ. ದಿನನಿತ್ಯದ ಜಂಜಾಟದ ನಡುವೆ ಮನಸ್ಸಿನಲ್ಲಿ ಲವಲವಿಕೆಯನ್ನು ಮೂಡಿಸುವ ಈ ಪುಸ್ತಕ ನಿಮ್ಮ ಆಫೀಸ್ ಬ್ಯಾಗಿನಲ್ಲಿದ್ದರೆ..ನಿಮ್ಮ ಪ್ರೀತಿಯ ನೆನಪು ಶಾಶ್ವತವಾದೀತು..
-ಅಭಿಮಾನಿ
ನಂಗೊತ್ತು, ಅಂಗಳದಲ್ಲಿ ಇನ್ನು ಯಾರ ಮಾತೂ ಕೇಳಿಸುವುದಿಲ್ಲ!
ಚಿನ್ನಿ,
ಒಂದು ಮುಟಿಗೆಯಷ್ಟು ವಿಷಾದಕ್ಕೆ ಎರಡು ತೆಕ್ಕೆಯಷ್ಟು ನಿರಾಸೆ ಸೇರಿದರೆ ಒಟ್ಟು ಎಷ್ಟು ಬೊಗಸೆ ದುಃಖ ತಯಾರಾಗುತ್ತದೆ? ನೀನೇ ಹೇಳಬೇಕು. ಲೆಕ್ಕದಲ್ಲೂ, ಲೆಕ್ಕಾಚಾರದಲ್ಲೂ ಜಾಣೆ. ನಾನು ಎಲ್ಲಾ ಬಿಟ್ಟು ಎಕನಾಮಿಕ್ಷಿನಲ್ಲೂ ಫೇಲು. ಬದುಕಿನಲ್ಲಿ ಸ್ಟಾರ್ ಗಳತ್ತ ಕೈಚಾಚಿದಾಗಲೆಲ್ಲಾ ಬದುಕು ನನಗೆ ಕರೆದುಕೊಟ್ಟದ್ದು ಮೂನ್. ಉಹುಂ, ಒಳ್ಳೆಯವನೆನೆಸಿಕೊಂಡನೇ ಹೊರತು ಜಾಣ ಅನ್ನಿಸಿಕೊಳ್ಳಲಿಲ್ಲ. ನೀನೆಷ್ಟು ಜಾಣೆ ಅನ್ನುವುದು ಪ್ರಪಂಚಕ್ಕೇ ಗೊತ್ತು: ಎಷ್ಟು ಒಳ್ಳೆಯವಳು ಎಂಬುದು ನಿನಗಿಂತ ಚೆನ್ನಾಗಿ ನನಗೆ ಗೊತ್ತು. ನನಗಷ್ಟೇ ಗೊತ್ತು.
ಮೊದಲು ನೀನು ಹೀಗಿರಲಿಲ್ಲ. ಅಥವಾ ನನಗದು ಗೊತ್ತಿರಲಿಲ್ಲ. ಅಸಲಿಗೆ ನೀನು ನನ್ನನ್ನು ಎಲ್ಲಿ ನೋಡಿದೆಯೋ? ನನಗೆ ಅದೂ ಗೊತ್ತಿರಲಿಲ್ಲ. ಆವತ್ತು ನಾನು ಮನೆಯ ಹಿತ್ತಿಲಲ್ಲಿದ್ದೆ. ಪನ್ನೇರಳೆ ಸಸಿಗೆ ಪಾತಿ ಮಾಡುತ್ತಿದ್ದೆ. ಅದು ಆ ತಿಂಗಳ ಎರಡನೇ ಭಾನುವಾರ. ಬೆಳಗ್ಗೆ ಹನ್ನೊಂದಾಗಿರಬಹುದು. ಅಂಗಳದಲ್ಲಿ ಅಮ್ಮ ಯಾರೊಂದಿಗೋ ಮಾತನಾಡುತ್ತಿದ್ದಾಳೆ ಅನ್ನಿಸಿತು. ಮಾತಿನ ಮದ್ಯೆ ನನ್ನ ಹೆಸರು ಕೇಳಿಸಿದಂತಾಗಿ ಹೊರಬಂದರೆ, ನೀನು. ಕಾಮನಬಿಲ್ಲು ಇಳಿದು ಬಂದು ಕದ ತಟ್ಟಿದಂತಿತ್ತು. ಅಮ್ಮ ಒಳಕ್ಕೆ ಕರೆದಳು. ನಾನು ಅಂಗಿ ಹಾಕಿಕೊಂಡು ಬಂದೆ. ಒಳ ಬಂದು ಕುಳಿತವಳು ಇಡೀ ಮನೆಯನ್ನು ಒಮ್ಮೆ ಕಣ್ಣಲ್ಲೇ ನಿರುಕಿಸಿದೆ. Of course, ತುಂಬಾ ಹೊತ್ತು ನೋಡಲಿಕ್ಕೆ ಮನೆಯಲ್ಲಿ ಇತ್ತಾದರೂ ಏನು? ಬದುಕಿನ ಎಲ್ಲಾ ಭೀಭತ್ಸಗಳೀಗೆ ಸಿಕ್ಕು ಹೈರಾಣಾಗಿದ್ದಂತ ಅಮ್ಮ. ಗೋಡೆಯ ಮೇಲಿನ ಚಿತ್ರವಾಗಿ ಹೋಗಿದ್ದ ಅಪ್ಪ. ಮೂಲೆಯಲ್ಲಿ ನಿಲ್ಲಿಸಿದ್ದ ನನ್ನ ಸೈಕಲ್ಲು. ಅಲ್ಲೇ ಒಂದು ಪುಟ್ಟ ರೇಡಿಯೋ. ಅದರಲ್ಲಿ ಇಳಿದನಿಯ ಹಾಡು.
ಜರಾಸೀ ಆಹಟ್ ಹೋತೀ ಹೈ
ತೋ ದಿಲ್ ಸೋಚ್ತಾ ಹೈ
ಕಹೀಂ ಏ ವೋ ತೊ ನಹೀ?
ಮೊದಲ ಸಲ ಬಂದಿದ್ದೀರಿ, ಕಾಫಿ ಮಾಡುತ್ತೇನೆ ಅನ್ನುತ್ತ ಅಮ್ಮ ಒಳಕ್ಕೆ ಹೋದಳು. ’ನಾನು ತುಂಬ ಸಲ ಬರ್ತೀನಿ’ ಅಂದ ನೀನು ಪಳ್ಳನೆ ನಕ್ಕಾಗ ದೇವತೆಗಳ ಕಣ್ಣು ಮಾತ್ರ ಇಷ್ಟೊಂದು ಸುಂದರವಾಗಿರುತ್ತದೆ ಅನ್ನಿಸಿತು. ಅಷ್ಟು ಹೊತ್ತು ಕುಳಿತಿದ್ದೆಯಾದರೂ ಕಡೆಗೆ ನೀನು ನನ್ನನ್ನು ಮನೆ ತನಕ ಹುಡುಕಿಕೊಂಡು ಯಾಕೆ ಬಂದೆ ಎಂಬುದನ್ನು ಹೇಳಲೇ ಇಲ್ಲ. ಯಾಕೇ ಬಂದೆ ಎಂಬುದು ಬಹುಶಃ ನಿನಗೂ ಗೊತ್ತಿರಲಿಲ್ಲ. ನೀನು ತುಂಬಾ ಸ್ಕೀಮಿ ಹುಡುಗಿ ಅಂತೇನೂ ಆವತ್ತು ನನಗನ್ನಿಸಲಿಲ್ಲ. ಸ್ವಲ್ಪ ಭಾವುಕಳು, ನನ್ನ ಹಾಗೇ ಥವಾ ಅಮ್ಮನ ಹಾಗೆ ಅನ್ನಿಸಿತ್ತು. ’ಬಂದರೆ ಈ ಮನೆಗೆ ಇಂಥ ಹುಡುಗಿ ಸೊಸೆಯಾಗಿ ಬರಬೇಕು ನೋಡು’ ಅಂದವಳು ಅಮ್ಮ. ಅವಳ ಮುಖದ ಅಮಾಯಕ ಸುಕ್ಕುಗಳಲ್ಲಿ ಆಸೆ ಹೊರಳುತ್ತಿತ್ತು.
ಆಮೇಲೂ ನೀನು ನನ್ನ ಮನೆಗೆ ತುಂಬ ಸಲ ಬಂದೆ. ನನಗಿಂತ ಹೆಚ್ಚಾಗಿ ಅಮ್ಮನಿಗೇ ನಿನ್ನ ನಿರೀಕ್ಷೆಯಿರುತ್ತಿತ್ತು. ’ಸಾಯಂಕಾಲ ಇಬ್ಬರೂ ಒಂದಷ್ಟು ದೂರು ತಿರುಗಾಡಿಕೊಂಡು ಬನ್ನಿ’ ಅಂತ ಅಮ್ಮ ಅಂದಾಗ, ಮನುಷ್ಯರನ್ನೂ ಅರ್ಥ ಮಾಡಿಕೊಳ್ಳಲಿಕ್ಕೆ ತುಂಬ ಎಜುಕೇಷನ್ ಬೇಕಾಗಿಲ್ಲ ಅಂತ ಮನವರಿಕೆಯಾಗಿತ್ತು. ಆವತ್ತು ನೀನು ದಾರಿಯಲ್ಲಿ ಕೇಳಿದ ಪ್ರಶ್ನೆ ಇವತ್ತಿಗೂ ನೆನಪಿದೆ. “ನಾನು ಮನೆಗೆ ಬಂದರೆ ಸಂತೋಷವಾಗುತ್ತಾ? ಅಕಸ್ಮಾತ್ ಬಾರದೆ ಇದ್ದರೆ, ಸಂತೋಷವನ್ನು ಹುಡುಕಿಕೊಂಡು ನೀನೇ ನಮ್ಮ ಮನೆಯ ತನಕ ಬರ್ತೀಯಾ?” ಮೊದಲ ಬಾರಿಗೆ ನನ್ನ ಭುಜ ಹಿಡಿದು ಮಾತನಾಡಿಸಿದ್ದೆ ನೀನು. ಹತ್ತಿಕ್ಕೆ ಬಂದವಳ ಮೈಯಲ್ಲಿ ಕಾಮ ಕಸ್ತೂರಿಯ ಗಂಧ.
ದೂರ್ ರೆಹಕರ್ ನ ಕರೋ ಬಾತ್
ಕರೀಬ್ ಆಜಾವೋ….
ನನ್ನ ಹುಚ್ಚು ಭಾವುಕತೆಗೊಂದು ದಿಕ್ಕಿ ಸೂಚಿಸಿದ ಹುಡುಗಿ ನೀನು. ಆವತ್ತಿನಿಂದಲೇ ನಿನಗೆ ಬರೆಯತೊಡಗಿದೆ. ಫಿವರಿಷ್ ಅನ್ನುಸುವಂತಹ ಅವೆಷ್ಟು ಪತ್ರಗಳು ನಿನ್ನನ್ನು ತಲುಪಿದ್ದು ? ನರ್ತಕಿಯ ಮೃದು ಪಾದಗಳಿಗೆ ಹುಚ್ಚು ಅಭಿಮಾನಿಯೊಬ್ಬ ಚಿಲ್ಲಿದ ಬೊಗಸೆ ಪಾರಿಜಾತದಂಥ ಪತ್ರಗಳು. ಪ್ರತಿ ಪತ್ರ ಕೈಗಿತ್ತಾಗಲೂ ನಿನ್ನೆದೆ ಝಲ್ಲೆನ್ನುತ್ತಿತ್ತು. ಕಣ್ಣು ಇಷ್ಟಗಲ. ನಿನಗೆ ಅಲ್ಲೇ ಎಲ್ಲಾದರೂ ನಿಂತು ಸರಸರ ಓದಿಕೊಂಡು ಬಿಡುವ ಹಂಬಲ. ರವಿಕೆಯ ಮುದುವಿನಲ್ಲಿ ಮಟ್ಟಸವಾಗಿ ಇಮುಡುತ್ತಿತ್ತು ಪತ್ರ. ನನ್ನ ಬೆರಳುಗಳಿಗೆ ಸಿತಾರ್ ನ ತಂತಿ ತಾಖಿದ ಅನುಭವ.
ಮನಸೇ, ನಗಲೇಕೆ
ಹರಿಷದಿ ನೀನು ಈ ದಿನ
ನುಡಿ ಕಾರಣ……
ಬಹುಶಃ ಬದುಕಿನಲ್ಲಿ ನಾನು ಮರೆಯಲಾಗದ ರಾತ್ರಿಯದು. ಊರಲ್ಲಿ ನವಮಿಯ ಉತ್ಸವ. ಮನೆಯಲ್ಲಿ ನಾವಿಬ್ಬರೇ ಇದ್ದೆವು. ಇಬ್ಬರದೂ ಸೈರಣೆ ಮುಗಿದಿತ್ತು. ಆಕಾಶ ನೀಲಿ ಸೀರೆಯುಟ್ಟು ಬಂದಿದ್ದವಳು ಅಡಿಯಿಂದ ಮುಡಿಯ ತನಕ ಅಪ್ಸರೆ. ಒಮ್ಮೆ ಬಾಚಿ ತಬ್ಬಿಕೊಂಡ ಮೇಲೆ ಇಬ್ಬರ ಮದ್ಯೆ ಸರಹದ್ದುಗಳಿರಲಿಲ್ಲ. ನೀನು ವೀಣೆಯಾಗಿ ಝೇಂಕರಿಸಿದೆ. ನಾನು ಸಾವಿರ ಕಣ್ಣಿನ ಗಂಡು ನವಿಲು. ಆ ರಾತ್ರಿಯ ನಮ್ಮ ಮಿಲನಕ್ಕೆ ನಕ್ಷತ್ರದ ಗಣ ಸಂಭ್ರಮಿಸಿ ಹೇಳಿತ್ತು: ಚಿಯರ್ಸ್! ಮರೆತ ಈಜು ಮತ್ತೆ ಮದ್ಯೆ ಹೊಳೆಯಲ್ಲಿ ನೆನೆಪಾದಂತೆ ಉನ್ಮತ್ತನಾಗಿ ಈಜಿ ಬಿಟ್ಟೆ. ಆ ಸಂತಸವನ್ನು ನಿರಂತರವಾಗಿ ಜಾರಿಯಲ್ಲಿಡು ಭಗವಂತಾ..ಅಂತ ಒಂದು ಮಾತು ಕೇಳಿಕೊಳ್ಳಬೇಕಿತ್ತು. ಕೇಳಿದ್ದಿದ್ದರೆ ತಥಾಸ್ತು ಅನ್ನುತ್ತಿದ್ದನೇನೋ? ನಾನು ನಿನ್ನನ್ನೇ ನೋಡುತ್ತಿದ್ದೆ. ನಿನ್ನೆದೆಯ ಮಿದುವಿಗೆ ಕಿವಿಯಿಟ್ಟು ಎದೆ ಬಡಿತವನ್ನೇ ಕೇಳಿಕೊಳ್ಳುತ್ತಿದ್ದೆ. ಬೆವರ ಬಿಂದುವೊಂದು ನಿನ್ನ ಕೊರಳಗುಂಟ ಇಳಿದು ಅಲ್ಲೇ ಲೀನವಾಗುತ್ತಿತ್ತು.
ಯಹೀ ವೋ ಜಗಾಹೈ
ಯಹೀ ವೋ ಫಿಜಾಯೇಂ
ಯಹೀ ಪರ್ ಕಭೀ ಆಫ್
ಹಮ್ ಸೇ ಮಿಲೇಥೆ…
ಅಂಥ ಎಷ್ಟೋ ಉನ್ಮತ್ತ ರಾತ್ರಿಗಳು ನಮ್ಮ ದಾದವು. ಹಗಲು ಈ ಮನೆಯಲ್ಲಿ ಗಾಢ ಮೌನವಿರುತ್ತಿತ್ತು. ”ಸೊಸೆಯಾಗಿ ಬರುತ್ತಾಳಂತ?” ಅಮ್ಮನ ಕಣ್ಣು ಕೇಳುತ್ತಿದ್ದವು. ಅವು ಈಗಲೂ ಕೇಳುತ್ತವೆ. ಏನು ಉತ್ತರ ಹೇಳಲಿ? ನಿನ್ನ ಮದುವೆ ನಿಶ್ಚಯವಾಗಿರುವುದು ಊರಿಗೆಲ್ಲಾ ಗೊತ್ತಿದೆ, ಅಮ್ಮ ಅಮಾಯಕಳು,. ಮತ್ತೆ ನೀನು ಮೊದಲಿನಂತೆಯೇ ಮನೆಗೆ ಬರುತ್ತೀಯ ಅಂತ ಕಾಯುತ್ತಾಳೆ. ಶ್ರೀಮಂತಿಕೆಯ ಪಂಜರ ಸೇರಲಿರುವವಳಿಗೆ ಪನ್ನೇರಳೆಯ ನೆರಳಿನ ಮೇಲೆ ಆಸೆಯಾದರೂ ಹೇಗೆ ಉಳಿದೀತು.ಉಪಯೋಗಿಸಿ ಬಿಟ್ಟು ಹೋದ ಸಂಗತಿ ನಾನು. ನನ್ನ ನೆನಪೂ ಕೂಡ ನಿನ್ನು ಕಾಡುವುದಿಲ್ಲ. ಈಗ ನೀನೆ ಬೇರೆ, ನಿನ್ನ ಬದುಕೇ ಬೇರೆ. ಅವತ್ತು ರಾತ್ರಿಯ ಆ ದಿವ್ಯ ಏಕಾಂತಕ್ಕಿಂತಲೂ ನಿತ್ಯ ಶ್ರೀಮಂತಿಕೆಯ ಝಣತ್ಕಾರ ತುಂಬ ಹಿತವಾಗಿರುತ್ತದಾ? ಗೊತ್ತಿಲ್ಲ. ನಿನ್ನನ್ನು ಶಪಿಸಲಿಕ್ಕೂ ಮನಸ್ಸಾಗುವುದಿಲ್ಲ. ಆಟ ಕೆಡಿಸಿ ಅರ್ಧಕ್ಕೇ ಎದ್ದ ಹುಡುಗಿಗೆ ನಾನು ಬೇಸರಾದೆನೇನೋ?
ನೀನು ಬಯಸಿದ್ದು ನಿನಗೆ ಸಿಗಲಿ. ನಾನು ಮತ್ತೆ ಹಿತ್ತಲಿಗೆ ಸರಿದು ಹೋಗುತ್ತೇನೆ.ನನಗೆ ಗೊತ್ತು: ಅಂಗಳದಲ್ಲಿ ಇನ್ನು ಯಾರ ಮಾತೂ ಕೇಳಿಸುವುದಿಲ್ಲ.
-ನಿನ್ನವನು
ಮನದ ಮೂಲೆಯಲ್ಲಿ ಹುದುಗಿರುವ ಪ್ರೀತಿಯನ್ನೊಮ್ಮೆ ನೇವರಿಸಿ.. ಗೆ 3 ಪ್ರತಿಕ್ರಿಯೆಗಳು