ಮನಸಿನ ಮಾತಿಗೆ ಮುನ್ನುಡಿ: ಓ ಮನಸೇ

ರವಿಬೆಳಗೆರೆಯವರ ಸಾರಥ್ಯದಲ್ಲಿ ಮೂಡಿಬಂದ ಪಾಕ್ಷಿಕ ಪತ್ರಿಕೆಯೇ  ಓ ಮನಸೇ. ಮನಸು ಮನಸುಗಳ ಪಿಸುಮಾತಿಗೊಂದು ಪಾಕ್ಷಿಕ ಎಂಬ ಅಡಿಬರಹದೊಂದಿಗೆ ಪ್ರಕಟವಾದ ಈ ಪಾಕ್ಷಿಕ ಪತ್ರಿಕೆ ಇಡೀ ಕರ್ನಾಟಕದಾಧ್ಯಂತ ಮನೆಮಾತಾಗಿದ್ದು ಸುಳ್ಳಲ್ಲ.  ಇತ್ತೀಚಿಗೆ ಸುಮಾರು ಒಂದು ವರ್ಷದಿಂದ ಈ ಪಾಕ್ಷಿಕ ಪ್ರಕಟವಾಗದಿದ್ದರೂ ಇದರ ನೆನಪು ಓದುಗರಲ್ಲಿ ಇನ್ನೂ ಮಾಸಿಲ್ಲ. ಈ ಪಾಕ್ಷಿಕವನ್ನು ಪುನಃ ಪ್ರಾರಂಭಿಸುವಂತೆ ಇಂದಿಗೂ ಹಲವಾರು ಬ್ಲಾಗ್ ಗಳಲ್ಲಿ, ಬೆಳಗೆರೆಯವರಿಗೆ ಬರುವ ಪತ್ರಗಳಲ್ಲಿ ಓದುಗರು ಒತ್ತಾಯಿಸುತ್ತಲೇ ಇದ್ದಾರೆ. ಈ ಪಾಕ್ಷಿಕದಂತಹ ಮತ್ತೊಂದು ಪುಸ್ತಕ ಕರ್ನಾಟಕದ ಇತಿಹಾಸದಲ್ಲಿ ಬಂದಿಲ್ಲ. ಇದನ್ನೊಮ್ಮೆ ನೀವು ಸುಮ್ಮನೆ ತೆರೆಯಿರಿ ಸಾಕು, ಪುಸ್ತಕ ತನ್ನಷ್ಠಕ್ಕೇ ತಾನೇ ನಿಮ್ಮನ್ನು ಓದಿಸಿಕೊಂಡು ಹೋಗುತ್ತದೆ. ಇದರ ಬಗ್ಗೆ ಇಲ್ಲಿ ವಿವರಿಸುವುದಕ್ಕಿಂತ ನೀವೊಮ್ಮೆ ಓದಿದರೆ ನಿಮಗೆ ಅರ್ಥವಾಗುತ್ತದೆ. ಈ ಪತ್ರಿಕೆ ಪುನಃ ಮುಂದಿನ ವಾರದಿಂದ ಮಾರುಕಟ್ಟೆಗೆ ಬರುವ ಸಿಹಿಸುದ್ದಿಯನ್ನು ರವಿಬೆಳಗೆರೆಯವರು ಓದುಗರಿಗೆ ನೀಡಿದ್ದಾರೆ. ಈ ಪಾಕ್ಷಿಕದ ನೆನಪಿನಲ್ಲಿ  ಇದರ ಸಂಪಾದಕೀಯ ಬರಹವಾದ ಮನಸಿನ್ಯಾಗಿನ ಮಾತು ವಿನ ಒಂದು ಲೇಖನವನ್ನಿಲ್ಲಿ ಪ್ರಕಟಿಸುತ್ತಿದ್ದೇನೆ. ಪ್ರತಿಯೊಬ್ಬರಿಗೂ ತನ್ನ ತಾಯಿಯ ನೆನಪು ಆಕೆಯ ಸಾಮೀಪ್ಯ, ಆಕೆಯ ಆರೈಕೆ, ಆಕೆಯ ನಿಸ್ವಾರ್ಥ ಪ್ರೀತಿ ಇವುಗಳ ನೆನೆಪು ಕಾಡುತ್ತಲೇ ಇರುತ್ತದೆ. ಬೆಳಗೆರೆಯವರು ತಮ್ಮ ತಾಯಿಯ ಬಗ್ಗೆ ಬರೆದಿರುವ ಈ ಲೇಖನ ಅಮೂಲ್ಯವಾದದ್ದು. ಓದಿ ತಮ್ಮ ಅಭಿಪ್ರಾಯ ತಿಳಿಸಿ..

-ಭಾಸ್ಕರ್‍

ಆಕೆ ಬದುಕಿದ್ದಾಗ ನನ್ನಲ್ಲಿ ಶ್ರದ್ದೆಯಿತ್ತು: ಹೀಗಾಗಿ ಈಗ ಶ್ರಾದ್ದ ಬೇಕಿಲ್ಲ!

mother

ಈ ಸಲದ ಸಂಚಿಕೆಯಲ್ಲಿ ನನ್ನ ತಾಯಿಯ ಬಗ್ಗೆ ಬರೆಯಬೇಕಿದೆ. ಅಮ್ಮನ ನೆನಪೇ ನಂಗೊಂದು ಉಲ್ಲಾಸದ ಸಂಗತಿ. We were best friends. ಈ ತನಕ ಆಕೆಯ ಬಗ್ಗೆ ಅದೆಷ್ಟು ಬರೆದಿದ್ದೀನೋ? ಆದರೂ ಅನಿಸಿಕೆಗಳ, ನೆನೆಪುಗಳ ಒರತೆ ಬತ್ತುವುದಿಲ್ಲ. ಆಕೆಯ ದನಿ, ಕಣ್ಣುಗಳಲ್ಲಿದ್ದ ದಯೆ, ಅಮಾಯಕತೆ, ನೋವು, ಆಕೆಯ ಸ್ಪುರದ್ರೂಪ, ತನ್ನನ್ನು ತಾನು ತುಂಬಾ ಶುಚಿಯಾಗಿಟ್ಟುಕೊಳ್ಳುತ್ತಿದ್ದ ರೀತಿ-ನನಗೆ ಯಾವುದನ್ನೂ ಮರೆಯಲಾಗುವುದಿಲ್ಲ. ತನ್ನ ಸೀರೆಗಳನ್ನೆಲ್ಲಾ ಆಕೆ ರಾತ್ರಿಗಳಲ್ಲಿ ತಾನೇ ಒಗೆದುಕೊಳ್ಳುತ್ತಿದ್ದಳು. ಬೆಳಿಗ್ಗೆ ಅವುಗಳನ್ನು ಅಂಗಳದ ತಂತಿಯ ಮೇಲಿಂದ ತಂದು ಮಡಚಿ ಇಡುತ್ತಿದ್ದುದು ನಾನು. ನಂಗೆ ತುಂಬ ಇಷ್ಟದ ಕೆಲಸ ಅದು. ತುಂಬ mild ಆದ ಬಣ್ಣಗಳ, ಅತ್ಯಂತ ಮೃದುವಾದ ಆಕೆಯ ಕಾಟನ್ ಸೀರೆಗಳ ಮೃದುತ್ವ, ಆ ಸ್ಪರ್ಷ, ಆ ಸ್ವಚ್ಚತೆ-ಇವತ್ತಿಗೂ ನನ್ನಿಂದ ಮರೆಯಲಾಗುವುದಿಲ್ಲ. ಅಮ್ಮನ neat ಆದ ಹಲ್ಲಿನ ಸಾಲೇ ನನಗೂ ಬಂದಿದೆ. ನನ್ನ ಎರಡನೆಯ ಮಗಳು ಬಾನಿಗೂ. ಅವಳು ಅಮ್ಮ ನಕ್ಕಂತೆಯೇ ನಗುತ್ತಾಳೆ. ಆದರೆ ಅಮ್ಮ ಅವಳಿಗಿಂತ ತುಂಬ ತುಂಬ ಚೆಲುವೆ.

ನಮ್ಮಿಬ್ಬರ ಮಧ್ಯೆ ಒಂದು ಒಪ್ಪಂದ ಅಂತ ಏನಿರಲಿಲ್ಲವಾದರೂ, ಆಕೆಯಿಂದ ನಾನು ಏನನ್ನೂ ಮುಚ್ಚಿಡುತ್ತಿರಲಿಲ್ಲ. ನಾನು ಪ್ರೀತಿಸಿದ್ದ ಹುಡುಗಿಗೆ ಬರೆದಿಟ್ಟುಕೊಂಡು, ಅದನ್ನು ಕೊಡಲಾಗದೇ, ದಿನಗಟ್ಟಲೆ ಜೇಬಿನಲ್ಲಿಟ್ಟುಕೊಂಡು ಓಡಾಡುತ್ತಿದ್ದ ಪ್ರೇಮಪತ್ರದ ಮೊದಲ draft ಅನ್ನ ಮೊದಲು ಓದಿದವಳೇ ಅಮ್ಮ. “ಅವಳಿಗೆ ಹೇಗೆ ಕೊಡಬೇಕು ಅಂತಾನೇ ಗೊತ್ತಾಗಿಲ್ಲ. ಸರಿಯಾಗಿದೆಯೋ ಇಲ್ವೋ ಲೆಟರು! ನೀನೊಂದು ಸಲ ಓದಿ ನೋಡು” ಅಂತ ಅಮ್ಮನ ಕೈಗೆ ಕೊಟ್ಟಿದ್ದೆ. ಆಗ ನಾನು ಎಸೆಸೆಲ್ಸಿ ಫೇಲಾಗಿದ್ದೆ. ನಾಣು ಪ್ರೀತಿಸುತ್ತಿದ್ದ ಹುಡುಗಿಯಿನ್ನೂ ಎಸೆಸೆಲ್ಸಿ ಓದುತ್ತಿದ್ದಳು. “ಇನ್ನೂ ಚಿಕ್ಕವಳು ಕಣೋ ಹುಡುಗೀ…ಇಷ್ಟು ದೊಡ್ಡ ಲೆಟರು ಬರ್‍ಕೊಟ್ರೆ ಓದೋಕೆ ಕಷ್ಠವಾಗೋಲ್ವಾ? ಸ್ವಲ್ಪ ಚಿಕ್ಕದು ಬರಿ. ಸ್ಪಷ್ಠವಾಗಿ, ಅವಳಿಗೆ ಅರ್ಥವಾಗೋ ಹಾಗೆ ಬರಿ” ಅಂದಿದ್ದಳು ಅಮ್ಮ. ಮತ್ತೆ ನಾನು ಆ ಪತ್ರವನ್ನು ರೀ ರೈಟ್ ಮಾಡಿ Abridge ಮಾಡಿ ಅದರೊಟ್ಟಿಗೊಂದು ಪುಟ್ಟ ನವಿಲುಗರಿ ಇಟ್ಟು ಅವಳಿಗೆ ಕೊಟ್ಟಿದ್ದೆ. ಅವಳಿ “ಹೂ” ಅಂತ ಕಣ್ಣಲ್ಲೇ ತಲೆಯಾಡಿಸಿ ನನ್ನ ಪ್ರೀತಿಯನ್ನು ಒಪ್ಪಿಕೊಂಡಾಗ, ಸೈಕಲ್ ಹತ್ತಿಕೊಂಡು ಓಡಿಹೋಗಿ ಆ ವಿಷಯವನ್ನು ಅಮ್ಮನಿಗೆ ಮೊದಲು ತಿಳಿಸಿದ್ದೆ. ಅಮ್ಮನಿಗೆ ತನ್ನ ಪ್ರೀತಿ ಫಲಿಸಿದ ದಿನಗಳು ನೆನಪಾದವೇನೋ? ಕಣ್ಣಲ್ಲಿ ಹನಿಯಿದ್ದವು.

ಇಂತ ಅಮ್ಮ ಎಷ್ಟು ಜನಕ್ಕೆ ಸಿಗುತ್ತಾಳೋ, ಗೊತ್ತಿಲ್ಲ. ಆದರೆ ಅಮ್ಮಂದಿರು ತುಂಬಾ ವರ್ಷ ನಮ್ಮೊಂದಿಗೆ ಇರುವುದಿಲ್ಲ. ಅಮ್ಮಂದಿರು ಸಂಸಾರದ ಜವಾಬ್ದಾರಿಗಳಿಂದಾಗಿ ಮಕ್ಕಳನ್ನು ಹೆತ್ತದ್ದರಿಂದಾಗಿ ಗಂಡನ್ನು ಭರಿಸಿಕೊಂಡಿದ್ದರಿಂದಾಗಿ ಸೊಸೆಯಂದಿರು ಬಂದಾಗೆಲ್ಲಾ ನರಳುವ insecurity ಗಳಿಂದಾಗಿ ಬೇಗ ಮುಪ್ಪಾಗಿ ಬಿಡುತ್ತಾರೆ. ಬೇಗ ಹಣ್ಣಾಗಿ ಬಿಡುತ್ತಾರೆ. ಹಾಗಾದವರ ವೃದ್ದಾಪ್ಯವನ್ನು ನಾವು ಎಷ್ಠರ ಮಟ್ಟಿಗೆ ಸುಖಮಯವಾಗಿ, ಸಂತೋಷಮಯವಾಗಿ ಇಟ್ಟುರುತ್ತೇವೆ ಹೇಳಿ? ಮಗ ತಂದುಕೊಡುವ ಒಂದು ಆರ್ಡಿನರಿ ಇಳಕಲ್ ದಡಾದಡಿ ಸೀರೆಯೇ ಅಮ್ಮನ ಪಾಲಿಗೆ ದೊಡ್ಡ ಒಡವೆ. ಹತ್ತಿರದಲ್ಲೇ ಇರುವ ಮಂತ್ರಾಲಯಕ್ಕೆ ಕಾರು ಮಾಡಿ ಕರೆದುಕೊಂಡು ಹೋದರೆ, ಅಮ್ಮನ ಕಣ್ಣಲ್ಲಿ ಮಗನೇ ಗುರು ರಾಘವೇಂದ್ರ! ಅಮ್ಮ ಅನುಭವಿಸುತ್ತಿದ್ದ ಸಣ್ಣ ಸಣ್ಣ ಸಂತೋಷಗಳು ಬರೀ ಇಂಥವೇ ಇರುತ್ತಿದ್ದವು. ನನಗೆ ಬರೆಯುವ ಶಕ್ತಿ ಇದೆ, Poetry ಗಿಂತಾ Prose ಚೆನ್ಮಾಗಿ ಬರೆಯುತ್ತೇನೆ, ನಂಗೆ ಕಥೆ ಬರೆಯೋಕ್ಕೆ ಬರುತ್ತೆ ಅಂತ ಗೊತ್ತಾದಾಗ ಆಕೆ ಪಟ್ಟ ಸಂತೋಷ ಎಂತದ್ದು ಅಂತ ನನಗೆ ಮಾತ್ರ ಗೊತ್ತು. ನಾನು ಬಿ.ಎ. ಮುಗಿಸುವ ಹೊತ್ತಿಗೆ ದ್ವೈತ-ಅದ್ವೈತ ಸಿದ್ದಾಂತಗಳೆರಡನ್ನೂ ಓದೋಕ್ಕೆ ಶುರು ಮಾಡಿದ್ದೆ. ಅಮ್ಮ ಕೂಡಾ ಸಾಮಾನ್ಯದ ಓದು ಓದಿಕೊಂಡ ಹೆಣ್ಣು ಮಗಳಲ್ಲ. ಪ್ರೇಮ್ ಚಂದ್ ರ ಅಷ್ಟೂ ಕಥೇಗಳು ಆಕೆಗೆ ಓದು ಗೊತ್ತಿದ್ದವು. ಹರಿವಂಶರಾಯ್ ಬಚ್ಚನ್ ರ ಕಥೆಗಳು ಬಾಯಿ ಪಾಠ ಎಲ್ಲಕ್ಕಿಂತ ಹೆಚ್ಚಾಗಿ ಅಮ್ಮ, ಬೆಳಗಿನ ಜಾವಕ್ಕೆದ್ದು ಗದುಗಿನ ನಾರಾಯಣಪ್ಪರ ಮಹಾಭಾರತವನ್ನು ಅತ್ಯಂತ ಸುಶ್ರಾವ್ಯವಾಗಿ ಗಮಕದಲ್ಲಿ ಹಾಡಿಕೊಳ್ಳುತ್ತಿದ್ದಳು. ಆಕೆಗೆ ಕವಿತೆ ಮತ್ತು ಗಧ್ಯ ಎರಡೂ ಒಲಿದಿದ್ದವು. ವೈದವ್ಯ, ಖಾಯಿಲೆ, ಬಡತನ, ಸಾಲ ಮತ್ತು ವಂಚನೆಗಳು (ಅಫ್ ಕೋರ್ಸ್, ಒಂದು ಹಂತದ ತನಕ ನಾನೂ!) ಆಕೆಯನ್ನು ಆ ಪರಿ ತಿಂದು ಹಾಕದೇ ಹೋಗಿದ್ದುದ್ದರೆ ಅಮ್ಮ ತುಂಬಾ ಚೆನ್ನಾಗಿಯೇ ಬರೆಯುತ್ತಿದ್ದಳೇನೋ? ಆದರೆ ಸಾವಿತ ಚಿತ್ರ ಮಸಿ ನುಂಗಿತು ಅನ್ನೋ ಹಾಗೆ, ಅಮ್ಮನಿಗೆ ೪೯ ನೇ ವಯಸ್ಸಿಗೆ ಪೆರಾಲಿಸಿಸ್ ಸ್ಟ್ರೋಕ್ ಆಗಿಹೋಯಿತು. ಅರ್ಧ ದೇಹ ಸತ್ತುಹೋಯಿತು. ಹಾಡು ಗಂಟಲಲ್ಲೇ ಸತ್ತುವು. ಕಣ್ಣು ಮಂಜು ಮಂಜು. ಒಂದು ಕೈ ಮತ್ತು ಕಾಲು ಸ್ವಾದೀನ ಕಳೆದುಕೊಂಡವು. ಚೈತನ್ಯದ ಚಿಲುಮೆಯಂತಿದ್ದ, ದಿನವಿಡೀ ದುಡಿಯುತ್ತಿದ್ದ, ಓದುತ್ತಿದ್ದ, ಕಿಲೋಮೀಟರುಗಟ್ಟಲೆ ನಡೆದುಹೋಗಿ ದುಡಿದು ಬರುತ್ತಿದ್ದ ಅಂತ ಚಂದದ ಹೆಣ್ಣು ಮಗಳು, ನಿಶ್ಚಲವಾಗಿಬಿಟ್ಟಳು. ಕಣ್ಣು ಸದಾ ಸೂರಿನಲ್ಲಿ ಸಿಕ್ಕುಕೊಂಡಿರುತ್ತಿದ್ದವು. ಕೆನ್ನೆ ಮೇಲೆ ಇಂಗದ ನೀರಿನ ಚಾರೆ. ಆ ದಿನಗಳಲ್ಲಿ ಅಮ್ಮನನ್ನು ಮತ್ತೆ ಮತ್ತೆ ನಾರ್ಮಲ್ ಸ್ಥಿತಿಗೆ ತರುವುದಕ್ಕೆ ನಾನು ಲಲಿತ ಪಟ್ಟ ಶ್ರಮವಿದೆಯಲ್ಲಾ? ಅದೇ ಒಂದು ಕೆಲಸ ಇವತ್ತಿಗೂ ನಮ್ಮ ಮನೆಯನ್ನು ತಣ್ಣಗಿಟ್ಟಿರುವುದು ಅನಿಸುತ್ತದೆ. ಮುಂಚೆ ಓದಿದ್ದೆಲ್ಲಾ ಅಮ್ಮನಿಗೆ ಮರೆತು ಹೋದಂತಾಗಿಬಿಟ್ಟಿತು. ನಾನು ಹಿಂದಿ ಮತ್ತು ಕನ್ನಡ ಕಾದಂಬರಿಗಳನ್ನ ಲೈಬ್ರೆರಿಯಿಂದ ತಂದಿಟ್ಟೆ. ಒಂದೊಂದನ್ನೇ ಎತ್ತಿಕೊಂಡು ಸಣ್ಣದನಿಯಲ್ಲಿ ಅಮ್ಮನಿಗಷ್ಟೇ ಕೇಳಿಸುವ ಹಾಗೆ, ಮಂಚದ ಪಕ್ಕದಲ್ಲಿ ಕುಳಿತು ಓದತೊಡಗಿದಳು. ಶೇಷ ಪ್ರಶ್ನೆ, ದೇವದಾಸ್, ಪ್ರೇಮಚಂದ್ ರ ಕಥೆಗಳು ಎಲ್ಲವೂ ಅರ್ದ ಶತಮಾನದಷ್ಟು ಹಳೆಯ ಹಿಂದಿ ಸಾಹಿತ್ಯದ ಮಹಾನ್ ಕೃತಿಗಳೇ! ಮದ್ಯೆ ಇಬ್ಬರೂ ಊಟಕ್ಕೆ ಎದ್ದುಬರುತ್ತಿದ್ದರು. ಆಗಲೂ ಕಾದಂಬರಿಯದ್ದೇ ಚರ್ಚೆ ಒಂದು ಹೊಚ್ಚ ಹೊಸ ಕಾದಂಬರಿಯನ್ನು ಈಗಷ್ಠೆ ಓದಿ ಮುಗಿಸಿ ಎದ್ದು ಬಂದಿದ್ದಾಳೇನೋ ಎಂಬಂತೆ ಅಮ್ಮ ಅದರ ಬಗ್ಗೆ ಚರ್ಚೆ ಆರಂಭಿಸುತ್ತಿದ್ದಳು. “ಆ ಪಾತ್ರ ಎಷ್ಟು ಚಂದ ಅಲ್ವ ಲಲಿತಾ? ಮುಂದೆ ಏನಾಗುತ್ತದೋ ಏನೋ? ಅವರಿಬ್ಬರದೂ ಮದ್ವೆ ಆಗುತ್ತ?” ಹೀಗೆ ಚಿಕ್ಕ ಹುಡುಗಿಯಂತೆ ಪ್ರಶ್ನೆ ಕೇಳುತ್ತಿದ್ದಳು. ಅಮ್ಮ ಹಾಗೆ ಬೇಕಂತ ಮಾಡುತ್ತಿದ್ದಳೋ? ಅಥವಾ ನಿಜಕ್ಕೂ ತಾನೂ ಓದಿದ್ದೆಲ್ಲಾ ಮರೆತು ಹೋಗಿರುತ್ತಿದ್ದಳೋ? ಗೊತ್ತಿಲ್ಲ. ಆಕೆಯಲ್ಲೊಂದು ಸಂಭ್ರಮವಂತೂ ಇರುತ್ತಿತ್ತು. ಓದಿ ಹೇಳುವ ನಮ್ಮ ಸಂಭ್ರಮವನ್ನು ಆಕೆ ಹಾಗೆ ಎನ್ ಕರೇಜ್ ಮಾಡುತ್ತಿರ ಬಹುದಾ ಅಂತ ಇವತ್ತಿಗೂ ನನಗೊಂದು ಅನುಮಾನವಿದೆ. ಇಲ್ಲದೇ ಹೋಗಿದ್ದರೆ, ಯಾವತ್ತೋ ಓದಿ ಮುಗಿಸಿದ ಕಾದಂಬರಿಗಳನ್ನು ಅಮ್ಮ ಅಷ್ಟೆಲ್ಲಾ ಸಂಭ್ರಮ ಪಟ್ಟುಕೊಂಡು ಕೇಳಲು ಸಾಧ್ಯವಿತ್ತಾ?

ನನ್ನ ಮದುವೆಯ ವಿಷಯಕ್ಕೆ ಬಂದಾಗ, ನನ್ನಲ್ಲೊಂದು ಅಗಾಧವಾದ ಸೆನ್ಸ್ ಆಫ್ ಸ್ಯಾಟಿಸಿಫ್ಯಾಕ್ಷನ್ ತಂದಿಡುವುದೇ ಈ ಸಂಗತಿ. ನಾನು ಲಲಿತಾಳ ಹೊರತಾಗಿ ಬೇರೆ ಯಾರನ್ನಾದರೂ ಮದುವೆಯಾಗಿದ್ದಿದ್ದರೆ ಹೇಗಿರುತ್ತಿದ್ದೆ? ಅದನ್ನು ಊಹಿಸುವುದೇ ತಪ್ಪು. ಆದರೆ ಲಲಿತೆಯನ್ನು ಮದುವೆಯಾಗದೇ ಇದ್ದಿದ್ದರೆ ಮಾತ್ರ ಖಂಡಿಯ ಹೀಗಿರುತ್ತಿರಲಿಲ್ಲ. ಅವಳಿಗೊಂದು ಜವಾಬ್ದಾರಿ ಮೊದಲ ದಿನದಿಂದಲೂ ಇದೆ; ಇವತ್ತಿಗೂ! ಅದರ ಸಾರಾಂಶವಿಷ್ಠೆ; ರವಿ ಚೆನ್ನಾಗಿ, ನೆಮ್ಮದಿಯಾಗಿ, ಸಂತೋಷವಾಗಿ ಇರಬೇಕು! ಈ ಇಪ್ಪತ್ತೈದು ವರ್ಷಗಳ ಪೈಕಿ ಎಷ್ಟೋ ಸಲ ನಾನು ಚೆನ್ನಾಗಿಲ್ಲ, ನೆಮ್ಮದಿಯಾಗಿಲ್ಲ, ಸಂತೋಷವಾಗಿಲ್ಲ, ಅಂದರೆ – ನಾನು ಕಾರಣವೇ ಹೊರತು ಲಲಿತೆ ಕಾರಣವಲ್ಲ. ಹೀಗಾಗಿ ನಮ್ಮಿಬ್ಬರ ಮಧ್ಯೆ ಮಾತಿಡಿಕೊಳ್ಳದೇನೆ ಕೆಲವು ಒಪ್ಪಂದಗಳು, ಕರಾರುಗಳು ಆಗಿಹೋಗಿದ್ದವು. ಆ ಪೈಕಿ ಮುಖ್ಯವಾದ ಒಂದು ಕರಾರು ಏನೆಂದರೆ, ನಾವು ಬದುಕಿರುವಷ್ಟು ದಿನ ಅಮ್ಮ ಬದುಕಿರುವುದಿಲ್ಲವಾದ್ದರಿಂದ ಅಮ್ಮನನ್ನು ಬದುಕಿರುವಷ್ಟು ದಿನ ನಾವು ಚೆನ್ನಾಗಿ ನೋಡಿಕೊಳ್ಳಬೇಕು. ಅಕ್ಷರಶಃ ಹಾಗೇ ನೋಡಿಕೊಂಡಳು ಲಲಿತೆ. ನಿಜ ಹೇಳಬೇಕೆಂದರೆ, ಅವಳನ್ನು ಮದುವೆಯಾದಾಗ ಅಸಲಿಗೆ ನಾನೆಷ್ಟು ದಿನ ಬದುಕಿರುತ್ತೇನೋ ಎಂಬ ಆತಂಕ ನನಗಿತ್ತು. ಬಳ್ಳಾರಿಯ ದುಷ್ಠ ರಾಜಕಾರಣ, ನನಗಿದ್ದ ದುರಭ್ಯಾಸಗಳು, ಪದೇ ಪದೇ ಆವರಿಸಿಕೊಳ್ಳುತ್ತಿದ್ದ ಡಿಪ್ರೆಷನ್, ನಿರುದ್ಯೋಗ ಈ ಪೈಕಿ ಯಾವುದು ನನ್ನನ್ನು ಕೊಲ್ಲುತ್ತದೋ ಅಂತ ನನಗೆ ಅನ್ನಿಸುತ್ತಿತ್ತು. “ಹಾಗೆ ಸಾಯುವುದೇ ಆದರೆ ಒಟ್ಟಿಗೆ ಸಾಯೋಣ ಸುಮ್ಮನಿರು!” ನನ್ನೊಂದಿಗೆ ಬದುಕಲಾರಂಭಿಸಿದಳು ಲಲಿತೆ.

ಆ ಜೀವನೋತ್ಸಾಹವನ್ನೇ ನಾವು ಅಮ್ಮನಿಗಿಷ್ಟು ಕೊಟ್ಟೆವು. ನಮ್ಮ ಮಕ್ಕಳು ಆಕೆಗೆ ಅಧ್ಬುತ ಸಂತಸ ಕೊಡುತ್ತಾ ಬೆಳೆದರು. ಅಮ್ಮನಿಗೆ ಸಂತೋಷವಾಗಲಿ ಅಂತ, ನಾನು ಆ ದಿನಗಳಲ್ಲಿ ಓದಿಕೊಳ್ಳುತ್ತಿದ್ದ ಅಷ್ಟೂ ತೆಲುಗು ಕಾವ್ಯ ತಂದು ಆಕೆಗೆ ಓದಿ ಹೇಳುತ್ತಿದ್ದೆ. ನನ್ನ ತಲೆಮಾರಿನ ಓದುಗರಲ್ಲಿ ಕ್ರಾಂತಿಕಿಡಿ ಮೂಡಿಸುತ್ತಿದ್ದ ತೆಲುಗು ಕವಿ ಶ್ರೀ ಅಮ್ಮನಿಗೆ ಅದೆಷ್ಟು ಇಷ್ಟವಾಗುತ್ತಿದ್ದ ಅಂದರೆ, ಆತನ ಕವಿತೆಗಳನ್ನು ಅಮ್ಮ ಮತ್ತೆ ಮತ್ತೆ ನನ್ನಿಂದ ಓದಿಸಿಕೊಂಡು ಕೇಳಿ ಆವೇಶಕ್ಕೆ ಬಿದ್ದು ಕಣ್ಣೀರಾಗುತ್ತಿದ್ದಳು. ಗೆಳೆಯ ದಲಿತ ಕವಿ ಸಿದ್ದಲಿಂಗಯ್ಯ “ಹೊಲೆ ಮಾದಿಗರ ಹಾಡು” ಆಕೆಗೆ ತುಂಬಾ ಇಷ್ಟವಾಗುತ್ತಿತ್ತು. “ದಲಿತರ ಹುಡುಗ ಅಂತೀಯಾ, ಎಷ್ಟು ಚೆನ್ನಾಗಿ ಬರೆದಿದ್ದಾನೆ. ಬ್ರಾಹ್ಮಣರ ಕೇರಿಯಲ್ಲಿ ಕಿವಿಗೆ ಬೀಳೋ ಕೊಳಕುಮಾತು ಅಪಹಾಸ್ಯದ ಮಾತು, ಹೊಟ್ಟೆಕಿಚ್ಚಿನ ಮಾತು ಇವಕ್ಕೆಲ್ಲಾ ಹೋಲಿಸಿದರೆ ನಿನ್ನ ಫ್ರೆಂಡು ಸಿದ್ದಲಿಂಗಯ್ಯ ಎಷ್ಠೋ ದೊಡ್ಡಮನುಷ್ಯ ಅನಿಸುತ್ತಾನೆ. ಜಾತಿ ಅನ್ನೋದು ಸುಳ್ಳೂ ಕಣೋ ರವಿ, ಈ ಜಗತ್ತಿನಲ್ಲಿ ಇರೋದು ಎರಡೇ ಜಾತಿ, ಅದೃಷ್ಠವಂತರ ಜಾತಿ, ದುರಾದೃಷ್ಟವಂತರ ಜಾತಿ…” ಅನ್ನುತ್ತಿದ್ದಳು. At least  ಆಕೆಯ ಕೊನೆಗಾಲದಲ್ಲಿ ನಾವು ಆಕೆಯ ಜಾತಿ ಬದಲಿಸಿ “ಅದೃಷ್ಟವಂತರ” ಜಾತಿಗೆ ಸೇರಿಸಿದ್ದೆವು. ಅಷ್ಟರ ಮಟ್ಟಿಗೆ ನಾವು ಅದೃಷ್ಟವಂತರು. ಇಂತ ಅನುಭವಗಳು, ನೆನಪುಗಳು ಒಂದು ಪುಸ್ತಕಕ್ಕಾಗುವಷ್ಟಿದೆ ನನ್ನಲ್ಲಿ. ಬಹುಷಃ ನನ್ನ ಮುಪ್ಪಿನ ಕಾಲಕ್ಕೆ ಅವೆಲ್ಲವೂ ಬುತ್ತಿಗಳೇ. ಇವತ್ತೇಕೋ ಪತ್ರಿಕೆಗೆ ವಿಧವೆಯರ ಬಗ್ಗೆ ಬರೆಯಬೇಕು ಅಂತ ಅಂದುಕೊಳ್ಳೂತ್ತಿರುವಾಗ ನಾನು ಕಂಡ ಮೊದಲ ವಿಧವೆ ನನ್ನ ಅಮ್ಮ ನೆನಪಾಗಿ ಇದನ್ನೆಲ್ಲಾ ಬರೆದೆ. ನಾನು ನನಗಿಂತ ಚಿಕ್ಕವರಿಗೆ ಅದರಲ್ಲೂ ನೂತನ ದಂಪತಿಗಳಿಗೆ ಸದಾ ಹೇಳುವಿದು ಒಂದೇ ಮಾತು; ಅಪ್ಪ-ಅಮ್ಮ ನಾವು ಬದುಕಿರುವಷ್ಟು ದಿನ ಬದುಕಿರುವುದಿಲ್ಲ. ಅವರಿದ್ದಷ್ಟೂ ದಿನ ಚೆನ್ನಾಗಿ ನೋಡಿಕೊಳ್ಳಿ ಅಮೇಲೆ ಶ್ರಾದ್ದ ಮಾಡಿ, ಪಿಂಡ ಇಟ್ಟು, ಕಾಗೆಗೋಸ್ಕರ ಕಾಯುತ್ತಾ ಕೂಡುವುದರಲ್ಲಿ ಅರ್ಥವಿಲ್ಲ. ನಾನು ಅಮ್ಮನ ಕೊನೆಯ ದಿನಗಳಲ್ಲಿ ಆಕೆಯೊಂದಿಗೆ ಸಂತೋಷದಿಂದ ಇದ್ದೆ ಎಂಬ ಕಾರಣಕ್ಕೋ ಏನೋ ಅಮ್ಮನ ಶ್ರಾದ್ದ ಮಾಡದಿದ್ದರೂ ನಾನು guilt ನ ಫೀಲ್ ಮಾಡುವಿದಿಲ್ಲ. ಅಮ್ಮ ಕೂಡ “ಕಾಗೆ ಬಂದಿತ್ತೇನೋ”? ಅಂತ ಯಾವತ್ತೂ ಕೇಳಿಲ್ಲ.

ಆಕೆ ಬದುಕಿದ್ದಾಗ ನನ್ನಲ್ಲಿ ಶ್ರದ್ದೆ ಇತ್ತು; ಹೀಗಾಗಿ ಈಗ ಶ್ರಾದ್ದ ಬೇಕಿಲ್ಲ.

ನಿಮ್ಮವನು.

-ಆರ್‍.ಬಿ

Advertisements

3 Responses to ಮನಸಿನ ಮಾತಿಗೆ ಮುನ್ನುಡಿ: ಓ ಮನಸೇ

 1. ಅನಿಲ್ ವಾಂಜ್ರೆ ಹೇಳುತ್ತಾರೆ:

  ಚೆನ್ನಾಗಿದೆ

 2. Ashok ಹೇಳುತ್ತಾರೆ:

  Ravi Sir,

  You have written this article really wonderful and heart touching.
  I hope this kind of article will come more on coming days.

  You have good MOM.

  Regards
  Ashok

 3. ಶೇಖರ್ ಹೇಳುತ್ತಾರೆ:

  ತುಂಬಾ ಚೆನ್ನಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: