ಕೈಬಿಟ್ಟು ಹೋದವಳ ಹೆಜ್ಜೆಗುರುತನ್ನು ಅರಸುತ್ತಾ….

ಬಿರು ಬೇಸಿಗೆಯ ಸಂಜೆಯಲ್ಲಿ ಆಗೊಮ್ಮೆ ಈಗೊಮ್ಮೆ ಎಂಬಂತೆ ಬೀಸುವ ತಂಗಾಳಿ, ರಾತ್ರಿಯ ನಿರ್ಮಲವಾದ ಆಕಾಶ, ಮುಂಗಾರಿನ ಮೊದಲ ಮಳೆ, ಎಂದೋ ಕೇಳಿದ್ದ ಹಳೆಯ ಸುಮಧುರವಾದ ಹಾಡು ಇವು ತರುವ ನೆನೆಪುಗಳು ಅವುಗಳಷ್ಟೇ ಮಧುರ.

ಮೌನವೆಂಬ ಪುಸ್ತಕದಿಂದ ನೆನಪಿನ ಹಾಳೆಗಳನ್ನು ತೆರೆದಾಗ ಮನಸ್ಸು ನಿರ್ಮಲ ಹಾಗೂ ಮತ್ತಷ್ಟು ಮೌನ. ಹೀಗೆ, ಕೆಲ ಘಟನೆಗಳು ತರುವ ನೆನೆಪುಗಳು ಹಿತವಾದರೆ, ನೋವುಂಟು ಮಾಡಿದ ನೆನೆಪುಗಳು ಕಣ್ಣನ್ನು ಒದ್ದೆ ಮಾಡುತ್ತವೆ. ಅದರಲ್ಲೂ ಪ್ರೀತಿಯನ್ನು, ಪ್ರೀತಿಸಿದ ಹುಡುಗಿಯನ್ನು ನೆನೆದ ಮನ ಹಾಗೇ ಕುಗ್ಗಿದಂತಾಗುತ್ತದೆ. ಅವಳನ್ನು ಕೇಳಬೇಕಿದ್ದ ಪ್ರಶ್ನೆಗಳು ಮತ್ತೆ ಮತ್ತೆ ನಮಗೇ ಪ್ರಶ್ನೆಗಳಾಗುತ್ತವೆ. ನೆನೆಪುಗಳು ಮತ್ತಷ್ಟು ರೆಕ್ಕೆ ಬಿಚ್ಚುತ್ತವೆ..

ರವಿಬೆಳಗೆರೆಯವರ ಖಾಸ್ ಬಾತ್ ನ ಅಂಕಣದ ಬಗ್ಗೆ ನಾನೀಗಾಗಲೇ ಹೇಳಿರುವ ಹಾಗೆ ಇದು ಒಂದು ರೀತಿ ಅವರ ಆತ್ಮಕಥನವಿದ್ದ ಹಾಗೆ. ಅವರನ್ನು ಸ್ವಲ್ಪ ಮಟ್ಟಿಗಾದರೂ ಈ ಲೇಖನಗಳ ಮೂಲಕ ತಿಳಿದುಕೊಳ್ಳಬಹುದು. ಈ ಲೇಖನದ ಅಂಕಣವೊಂದರಲ್ಲಿ ಬೆಳಗೆರೆಯವರು ತಮ್ಮ ಮೊದಲ ಪ್ರೀತಿ, ತಾವು ಪ್ರೀತಿಸಿದ ನೆರಿಗೆ ಲಂಗದ ಹುಡುಗಿ, ಅವಳು ಬಿಟ್ಟು ಹೋದ ನೆನಪು, ಮಾಡಿಟ್ಟು ಹೋದ ಗಾಯ, ಇಂದಿಗೂ ಉಳಿದಿರುವ ಗಾಯದ ಗುರುತು ಇತ್ಯಾದಿಗಳನ್ನು ನಮ್ಮೊಡನೆ ಹಂಚಿಕೊಂಡಿದ್ದಾರೆ. ಈ ಅಂಕಣ ಒಂದು ನವಿರಾದ ಪ್ರೇಮ ಕಥೆಯನ್ನು ಓದಿದ ಅನುಭವ ನೀಡುತ್ತದೆ. ಹಾಯ್ ಬೆಂಗಳೂರ್‍! ನ ಸೃಷ್ಟಿ ೬೯೬ ರಲ್ಲಿ ಪ್ರಕಟವಾದ ಖಾಸ್ ಬಾತ್ ನ ಈ ಅಂಕಣವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ನಿಮಗಾಗಿ…

-ಭಾಸ್ಕರ್‍

ಬಿದ್ದ ಸಿಡಿಲಿಗೆ ನನ್ನ ಗೂಡೇ ಆಗಬೇಕಿತ್ತೇ ಅಂತ ಗಾಲಿಬ್ ಕೇಳಿದ ಹಾಗೆ!

heartbreak

ಬೆಳಿಗ್ಗೆಯೆದ್ದು ಕಿಟಕಿಯಾಚೆಗಿನ ಪ್ರಫುಲ್ಲ ಕಾಂತಿಯನ್ನು ಕಣ್ಣುಗಳಿಗೆ ಬಸಿದುಕೊಳ್ಳುವವನಂತೆ ನೋಡುತ್ತೇನೆ. ಕೈಯಲ್ಲಿ ಚಹದ ಕಪ್ಪು ಹಬೆಯಾಡುತ್ತದೆ. ಹರಸಾಹಸ ಮಾಡಿ ಸಿಗರೇಟುಗಳ ಸಂಖ್ಯೆಯನ್ನು ಹದಿನೈದಕ್ಕೆ ತಂದುಕೊಂಡಿದ್ದೇನೆ. ಇದೊಂದು ವಿಷಯದಲ್ಲಿ ನನಗೆ Will Power ಇಲ್ಲವೇ ಇಲ್ಲ ಅಂದುಕೊಂಡಿದ್ದೆ. Not bad. ಇಪ್ಪತ್ತು ವರ್ಷಗಟ್ಟಲೆ ಸೇದಿದ Wills ಈಗ ಕೆಲಸ ಮಾಡುತ್ತಿದೆ. ನನ್ನ ವಿಲ್ಲು ಗಟ್ಟಿಯಾಗಿದೆ. ಬೆಳಗಿನ ತಿಂಡಿಗೆ ಕರ್ಣ ಆಫೀಸಿಗೆ ಒಮ್ಮೊಮ್ಮೆ ಬರುತ್ತಾನೆ. ಇಬ್ಬರೂ ಶಾಲೆಯ ಬಗ್ಗೆ ಹರಟುತ್ತಾ ಇಡ್ಲಿ ತಿನ್ನುತ್ತೇವೆ. ಅಷ್ಟರಲ್ಲಿ ಉಮೇಶ ಬರುತ್ತಾನೆ, ನಿವೇದಿತಾ ಬರುತ್ತಾಳೆ, ಫೋನು ಬರತೊಡಗುತ್ತದೆ. ನನ್ನ ಏಕಾಂತ ಥಟ್ಟನೆ ಮುಗಿದು ಹೋಗುತ್ತದೆ. ಕಿಟಿಕಿಯಾಚೆಗಿನ ಅದೇ ಪ್ರಫುಲ್ಲ ಉಷಃಕಾಂತಿ ರಣಗುಡುವ ಮಾಗಿ ಬಿಸಿಲು ಅನ್ನಿಸತೊಡಗುತ್ತದೆ. ಪ್ರಕೃತಿ ಕೂಡಾ ಎಂಥ ವಂಚನೆಯ ವಿಧಾನಗಳನ್ನು ಕಂಡುಕೊಳ್ಳುತ್ತದಲ್ಲವೇ? ಈ ಬಿಸಿಲು ಇವತ್ತು ಸಾಯಂಕಾಲದ ಹೊತ್ತಿಗಿರುವುದಿಲ್ಲ. ನಿನ್ನೆಯ ಮಧ್ಯರಾತ್ರಿಯ ಮೌನ ನಾನು ಎಷ್ಟು ಪ್ರಯತ್ನ ಪಟ್ಟರೂ ಹಿಂತಿರುಗುವುದಿಲ್ಲ. ನನ್ನ ಗತಿಸಿ ಹೋದ ದಿನಗಳು?

ನನ್ನ ನೆನಪಿನಲ್ಲಿ ಆ ದಿನಗಳು ಎಷ್ಟು fresh ಆಗಿವೆ ಗೊತ್ತೆ? ಈ ಕ್ಷಣಕ್ಕೂ ಕಣ್ಣು ಮುಚ್ಚಿದರೆ ನೆರಿಗೆ ಲಂಗದ ಹುಡುಗಿಯ ಮೂಗಿನ ನತ್ತು ಫಳ್ಳೆನ್ನುತ್ತದೆ. ಸ್ವಲ್ಪ nasal ಅನ್ನಿಸುವಂತಿದ್ದ ಅವಳ ದನಿಯನ್ನು ಈಗಲೂ ನಾನು ಕೇಳಿಸಿಕೊಳ್ಳಬಲ್ಲೆ. ಆ ಮೋಸ, ಇವತ್ತಿಗೂ ಬೆನ್ನಲ್ಲಿ ಇರಿದ ಚಾಕುವಿನಂತೆ ಸರಿದು ನೆತ್ತರು ಸ್ರವಿಸುತ್ತದೆ. ಭಗವಂತಾ, ನನಗೆ ಯಾಕೆ ಹೀಗೆ ಎಲ್ಲವೂ ಇಷ್ಟು ನಿಚ್ಚಳವಾಗಿ ನೆನಪಿಗಿರುತ್ತದೆ? ನನಗೇ ಯಾಕೆ? ಬಿಡಿ, ಈ ವಯಸ್ಸಿನಲ್ಲಿ ಯಾರಾದರೂ ಎಂದೋ ಮುಗಿದು ಹೋದ ಭಗ್ನ ಪ್ರೇಮವನ್ನು ನೆನೆಸಿಕೊಂಡು ಈ ಪರಿ ಹಲುಬುತ್ತಾರಾ? ಹಾಗಂತ ನೀವು ಕೇಳಬಹುದು. ಆ ಮಾತನ್ನೆಲ್ಲ ನನ್ನ ಮನಸು ಕೇಳಬೇಕಾಗಿಲ್ಲ? ಬೆಳಿಗ್ಗೆ ಕಂಡ ಉಷಃ ಕಾಂತಿ ಬದುಕಿನುದ್ದಕ್ಕೂ ಕಣ್ಣೆದುರುಗಿರುತ್ತದೆ ಅಂತ ನಂಬಿಕೊಂಡಿದ್ದ stupidity ನನ್ನದು. ’ಅದೆಲ್ಲ ಕೇವಲ ಭ್ರಮೆಯಾಗಿತ್ತು ಬಿಡು’ ಅಂತ ಹೇಗೆ ಸ್ಲೇಟು ಒರೆಸಿ ಪಕ್ಕಕ್ಕಿಡಲಿ?

ಆಗೆಲ್ಲ ಬಳ್ಳಾರಿಯಲ್ಲಿ ಫೆಬ್ರುವರಿ ಕೊನೆಯ ಹೊತ್ತಿಗೆ ಕಡುಬೇಸಿಗೆ ಬಿಚ್ಚಿಕೊಳ್ಳುತ್ತಿತ್ತು. ಇನ್ನು ಮನೆಯ ಒಳಗೆ ಮಲಗಲು ಸಾಧ್ಯವಿಲ್ಲ ಅಂತ ಸಾಮೂಹಿಕವಾಗಿ ತೀರ್ಮಾನಿಸಿದವರಂತೆ ಜನ ಅಂಗಳಗಳಲ್ಲಿ ಜಮಖಾನೆ, ಲೇಪು ಹಾಸಿಕೊಳ್ಳಲಾರಂಬಿಸುವ ಸಮಯ. ಹಳೆಯ ಗೆಳೆಯರು ಸಿಕ್ಕರೆ ಈಗಲೂ ತಮಾಷೆ ಮಾಡುತ್ತಿರುತ್ತೇವೆ: ಬಳ್ಳಾರಿಯ ಅರ್ಧ ಜನಸಂಖ್ಯೆ ಅಂಗಳಗಳಲ್ಲಿಯೇ ಸೃಷ್ಟಿಯಾಗಿದೆ ಅಂತ. ಸೆಖೆ, ಧಗೆ ತಾಳಲಾರದೇ ಹುಡುಗಿಯರೂ ಬಂದು ಅಂಗಳದಲ್ಲಿ ಮಲಗುತ್ತಿದ್ದರು. ಬಯಲು ಸೀಮೆಯ ಹುಣ್ಣಿಮೆಗಳಂತೂ ವಿವರಿಸಲಾಗದಷ್ಟು ಅಧ್ಬುತ. ಎಲ್ಲೋ ಮಧ್ಯರಾತ್ರಿಯ ವೇಳೆಗೆ ತಿಳಿಗಾಳಿ ಬೀಸಿದರೆ ಬೆವೆತ ಕತ್ತು, ಎದೆ, ಜಘನ, ಬೆನ್ನುಗಳಿಗೆ ಪರಮ ಹಿತ. ಬೆಳಿಗ್ಗೆ ಎಚ್ಚರವಾಗುವ ಹೊತ್ತಿಗೆ ಅಂಗಳದ ಬೇವಿನ ಮರದಿಂದ ಘಮ್ಮನೆ ಬೆವಿನ ಹೂವು ಹಾಸಿಗೆಯ ಮೇಲೆಲ್ಲಾ ಉದುರಿ, ’ಅವನು ಕನಸಿಗೆ ಬಂದಿದ್ದನಾ?’ ಅಂತ ನೆನಪು ಮಾಡಿಕೊಳ್ಳುತ್ತ ಚಾದರ ಮಡಿಸುವ ಹುಡುಗಿ.

ಅಂಥ ದಿನಗಳಲ್ಲಿ ನಾನು ಮನೆಯ ಸೂರು ಹತ್ತಿ ಕೂಡುತ್ತಿದ್ದೆ. ನನಗೆ ತಿಳಿದ ಮಟ್ಟಿಗೆ ನಾನೇ ವೈರಿಂಗ್ ಮಾಡಿಕೊಂಡು ಅದಕ್ಕೊಂದು ಬಲ್ಬ್ ಇಳಿಬಿಟ್ಟುಕೊಳ್ಳುತ್ತಿದ್ದೆ. ಅದರ ಬೆಳಕಿನಲ್ಲಿ ಅರ್ಧ ರಾತ್ರಿಯ ತನಕ ಓದುತ್ತಿದ್ದೆ. ಅಮ್ಮ ಫ್ಲಾಸ್ಕಿನಲ್ಲಿ ಚಹ ಮಾಡಿಡುತ್ತಿದ್ದಳು. ಫ್ಲಾಸ್ಕಿನ ಬಿರುಡೆಯ ಮೇಲೆ ಅವಳೇ ಐವತ್ತು ಪೈಸೆ ಇಟ್ಟಿರುತ್ತಿದ್ದಳು: ಅದು ಬೀಡಿ ಖರ್ಚಿಗೆ. ಅದಿನ್ನೆಂಥ ಬಾಂಧವ್ಯವಿತ್ತೋ ನನ್ನ ಆಕೆಯ ಮಧ್ಯೆ? ಅಮ್ಮನಿಗೆ ನಾನು ಅಂಗೈಯ ಗೆರೆಯಂತೆ ಅರ್ಥವಾಗುತ್ತಿದ್ದೆ: ಆಕೆ ನನಗೆ ಕಣ್ಣ ಮುಂದಿನ ಚಿತ್ರದಂತೆ. ಕೆಲವು ಸಲ ಯಾವುದೋ ಚಿಕ್ಕ ಜೋಕಿಗೆ, ತಮಾಷೆಗೆ ಮಕ್ಕಳು ಗೋಡೆಗೊರಗಿ ಕೂತು ’ಕ್ಕಿ ಕ್ಕಿ ಕ್ಕಿ’ ಅಂತ ನಗುತ್ತಾರಲ್ಲಾ? ಹಾಗೆ ನಗುತ್ತಿದ್ದೆವು. ’ಏನು ನಿಮ್ದು ಹುಡುಗಾಟ’ ಅಂತ ದೊಡ್ಡಪ್ಪ ಬಯ್ಯುತ್ತಿದ್ದರು.

ಮಾರ್ಚ್ ಹತ್ತಿರವಾದಂತೆಲ್ಲಾ ಸೆಖೆಯೊಂದಿಗೆ ಪರೀಕ್ಷೆಯ ಧಗೆ. ನಾನು ಎಸೆಸೆಲ್ಸಿಯ ನಂತರ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ದಿಗಿಲು ಬಿದ್ದವನೇ ಅಲ್ಲ. ಒಮ್ಮೆ ಫೇಲಾಗಿ, ಎರಡನೇ ಬಾರಿಗೆ ಎಸೆಸೆಲ್ಸಿ ಪಾಸಾಗುವುದರೊಂದಿಗೆ ಗಣಿತವೆಂಬ ಪೀಡೆ ನನ್ನ ಬದುಕಿನಿಂದ ಶಾಶ್ವತವಾಗಿ ತೊಲಗಿತು. ಈಗಲೂ ನನಗೆ ತೀರ ಎಲಿಮೆಂಟರಿ ಮಟ್ಟದ ಮ್ಯಾಥಮೆಟಿಕ್ಸ್ ಅರ್ಥವಾಗುವುದಿಲ್ಲ. ಒಂದು ಕಣ್ಣಂದಾಜಿನಲ್ಲಿ ಈ ವ್ಯಾಪಾರ ಲಾಭದಾಯಕವಾಗಿದೆಯೋ ಇಲ್ಲವೋ ಅಂತ ಹೇಳಬಲ್ಲೆನೇ ಹೊರತು, ಎದುರಿಗೆ ಕೂತು ಯಾರಾದರೂ ಕರಾರುವಕ್ಕಾಗಿ ಲೆಕ್ಕ ಕೇಳಿದರೆ: ಸತ್ತೆ. ಆದರೆ ಪಿ.ಯು.ಸಿ ಮುಗಿಸುವ ಹೊತ್ತಿಗೆ ನನಗೆ ಮಾತು ಮತ್ತು ಬರವಣಿಗೆ ಎರಡೂ ರೂಡಿಯಾಗತೊಡಗಿದ್ದವು. ಪರೀಕ್ಷೆಗಳ ಬಗ್ಗೆ ಭಯ ಹೊರಟುಹೋಗಿತ್ತು. ಆದರೆ ಕೊಂಚವಾದರೂ ಓದಿಕೊಳ್ಳಬೇಕಲ್ಲ? ಓದಲು ಕೂಡುವುದೇ ಕಷ್ಟವಾಗುತ್ತಿತ್ತು. ಪುಸ್ತಕ ಮಡಚಿಟ್ಟು ಪತ್ರ ಬರೆಯ ತೊಡಗುತ್ತಿದ್ದೆ. ಫಿವರಿಷ್ ಆದ ಆ ಪತ್ರಗಳು ಅವಳಿಗೆ ಆ ವಯಸ್ಸಿನಲ್ಲಿ ಎಷ್ಟರಮಟ್ಟಿಗೆ ಅರ್ಥವಾಗುತ್ತಿದ್ದವೋ? ನನ್ನಲ್ಲಿ ಆಗಷ್ಟೆ ಕತೆಗಾರನೊಬ್ಬ ಅರಳುತ್ತಿದ್ದ. ಬಹುಶಃ ನನ್ನ ಅತ್ಯುತ್ತಮ ಕಥೇಗಳು ಅವಳಿಗೆ ಬರೆದ ಪತ್ರಗಳಲ್ಲಿ ಅಲೆದು ಕಳೆದು ಹೋದವೇನೋ? ಒಮ್ಮೊಮ್ಮೆ ನಾನು ಬರೆದುದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂಬುದೇ ಅವಳಿಗೆ ಗೊತ್ತಾಗುತ್ತಿರಲಿಲ್ಲ. ’ಹೋಗಪಾ…ನೀನು ಏನೇನರ ಬರೀತೀದಿ..’ ಅನ್ನುತ್ತಿದ್ದಳು. ಇಬ್ಬರಿಗೂ ತೆಲುಗು ಬರುತ್ತಿತ್ತಾದ್ದರಿಂದ ಪತ್ರಗಳ ಮದ್ಯದಲ್ಲಿ ತೆಲುಗು ಹಾಡುಗಳಿರುತ್ತಿದ್ದವು. ಅವಳಿಗೆ ಅದ್ಯಾವ ಮೇಷ್ಟ್ರು ಕೈ ಹಿಡಿದು ಕನ್ನಡ ಕಲಿಸಿದ್ದನೋ, ಭಗವಂತ ಬಲ್ಲ. ಸರಳವಾಗಿ ಒಂದು ಸೆಂಟೆನ್ಸ್ ತಪ್ಪಿಲ್ಲದೇ ಬರೆಯುವುದು ಬರುತ್ತಿರಲಿಲ್ಲ. ನಾನೇ ತಿದ್ದಿಕೊಂಡು ಓದಬೇಕು. ಮಾತಾಡು ಅಂದರೆ ಮಾತ್ರ ಓತಪ್ರೋತ ಮಾತಾಡುತ್ತಿದ್ದಳು. ವೈನಾಗಿ ಹಾಡುತ್ತಿದ್ದಳು. ಈ ಭಾವಗೀತೆಗಳೆಲ್ಲ ಆಗ ನಮಗೆ ಗೊತ್ತೇ ಇರಲಿಲ್ಲ. ಕಾವ್ಯ ಅಂತ ನಾನು ಓದಿದ್ದೇ ಮೊದಲು ಬಿ.ಆರ್‍.ಲಕ್ಷ್ಮಣರಾಯರ ಕವಿತೆ: ಗೋಪಿ ಮತ್ತು ಗಾಂಡಲೀನಾ. ಭಾವಗೀತೆ ಅಂತ ಕೇಳಿದ್ದು ಪ್ರೊ. ನಿಸ್ಸಾರ್‍ ಅಹ್ಮದ್ ರ ’ನಿತ್ಯೋತ್ಸವ’. ಯಾರದೋ ಮನೆಯ ಟೇಪ್ ರೆಕಾರ್ಡರು ತಂದು ಕೆಸೆಟ್ ಹಾಕಿ ಎದುರಿಗೆ ಕೂಡಿಸಿಕೊಂಡು ಕೇಳಿಸಿದ್ದಕ್ಕೆ,

“ನೀನೇನೇ ಹೇಳು, ಎರಡು ಕನಸು ಪಿಕ್ಚರಿನ ಹಾಡೇ ಛಂದ!” ಅಂದುಬಿಟ್ಟಿದ್ದಳು.

“ಆನೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ…” ಉಹುಂ, ಅವಳಿಗೆ ಅದನ್ನೆಲ್ಲಾ ಅರ್ಥ ಮಾಡಿಸುವುದು ಆವತ್ತಿನ ಮಟ್ಟಿಗಂತೂ ಸಾಧ್ಯವಿರಲಿಲ್ಲ. ಸ್ವಲ್ಪ ದೊಡ್ಡವರ್‍ಯಾರಾದರೂ ಎದುರಿಗೆ ಹಾಡು ಅಂದುಬಿಟ್ಟರೆ ಸಾಕು,

’ಮಂಗಳದಾ ಈ ಸುದಿನ ಮಧುರವಾಗಲೀ..’ ಅಂತ ರಾಗ ಹಚ್ಚಿ ಬಿಡುತ್ತಿದ್ದಳು. ದೊಡ್ಡವರ ಮುಂದೆ ಪ್ರೀತಿ ಪ್ರೇಮದ ಎಲಿಮೆಂಟು ಗೌಣವಾಗಿರಬೇಕು ಎಂಬ ವಾದ ಅವಳದು. ಅವಳಿದ್ದುದೇ ಹಾಗೆ, ಲೋಕಾರೂಢಿಯಂತೆ. ಹಾಗಿಲ್ಲದಿದ್ದವನು ನಾನೇ. ಅವಳಿಗೆ ಎಲ್ಲವೂ ವ್ಯವಹಾರವೇ. ನಿನ್ನ ಪ್ರೀತಿ, ಭಾವುಕತೆ, ಹಲುಬಾಟಿ, ತಿಕ್ಕಲು, ಕನಸು, ಕಲ್ಪನೆ, ಬರಹ, ಸಂಗೀತ, ಅಮ್ಮ, ರಿಸ್ಕು, ಕಂಫರ್ಟು, ಕನವರಿಕೆ ಇದನ್ನೆಲ್ಲಾ ತಗೊಂಡು ಏನು ಮಾಡೋದು? ಬಿಟ್ಟು ಹೋಗುವಾಗ ಹಾಗಂತಲೇ ಮಾತನಾಡಿ ಎದ್ದು ಹೋದಳು. ನನ್ನ ಮಾತುಗಳೆಲ್ಲ ಅವಳಿಗೆ ಯಾವುದೋ ಪ್ರಪಂಚದ ಮಾತುಗಳಂತೆ ಭಾಸವಾಗುತ್ತಿದ್ದಿರಬೇಕು. ಹಾಗಂತ ಹುಡುಗಿ ದುಷ್ಟೆಯಲ್ಲ. ನಿರ್ಭಾವುಕಳೂ ಅಲ್ಲ. ನನ್ನ ಚಿಕ್ಕ ನೋವಿಗೂ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಸಿಟ್ಟು ಮಾಡಿಕೊಂಡರೆ ರಮಿಸುತ್ತಿದ್ದಳು. ಅವಳಲ್ಲಿ ತನ್ನದೇ ಆದ ಗಾವಂಟಿ ಹ್ಯೂಮರ್‍ ಇತ್ತು. ಆದರೆ ಅದೆಲ್ಲವನ್ನೂ ಮೀರಿ ಅವಳು ನಿಷ್ಟುರವಾಗಿ ಯೋಚಿಸಿದ್ದಿರಬೇಕು. ’ಇದೆಲ್ಲಾ ಸರಿ ಕಣಯ್ಯಾ, ನೀನು ದುಡ್ಡು ಅಂತ ದುಡಿಯೋದು ಯಾವಾಗ? ನಾನು ಸುಖ ಪಡೋದು ಯಾವಾಗ? ಇಷ್ಟಕ್ಕೂ ಹೆಚ್ಚೆಂದರೆ ಎಷ್ಟು ಮಹಾ ದುಡಿದೀಯ? ಅದೇ ಮೂರು ಸಾವಿರ ರುಪಾಯಿ ತಾನೆ? ಆದರೆ ಮಹಾ ಒಂದು ಕಾಲೇಜಿನಲ್ಲಿ ಲೆಕ್ಚರರು. ಅಷ್ಟಕ್ಕೋಸ್ಕರ ನನ್ನ ಬಂಗಾರದ ಭವಿಷ್ಯ ಕಳೆದುಕೊಳ್ಳಲಾ? ಎಂಬ ಅರ್ಥದಲ್ಲಿ ಮಾತನಾಡಿ ಎದುರಿಗಿದ್ದ ಕಾಫಿಯನ್ನು ಎಡಗೈಯಲ್ಲೂ ಮುಟ್ಟದೆ ಎದ್ದು ಹೋಗಿ ಬಿಟ್ಟಿದ್ದಳು.

ಅಲ್ಲಿಗೂ ನಾನು ದುಂಬಾಲು ಬಿದ್ದೆ. ಅವರಿವರಿಂದ ಹೇಳಿಸಿದೆ. ಉಹುಂ, ಗಟ್ಟಿಗಿತ್ತಿಯ ನಿರ್ಣಯಗಳು ಬದಲಾಗಲಿಲ್ಲ. ಬದಲಾಗಿದುದೆಲ್ಲಾ ಕೇವಲ ನನ್ನ ಮತ್ತು ಅಮ್ಮನ ಪ್ರಪಂಚ. ಒಂದರ್ಥದಲ್ಲಿ ನಾವು ಮುಳುಗಿಯೇ ಹೋದೆವು. ’ಬಿದ್ದ ಸಿಡಿಲಿಗೆ ನನ್ನ ಪುಟ್ಟ ಗೂಡೇ ಆಗಬೇಕಿತ್ತಾ?” ಅಂತ ಗಾಲಿಬ್ ಕೇಳುತ್ತಾನಲ್ಲಾ ? ಹಾಗೆ ಸಿಡಿಲು ಬಿದ್ದ ಹಕ್ಕಿಯ ಗೂಡಿನಂತಾಗಿಹೋಯಿತು ನಮ್ಮಿಬ್ಬರ ಬದುಕು. ಯಾರಿಗೆ ಏನಂತ ಸಮಾಧಾನ ಹೇಳಿಕೊಳ್ಳುವುದು? ’ಮನಸು ಬದಲಿಸಿಯಾಳೇನೋ? ಅಷ್ಟು ವರ್ಷದ ಸಂಬಂಧ ಹೇಗೆ ಮುರಿದುಕೊಂಡಾಳು? ನೋಡೋಣ ಇರು’ ಅನ್ನುತ್ತಿದ್ದ ಅಮ್ಮ, ಅವಳ ಮದುವೆಯಾಯಿತಂತೆ ಅಂತ ಸುದ್ದಿ ಬಂದ ದಿನ ನೆಲದಿಂದ ಮೇಲೇಳಲೇ ಇಲ್ಲ. ನಾನು ಅನೇಕ ದಿನ ಮನುಷ್ಯನಾಗಿರಲಿಲ್ಲ. ಆದರೆ ಬದುಕು ಹೇಗೆ ಚಿಗುರೊಡೆಯುತ್ತದೋ ನೋಡಿ?

ಸದ್ದು ಸತ್ತು ಹೋಗಿದ್ದ ಮನೆಯಲ್ಲಿ ಮತ್ತೆ ನಗುವಾಗಿ ಕೇಳಿಸಿದವಳು ಲಲಿತೆ. ನನ್ನ ಕೋಳೆಯಲ್ಲಿ ಗಾಂಜಾ ವಾಸನೆಯಿರುತ್ತಿತ್ತು. ಸಂಜೆ ಎದುರಿಗೆ ಸಿಕ್ಕರೆ ಸಾರಾಯಿ ಕಮಟು. ಒಂದು ಸೈಕಲ್ಲು, ಹಳೆಯ ಮಾಸಲು ಪ್ಯಾಂಟು, ಹರಿದ ಜುಬ್ಬಾ ಬಿಟ್ಟರೆ ನನ್ನಲ್ಲಿ ಮತ್ತೇನೂ ಇರಲಿಲ್ಲ. At least, ಲಲಿತಳಷ್ಟು ಓದಿಕೊಂಡಿದ್ದ, ಸುಸಂಸ್ಕೃತಳಾದ, ಭಾವುಕಳಾದ, ಅಧಿಕಾರಿಯೊಬ್ಬರ ಹಿರಿಯ ಮಗಳಾದ ಹುಡುಗಿಗೆ I had nothing to offer. ಅವಳಾಗಲೇ ಭಾವಗೀತೆಗಳೆಲ್ಲಾ ಕೇಳಿದ್ದಳು. ಹಿಂದಿ ಹಾಡು ಗೊತ್ತಿದ್ದವು. ವೀಣೆ ನುಡಿಸುತ್ತಿದ್ದಳು. ನನಗಿಂತ ಬೆಳ್ಳಗಿದ್ದಳು. ತೆಳ್ಳಗಿದ್ದಳು. ಅವಳದು ಒಂಬತ್ತು ಜನರ ತುಂಬಿದ ಮನೆ. ನಮ್ಮದು ಮೂರನೆಯ ದಿಕ್ಕಿಲ್ಲದ ಲೋಕ ನಿಂದಿತರ ಗೂಡು. ಅವಳಿಗೆ ಅಸಲು ನನ್ನನ್ನು ಮದುವೆಯಾಗುವ ಉದ್ದೇಶವೂ ಇರಲಿಲ್ಲ. ನೊಂದ ಗೆಳೆಯನಿಗೆ ಸಮಾಧಾನ ಹೇಳಲು ಪ್ರಾಂಜಲ ಮನಸ್ಸಿಟ್ಟುಕೊಂಡು ನನ್ನ ಮನೆಯೊಳಕ್ಕೆ ಬಂದ ಜೀವ ಅದು. ’ಅಮ್ಮಾ…ರವಿ ಇದಾರಾ?’ ಅಂತ ಕೇಳಿಕೊಂಡೇ ಒಳಕ್ಕೆ ಬರುತ್ತಿದ್ದಳು. ನಾನಿಲ್ಲದಿರುವಾಗ ನನ್ನ ಮಹಾ ಕೊಳಕು ಕೋಣೆಯನ್ನು ಒಂದು ಕಡೆಯಿಂದ ಸ್ವಚ್ಚ ಮಾಡಿ, ಹರಡಿದ ಪುಸ್ತಕ ಜೋಡಿಸಿ, ಹೊಸ ಸಿಗರೇಟಿನ ಪ್ಯಾಕು ತರಿಸಿ, ಹಳೇ ಬಾಟಲಿ ಎಸೆದು-ಏಕ್ ದಂ ಸಾಫ್! ಎಲ್ಲೋ ತಪ್ಪಿ ಇನ್ನೊಬ್ಬರ ಕೋಣೆಗೆ ಬಂದು ಬಿಟ್ಟೆನೇನೋ ಎಂಬಷ್ಟು ನೀಟು. ಒಮ್ಮೆ ನನಗೊಂದು ಕಡು ಕೇಸರಿ ಬಣ್ಣದ ಟೇಪ್ ರೆಕಾರ್ಡರ್‍ ಉಡುಗೊರೆಯಾಗಿ ಕೊಟ್ಟಳು. ಇಡೀ ಮುಖೇಶನನ್ನು ಅದರಲ್ಲಿ ತಂದು ಸುರಿದುಕೊಂಡು ನಾನು ಮತ್ತಷ್ಟು ದೀನನೇತ್ರನಾಗಿ ಅಘೋರಿಸತೊಡಗಿದೆ.

ಆಗಲೇ ಬಳ್ಳಾರಿಗೆ ಮತ್ತೆ ಮಾರ್ಚ್ ತಿಂಗಳು ಬಂದದ್ದು. ಇದ್ದಕ್ಕಿದ್ದಂತೆ ಬ್ರೈಟ್ ಆದ ಹೂಗಳು ಅರಳಿ ನಿಂತವು, ಗುಲ್ ಮೊಹರ್‍ ಗೆ ಹೊಸ ಕೆಂಪು. ನಾವಿಬ್ಬರೂ ಪರಸ್ಪರರನ್ನು ಎಷ್ಟು ಪ್ರೀತಿಸತೊಡಗಿದ್ದೆವೆಂದರೆ, ಇನ್ನು ನಾನು ಹೇಳದೇ ಹೋದರೆ ಅವಳೇ ಹೇಳಿ ಬಿಡುತ್ತಾಳೆ ಅಂತ ತಳಮಳವಾಗಿ, ಗಾಬರಿಯಾಗಿ, ಸಂತೋಷವಾಗಿ ಅದೊಂದು ದಿನ ಹೇಳೀಯೇ ಬಿಟ್ಟೆ. “ಬೇರೆ ಯಾರದೂ ಬರ್‍ತಾರೆ ನಿನ್ನ ಬದುಕಿನೊಳಕ್ಕೆ..ನಾನು ಯಾಕೆ?” ಅಂತ ಕೊಂಚ ಹಿಂದೇಟು ಹಾಕಿದ್ದಳು ಲಲಿತೆ. ಆದರೆ ನಾನು ತುಂಬಾ decided ಆಗಿದ್ದೆ. ಒಂದು ಪೆಟ್ಟು ನನ್ನನ್ನು ಅದ್ಯಾವ ಪರಿ ಅನುಭವಿಯನ್ನಾಗಿ ಮಾಡಿತ್ತು ಅಂದರೆ, ಇಪ್ಪತ್ತೊಂದೂವರೆ ವರ್ಷಕ್ಕಾಗಲೇ ಮದುವೆಯ ನೊಗಕ್ಕೆ ಹೆಗಲು ಕೊಡಲು ಅನುವಾಗಿಬಿಟ್ಟೆ. ಲಲಿತೆ ಕೂಡಾ ನನ್ನ ಮತ್ತು ಅಮ್ಮನ ಬದುಕಿನೊಳಕ್ಕೆ ದೊಡ್ಡ ಸಂಭ್ರಮವಾಗಿಯೇ ಬಂದಳು. ಆ ತನಕ ನೆಮ್ಮದಿಯಾಗಿ ಗುಂಪಿನಲ್ಲಿ ಬೆಳೆದವಳು ಏಕಾಏಕಿ ಮನೆಯೊಂದರ ಪೂರ್ಣ ಜವಾಬ್ದಾರಿ ಹೊತ್ತಳು. ಅದಾದ ಮೇಲೆ ಅನೇ ಫೆಬ್ರುವರಿಗಳು ಕಳೆದಿವೆ. ಮಾರ್ಚುಗಳು ಮುಗುಚಿ ಬಿದ್ದಿವೆ. ನಾವಂದು ಕೊಡ್ಡಿದ್ದಕ್ಕಿಂತ ಈ ಬದುಕು ನಮ್ಮಿಬ್ಬರನ್ನೂ ಚೆನ್ನಾಗಿ ನಡೆಸಿಕೊಂಡು ಬಂದಿದೆ. ಯಾಕೋ ಇವತ್ತು ಇದೆಲ್ಲಾ ನೆನಪಾಯಿತು.

ನಿಮ್ಮವನು……

ಆರ್‍.ಬಿ

7 Responses to ಕೈಬಿಟ್ಟು ಹೋದವಳ ಹೆಜ್ಜೆಗುರುತನ್ನು ಅರಸುತ್ತಾ….

  1. Sandeep K ಹೇಳುತ್ತಾರೆ:

    Hi Bhasker,
    You are really doing a commendable work. It is a pleasure to read the KAASBATH articles written on AMMA,MUKESH and GAALIB. I have also been reading HB for quite sometime. I would like to contribute KAASBATH articles.

  2. Pradeep ಹೇಳುತ್ತಾರೆ:

    ನಮಸ್ತೆ ಸರ್,

    ನಿಮ್ಮ ಈ ಕಥೆಯನ್ನು ಓದಿ ನನ್ನ ಮೈಎಲ್ಲಾ ಜುಂ ಎಂದಿತು. ಈ ಬ್ಲಾಗ್ ಬಂದಮೇಲೆ ( ravibelagere.wordpress.com) ನಾನು ಹಾಯ್ ಬೆಂಗಳೂರು ಓದುತ್ತಿರುವೆ. ನಿಜಕ್ಕೂ ಸೂಪರ್. ಆಫೀಸ್ ಒಳಗೆ ಹೋದರೆ ಆಯಿತು , ಹೊರಗಿನ ಪ್ರಪಂಚದ್ದಲ್ಲಿ ಏನೇನು ( ಆಫೀಸಿನ ಹೊರಗಡೆ ಏನು ನಡೀತಾ ಇದೆ ) ನಡೀತಾ ಇದೆ ಅಂತ ಗೊತ್ತಾಗೋದೆ ಇಲ್ಲ.

    ಪ್ರದೀಪ್

    • ravibelagere ಹೇಳುತ್ತಾರೆ:

      Thank you so much…ಈ ಬ್ಲಾಗ್ ನ ಉದ್ದೇಶ ನಿಜಕ್ಕೂ ಸಾರ್ಥಕ. ತಮ್ಮ ಭೇಟಿ ಮುಂದುವರಿಯಲಿ..ಹಾಯ್ ಬೆಂಗಳೂರ‍್ ನೊಡನೆಯೇ ಈಗ ಓ ಮನಸೇ ಸಹಾ ಮಾರುಕಟ್ಟೆಗೆ ಬಂದಿದೆ. ಇದನ್ನೂ ಸಹಾ ಓದಿ ತಮ್ಮ ಪ್ರತಿಕ್ರಿಯೆ ತಿಳಿಸಿರಿ. ಅಂದಹಾಗೆ, ಹಾಯ್ ಬೆಂಗಳೂರ‍್ ಮತ್ತು ಓ ಮನಸೇ ಪತ್ರಿಕೆಗಳ ಆಗಿಂದಾಗಿನ ಪಕ್ಷಿನೋಟ ನಮ್ಮ ಬ್ಲಾಗಿನಲ್ಲಿ ಅಳವಡಿಸಲಾಗಿದೆ.. ನೋಡಿ ತಮ್ಮ ಅಭಿಪ್ರಾಯ ತಿಳಿಸಿದರೆ ಧನ್ಯ..
      -ಭಾಸ್ಕರ‍್

  3. sanathkumar lingeri ಹೇಳುತ್ತಾರೆ:

    sir,,,,in my story my girlfriend left me breaking all promices that she given…. i am big fan of u… please give me support to overcome from this frustration……….

Leave a reply to noor mohamad ಪ್ರತ್ಯುತ್ತರವನ್ನು ರದ್ದುಮಾಡಿ