ಮೇಡ್ ಫಾರ್ ಈಚ್ ಅದರ್.
ಕೆಲವು ಜೋಡಿಗಳು ನಿಜಕ್ಕೂ ಹಾಗಿರುತ್ತವೆ. ಅವರು ಸುಳ್ಳೇ ರೇಗುವುದಿಲ್ಲ. ಜೋರಾಗಿ ಮಾತಾಡುವುದಿಲ್ಲ. ಹತ್ತು ಮಂದಿ ಕೆಟ್ಟ ಕುತೂಹಲದಿಂದ ನೋಡುವಂತೆ ವರ್ತಿಸುವುದಿಲ್ಲ. ತಮ್ಮ ಗೆಳೆತನವನ್ನು ಮನೆಮಂದಿಯವರಿಂದ, ಗೆಳೆಯರಿಂದ ಮುಚ್ಚಿಟ್ಟಿರುವುದೂ ಇಲ್ಲ. ಅವನು ಅವಳಿಗೋಸ್ಕರ ಎಂದು ಬದುಕುತ್ತಿರುತ್ತಾನೆ. ಅವಳನ್ನು ಮೆಚ್ಚಿಸಲಿಕ್ಕೆಂದೇ ಓದುತ್ತಿರುತ್ತಾನೆ. ಅವಳಿಗಿಷ್ಟ ಎಂಬ ಕಾರಟಕ್ಕೇ ಸಾಲ ಮಾಡಿ ಬೈಕು ಖರೀದಿಸಿರುತ್ತಾನೆ. ಅವಳಿಗೆ ಇಷ್ಟವಾಗೋದಿಲ್ಲ ಎಂಬ ಕಾರಣದಿಂದಲೇ ಸಿಗರೇಟು ಬಿಟ್ಟಿರುತ್ತಾನೆ. ಶಿಸ್ತಿನ ಜೀವನಕ್ಕೆ ಒಗ್ಗಿಕೊಂಡಿರುತ್ತಾನೆ. ಅವಳು ಮಾತಿನ ಮಧ್ಯೆ- ’ಮದುವೆಯಾದ ಎರಡೇ ವರ್ಷದಲ್ಲಿ ಮನೆ ಕಟ್ಟಿಸಿ ಬಿಡೋಣ ’ಅಂದರೆ, ಪ್ಯಾದೆಯಂತೆ ಅದಕ್ಕೂ ಒಪ್ಪಿರುತ್ತಾನೆ. ಭೂಪ ಅಷ್ಟಕ್ಕೇ ಸುಮ್ಮನಾಗದೆ, ಹತ್ತು ಮಂದಿಯ ಮುಂದೆ ತನ್ನ ಪ್ರೇಮಾಯಣದ ಕಥೆಯನ್ನು ಹೇಳಿಕೊಂಡಿರುತ್ತಾನೆ. ನಾವಿಬ್ರೂ ಒಟ್ಟಿಗೇ ದೇವಸ್ಥಾನಕ್ಕೆ ಹೋಗಿ ಬಂದಿದೀವಿ ಕಣ್ರೋ. ಅವಳ ಹಣೇಗೆ ನಾನು ಕುಂಕುಮ ಇಟ್ಟೀದಿನಿ. ಅಂದ ಮೇಲೆ ನಮ್ದು ಮದುವೆ ಆಗೇ ಹೋಯ್ತು ಎಂದರ್ಧ ಎಂದೂ ಕೊಚ್ಚಿಕೊಂಡಿರುತ್ತಾನೆ.
ಈ ಕಡೆ ಹುಡುಗಿಯಾದರೂ ಅಷ್ಟೆ: ಅವಳಿಗೂ ಅವನೇ ಪ್ರಪಂಚ. ಅವನಿಲ್ಲದ ಬದುಕನ್ನು ಅವಳು ಕನಸಲ್ಲೂ ಕಲ್ಪಿಸಿಕೊಂಡವಳಲ್ಲ. ಬದುಕು ಅನ್ನೋದಿದ್ರೆ ಅವನ ಜೊತೇಲಿ. ಅವನು ದುಡಿದ್ರೂ ಸೈ. ಒಂದು ವೇಳೆ ಆತ ದುಡಿಮೆಗೆ ಹೋಗಲಿಲ್ಲ ಅಂದ್ರೆ ನಾನೇ ದುಡಿತೇನೆ. ಗಂಡ ಅನ್ನಿಸಿಕೊಂಡವನನ್ನು ಸಾಕಿದ್ರೆ ತಪ್ಪೇನು ಎಂದೂ ಮಾತಾಡುತ್ತಾಳೆ. ಮದುವೆಯ ನಂತರದ ಬದುಕಿನ ಬಗ್ಗೆ ಹತ್ತು ಮಂದಿಯ ಗೆಳತಿಯರೊಂದಿಗೆ ಹೇಳಿಕೊಂಡು ಖುಷಿಪಟ್ಟಿರುತ್ತಾಳೆ.
ಆದರೆ, ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕೆ ಆ ಮಧುರ ಸಂಬಂಧ ಕಿತ್ತು ಹೋಗುತ್ತದೆ. ಪ್ರೇಮ ರದ್ದಾಗುತ್ತದೆ. ಆಟ ಕೊನೆಯಾಗುತ್ತದೆ. ಮಾತು ನಿಂತುಹೋಗುತ್ತದೆ. ಅದುವರೆಗೂ ಪ್ರತಿ ದಿನ ಬೆಳೆಗ್ಗೆ ಮತ್ತು ಸಂಜೆ ಪಾರ್ಕಿನ ಹೊರಗೆ ಮೂಲೆಯೊಂದರಲ್ಲಿ ಸ್ಕೂಟಿ ನಿಲ್ಲಿಸಿಕೊಂಡು ಹರಟೆಗೆ ಸಿಗುತ್ತಿದ್ದ ಹುಡುಗಿ: ಹುಡುಗನ ಕೈ ಬೆರಳುಗಳೊಂದಿಗೆ ಆಟವಾಡುತ್ತಿದ್ದ ಹುಡುಗಿ ದಿಢೀರನೆ ವರಸೆ ಬದಲಿಸುತ್ತಾಳೆ. ಅದೇ ದಾರಿಯಲ್ಲಿ ಕಾದು ನಿಂತ ಹುಡುಗನತ್ತ ತಿರುಗಿ ಕೂಡ ನೋಡದೆ ಎಕ್ಸ್ ಪ್ರೆಸ್ ವೇಗದಲ್ಲಿ ಸ್ಕೂಟಿ ಓಡಿಸುತ್ತಾಳೆ. ಸ್ವಲ್ಪ ಬುದ್ಧಿವಂತೆಯಾಗಿದ್ದರೆ, ಸೀದಾ ಹುಡುಗನ ಬಳಿ ಬಂದು, ಕೈ ಮುಗಿದು, ನಂಗೆ ಯಾಕೋ ಈ ಸಂಬಂಧ ಇಷ್ಟವಾಗ್ತಾ ಇಲ್ಲ. ಹಾಗಾಗಿ ಎದ್ದು ಹೋಗ್ತಾ ಇದೀನಿ. ತಪ್ಪು ತಿಳ್ಕೋಬೇಡ. ಬೇಸರ ಮಾಡ್ಕೋಬೇಡ. ಖುಷಿಯಾಗಿರು. ನೆಮ್ಮದಿಯಾಗಿರು. ಬದುಕಲ್ಲಿ ಮಹತ್ವದನ್ನು ಸಾಧಿಸು. ನಾನು ಅದನ್ನು ದೂರದಿಂದ್ಲೇ ನೋಡಿ ಖುಷಿ ಪಡ್ತೀನಿ’ ಎಂದು ವೇದಾಂತದ ಮಾತಾಡಿ ಹೋಗಿ ಬಿಡುತ್ತಾಳೆ.
ಹೀಗೆ, ಬೇಡ ಅನ್ನಿಸಿದ ಸಂಬಂಧಗಳನ್ನು ದೂರಾಮಾಡಿಕೊಳ್ಳುವುದರಲ್ಲಿ ಹುಡುಗರೇನೂ ಕಡಿಮೆ ಇಲ್ಲ. ಒಂದು ಕಾಲದಲ್ಲಿ ನೀನಿಲ್ಲ ಅಂದ್ರೆ ಸತ್ತೇ ಹೋಗ್ತೀನಿ ಅನ್ನುತ್ತಿದ್ದ ಹುಡುಗನೇ- ’ಮನೇಲಿ ಕಷ್ಟ ಇದೆ. ತಂಗಿಗೆ ಮದುವೆಯಾಗಿಲ್ಲ. ಅಪ್ಪ ಹಾರ್ಟ್ ಪೇಷೆಂಟು. ನಮ್ಮಮ್ಮ ನಿನಗೆ ಹೊಂದಿಕೆಯಾಗಲ್ಲ. ಹಾಗಾಗಿ ನಾವು ದೂರ ಆಗೋಣ’ ಎಂದೇ ಬಿಡುತ್ತಾರೆ.
ಹೀಗೆ, ಬದುಕೆಂದರೆ ಇಷ್ಟೇ ಎಂದು ಭಾವಿಸಿರುತ್ತೇವಲ್ಲ? ಅದು ಕೈ ತಪ್ಪಿ ಹೋದಾಗ ಆಗುವ ನೋವನ್ನು ಭರಿಸುವುದು ಕಷ್ಟ-ಕಷ್ಟ ಅಂದಿರುತ್ತಾರೆ. ದೇವಸ್ಥಾನಕ್ಕೆ ಕರೆದೊಯ್ದು ಅರ್ಚನೆ ಮಾಡಿಸಿರುತ್ತಾರೆ. ಕುಟುಂಬದ ಗ್ರೂಫ್ ಫೋಟೋ ಸೆಷನ್ ನಲ್ಲಿ ಒತ್ತಿಕೊಂಡು ನಿಂತಿರುತ್ತಾರೆ ಮತ್ತು ಮೇಲಿಂದ ಮೇಲೆ ಕಣ್ಣು ಹೊಡೆದಿರುತ್ತಾರೆ.
ಉಹುಂ, ಅಲ್ಲಿ ಆಸೆಯಿರುವುದಿಲ್ಲ. ’ಐ ಲವ್ ಯೂ’ ಎಂಬಂಥ ಭಾವವಿರುವುದಿಲ್ಲ. ಬದಲಿಗೆ ಅಲ್ಲಿ ಶುದ್ದ ಸ್ನೇಹವಿರುತ್ತದೆ. ಗೆಳೆತನವಿರುತ್ತದೆ. ಒಡಹುಟ್ಟಿದವರಿಂದ ಬಯಸುವಂಥ ಮಮತೆಯಿರುತ್ತದೆ.
ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಮುಕ್ತವಾಗಿ ಮಾತಾಡುವುದನ್ನು, ನೀನಿಲ್ಲದಿದ್ರೆ ತುಂಬಾ ಹಿಂಸೆ ಅನಿಸುತ್ತೆ ಎಂಬ ಆರ್ದ್ರತೆಯನ್ನು ತುಂಬ ಜನ ತಪ್ಪಾಗಿಯೇ ಅರ್ಥ ಮಾಡಿಕೊಳ್ಳುತ್ತಾರೆ. ನಂತರ ಮೊದಲೇ ನಿರ್ಧರಿಸಿದವರಂತೆ ಅದೊಂದು ದಿನ ಹೋಗಿ ಒಗರೊಗರು, ಒರಟೊರಟು ದನಿಯಲ್ಲಿ ’ಐ ಲವ್ ಯೂ’ ಅಂದುಬಿಡುತ್ತಾರೆ.
ಪರಿಣಾಮ, ಒಂದು ಮಧುರವಾದ ಸಂಬಂಧ ವಿನಾಕಾರಣ ಸತ್ತು ಹೋಗುತ್ತದೆ. ಆ ನಂತರದ ಯಾತನೆ ಬಿಡಿ , ಅದು ಬದುಕಿಡೀ ನಮ್ಮ ಜೊತೆಗೇ ಇರುತ್ತದೆ, ತೋಳ ಮೇಲಿನ ಮಚ್ಚೆಯಂತೆ!
ಇಂಥ ಯಡವಟ್ಟಿನ ಕೈಗೆ ಬುದ್ದಿ ಕೊಡದೇ ಬದುಕುವುದಿದೆಯಲ್ಲ-ಅದೇ ಜೀವನ Try that.
-ಬೆಳಗೆರೆ