ನಂಗ್ಯಾವತ್ತೂ ಯಾಕೆ ಬೋರು ಹೊಡಿಯಲ್ಲ…

bored_man

“I was never bored because I was never being bored” ಅಂತ ಒಂದು ಅದ್ಬುತವಾದ ಮಾತಿದೆ. ಪದೇಪದೆ ಓದಿಕೊಂಡರೆ ನಿಮಗೇ ಈ ಸೆಂಟೆನ್ಸು ಸರಿಯಾಗಿ ಅರ್ಥವಾದೀತು.

’ತುಂಬಾ ಬೋರು’ ಅನ್ನುವುದು ಆಗೊಮ್ಮೆ ಈ ಗೊಮ್ಮೆ ಎಲ್ಲರಿಗೂ ಅನುಭವಕ್ಕೆ ಬರುವಂತಹುದೇ. ಆದರೆ ನಿರಂತರವಾಗಿ ಬೋರಿ ಅನುಭವಿಸುವ ಜನ ಇರುತ್ತಾರಲ್ಲ? ಗಮನಿಸಿ ನೋಡಿದರೆ ಅವರೇ ಪರಮ ಬೋರಿಂಗ್ ಪಾರ್ಟಿಗಲಾಗಿರುತ್ತಾರೆ. ತಮ್ಮ ಬೋರು ಜಾಡ್ಯವನ್ನು ಕೈಗೆ ಸಿಕ್ಕ, ಎದುರಿಗೆ ಬಂದ, ಜೊತೆಯಲ್ಲಿ ಕುಳಿತ ಪ್ರತಿಯೊಬ್ಬರಿಗೂ ಹಂಚಿ ಪರಚುವುದೇ ಪರಧರ್ಮ ಎಂಬಂತೆ ವರ್ತಿಸುತ್ತಿರುತ್ತಾರೆ. ತಮಗೆ ತಾವು ಬೋರ್‍ ಆಗದಿರುವವರು, ಇನ್ನೊಬ್ಬರಿಗೆ ಬೋರ್‍ ಆಗಲಾರರು? ಇನ್ನೊಬ್ಬರಿಗೆ ವಿಪರೀತ ಬೋರು ಹೊಡೆಸುವವರು ತಮ್ಮನ್ನು ತಾವು ಸಂತೋಷವಾಗಿ ಇರಿಸಿಕೊಳ್ಳಲಾರರು! ಇದು ಬದುಕಿನ ಅನಿವಾರ್ಯ ನಿಯಮ.

ಹಾಗಾದರೆ ಬೋರ್‍ ಆಗದಂತಿರಬೇಕು ಅಂದರೆ ಏನು ಮಾಡಬೇಕು?

ಮುಖ್ಯವಾಗಿ, ನಮ್ಮ ವ್ಯಕ್ತಿತ್ವವನ್ನು ಇಂಟರೆಸ್ಟಿಂಗ್ ಆಗಿ ಇಟ್ಟುಕೊಳ್ಳಬೇಕು. ಸಾಮಾನ್ಯವಾಗಿ ನಾವೆಲ್ಲ ಒಳ್ಳೆಯ ಮಾತುಗಾರರು ಅಂತ ನಮಗೆ ನಾವೇ ಅಂದುಕೊಂಡು ಬಿಟ್ಟಿರುತ್ತೇವೆ. ಆದರೆ ಒಳ್ಳೆಯ ಮಾತುಗಾರ, ಒಳ್ಳೆಯ ಕೇಳುಗನೂ ಆಗಿರಬೇಕು ಎಂಬ ರೂಲ್ಸು ಮರೆತು ಬಿಟ್ಟಿರುತ್ತೇವೆ. ಹೀಗಾಗಿ ಸುಮ್ಮನೇ ಮಾತಾಡುತ್ತಾ ಹೋಗುತ್ತೇವೆ. ಒಂದು ಚಿಕ್ಕ, ಆರೋಗ್ಯವಂತ ನಿಗೂಢತೆ (not in negative sense) ಉಳಿಸಿಕೊಳ್ಳುವುದೇ ಇಲ್ಲ. ಮಾತಾಡುತ್ತಾ ಆಡುತ್ತಾ, ಬಟಾ ಬಯಲಾಗಿ ಹೋಗುತ್ತೇವೆ.

ಆದರೆ ಬೋರ್‍ ಆಗದಂಥ ವ್ಯಕ್ತಿತ್ವ ರೂಪಿಸಿಕೊಳ್ಳುವುದೆಂದರೆ ಕೇವಲ ಚೆಂದಾಗಿ ಮಾತನಾಡುವುದು ಮತ್ತು ಚೆನ್ನಾಗಿ ಕೇಳಿಸಿಕೊಳ್ಳುವುದು ಎಂದಷ್ಟೇ ಅರ್ಥವಲ್ಲ. ಅತ್ಯಂತ ಕಡಿಮೆ ಮಾತನಾಡುವವನೂ, ಮಹಾ ಮೌನಿಯೂ ಕೂಡ ಇಂಟರೆಸ್ಟಿಂಗ್ ಆಗಿರಬಲ್ಲ. ಸುಮ್ಮನೇ ಅರ್ಥಹೀನ ತಮಾಷೆ ಮಾಡುವವನು ಕೇವಲ ಜೋಕರ್‍ ಅನ್ನಿಸಿಕೊಂಡುಬಿಡುವ ಅಪಾಯವಿದೆ. ಆದ್ದರಿಂದ ಮಾತಿನಿಂದಾಚೆಗೂ ನಮ್ಮ ವ್ಯಕ್ತಿತ್ವವನ್ನು ರುಚಿಕಟ್ಟಾಗಿಸಿಕೊಳ್ಳಬೇಕು. ನೂರಾರು ಸಂಗತಿಗಳನ್ನು ತಿಳಿದುಕೊಂಡಿರಬೇಕು. ಹೀರೇಕಾಯಿಯ ಸಿಪ್ಪೆಯಲ್ಲಿ ಚಪ್ಪರಿಸಿ ತಿನ್ನುವಂತಹ ಚಟ್ನಿ ಮಾಡುವುದು ಹೇಗೆ ಎಂಬುದರಿಂದ ಹಿಡಿದು, ಗೂಗಲ್ ಸರ್ಚ್ ಮಷಿನ್ ಹೇಗೆ ಕೆಲಸ ಮಾಡುತ್ತದೆ ಎಂಬುದರ ತನಕ ಎಲ್ಲವನ್ನೂ ತಿಳಿದುಕೊಳ್ಳುವ ಆಸಕ್ತಿ ಬೆಳೆಸಿಕೊಂಡರೆ ಸಾಕು, ಕ್ರಮೇಣ ನಾವು ಇಂಟರೆಸ್ಟಿಂಗ್ ಆಗಿ ಬಿಡುತ್ತೇವೆ.

ಮಕ್ಕಳು ತಾಯಿಯಿಲ್ಲದ ವೇಳೆ ಅಡುಗೆ ಮನೆ ಹೊಕ್ಕು ತಿನ್ನಲು ಏನಾದರೂ ಸಿಗುತ್ತಾ ಅಂತ ಡಬ್ಬಿ ಡಬ್ಬಿ ಹುಡುಕುತ್ತಿರುತ್ತವೆ, ಗಮನಿಸಿದ್ದೀರಾ? ನನ್ನದು ಇವತ್ತಿಗೂ ಅದೇ ಮನಸ್ತತ್ವ. ಓದಲಿಕ್ಕೆ ಏನಾದರೂ ಸಿಗುತ್ತದಾ ಅಂತ ಅಂಗಡಂಗಡಿ, ಷೆಲ್ಪು ಷೆಲ್ಪು, ನನ್ನ ಲೈಬ್ರೆರಿಯ ರಾಕ್ ರಾಕು, ಇಂಟರ್‍‌ನೆಟ್ಟಿನ ಸೈಟು ಸೈಟು ಹುಡುಕುತ್ತಿರುತ್ತೇನೆ. ನನ್ನ ಇಡೀ ಚಟುವಟಿಕೆ ನೋಡಿದರೆ, ದಿನವಿಡೀ ಕಾಡುವ ಹಸಿವೆಯಿಂದ ತಪ್ಪಿಸಿಕೊಳ್ಳುವ ’ಅಮ್ಮಾ ತಾಯಿ’ ಹುಡುಗನೊಬ್ಬ ಮನೆ ಮನೆ ತಿರುಗುವ ದೃಶ್ಯವನ್ನದು ಹೋಲಬಹುದು.

ನಂಗೊತ್ತು, ಎಲ್ಲರ ಮನೆಯಲ್ಲೂ ಪುಸ್ತಕಗಳಿದ್ದೇ ಇರುತ್ತವೆ. ಆದರೆ ಇರುವ ಎಲ್ಲಾ ಪುಸ್ತಕಗಳನ್ನು ನಾವು ಓದಿರುವುದಿಲ್ಲ. ಊರಲ್ಲಿನ ಸಾರ್ವಜನಿಕ ಪುಸ್ತಕಾಲಯವನ್ನು ಒಳಹೊಕ್ಕು ನೋಡಿರಿಯೇ ಇರುವುದಿಲ್ಲ. ಸಿನೆಮಾ ಹಾಡುಗಳ ಹಂತ ದಾಟಿ ಹೋಗಿ, ವಚನ-ಶಾಸ್ತ್ರೀಯ ಸಂಗೀತ, ಗಝಲು, ಠುಮರಿ ಕೇಳಿರುವುದಿಲ್ಲ. ಎದುರಿಗೆ ಯಾರು ಸಿಕ್ಕರೂ “ನನ್ಗಂಡ ನನ್ನನ್ನ ಪ್ರೀತ್ಸಲ್ಲ ಗೊತ್ತಾ?” ಅಂತ ಪರಚುತ್ತೇವೆಯೋ ಹೊರತು, ನಾನು ಇತ್ತೀಚೆಗೆ ಓದಿದ ಬಯೋಗ್ರಫಿಯೊಂದರ ಒಂದು ಛಾಪ್ಟರ್‍ ಎಷ್ಟೊಂದು ಇಂಟರೆಸ್ಟಿಂಗ್ ಆಗಿತ್ತು ಗೊತ್ತಾ. ಅಂತ ಮಾತಿಗಿಳಿರುವ ಸಿದ್ದರೆ ಮಾಡಿಕೊಂಡೇ ಇರುವುದಿಲ್ಲ.

ಇಂಟರೆಸ್ಟಿಂಗ್ ಆಗಿರುವುದು ಅಂದರೆ ತುಂಬ ಚೆನ್ನಾಗಿರುವುದು ಅಂತ ಅಲ್ಲ. ಹಲಸಿನ ಹಣ್ಣು ನಿಜಕ್ಕೂ ನೋಡಲಿಕ್ಕೆ ಚೆನ್ನಾಗಿರುವುದಿಲ್ಲ. ಆದರೆ ಯಾವತ್ತಾದರೂ ರುಚಿಹೀನ ಘಮಹೀನ ಹಲಸಿನ ತೊಳೆ ತಿಂದಿದ್ದೀರಾ?

Be interesting.

-ಬೆಳಗೆರೆ

Advertisements

One Response to ನಂಗ್ಯಾವತ್ತೂ ಯಾಕೆ ಬೋರು ಹೊಡಿಯಲ್ಲ…

 1. Chandrakant Shinde ಹೇಳುತ್ತಾರೆ:

  Dear Ravi Dada (Anna),

  Please include some topics to guide the young Educational Students. How to live the Collage life and how to concentrate on Studies. Now a days our young generation which the Power of our Nation is misleading.

  These may be based on some The Great Personalities like Adolf Hitler…so on or some successful Businessman Like Dhirubhai Ambani..etc

  Hope you will include.

  Chandrakant.
  Bijapur

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: