ಕಳೆದ ತಿಂಗಳು ನೀರು ತಪ್ಪಿ ಹೋಗಿ ಕಿಬ್ಬೊಟ್ಟೆಯಾಳದಲ್ಲೆಲ್ಲೋ ಹೊರಳು!

lovers

ಮೆಲ್ಲನೆ ನೀ ಬಂದು ಕೈ ಮುಟ್ಟಿದೇ

ನಲ್ಲೆಯ ಈ ದೇಹ ಝಲ್ಲೆನ್ನದೇ…

ಬೆಳಗ್ಗೆ ಹಿತ್ತಿಲಲ್ಲಿ ನಿನ್ನ ಕೆಂಪು ಚೆಕ್ಸ್ ಅಂಗಿ ಒಗೆದು ಹಾಕುತ್ತಿದ್ದಾಗ ಪಕ್ಕದ ಮನೆಯ ರೇಡಿಯೋದಲ್ಲಿ ಕೇಳಿಸಿದ ಹಾಡು. ಮನಸ್ಸಿಗೆ ನೂರು ನೆನಪು. ಒಂದೊಂದ್ಸಲ ನನ್ನ ಮೇಲೆ ನಂಗೇ ಸಿಟ್ಟು ಬರುತ್ತೆ. ಯಾಕೆ ಹೀಗೆ ಜಗತ್ತಿನಲ್ಲಿರುವ ಮತ್ತೆಲ್ಲವನ್ನೂ ಮರೆತು ಬೆಳಗ್ಗೆ ಎದ್ದವಳೇ ನಿನ್ನಲ್ಲಿಗೆ ಓಡಿ ಬರಬೇಕು ನಾನು? ಎಚ್ಚರವಾಗಿ ಕಣ್ಣು ಬಿಟ್ಟ ತಕ್ಷಣ ಅಮ್ಮನ ಫೋಟೋ ನೋಡುತ್ತೇನೆ. ಅವಳ ಶುಭ್ರ ಮಂದಹಾಸದಲ್ಲಿ ನೀನೇ ಕಂಡಂತಾಗುತ್ತದೆ. ಇದ್ದಿದ್ದರೆ ನಿನ್ನನ್ನು ನೋಡಿ ಅದೆಷ್ಟು ಸಂತೋಷ ಪಡುತ್ತಿದ್ದಳೋ ಅಂತ ಅಂದುಕೊಳ್ಳುತ್ತಳೇ ಸ್ನಾನ. ಇವತ್ತ್ಯಾಕೋ ಹಾಕಿಕೊಳ್ಳುವಾಗ ಬಟ್ಟೆ ಕೊಂಚ ಬಿಗಿಯೆನ್ನಿಸಿದವು. ನೀನು ಮೊದಲೇ ಡುಮ್ಮೀ ಅಂತ ರೇಗಿಸ್ತಿರ್‍ತೀಯ. ಸೀರೆಯುಟ್ಟುಕೊಳ್ಳುವಾಗ ಹೊಟ್ಟೆಯ ಪುಟ್ಟ ಮಡತೆಯ ಮೇಲಿನ ಹುಟ್ಟು ಮಚ್ಚೆ ಕಾಣಿಸಿತು. ನಿನಗೆ ಅದನ್ನು ಕಂಡರೆ ಎಂಥ ಹುಚ್ಚು ಪ್ರೀತಿಯೋ, ಕೆನ್ನೆಗೆ ಕೊಟ್ಟದ್ದಕ್ಕಿಂತ ಹೆಚ್ಚಿನ ಮುತ್ತು ನನ್ನ ಹೊಟ್ಟೆಯ ಮೇಲಿನ ಮಚ್ಚೆಯೇ ನುಂಗಿತು. ಸರಸರನೆ ಅಡುಗೆಗಿಟ್ಟು ಅಪ್ಪನಿಗೆ ತಿಂಡಿ ಮಾಡಿಕೊಟ್ಟೆ. ಜಗತ್ತಿಗೇ ರಜೆಯಿದೆಯೇನೋ ಎಂಬಂತೆ ಮಲಗಿದ್ದ ತಮ್ಮನನ್ನು ಎಬ್ಬಿಸುವ ಹೊತ್ತಿಗಾಗಲೇ ಮನೆಯ ಅಂಗಳದಲ್ಲಿ ಘಳ ಘಳ ಸೂರ್ಯ. ಮಾಡಿಟ್ಟದ್ದನ್ನೇ ಡಬ್ಬಿಗೆ ಹಾಕಿಕೊಂಡು ಇನ್ನಿಲ್ಲದ ಸಡಗರದೊಂದಿಗೆ ನಿನ್ನಲ್ಲಿಗೆ ಹೊರಡುತ್ತೇನೆ. ದಾರಿಯುದ್ದಕ್ಕೂ ಯಾವುದೋ ಹಾಡಿನ ಗುನುಗು. ಮೂರು ಹಾಡು ಮುಗಿಯುವಷ್ಟರಲ್ಲಿ ನಿನ್ನ ಮನೆ.

ಪೂಜಿಸಲೆಂದೇ ಹೂಗಳ ತಂದೆ

ದರುಶನ ಕೋರಿ ನಾನಿಂದೇ

ತೆರೆಯೋ ಬಾಗಿಲನೂ..

ಚಿರಂತ್, ಬೆಳಗ್ಗೆ ನಿನ್ನನ್ನ ಎಬ್ಬಿಸುವುದರಲ್ಲೇ ಒಂದು ಮಜವಿದೆ ನೋಡು. ನನ್ನ ಹತ್ತಿರ ತಲಬಾಗಿಲಿನದೊಂದು ಕೀ ಇರದೇ ಹೋಗಿದ್ದಿದ್ದರೆ, ಪುಣ್ಯಾತ್ಮ! ಮದ್ಯಾಹ್ನದ ತನಕ  ಬಾಗಿಲಲ್ಲೇ ನಿಂತಿರಬೇಕಾಗುತ್ತಿತ್ತೇನೋ.ಇಂನ್‌ಸ್ಟಾಲ್‌ಮೆಂಟಿನಲ್ಲಿ ಏಳೋ ಮಹಾಶಯ ನೀನು. ಆದರೂ ನಿದ್ದೆಯಲ್ಲಿ ನಿನ್ನನ್ನು ನೋಡುವುದೇ ಒಂದು ಚೆಂದ.  ತುಂಬ ನೀಟಾಗಿ ಬಟ್ಟೆ ಹಾಕಿಕೊಂಡು, ತಲೆ ಬಾಚಿಕೊಂಡು ಊಹುಂ, ನಿನ್ನ ಕೆದರಿದ ಕ್ರಾಪೇ ಚಂದ. ನುಣ್ಣಗೆ ಷೇವ್ ಮಾಡಿಕೊಂಡಿರುತ್ತೀಯಲ್ಲ? ಅದಕ್ಕಿಂತ ಚೂರು ಚೂರು ಗಡ್ಡ ಬೆಳೆದಿದ್ದರೇನೇ ಸರಿ. ಇನ್ನೊಂದೇ ಒಂದು ಸಲ ಮೀಸೆ ತೆಗೆದರೆ ನೋಡು, ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಬಿಡುತ್ತೇನೆ. ಬರೀ ಒಂದು ಟ್ರಾಕ್ ಪ್ಯಾಂಟ್ ಹಾಕಿಕೊಂಡು ಮಲಗಿದವನ ಎದೆ ಮೇಲಿನ ಪೊದೆಗೂದಲು ನೇವರಿಸಿ ನನ್ನ ಪುಸ್ತಕಗಳನ್ನು ಒಂದು ಕಡೆ ಎತ್ತಿಟ್ಟು ನಿನಗೋಸ್ಕರ ಕಾಫಿ ಮಾಡಲು ನಿಲ್ಲುತ್ತೇನೆ. ನಂಗೊತ್ತು, ನಿನಗೆ ರಾತ್ರಿ ಹಾಕಿಟ್ಟ ಡಿಕಾಕ್ಷನ್ನಿನ ಕಾಫಿಯೇ ಬೇಕು. ನಿದ್ರೆಯಲ್ಲೇ ಇದ್ದಿಯೇನೋ ಎಂಬಂತೆ ದಿಂಬಿಗೆ ಒರಗಿ ಕುಳಿತು ದೊಡ್ಡ ಕಪ್ಪಿನ ತುಂಬಾ ಹಾಕಿಕೊಟ್ಟ ಕಾಫಿ ಕುಡಿಯುತ್ತಿಯ. ನಿನ್ನ ಕಡುಗಪ್ಪು ಕಣ್ಣು ನನಗೊಂದು Thanks ಹೇಳಿ ಕಿಟಕಿಯಾಚೆಗೆ ಹೊರಳುತ್ತವೆ. ಅವುಗಳಲ್ಲಿನ ಸೈಲೆನ್ಸ್ ನನಗೆ ತುಂಬ ಇಷ್ಟವಾಗುತ್ತದೆ. ಜಗತ್ತಿನೊಂದಿಗೆ ಯಾವುದೇ ದೂರು, ತಕರಾರುಗಳಿಲ್ಲದ ತಣ್ಣಗಿನ ಕಣ್ಣು ಅವು.

ಹಮ್ ನೇ ದೇಖೀ ಹೈಂ

ಇನ್ ಆಂಖೋಮೆ ಮೆಹಕತೇ ಖುಷಬೂ….

ಏಳುವ ತನಕ ತಕರಾರೇ ಹೊರತು ಎದ್ದ ಮೇಲೆ ನೀನು ಪಾದರಸ. ಬೆಚ್ವಗೆ ಗೀಝರಿನಲ್ಲಿ ಕಾದ ನೀರು ನಿನ್ನ ಬಂಡೆಗಲ್ಲಿನಂತಹ ಬೆನ್ನಿಗೆ ಚೆಲ್ಲಿ ಸೋಪು ಉಜ್ಜುತ್ತಿದ್ದರೆ ಕೈ ತಡವರಿಸುತ್ತದೆ. ಎದೆ, ಭುಜ, ತೋಳು-ವಿಗ್ರಹ ಕಣೋ ನೀನು.ಟವೆಲ್ಲು ಸುತ್ತಿ ಈಚೆಗೆ ಕರೆದುಕೊಂಡು ಬರುವ ಹೊತ್ತಿಗೆ ನನಗೇ ಅರ್ಧ ಸ್ನಾನ. ಇವೆಲ್ಲ ನನಗೆ Best moments of our life ಅನ್ನಿಸುತ್ತಿರುತ್ತದೆ. ಹತ್ತೋ, ಇಪ್ಪತ್ತೋ,ಐವತ್ತೋ ವರ್ಷಗಳಾದ ಮೇಲೆ ಹೇಗಿರುತ್ತೀವೋ ಗೊತ್ತಿಲ್ಲ ಚಿರಂತ್: ಈ ಕ್ಷಣಕ್ಕೆ ಮಾತ್ರ ಭಗವಂತ ಅತ್ಯಂತ ಶ್ರದ್ದೆಯಿಂದ ಕೂತು ಮದುವೆ ಮಾಡಿಸಿದ ಅದ್ಬುತ ದಂಪತಿಗಳಂತಿದ್ದೇವೆ. ಸ್ನಾನವಾದ ಮೇಲೆ ಹತ್ತು ನಿಮಿಷ ನೀನುಂಟು, ನಿನ್ನ ದೇವರುಂಟು. ಅಷ್ಟೊತ್ತಿಗೆ ಮಾಡಿಕೊಂಡು ತಂದ ತಿಂಡಿ ಬಿಸಿ ಮಾಡಿಕೊಂಡು ನಿನಗೋಸ್ಕರ ಎತ್ತಿಟ್ಟರೆ, ಮಗುವಿನ ಹಾಗೆ ಇಷ್ಟಿಷ್ಟೇ ತಿನ್ನುವ ನೀನು.

ಸಂಕೇತ್ ಮಿಲನ್ ಕಾ

ಭೂಲ್ ನ ಜಾನಾ

ಮೇರಾ ಪ್ಯಾರ್‍‌ನ ಬಿಸರಾನಾ…

ಹೊರಡುವ ಹೊತ್ತಿಗೆ ಬಾಗಿಲ ಮರೆಯಲ್ಲಿ ನಿಂತು ಬರಸೆಳೆದೆ ನೀನು ಕೊಡುವ ಮುತ್ತು, ಅದೇ ನನಗೆ ಸಂಜೆ ಕಾಲೇಜು ಮುಗಿಯುವವರೆಗಿನ ಮುತ್ತು ಬುತ್ತಿ. ಕಾಳೇಜಿನ ಬಳಿ  ಬೈಕು ನಿಲ್ಲಿಸಿ ಇಳಿಸಿ ಹೋಗುವ ನಿನ್ನನ್ನು, ತಿರುವಿನಲ್ಲಿ ಮರೆಯಾಗುವ ತನಕ ನೋಡುತ್ತಾ ನಿಲ್ಲುತ್ತೇನೆ. ಗೆಳತಿಯರು ಛೇಡಿಸುತ್ತಾರೆ. ಮೊದಲ ಪಿರಿಯಡ್‌ನಲ್ಲಿ ನಾನೆಲ್ಲೋ, ಮನಸೆಲ್ಲೋ, ಪಾಠವೆಲ್ಲೋ..? ಮದ್ಯಾಹ್ನ ಗೆಳತಿಯರೊಂದಿಗೆ ಕೂತು ಊಟ ಮಾಡುವಾಗ ನಿನು ಆಫೀಸಿನಲ್ಲಿ ಏನು ತರಿಸಿಕೊಂಡಿರುತ್ತೀಯೋ ಅಂತ ಯೋಚನೆ. ನೋಡ ನೋಡುತ್ತಾ ಸಂಜೆಯಾಗಿಬಿಡುತ್ತದೆ. ಇಳಿಸಿ ಹೋದ ಜಾಗದಲ್ಲೇ ನೀನು, ನಿನ್ನ ಬೈಕು.

ಜಬ್ ದೀಪ್ ಜಲೇ ಆನಾ

ಜಬ್ ಶಾಮ್ ಢಲೇ ಆನಾ

ದಿನಗಳು ಹೀಗೇ ಕಳೆದುಹೋಗಿ ಬಿಡುತ್ತವೇನೋ ಅಂತ ಕಳವಳಗೊಳ್ಳುತ್ತೇನೆ ಚಿರಂತ್. ನಂಗೊತ್ತು, ನಿನ್ನ ಮನಸ್ಸು ನನ್ನ ವಿಷಯದಲ್ಲಿ ನಿಚ್ಚಳ. ನಂಗೆ ಬೇಕು ಅಂದಿದ್ಯಾವುದನ್ನೂ ನೀನು ಇಲ್ಲವೆಂದಿಲ್ಲ. ಇರುವ ಅತ್ಯುತ್ತಮ ರೆಸ್ಟುರಾಂಟ್ಸ್ ಗೆ ಕರೆದುಕೊಂಡು ಹೋಗಿದ್ದೀಯ. ಕೇಳುವುದಿರಲಿ, ಸುಮ್ಮನೆ ಆಸೆ ಪಟ್ಟ ಪ್ರತಿಯೊಂದನ್ನೂ ತೆಗೆಸಿಕೊಟ್ಟಿದ್ದೀಯ. ನಾವು ಒಟ್ಟಿಗೆ ಹೋಗದ ಜಾಗಗಗಳಿಲ್ಲ. ಆದರೂ ಒಂದು ಮದುವೆ ಅಂತ ಆಗಿಬಿಟ್ಟರೆ ಮನಸ್ಸಿನ ಈ ಕಳವಳಗಳೂ ದೂರವಾಗುತ್ತವೇನೋ? ಅಪ್ಪ ಮೇಲಿಂದ ಮೇಲೆ ಎರಡು ಸಲ ಕರೆದು ಕೇಳಿದರು. ಒಮ್ಮೆ ನೀನು ಬಂದು ಮಾತನಾಡು. ನಿಜ ಹೇಳಲಾ ಚಿರಂತ್, ಕಳೆದ ತಿಂಗಳು ನಾನು ನೀರು ಹಾಕಿಕೊಂಡಿಲ್ಲ. ಕಿಬ್ಬೊಟ್ಟೆಯಾಳದಲ್ಲೆಲ್ಲೋ ಸಣ್ಣ ಹೊರಳು. ಇನ್ನು ತಡಮಾಡಬೇಡ ಕಣೋ….

-ನಿನ್ನವಳು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: