ಕೇಳಿ-೫

ಅಕ್ಟೋಬರ್ 4, 2010

ಪ್ರಶ್ನೆ: ದೇವೇಗೌಡರು ಉಗುರು ಕಚ್ಚೋ ಅಭ್ಯಾಸ ಬಿಡೋದಿಲ್ಲವಾ?

ಉ: ಗೊತ್ತಿಲ್ಲಪ್ಪ: ಮೊನ್ನೆ ಜಗುಲಿ ಮೇಲೆ ಕೂತು ಕಾಲಿನ ಉಗುರು ಕಚ್ಕೋತಿದ್ರು!

ಪ್ರಶ್ನೆ: ಸಿದ್ದು ತೊಲಗಿದ ಮೇಲೆಯಾದರೂ ಕಾಂಗ್ರೆಸ್ಸು ಉದ್ದಾರವಾದೀತೆ?

ಉ: ಪಾದಯಾತ್ರೆ ನಂತರ ಅವರಿಗೆ ಕಾಲುರೋಗ: ತೇಜಮ್ಮನಿಗೆ ಬಾಯಿರೋಗ ಅಂತಾರೆ!

ಪ್ರಶ್ನೆ: ದಂಪತಿಗಳು ಪರಸ್ಪರ ಅರಿಯುವ ಮೊದಲೇ ಮಗು ಆಗಿಬಿಡುತ್ತದಲ್ಲ?

ಉ: ಹೀಗಾಗಿಯೇ ಅನೇಕ ದಾಂಪತ್ಯಗಳು ಡಿವೋರ್ಸ್‌ನಿಂದ ಬಚಾವಾಗುತ್ತವೆ!

ಪ್ರಶ್ನೆ: ಹೆಗಡೆಯವರ ಪ್ರೇತಾತ್ಮವೇ ದೇವೇಗೌಡರನ್ನು ದಾರಿ ತಪ್ಪಿಸುತ್ತಿದೆಯಂತೆ?

ಉ: ನಿಜ, ವಿಧಾನಸೌದ ಮೈಸೂರು ಕಡೆಗಿದೆ ಅಂತ ನಂಬಿಸಿ ನೈಸ್ ರಸ್ತೇಲಿ ಬಿಟ್ಟಂತಿದೆ!

ಪ್ರಶ್ನೆ: ಶೋಭಕ್ಕ ಯಶಸ್ಸಿನ ಹಿಂದೆ ಸಿಮ್ಮನ ಹಾರೈಕೆ ಇದೆಯಂತೆ?

ಉ: ಅಕ್ಕಯ್ಯ ಮಂತ್ರಿಯಾದುದಕ್ಕೆ ಪಾವಗಡದ ಶನೈಶ್ವರನಿಗೆ ಮುಡಿ ಕೊಟ್ಟನಂತೆ!

ಪ್ರಶ್ನೆ: ಮಾತ್ರೆ ತಗೊಂಡು ಮಲಗಿದರೂ ಗೌಡರಿಗೆ ನಿದ್ದೆ ಬರುತ್ತಿಲ್ಲವಂತೆ?

ಉ: ಮಾವಾ..ನೀವು ನುಂಗಿದ್ದು ಸಂತಾನ ನಿಯಂತ್ರಣ ಮಾತ್ರೇ…ಅಂತ ಚೀರಿದಳು ರಾಧಿಕಾ!

ಪ್ರಶ್ನೆ: ಯಡ್ಡಿ ಕೊಟ್ಟ ಸೈಕಲ್ ಕಲಿಸ್ತೀನಿ ಬಾ ಅಂದ್ರೆ ಬರಲ್ಲ ಅಂತಾಳೆ?

ಉ: ಗೂಳಿ ಶೇಖರ ಕ್ಯಾರಿಯರ್‍‌ನಿಂದ ಬಿದ್ದದನ್ನು ನೋಡಿ ಜಾಗೃತಳಾಗಿದ್ದಾಳೆ.

ಪ್ರಶ್ನೆ: ಟೀವಿ ನೋಡಿದರೆ ಬೇಜಾರಾಗುತ್ತದಲ್ಲ?

ಉ: ’ಬಾಟ್ಲಿ ಹುಡುಗರ ಪಾಕೆಟ್ ಲೈಫ್’ ಅಂತ ಮಲ್ಯ ಆರಂಭಿಸಿದ್ದಾನೆ.

ಪ್ರಶ್ನೆ: ವಿಶ್ವೇಶ್ವರ ಹೆಗಡೆ ಕಾಗೇರಿಗೆ ಪ್ರಾಥಮಿಕ ಶಿಕ್ಷಣ ಸಚಿವ ಖಾತೆ ಏಕೆ ಕೊಟ್ಟಿದ್ದಾರೆ?

ಉ: ಹೈಟು ನೋಡಿ ಕೊಟ್ಟಿದ್ದಿದ್ದರೆ ಉನ್ನತ ಶಿಕ್ಷಣ ಖಾತೆ ಕೊಡಬೇಕಿತ್ತು: ಬುದ್ದಿ ನೋಡಿದ್ದಾರೆ.

ಪ್ರಶ್ನೆ: ಕೆಟ್ಟ ಮೇಲೆ ಬುದ್ದಿ ಬರೋದಂದ್ರೆ ಏನು?

ಉ: ಪತ್ರಿಕೆ ಶುರು ಮಾಡೋ ಹೊತ್ತಿಗೆ ಅದಿನ್ನೆಷ್ಟು ಕೆಟ್ಟಿರಬೇಕು ನಾನು: ಯೋಚಿಸಿ.

-ಬೆಳಗೆರೆ


ರೊಕ್ಕ ಓದುಗ ದೊರೆಯದು: ಲೆಕ್ಕ ಕೊಡುವ ಬಟವಾಡೆದಾರ ನಾನು!

ಅಕ್ಟೋಬರ್ 1, 2010

ಇದು ಲೆಕ್ಕ ಕೊಡುವ ಸಮಯ.

ಕೇವಲ ಮುನ್ನೂರ ಎಂಬತ್ತು ರೂಪಾಯಿಗಳನ್ನು ಇಟ್ಟುಕೊಂಡು ಮೊಬೈಕಿನ ಮೇಲೆ ಬೆಂಗಳೂರಿಗೆ ಬಂದಿಳಿದ ನಾನು ಇವತ್ತು ಏನಾದರೂ ಆಗಿದ್ದೇನೆ ಅಂದರೆ, ಅದು ’ಹಾಯ್ ಬೆಂಗಳೂರ್‍!’ ನಿಂದಾಗಿ. ಸತತ ಹದಿನೈದು ವರ್ಷ, ನಾಣು ನನ್ನ ಓದುಗ ದೊರೆಯ ಬಳಿ ನೌಕರಿ ಮಾಡಿದ್ದೇನೆ. ಧಣೀಗೆ ಲೆಕ್ಕ ಒಪ್ಪಿಸುವುದು ಕರ್ತವ್ಯ.

“ಪ್ರಾರ್ಥನಾ ಸ್ಕೂಲ್”ಗೆ ಎರಡು ಬಸ್ ಖರೀದಿಸಿದ್ದು ಬಿಟ್ಟರೆ ಈ ವರ್ಷ ಯಾವುದೇ ವಹನಗಳ ಖರೀದಿಯಾಗಿಲ್ಲ. ನನ್ನ ಓಡಾಟಕ್ಕೆ ಸ್ಕೋಡಾ ಮತ್ತು ವೋಕ್ಸ್ ವ್ಯಾಗನ್ ಕಾರುಗಳಿವೆ. ಹೆಚ್ಚಿನ ಓಡಾಟ ಸ್ಕೋಡಾದಲ್ಲೇ. ನಿಮಗೆ ಗೊತ್ತು: ಈ ವರ್ಷದ ಎರಡನೆಯ ಅರ್ಧದಲ್ಲಿ ನಾನು ಓಡಾಡಿದ್ದು ಕಡಿಮೆ ಆಫೀಸಿನವರ ಓಡಾಟಕ್ಕೆ ಮಾರುತಿ ಓಮ್ನಿ ಇದೆ. ನನ್ನ ಪ್ರೀತಿಯ ಇಂಡ್ ಸುಜುಕಿ ಮತ್ತು ಬುಲೆಟ್ ಮೊಬೈಕ್‌ಗಳು ಷೆಡ್‌ನಲ್ಲಿ ನಿಂತೇ ಇವೆ: ಥಳ ಥಳ. ಈ ವರ್ಷ ನಾನು ಹೊಸ ಅಂಗಿಗಳನ್ನೂ ಖರೀದಿಸಿಲ್ಲ. ಬರಗೆಟ್ಟವನಂತೆ ಖರೀದಿ ಮಾಡಿದ್ದು ಕೇವಲ ಪುಸ್ತಕಗಳನ್ನ.

ಕರ್ಣನ ಹೆಸರಿನಲ್ಲಿ ಬೆಂಗಳೂರಿನ ಹೊರವಲಯದ ’ಕರಿಷ್ಮಾ ಹಿಲ್ಸ್’ನಲ್ಲಿ ಒಂದು ಸೈಟು ಖರೀದಿಸಿದ್ದೇನೆ. ಅಲ್ಲಿ ಹೊಸ ಮನೆಯ ನಿರ್ಮಾಣ ಆರಂಭವಾಗಿದೆ. ಪದ್ಮನಾಭನಗರದ ’ಅಮ್ಮ’ ಮನೆ, ಒಂದು ಫ್ಲ್ಯಾಟ್  ಭಾವನಾಳಿಗೆ ಕೊಟ್ಟಾಗಿದೆ. ಶೇಷಾದ್ರಿಪುರದ ಮನೆ ಚೇತನಾಗೆ ಕೊಟ್ಟಾಯಿತು. ಸದ್ಯಕ್ಕೆ ಬನಶಂಕರಿಯ ಮನೆ ’ಅಮ್ಮೀಜಾನ್’ನಲ್ಲಿ ಲಲಿತೆ, ಅತ್ತೆ, ಮಕ್ಕಳು, ಮೊಮ್ಮಕ್ಕಳು ನಾನು ಮತ್ತು ನಾಯಿ! ನಿವೇದಿತ ಖರೀದಿಸಿದ್ದ ಮನೆಯೊಂದನ್ನು ಕಳೆದ ವರ್ಷ ನಾನು ಖರೀದಿಸಿದ್ದೆ. ಈ ವರ್ಷ, ಅದನ್ನು ನಾನು ಮತ್ತು ನಮ್ಮ ಹುಡುಗ ಸೀನನಿಗೆ ಉಡುಗೊರೆಯಾಗಿ ಕೊಟ್ಟೆ. ಅವನು ಸುಮಾರು ಮೂವತ್ತು ವರ್ಷದಿಂದ ನನ್ನೊಂದಿಗಿದ್ದಾನೆ, ನನ್ನ ನೆರಳಿನಂತೆ, ಇನ್ನು ಈ ಆಫೀಸು. ’ನನಗೆ ಇಲ್ಲೇ ಬೃಂದಾವನ!’ ಅಂತ ಗೆಳೆಯರಲ್ಲಿ ತಮಾಷೆ ಮಾಡುತ್ತಿರುತ್ತೇನೆ. ಬ್ರಾಹ್ಮಣರ ಭಾಷೆಯಲ್ಲಿ ಬೃಂದಾವನ ಎಂದರೆ ಸಮಾಧಿ. ಇದು ನನ್ನ ಸ್ವಂತದ್ದು. ನನಗೆ ಸಾಲ ಕೂಡ ಇದೆ. ಅದರ ಮೊತ್ತ ನಾಲ್ಕು ಕೋಟಿ ರೂಪಾಯಿ. ನನಗಿರುವ ಒಂದೇ ಬ್ಯಾಂಕು, ಕರ್ಣಾಟಕ ಬ್ಯಾಂಕು.

ಕಳೆದ ಸಾಲಿನಲ್ಲಿ ನಾನು ಕಟ್ಟಿರುವ ಇನ್‌ಕಮ್ ಟ್ಯಾಕ್ಸ್ ಊವತ್ನಾಲ್ಕು ಲಕ್ಷದ ನಲವತ್ನಾಲ್ಕು ಸಾವಿರದ ಐದು ನೂರು ರುಪಾಯಿ (೫೪,೪೪,೪೫೦/- ರೂ). “ಪತ್ರಿಕೆ” ಮತ್ತು ಪುಸ್ತಕ ಪ್ರಕಾಶನಗಳು ಲಾಭದಲ್ಲಿವೆ. ’ಹಾಯ್ ಬೆಂಗಳೂರ್‍!”ನ ಸಿಬ್ಬಂದಿಗೆ ಪ್ರತೀ ತಿಂಗಳು ಕೊಡುವ ಸಂಬಳ ನಾಲ್ಕು ಲಕ್ಷದ ಇಪ್ಪತ್ತು ಸಾವಿರ. “ಪ್ರಾರ್ಥನಾ” ದಲ್ಲಿ ೩೪೯ ಜನ ಸಿಬ್ಬಂದಿಯವರಿದ್ದಾರೆ. ಅವರಿಗೆ ಸಂದಾಯವಾಗುವ ವಾರ್ಷಿಕ ಸಂಬಳ: ೨ ಕೋಟಿ ೮೨ ಲಕ್ಷ ರುಪಾಯಿ. ಅಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆ ೫,೯೦೦. “ಪ್ರಾರ್ಥನಾ”ಗೆ ನಾಲ್ಕು ಸ್ವಂತ ಕಟ್ಟಡಗಳು, ಚಿಕ್ಕ ಆಟದ ಬಯಲು ಇದ್ದು, ಎರಡು ಕಟ್ಟಡಗಳನ್ನು ಬಾಡಿಗೆಗೆ ಪಡೆದಿದ್ದೇನೆ. ನಮ್ಮಲ್ಲಿ ಅತಿ ಹೆಚ್ಚಿನ ಸಂಬಳ ಪಡೆಯುವಾಕೆ ನಿವೇದಿತಾ. ಈ ವರ್ಷ ಕೂಡ ಎಸೆಸೆಲ್ಸಿಯಲ್ಲಿ ನೂರಕ್ಕೆ ನೂರು ವಿದ್ಯಾರ್ಥಿಗಳು ತೇರ್ಗಡೆಯಾದುದಕ್ಕೆ ಪ್ರಿನ್ಸಿಪಾಲ್ ಶೀಲಕ್ಕನಿಗೆ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ.

ನನ್ನ ಲಾಭದ ಒಂದಷ್ಟು ಪರ್ಸೆಂಟ್ ಹಣವನ್ನು ವಿದ್ಯಾರ್ಥಿಗಳಿಗೆ, ಖಾಯಿಲೆಯವರಿಗೆ ಖರ್ಚು ಮಾಡುವುದು ನಿಮಗೆ ಗೊತ್ತು. ತೀರಿಹೋದ ಮಿತ್ರ “ಸೀತಾನದಿ ಸುರೇಂದ್ರ’ ನ ಹೆಸರಿನ ಸ್ಕಾಲರ್‍‌ಷಿಪ್ ಯೋಜನೆಯ ಅಡಿಯಲ್ಲಿ ತುಂಬಾ ಮಕ್ಕಳು ಓದುತ್ತಿದ್ದಾರೆ. ಇಂಜನೀಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಿಂದ ಹಿಡಿದು ಹೈಸ್ಕೂಲುಗಳ ತನಕ ವಿವಿಧ ಕಡೆಗಳಲ್ಲಿ ಓದುತ್ತಿದ್ದಾರೆ. ಈ ವರ್ಷದ ವಿಶೇಷವೇನೆಂದರೆ, ಒಬ್ಬ ಪ್ರತಿಭಾವಂತ ಹುಡುಗಿ ಐ.ಎ.ಎಸ್ ಮಾಡುತ್ತಿದೆ. ಅನೇಕ ಹೃದ್ರೋಗಿಗಳು, ಮೂತ್ರಪಿಂಡ ವಿಫಲವಾದವರು, ಕ್ಯಾನ್ಸರ್‍ ವಿರುದ್ದ ಬಡಿದಾಡುತ್ತಿರುವವರು, ಹೆಚ್.ಐ.ವಿ ಸೋಂಕು ತಗುಲಿದವರು-ನೆರವು ಪಡೆಯುತ್ತಿದ್ದಾರೆ.

ಇವೆಲ್ಲ ಹಣ ಓದುಗ ದೊರೆಗಳದು.

ನನ್ನದು ಕೇವಲ ಬಟವಾಡೆಯ ಜವಾಬ್ದಾರಿ. ಅಂದ ಹಾಗೆ, ನನ್ನ ಸೋಮಾರಿತನದಿಂದಾಗಿ ಈ ವರ್ಷ ಒಂದೇ ಒಂದೂ ಪುಸ್ತಕ ಬರೆದಿಲ್ಲ. “ಓ ಮನಸೇ…” ಸ್ಥಗಿತಗೊಂಡದ್ದಕ್ಕೂ ಅದೇ ಕಾರಣ.

ಪತ್ರಿಕೆ ಆರಂಭವಾದಾಗಿನಿಂದ ನನ್ನೊಂದಿಗೆ ಸ್ಥಿರವಾಗಿ ನಿಂತಿರುವ ಗೆಳೆಯರ ಪೈಕಿ ಆರ್‍.ಟಿ.ವಿಠ್ಠಲಮೂರ್ತಿ ನನಗೆ ಅತ್ಯಂತ ಆಪ್ತ. ಇನ್ನೇನು ಲೆಕ್ಕ ಕೊಡಲಿ?

-ಬೆಳಗೆರೆ


ಕೃತಿಗಳು

ಆಗಷ್ಟ್ 24, 2010

ಗೆಲುವೆಂಬ ಅಂತ್ಯವಿಲ್ಲದ ಪಯಣಕ್ಕೆ ಏನೇನು ಬೇಕು?

ನವೆಂಬರ್ 18, 2009

’ಗೆಲುವು’ ಎಂಬ ಮೂರಕ್ಷರದ ಸಂಗತಿಗೆ ಸಂಬಂಧಿಸಿದಂತೆ ಅನೇಕ ದಶಕಗಳಿಂದ ರಿಸರ್ಚು ನಡೆಯುತ್ತಲೇ ಇದೆ. ಗೆಲುವೆಂಬುದು ಆಕಸ್ಮಿಕವಾ? ಖಂಡಿತ ಅಲ್ಲ. ಅವಿವೇಕಿಗಳು ಮಾತ್ರ ಬದುಕಿನಲ್ಲಿ ಆಕಸ್ಮಿಕದಂತಹುದೇನಾದರೂ ಘಟಿಸಲಿ ಎಂದು ಕಾಯುತ್ತ ಕೂಡುತ್ತಾರೆ. ತುಂಬ ಸುಂದರವಾದ ತೋಟವೊಂದರಿಂದ ಹೊರಬರುತ್ತಿದ್ದ ಅದರ ಒಡೆಯನನ್ನು ನಿಲ್ಲಿಸಿ ಪಾದ್ರಿ ಹೇಳಿದನಂತೆ, ’ದೇವರು ತುಂಬ ಹೃದಯವಂತ. ನಿನಗೆ ಅದ್ಬುತವಾದ ತೋಟ ಕೊಟ್ಟಿದ್ದಾನೆ. ಆತನಿಗೆ ನೀನು ಋಣಿಯಾಗಿರಬೇಕು.’ ಕೂಡಲೇ ತೋಟದ ಒಡೆಯ ವಿನೀತವಾದ ದನಿಯಲ್ಲಿ ಹೇಳಿದನಂತೆ: ’ನಿಜ, ದೇವರು ಹೃದಯವಂತ. ನನಗೆ ತೋಟ ಕೊಟ್ಟ. ಆದರೆ ಕೊಡುವ ಮುನ್ನ ಆತನ ಹತ್ತಿರವೇ ಇತ್ತಲ್ಲ ತೋಟ? ಆಗ ನೋಡಬೇಕಿತ್ತು ನೀವು ಆ ತೋಟವನ್ನ!’ ಮನುಷ್ಯನ ವಿಶ್ವಾಸವೆಂದರೆ ಅದು.

ಗೆಲುವು ಎಂಬುದು ಒಂದು ಕೊನೆಯಲ್ಲ, ಒಂದು ಗೋಲ್ ಅಲ್ಲ, ಹತ್ತಿನಿಂದ ಬೆಟ್ಟವಲ್ಲ. ಅದು ನಿರಂತರವಾಗಿ ಸಾಗುತ್ತಾ ಹೋಗುವಂತಹದು. ಅದಕ್ಕೆ ಕೊನೆಯೇ ಇಲ್ಲ. ಅದಕ್ಕೆ ಕೊನೆಯೇ ಇಲ್ಲ. ಮನುಷ್ಯ ಗೆಲುವಿನಿಂದ ಗೆಲುವಿಗೆ ನಡೆಯತ್ತ ಹೋಗಬೇಕು. ಗೆದ್ದ ಮನುಷ್ಯ ಹೋಗುತ್ತಿರುತ್ತಾನೆ. ಗೆಲ್ಲಲಾಗದವನು ಅದೃಷ್ಟಕ್ಕಾಗಿ ಕಾಯುತ್ತಾ ಕೊತಿರುತ್ತಾನೆ. ಮೊದಲಿನವನು ಅಡೆತಡೆಗಳನ್ನು ದಾಟಿ ಮುಂದಕ್ಕೆ ಹೋಗುತ್ತಿರುತ್ತಾನೆ. ಇನ್ನೊಬ್ಬ ಎಲ್ಲಿಯೂ ತಲುಪದೆ ನಿಂತಲ್ಲೇ ಗಿರಕಿ ಹೊಡೆಯುತ್ತಿರುತ್ತಾನೆ. ಇಬ್ಬರಿಗೂ ಕೆಲವು ವ್ಯತ್ಯಾಸಗಳಿವೆ. ಅಸಾಮಾನ್ಯ ಅನ್ನಿಸಿಕೊಂಡ ಮನುಷ್ಯ ಅವಕಾಶಗಳಿಗಾಗಿ ಎದುರು ನೋಡುತ್ತಿರುತ್ತಾನೆ., ಸಿದ್ಧನಾಗುತ್ತಿರುತ್ತಾನೆ. ಸಾಮಾನ್ಯ ಮನುಷ್ಯ ತನ್ನ ಸೇಫ್ಟಿ ನೋಡಿಕೊಂಡು ಬೆಚ್ಚಗೆ ಉಳಿದುಬಿಡುತ್ತಾನೆ.

ನೀವು ಇತಿಹಾಸವನ್ನೇ ನೋಡಿ, ಅಲ್ಲೆಲ್ಲೋ ಅಲೆ ಕ್ಝಾಂಡರ್‍ ಇದ್ದಾನೆ. ತಾಮರ್‍ಲೆನ್ ಇದ್ದಾನೆ. ಎಲ್ಲರೂ ಗೆಲುವಿನ ರುಚಿ ಕಂಡವರೆ. ಇವರೆಲ್ಲರ ವ್ಯಕ್ತಿತ್ವಗಳನ್ನೂ ಸ್ಟಡಿ ಮಾಡಿದಾಗ, ಎಲ್ಲರಲ್ಲೂ ಕೆಲವು ಕಾಮನ್ ಕ್ವಾಲಿಟಿಗಳಿದ್ದವು. ಅನಿಸುತ್ತದೆ. ಅವರು ಬದುಕಿದ್ದ ಕಾಲ ಯವುದೇ ಇರಲಿ. ಆಗುಣಗಳು ಮಾತ್ರ ಕಾಮನ್ನಾಗಿ ಇಲ್ಲರಲ್ಲೂ ಇರುತ್ತವೆ. ಆಗುಣಗಳನ್ನು ತಕ್ಷಣ ಅರ್ಥ ಮಾಡಿಕೊಳ್ಳಿ. ಅವುಗಳನ್ನು ನಿಮ್ಮವನ್ನಾಗಿ ಮಾಡಿಕೊಳ್ಳಿ. ಗೆಲುವು ಎಂಬುದು ಆನೆಯಂತಹುದು. ಅದು ಹೋದಲ್ಲೆಲ್ಲ ಹೆಜ್ಜೆ ಗುರುತು ಬಿಟ್ಟಿರುತ್ತದೆ. ಆಜಾಡು ಗಮನಿಸಿ. ಸೋಲು ಕೂಡ ಆನೆಯಂತಹುದೇ. ಅದೂ ಹೆಜ್ಜೆ ಜಾಡು ಬಿಟ್ಟಿರುತ್ತದೆ. ಅಂಥ ಗೆಲು ಗೆದ್ದ ಬಾಬರನನ್ನು ನೋಡುತ್ತೇವೆ. ಮರು ಘಳಿಗೆಯಲ್ಲೇ ದೊಡ್ಡ ಮಟ್ಟದಲ್ಲಿ ಅಸಫಲತೆಯನ್ನು ಕಂಡ ಹುಮಾಯೂನ ನನ್ನು ನೋಡುತ್ತೇವೆ. ಹುಮಾಯೂನನ ಬಲಹೀನತೆಗಳು ಏನಿದ್ದವು ಎಂಬುದನ್ನು ತಕ್ಷಣ ತಿಳಿದುಕೊಳ್ಳಿ. ಅವುಗಳನ್ನು ಅವೈಡ್ ಮಾಡಿ. ಬಾಬರನ ಗಟ್ಟಿತನ ನಿಮ್ಮದಾಗಲಿ. ಸೋಲು ನಿಮ್ಮನ್ನು ಹೆದರಿಸುವುದಿಲ್ಲ.

ಇಷ್ಟಕ್ಕೂ ಗೆಲುವೆಂಬುದು ಬಹಳ ನಿಘೂಡತೆಯೇ ಅಲ್ಲ. ಅದರಲ್ಲಿ ರಹಸ್ಯವೆಂಬ ಮಣ್ಣಂಗಟ್ಟಿಯೂಇಲ್ಲ. ಕೆಲುವು ಮೂಲಭೂತ ಸೂತ್ರಗಳಿರುತ್ತವೆ. ಅವುಗಳನ್ನು ಬದುಕಿಗೆ ಅನ್ವಯಿಸಿಕೊಳ್ಳುತ್ತಾ ಹೋಗುವುದೇ ಗೆಲುವಿನ ಗುಟ್ಟು. ಸೋಲು ಕೂಡ ಅಷ್ಟೆ. ಸೋತ ಮನುಷ್ಯ ದುರದ್ರುಷ್ಟವಂತನಾಗಿರುವುದಿಲ್ಲ. ಅವನು ಪ್ರತೀಸಲ ಮಾಡಿದತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಿರುತ್ತಾನೆ. ಕೆಲುವರಿಗೆ ’ಗೆಲುವು’ ಅಂದರೇನು ಎಂಬ ಬಗ್ಗೆಯೇ ಗೊಂದಲವಿರುತ್ತದೆ. ಕೆಲವರ ಮಟ್ಟಿಗೆ ದುಡ್ಡೇ ಗೆಲುವು. ದುಡ್ಡು ಸಂಪಾದಿಸಿದ ಮನುಷ್ಯನೇ ಯಶಸ್ವಿ ಮನುಷ್ಯ ಅಂದುಕೊಳ್ಳುತ್ತಾರೆ. ಮತ್ತೆ ಕೆಲವರಿಗೆ ಸಾಮಾಜಿಕ ಮನ್ನಣ್ಣೆ ಬೇಕು. ದೊಡ್ಡ ಹೆಸರು ಮಾಡಿದವರೇ ಯಶಸ್ವಿ ಪುರುಷರು ಅಂದುಕೊಳ್ಳುತ್ತಾರೆ. ಒಳ್ಳೆಯ ಆರೋಗ್ಯ, ಚೆಂದನೆಯ ಕುಟುಂಬ, ಸಮಾಧಾನ, ಸಂತೋಷ. ಮನಸ್ಸಿನ ನೆಮ್ಮದಿ ಇದ್ದರೆ ಅದೇ ಗೆಲುವು ಅಂದುಕೊಳ್ಳುತ್ತಾರೆ.  ಎಲ್ಲವೂ ನಿಜವಿರಬಹುದು. ಇವೆಲ್ಲ ಅಲ್ಲದೆ ಇನ್ನೆನ್ನೋ ಆಗಿರಲೂ ಬಹುದು. ಈ ಕ್ಷಣಕ್ಕೆ ಮಹಾನ್ ಗೆಲುವು ಅನ್ನಿಸಿದ್ದು ಮಾರನೆಯ ನಿಮಿಷಕ್ಕೆ ಏನೂ ಅಲ್ಲ ಅಂತ ಅನ್ನಿಸಿ ಬಿಡಲೂಬಹುದು ಆದರೆ ಕರಾರುವಕ್ಕಾಗಿ ಹೇಳುವುದಾದರೆ, ಗೆಲುವು ಎಂಬುದು ನಾವು ನಿರಂತರವಾಗಿ ಚೇಸ್ ಮಾಡುತ್ತಾ, ಗೆಲ್ಲುತ್ತಾ, ತಲುಪುತ್ತಾ ಹೋಗುವ ಅರ್ಥಪೂರ್ಣ ಗುರಿ.

ಹೇಳಿದೆನಲ್ಲ, ಗೆಲುವೆಂಬುದು ನಿರಂತರ ಪಯಣ. ಅಲ್ಲಿ ಖಾಯಂ ಆದ ಕೊನೆಯ ನಿಲ್ದಾಣವೆಂಬುದೇ ಇಲ್ಲ. ಅಂಥದೊಂದು ನಿಲುಗಡೆಗೆ ನಾವು ತಲುಪುವುದೂ ಇಲ್ಲ. ಒಂದು ನಿಲ್ದಾಣ ತಲುಪಿದ ಕೂಡಲೇ ಮತ್ತೊಂದು ನಿಲ್ದಾಣಕ್ಕೆ ಹೋಗಬೇಕು. ಒಂದು ನಿಲ್ದಾಣವನ್ನು ತಲುಪಿದಾಗ ಆಗುವ ಸಂತೋಷವೇ ಒಂದು ಅನುಭೂತಿ. ಅದನ್ನು ಒಳಗಿನಿಂದ ಫೀಲ್ ಮಾಡಬೇಕೇ ಹೊರತು ಬಾಹ್ಯ ಜಗತ್ತು ನಮಗೆ ಅದರ ಅನುಭವವನ್ನು ವಿವರಿಸಲಾರದು. ಹಾಗೇ ನಿಲ್ಧಾಣಗಳನ್ನು ದಾಟುತ್ತ, ದಾಟುತ್ತ ನಾವು ಹೋಗುತ್ತಿರುವುದು ಸರಿಯಾದ ಗಮ್ಯದ ಕಡೆಗೇನಾ? ಅದು ಆರೋಗ್ಯಕರ ಗಮ್ಯವೇನಾ? ಪಾಸಿಟೀವ್ ಆಗಿದೆಯಾ? ಕೇಳಿಕೊಳ್ಳಬೇಕು. ಪ್ರಯಾಣದಲ್ಲೇ ನಮಗದು ಗೊತ್ತಾಗಿ ಹೋಗುತ್ತದೆ. ಸರಿಯಾದ ದಾರಿಯಾಗಿದ್ದರೆ ನಾವಾಗಲೇ ಒಂದು ದುವ್ಯ ಅನುಭೂತಿಗೆ ಒಳಗಾಗಿರುತ್ತೇವೆ. ಅಂಥ ದಿವ್ಯಾನುಭೂತಿ ನಿಮಗೆ ಆಗದಿದ್ದರೆ, ನಿಮ್ಮ ಗೆಲುವು ನಿರರ್ಥಕ.

ಎಲ್ಲರೂ ಒಪ್ಪಿಕೊಂಡಿದ್ದಾರೆ ಅಂದಮಟ್ಟಿಗೆ ಅದು ಗೆಲುವಲ್ಲ. ಒಪ್ಪಿಕೊಳ್ಳದವರೂ ಅನೇಕರಿರಬಹುದು. ಇವತ್ತಿನ ನನ್ನ ಅಛೀವ್‌ಮೆಂಟ್‌ಗಳನ್ನು ’ಆಹಾ’ ಅಂತ ಮೆಚ್ಚಿ ಹೊಗಳುವ ಮೂರ್ಖರಿಗಿಂತ, ನನ್ನ ಗೆಲುವನ್ನು ಗೆಲುವೇ ಅಲ್ಲವೆಂದು ಗೇಲಿ ಮಾಡುವ ಬುದ್ದಿವಂತರು ನನಗೆ ಇಷ್ಟವಾಗುತ್ತಾರೆ. ಆದರೆ ಗೆಲುವು ಮತ್ತು ಸಂತೋಷಗಳೆರಡೂ ಕೈ ಕೈ ಹಿಡಿದು ನಡೆಯುತ್ತವೆ. ಗೆದ್ದ ಮನುಷ್ಯನಿಗೆ, ತಾನು ಕೇವಲ ಉಸಿರಾಡುತ್ತಿಲ್ಲ: ಬದುಕಿದ್ದೇನೆ ಅಂತ ಗೊತ್ತಾಗುತ್ತಿರುತ್ತದೆ. ಅದು ಕೇವಲ ಸ್ಪರ್ಷವಲ್ಲ. ಅನುಭೂತಿ ಅನ್ನಿಸುತ್ತಿರುತ್ತದೆ. ಆತ ಯಾವುದನ್ನೂ ಸುಮ್ಮನೆ ನೋಡುವುದಿಲ್ಲ: ಗಮನಿಸುತ್ತಿರುತ್ತಾನೆ.ಕೇವಲ ಓದುವುದಿಲ್ಲ. ಓದಿದ್ದು ಆತನಲ್ಲಿ ಮಿಳಿತವಾಗುತ್ತಿರುತ್ತದೆ. ಆತ ಕೇವಲ ಕೇಳುವುದಿಲ್ಲ: ಆಲಿಸುತ್ತಿರುತ್ತಾನೆ. ಅರ್ಥ ಮಾಡಿಕೊಳ್ಳುತ್ತಿರುತ್ತಾನೆ. ಗೆಲುವೆಂದರೆ, ಇವೆಲ್ಲವುಗಳ ಸಮಾಗಮ.

ಗೆಲ್ಲುವ ಎಲ್ಲ ಅವಕಾಶಗಳಿದ್ದೂ ಒಬ್ಬ ಮನುಷ್ಯ ಸೋಲುತ್ತಿದ್ದಾನೆ ಅಂದರೆ ಆತ ದುರದೃಷ್ಟವಂತ ಅನ್ನುತ್ತೀರಾ? ಖಂಡಿತ ಇಲ್ಲ. ಆತನಿಗೇ ಗೊತ್ತಿಲ್ಲದೆ ಆತನನ್ನು ಅನೇಕ ಸಂಗತಿಗಳು ಕೈಹಿಡಿದು ಜಗ್ಗುತ್ತಿರುತ್ತವೆ. ಅಹಂಕಾರವೊಂದೇ ಸಾಕು; ಅದು ಗೆಲುವಿನ ಮೊದಲ ಶತ್ರು . ಸೋತೇನೆಂಬ ಭಯ, ಆತ್ಮ ನಿಂದನೆ, ಕೀಳರಿಮೆ, ಸರಿಯಾದ ಪ್ಲಾನ್ ಇಲ್ಲದಿರುವುದು, ಖಚಿತವಾದ ಗೋಲ್‌ಗಳಿಲ್ಲದಿರುವುದು, ಮಾಡಬೇಕು ಎಂದುಕೊಂಡ ಕೆಲಸಗಳನ್ನು ಮುಂದಕ್ಕೆ ಹಾಕುತ್ತಾ ಹೋಗುವುದು, ಮನೆ ಮಂದಿಯೆಲ್ಲರ ಜವಾಬ್ದಾರಿಯನ್ನು ಹೊತ್ತು ಬಿಡುವುದು, ಯಾವುದರ ಮೇಲೂ ಗಮನ ಕೇಂದ್ರೀಕರಿಸಲು ಸಾದ್ಯವಾಗದೇ ಹೋಗುವುದು, ಚಿಕ್ಕ ಪುಟ್ಟ ಲಾಭಗಳಿಗಾಗಿ ದೊಡ್ಡ ಮಟ್ಟದ ದೂರದರ್ಶಿತ್ವ ಕಳೆದುಕೊಳ್ಳುವುದು, ಪ್ರತಿಯೊಂದನ್ನೂ ತಾನೇ ಮಾಡುತ್ತಾ ಹೋಗುತ್ತೇನೆನ್ನುವುದು, ಕಮಿಟ್‌ಮೆಂಟೇ ಇಲ್ಲದಿರುವುದು, ಸರಿಯಾದ ತರಬೇತಿ ಇಲ್ಲದೇ ಹೋಗುವುದು, ಹಿಡಿದ ಕೆಲದ ಮುಗಿಸಿ ತೀರುತ್ತೇನೆ ಎಂಬ ಹಟದ ಕೊರತೆ, ಯಾವುದನ್ನು ಮೊದಲು ಮಾಡಬೇಕು ಎಂಬ ಪರಿಜ್ಞಾನವಿಲ್ಲದಿರುವುದು-ಇವೆಲ್ಲವೂ ಒಬ್ಬ ಮನುಷ್ಯನನ್ನು ಗೆಲುವಿನಿಂದ ಹೊಂದಕ್ಕೆ ಎಳೆದುಬಿಡುತ್ತವೆ.

ಕ್ಷಮಿಸಿ, ಮೊನ್ನೆ ಗೆಲುವಿನ ಬಗ್ಗೆ ಪುಸ್ಕವೊಂದನ್ನು ಓದುತ್ತಿದ್ದಾಗ ನಾನು ಮಾಡಿಕೊಂಡ ಚಿಕ್ಕ ಟಿಪ್ಪಣಿಯದು. ಪುಸ್ತಕವನ್ನು ಬರೆದವರು ಶಿವ್‌ಖೇರಾ.


ಫಸ್ಟ್ ಹಾಫ್:ಐವತ್ತರ ಬೆಳಗೆರೆಗೆ ಅಕ್ಕರೆ ಕೊಡುಗೆ

ಅಕ್ಟೋಬರ್ 8, 2009

ಫಸ್ಟ್ ಹಾಫ್

ಫಸ್ಟ್ ಹಾಫ್

ಪತ್ರಿಕೆ-ಸಾಹಿತ್ಯ ಕೃತಿಗಳ ಮೂಲಕ, ಟಿ.ವಿ-ಸಿನೆಮಾ ಮಾಧ್ಯಮಗಳ ಮೂಲಕ ಓದುಗರ-ವೀಕ್ಷಕರ ಪಾಲಿಗೆ ಸದಾ ಅಚ್ಚರಿ-ಹೊಸ ಅನುಭವಗಳನ್ನು ಸೃಷ್ಟಿಸುವ ವಿಸ್ಮಯಗಳ ಸರದಾರ ರವಿ ಬೆಳಗೆರೆ ಅವರಿಗೆ ಐವತ್ತೆರಡರ ಹರೆಯ!

“ಫಸ್ಟ್ ಹಾಫ್…” ಇದು ಬೆಳಗೆರೆಯವರ ಐವತ್ತನೇ ವರ್ಷದ ಸಂಭಾವನಾ ಗ್ರಂಥ. ಬೆಳಗೆರೆ ಅವರ ಸಾಧನೆ-ಸಿದ್ದಿಗಳ ಕುರಿತು ಹೊಗಳುವವರಿಗಿಂತ, ತೆಗಳುವವರಿಗಿಂತ ಸಂಪೂರ್ಣ ಬಿನ್ನವಾಗಿ ಕಂಡವರೆಂದರೆ ಅವರ ಸಹೋದ್ಯೋಗಿಗಳು. ಇವರೆಲ್ಲರ ಅಕ್ಕರೆಯ ಕೊಡುಗೆಯೇ “ಫಸ್ಟ್ ಹಾಫ್”.

“ಫಸ್ಟ್ ಹಾಫ್…” ಹೆಸರನ್ನು ಬದುಕಿನ ಮೊದಲ ಐವತ್ತು ವರ್ಷಗಳಿಂದ ಎಂಬ ಅನ್ನುವ ಅರ್ಥದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. ರವಿ ಬೆಳಗೆರೆ ಅವರ ಹುಟ್ಟಿನಿಂದ ಈ ಐವತ್ತು ವರ್ಷಗಳ ಅವಧಿಯ ಸಾಧನೆ ಸಿದ್ದಿಗಳನ್ನು, ಏಳು-ಬೀಳುಗಳ ಚಿತ್ರಣವನ್ನು ಸೆರೆಹಿಡಿಯಲು ಈ ಕೃತಿಯಲ್ಲಿ ಪ್ರಯತ್ನಿಸಿಲಾಗಿದೆ.

ಕೃತಿಯ ವಿವರ:

ಸಂಪಾದಕರು: ಶರತ್ ಕಲ್ಕೋಡ್

ಪರಿಕಲ್ಪನೆ ಮತ್ತು ವಿನ್ಯಾಸ: ರವಿ ಅಜ್ಜೀಪುರ, ವಿಜಯಕುಮಾರ್‍ ಅಮೀನಗಡ

ಮುಖಪುಟ ಚಿತ್ರ: ಎಸ್.ಜಿ.ನಿವೇದಿತಾ.

ಇಂತಿಪ್ಪ “ಫಸ್ಟ್ ಹಾಫ್…” ಕೃತಿಯ ಕೆಲಪುಟಗಳನ್ನು ಆ ಮೂಲಕ ಬೆಳಗೆರೆಯವರ ಅನುಭವದ ನುಡಿಗಳನ್ನು ಜೊತೆ ಜೊತೆಗೇ ಹಲವು ಅಮೂಲ್ಯ ಭಾವಚಿತ್ರಗಳನ್ನೂ ಸಹಾ ಈ ಬ್ಲಾಗಿನಲ್ಲಿ ಪ್ರಕಟಿಸಲಾಗುತ್ತಿದೆ. ಬ್ಲಾಗಿನ ಸೈಡ್ ಬಾರಿನಲ್ಲಿರುವ ಫಸ್ಟ್ ಹಾಫ್ ಲಿಂಕನ್ನು ಕ್ಲಿಕ್ ಮಾಡುವುದರ ಮೂಲಕ ಪಸ್ಟ್ ಹಾಫ್ ನ ಪರಿಚಯವನ್ನು ನೀವು ಮಾಡಿಕೊಳ್ಳಬಹುದು. ಒಮ್ಮೆ ಭೇಟಿ ಮಾಡಿ ತಮ್ಮ ಅನಿಸಿಕೆ, ಸಲಹೆ ಹಾಗೂ ಅಭಿಪ್ರಾಯಗಳನ್ನು ತಿಳಿಸಿದರೆ ನಾನು ಧನ್ಯ ಹಾಗೂ  ನನ್ನ ಪ್ರಯತ್ನ ಸಾರ್ಥಕ.

ಈ ಬ್ಲಾಗಿನ ಸೈಡ್ ಬಾರಿನಲ್ಲಿರುವ ಮೊದಲ ಲಿಂಕನ್ನು ಕ್ಲಿಕ್ ಮಾಡಿ.

-ಭಾಸ್ಕರ್‍


ದೊಡ್ಡ ತಪ್ಪು ತಿದ್ದಿಕೊಳ್ಳುತ್ತೇವೆಂದು ಹೊರಡುವ ಭರದಲ್ಲಿ…

ಅಕ್ಟೋಬರ್ 4, 2009

smoking

“ಅದೊಂದು ಇಲ್ದೆ ಹೋದ್ರೆ ಅವನು ದೇವರಂಥ ಮನುಷ್ಯ. ಏನು ಮಾಡೋದು ಹೇಳಿ? ವಿಪರೀತ ಕುಡೀತಾನೆ…” ಎಂಬ ಧಾಟಿಯ ಮಾತು ಸಾಕಷ್ಟು ಕೇಳಿರುತ್ತೀರಿ. “ಅದೊಂದು ಇಲ್ಲದೆ ಹೋದರೆ” ಎಂಬುದಕ್ಕೆ ಹೆಚ್ಚಿನ ಮಹತ್ವವಿರುತ್ತದೆ ಮಾತುಗಳಲ್ಲಿ. ಅವನು ಕುಡುಕ, ಕೃಪಣ, ಕೋಪಿಷ್ಟ, ಲಂಪಟ, ಜುಗಾರಿ ಇತ್ಯಾದಿ ಇತ್ಯಾದಿ. ಈ ಪೈಕಿ ಯಾವುದಿರುತ್ತದೋ ಅದನ್ನು ಹೆಸರಿಸಿ, “ಅದೊಂದು” ಇಲ್ದೆ ಹೋಗಿದ್ರೆ ದೇವರಂಥ ಮನುಷ್ಯ ಅನ್ನುವುದು ಲೋಕಾರೂಢಿ. ಇದು ಪರಂಪರಾಗತವಾಗಿ ಬಂದ ಮೂರ್ಖತನವೂ ಹೌದು.

ದುಶ್ಚಟಗಳನ್ನು ನಾನು ಬೆಂಬಲಿಸುತ್ತೇನೆ ಅಂದುಕೊಳ್ಳಬೇಡಿ. ಆದರೆ ನಿಜಕ್ಕೂ ದುಶ್ಚಟಗಳು ನಮಗೆ ಮಾಡಬಹುದಾದ ಹಾನಿಗಳೇನು ಅನ್ನೋದನ್ನು ನೋಡೋಣ ಬನ್ನಿ. ಮೊದಲನೆಯದಾಗಿ ಕುಡಿತವನ್ನೇ ತೆಗೆದುಕೊಳ್ಳಿ. ಕುಡಿತ ಆರೋಗ್ಯ ಕೆಡಿಸುತ್ತದೆ, ಮರ್ಯಾದೆ ಕಳೆಯುತ್ತದೆ, ಸ್ಥಿಮಿತ ಹಾಳು ಮಾಡುತ್ತದೆ ಅಂತೆಲ್ಲಾ ಅಂತಾರೆ. ಇವೆಲ್ಲಕ್ಕಿಂತ ಹೆಚ್ಚಿನ ಅಪಾಯವನ್ನು ಜನ ಗಮನಿಸಿರುವುದಿಲ್ಲ. “ಕುಡಿತ ಮನುಷ್ಯನನ್ನು ಸೋಮಾರಿಯನ್ನಾಗಿ ಮಾಡುತ್ತದೆ” ಎಂಬುದು ಹೆಚ್ಚು ನಿಜ. ವಿಪರೀತ ಕುಡಿರುವವರು ಕೆಲಸಗಳನ್ನು ಮುಂದೂಡುತ್ತಾ ಹೋಗುತ್ತಾರೆ. ಆರರಿಂದ ಹನ್ನೆರಡು ತಾಸು ಕುಡಿತಕ್ಕೆ ಖರ್ಚಾಗಿ ಹೋಗುತ್ತದೆ. ಕುಡಿದಾಗ ಸೊಗಸಾದ ಐಡಿಯಾಗಳು ಬರುತ್ತವಾದರೂ, ಅವುಗಳನ್ನು ಕಾರ್ಯರೂಪಕ್ಕೆ ತುವಷ್ಟರಲ್ಲಿ ಮನುಷ್ಯ ಮತ್ತೆ ಕುಡಿದಿರುತ್ತಾನೆ ಅಥವಾ ಕಾರ್ಯರೂಪಕ್ಕೆ ತರುವಷ್ಟು ಸಹನೆ ಮತ್ತು ಎನರ್ಜಿ ಉಳಿದಿರುವುದಿಲ್ಲ. ವಿಪರೀತ ಧಾರಾಳಿಯಾಗುತ್ತಾನೆ. ಗಿಲ್ಟ್ ಮುಚ್ಚಿಡುವುದಕ್ಕಾಗಿ ಅವಮಾನಿತನಾಗುತ್ತಾನೆ. ಸಾಲಗಾರನಾಗುತ್ತಾನೆ.  ಕೊನೆಯಲ್ಲಿ ಕೂತು ಲೆಕ್ಕ ಹಾಕಿದರೆ ಒಬ್ಬ ಕುಡುಕ ವಿಫಲಜೀವಿಯಾಗಿರುತ್ತಾನೆ. ಇವೆಲ್ಲವೂ ಆತ ತನಗೆ ತಾನು ಮಾಡಿಕೊಳ್ಳುವ ಅಪಚಾರಗಳು. ಇದರಿಂದ ಆತನ ಮನೆ ಮಂದಿಗೆ ಸಮಸ್ಯೆಯಾಗಬಹುದೇ ಹೊರತು, ಬೇರೆ ತರಹದ ನಷ್ಟಗಳಿರುವುದಿಲ್ಲ. “ಕುಡಿದು ಅತ್ಯಾಚಾರ ಮಾಡಿದ, ಕೊಲೆ ಮಾಡಿದ” ಅಂದರೆ ನಾನು ಒಪ್ಪುವುದಿಲ್ಲ. ಅಲ್ಲಿ ಅವನಲ್ಲಿನ Instinct ಗಳು. “ಅತ್ಯಾಚಾರ ಮಾಡುವಾಗ ಆತ ಕುಡಿದಿದ್ದ ಅಥವಾ ಕೊಲೆ ಮಾಡುವಾಗ ಆತ ಕುಡಿದಿದ್ದ” ಎಂಬುದು ಹೆಚ್ಚುವರಿ. ಅಲ್ಲಿ ದೋಷ ಕುಡಿತದ್ದಲ್ಲ.

ಹಾಗೇನೇ ಇಸ್ಪೀಟು ಅದೂ ಕೂಡ ತನಗೆ ತಾನೇ ಮಾಡಿಕೊಳ್ಳುವ ಅಪಚಾರ. ದುರಾಸೆಗೆ ಬಿದ್ದ ಮನುಷ್ಯ ಇಸ್ಪೀಟಿನ ಚಟಕ್ಕೆ ಬಳಿತ್ತಾನೆ. ದುಡ್ಡಿಗಿಂತ ಹೆಚ್ಚಾಗಿ ಬದುಕಿನ ಅಮೂಲ್ಯ ಗಂಟೆಗಳನ್ನು, ದಿನಗಳನ್ನು ಚಕ್ಕಂಬಟ್ಲೆ ಹಾಕಿಕೊಂಡು ಕೂತು ಪೋಲು ಮಾಡಿ ಬಿಡುತ್ತಾನೆ. “ಸ್ಕರ್ಟ್ ಚೇಸಿಂಗ್” ಅಂತ ಇಂಗ್ಲಿಷಿನಲ್ಲಿ ಅನ್ನೋದು: ಹೆಂಗಸರ (ಮತ್ತು ಗಂಡಸರ) ಬಲಹೀನತೆಗೆ ಸಂಬಂಧಿಸಿದ ಹಾಗೆ. ಈ ಚಟವಿರುವವರು ವಿಪರೀತ ಸುಳ್ಳು ಹೇಳುತ್ತಾರೆ ಮೋಸ ಮಾಡುತ್ತಾರೆ ಎಂಬುದು ಬಿಟ್ಟರೆ ಈ ಚಟವೂ ಕೂಡ ತನಗೆ ತಾನು ಮಾಡಿಕೊಳ್ಳುವ ಅಪಚಾರವೇ. ಲೋಲುಪತೆಯ ಗುಂಗಿಗೆ ಬಿದ್ದು ರಾಜ್ಯಗಳನ್ನೇ ಕಳೆದುಕೊಂಡವರನ್ನು ನೋಡಿದ್ದೇನೆ. ಹೆಂಗಡ ಖಯಾಲಿಗೆ ಬಿದ್ದು ಹಣ, ಗೌರವ, ನೆಮ್ಮದಿ ಕಳೆದುಕೊಂಡವರಿದ್ದಾರೆ. ಆರೋಗ್ಯವನ್ನು ರಿಸ್ಕಿಗೆ ತಳ್ಳಿದವರೂ ಕಡಿಮೆಯಿಲ್ಲ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಈ ಚಟವೂ ಮನುಷ್ಯನ ಸಮಯವನ್ನು ಹಾಳು ಮಾಡುತ್ತದೆ. ಅತಿ ದೊಡ್ಡ ರಿಸ್ಕೆಂದರೆ ಅದೇ.

ಬಿಡಿ, ತಪ್ಪುಗಳ ಪಟ್ಟಿ ಮಾಡುತ್ತಾ ಹೋದರೆ ಬೆಳೆಯುತ್ತಲೇ ಹೋದೀತು. ಆದರೆ ಇವೆಲ್ಲವೂ ಮೇಜರ್‍ ಮಿಸ್ಟೇಕ್‌ಗಳು. ಕೆಲವೊಮ್ಮೆ ಅಕ್ಷಮ್ಯ ಅಂತ ಪರಿಗಣಿಸಲ್ಪಡುವಂತಹವು. ಇವು ಕೊಡುವ ಆನಂದ ಎಂಥದ್ದೇ ಆಗಿರಲೀ ಕಟ್ಟಿಸಿಕೊಳ್ಳುವ ಕಂದಾಯ ಮಾತ್ರ ಬಹಳ ದೊಡ್ಡದಾಗಿರುತ್ತದೆ. ನನ್ನ ಮಟ್ಟಿಗೆ ಒಬ್ಬ ಮನುಷ್ಯ ತನ್ನ ಚಟಗಳಿಗಾಗಿ ಕಟ್ಟುವ ಅತೀ ದೊಡ್ಡ ಕಂದಾಯವೇನೆಂದರೆ-ಸಮಯ. ನಿಜಕ್ಕೂ ಅಕ್ಷಮ್ಯವಾದುದು ಅದೇ: ಚಟವಲ್ಲ. ಒಂದು ಪೆಗ್ ವಿಸ್ಕಿ, ಒಂದು ಸುತ್ತು ಇಸ್ಪೀಟು, ಚಿಕ್ಕದೊಂದು ಸರಸ ಯಾರನ್ನೂ ಈತನಕ ಕೊಂದಿಲ್ಲ.

ಆದರೆ ತಪ್ಪುಗಳು ಕೊಲ್ಲಲೇ ಬೇಕು ಎಂದಿಲ್ಲವಲ್ಲ? ಲೆಕ್ಕ ಹಾಕಿದರೆ, ನಾವು ಯಾವ್ಯಾವುದನ್ನು ತಪ್ಪು-ಅಪರಾಧ ಅಥವಾ ದುಷ್ಚಟ ಅನ್ನುತ್ತೇವೆಯೋ, ಅವುಗಳಿಗಿಂತ ಹೆಚ್ಚು ತಪ್ಪುಗಳನ್ನು ದಿನವಿಡೀ ಮಾಡುತ್ತಿರುತ್ತೇವೆ. ಆದರೆ ದೊಡ್ಡ ತಪ್ಪಿನ ಅಥವಾ ದುಷ್ಚಟದ Glare ನಲ್ಲಿ ಅದರ ಝಳದಲ್ಲಿ ಚಿಕ್ಕ ತಪ್ಪುಗಳೂ ಮರೆಯಾಗಿ ಬಿಡುತ್ತವೆ. ವಿಪರೀತ ಕುಡಿಯುವ ಗಂಡ “ ಅದನ್ನೊಂದು ಬಿಟ್ರೆ ಸಾಕು, ನನ್ನ ಗಂಡ ದೇವರಂಥವನು” ಅಂತ ಅವನ ಹೆಂಡತಿ ಅಂದು ಕೊಳ್ಳುತ್ತಿರುತ್ತಾಳೆ. ಅವನು ಮಾಡುವ ಪ್ರತಿಯೊಂದು ಕೂಡಾ “ಕುಡಿದದ್ದರಿಂದಲೇ ಮಾಡುತ್ತಾನೆ” ಅಂತ ತಪ್ಪು ತಿಳಿದಿರುತ್ತಾಳೆ. ಆದರೆ ಅವನ ಶ್ವಪಚತನ, ಮುಂಗೋಪ, ಅಸಹನೆ, ಪೆಡಸು ಮಾತು, ಸೋಮಾರಿತನ, ಸಾಲಕೋರತನ, ಲಂಚಕೋರತನ, ಲಂಪಟತೆ ಮುಂತಾದವು ಕುಡಿತಕ್ಕೆ ರಿಲೇಟ್ ಆಗದೆಯೂ ಅವನಲ್ಲಿ ಮನೆ ಮಾಡಿಕೊಂಡಿರಬಹುದು ಅಂತ ಆಕೆಗೆ ಅನ್ನಿಸಿರುವುದಿಲ್ಲ. ಕುಡಿಯೋದೊಂದು ಬಿಟ್ಟು ಬಿಟ್ಟರೆ ನನ್ನ ಗಂಡನಿಗಿಂತ ದೇವರಿಲ್ಲ ಅಂದುಕೊಂಡಿರುತ್ತಾಳೆ. ದೇವರ ಪಾತ್ರದಾರಿಯಾದ ಗಂಡನೂ ಹಾಗಂತಲೇ ಅಂದುಕೊಂಡಿರುತ್ತಾನೆ. ಸುತ್ತಲಿನವರೂ ಕೂಡ “ಅದೊಂದು” ತಿದ್ದಿ ಸರಿಪಡಿಸಿ ಬಿಟ್ಟರೆ ಸಾಕು ಅಂದುಕೊಂಡಿರುತ್ತಾರೆ.

ಎಲ್ಲರೂ ಮಾಡುವ ತಪ್ಪೇ ಅದು. ಮನುಷ್ಯನ ಅತಿ ದೋಡ್ಡ ತಪ್ಪನ್ನು ತಿದ್ದಲು ಹೋಗುತ್ತಾರೆ. ಅಥವಾ ತಮ್ಮ ಮೇಜರ್‍ ಬಲಹೀನತೆಯನ್ನು ಸರಿಪಡಿಸಿಕೊಳ್ಳಲು ಹೆಣಗುತ್ತಾರೆ. ಕುಡಿತ ಬಿಡಲು ಆಸ್ಪತ್ರೆ ಸೇರಿಕೊಳ್ಳುವುದರಿಂದ ಹಿಡಿದು ಹೆಂಗಸರ ಖಯಾಲಿ ಬಿಡಲು ಅಯ್ಯಪ್ಪ ಸ್ವಾಮಿಯ ಮಾಲೆ ಹಾಕುವ ತನಕ ಸರದಿ.

ಆದರೆ ಫ್ರೆಂಡ್ಸ್, ಓದು ಸಲ ಈ ಮೇಜರ್‍ ತಪ್ಪುಗಳನ್ನು ಪಕ್ಕಕ್ಕಿಟ್ಟು ಯೋಚಿಸಿ. ನಮ್ಮಲ್ಲಿ ಎಷ್ಟೊಂದು ಚಿಕ್ಕ ಚಿಕ್ಕ ತಪ್ಪು, ಬಲಹೀನತೆ, ಅಪಸವ್ಯಗಳಿವೆಯಲ್ಲವೇ? ನನಗಂತೂ ನಾನೊಂದು ಬೃಹತ್ ತಪ್ಪುಗಳ ಮೂಟೆ ಅನ್ನಿಸಿಬಿಡುತ್ತದೆ. Actually ಇವು ಸುಲಭಕ್ಕೆ ಸರಿಪಡಿಸಬಹುದಾದ, ತಿದ್ದುಕೊಳ್ಳಬಹುದಾದ ಚಿಕ್ಕ ಚಿಕ್ಕ ತಪ್ಪುಗಳೇ. ಆದರೆ, ಮೊದಲು ದೊಡ್ಡ ತಪ್ಪು ಸರಿಪಡಿಸಿಕೊಳ್ಳೋಣ. ಆಮೇಲೆ ಉಳಿದವು ತಂತಾನೆ ಸರಿಹೋಗುತ್ತದೆ ಎಂಬ ಮೂರ್ಖ ತೀರ್ಮಾನಕ್ಕೆ ಬರುತ್ತೇವೆ. ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಬೇಕಾದ ಹುಡುಗ ನಾನು ಐ.ಎ.ಎಸ್ ಮಾಡುವುದರ ಮೇಲೆ ಗಮನವಿಟ್ಟಿದ್ದೇನೆ ಅಂದುಕೊಳ್ಳುವ ಹಾಗೆ.

ಉಹೂಂ, ಬದುಕು ಹಾಗೆಲ್ಲ ಒಂದು ದೊಡ್ಡ ತಪ್ಪು ಸರಿಪಡಿಸಿದ ಮಾತ್ರಕ್ಕೇ ತಂತಾನೇ ಚಿಕ್ಕಪುಟ್ಟ ತಪ್ಪುಗಳನ್ನು ಸರಿಗೊಳಿಸುವುದಿಲ್ಲ. ಪ್ರತೀ ತಪ್ಪನ್ನೂ ನಾವು ಪ್ರಯತ್ನಪೂರ್ವಕವಾಗಿ ತಿದ್ದಿಕೊಳ್ಳಬೇಕಾಗುತ್ತದೆ. ಯಾವತ್ತೋ ಒಂದು ದಿನ ಕುಡಿತ ಬಿಟ್ಟ ಮೇಲೆ ಅದು ಕಂಟ್ರೋಲಿಗೆ ಬಂದ ಮೇಲೆ ಸಿಗರೇಟು ಬಿಟ್ಟರಾಯಿತು ಅಂತ ಹೊಸ ಸಿಗರೇಟಿಗೆ ಕಡ್ಡಿ ಗೀರುವುದಿದೆಯಲ್ಲ ಮೂರ್ಖತನವೆಂದರೆ ಅದೇ.

-ರವಿ


ಕಳೆದ ತಿಂಗಳು ನೀರು ತಪ್ಪಿ ಹೋಗಿ ಕಿಬ್ಬೊಟ್ಟೆಯಾಳದಲ್ಲೆಲ್ಲೋ ಹೊರಳು!

ಅಕ್ಟೋಬರ್ 2, 2009

lovers

ಮೆಲ್ಲನೆ ನೀ ಬಂದು ಕೈ ಮುಟ್ಟಿದೇ

ನಲ್ಲೆಯ ಈ ದೇಹ ಝಲ್ಲೆನ್ನದೇ…

ಬೆಳಗ್ಗೆ ಹಿತ್ತಿಲಲ್ಲಿ ನಿನ್ನ ಕೆಂಪು ಚೆಕ್ಸ್ ಅಂಗಿ ಒಗೆದು ಹಾಕುತ್ತಿದ್ದಾಗ ಪಕ್ಕದ ಮನೆಯ ರೇಡಿಯೋದಲ್ಲಿ ಕೇಳಿಸಿದ ಹಾಡು. ಮನಸ್ಸಿಗೆ ನೂರು ನೆನಪು. ಒಂದೊಂದ್ಸಲ ನನ್ನ ಮೇಲೆ ನಂಗೇ ಸಿಟ್ಟು ಬರುತ್ತೆ. ಯಾಕೆ ಹೀಗೆ ಜಗತ್ತಿನಲ್ಲಿರುವ ಮತ್ತೆಲ್ಲವನ್ನೂ ಮರೆತು ಬೆಳಗ್ಗೆ ಎದ್ದವಳೇ ನಿನ್ನಲ್ಲಿಗೆ ಓಡಿ ಬರಬೇಕು ನಾನು? ಎಚ್ಚರವಾಗಿ ಕಣ್ಣು ಬಿಟ್ಟ ತಕ್ಷಣ ಅಮ್ಮನ ಫೋಟೋ ನೋಡುತ್ತೇನೆ. ಅವಳ ಶುಭ್ರ ಮಂದಹಾಸದಲ್ಲಿ ನೀನೇ ಕಂಡಂತಾಗುತ್ತದೆ. ಇದ್ದಿದ್ದರೆ ನಿನ್ನನ್ನು ನೋಡಿ ಅದೆಷ್ಟು ಸಂತೋಷ ಪಡುತ್ತಿದ್ದಳೋ ಅಂತ ಅಂದುಕೊಳ್ಳುತ್ತಳೇ ಸ್ನಾನ. ಇವತ್ತ್ಯಾಕೋ ಹಾಕಿಕೊಳ್ಳುವಾಗ ಬಟ್ಟೆ ಕೊಂಚ ಬಿಗಿಯೆನ್ನಿಸಿದವು. ನೀನು ಮೊದಲೇ ಡುಮ್ಮೀ ಅಂತ ರೇಗಿಸ್ತಿರ್‍ತೀಯ. ಸೀರೆಯುಟ್ಟುಕೊಳ್ಳುವಾಗ ಹೊಟ್ಟೆಯ ಪುಟ್ಟ ಮಡತೆಯ ಮೇಲಿನ ಹುಟ್ಟು ಮಚ್ಚೆ ಕಾಣಿಸಿತು. ನಿನಗೆ ಅದನ್ನು ಕಂಡರೆ ಎಂಥ ಹುಚ್ಚು ಪ್ರೀತಿಯೋ, ಕೆನ್ನೆಗೆ ಕೊಟ್ಟದ್ದಕ್ಕಿಂತ ಹೆಚ್ಚಿನ ಮುತ್ತು ನನ್ನ ಹೊಟ್ಟೆಯ ಮೇಲಿನ ಮಚ್ಚೆಯೇ ನುಂಗಿತು. ಸರಸರನೆ ಅಡುಗೆಗಿಟ್ಟು ಅಪ್ಪನಿಗೆ ತಿಂಡಿ ಮಾಡಿಕೊಟ್ಟೆ. ಜಗತ್ತಿಗೇ ರಜೆಯಿದೆಯೇನೋ ಎಂಬಂತೆ ಮಲಗಿದ್ದ ತಮ್ಮನನ್ನು ಎಬ್ಬಿಸುವ ಹೊತ್ತಿಗಾಗಲೇ ಮನೆಯ ಅಂಗಳದಲ್ಲಿ ಘಳ ಘಳ ಸೂರ್ಯ. ಮಾಡಿಟ್ಟದ್ದನ್ನೇ ಡಬ್ಬಿಗೆ ಹಾಕಿಕೊಂಡು ಇನ್ನಿಲ್ಲದ ಸಡಗರದೊಂದಿಗೆ ನಿನ್ನಲ್ಲಿಗೆ ಹೊರಡುತ್ತೇನೆ. ದಾರಿಯುದ್ದಕ್ಕೂ ಯಾವುದೋ ಹಾಡಿನ ಗುನುಗು. ಮೂರು ಹಾಡು ಮುಗಿಯುವಷ್ಟರಲ್ಲಿ ನಿನ್ನ ಮನೆ.

ಪೂಜಿಸಲೆಂದೇ ಹೂಗಳ ತಂದೆ

ದರುಶನ ಕೋರಿ ನಾನಿಂದೇ

ತೆರೆಯೋ ಬಾಗಿಲನೂ..

ಚಿರಂತ್, ಬೆಳಗ್ಗೆ ನಿನ್ನನ್ನ ಎಬ್ಬಿಸುವುದರಲ್ಲೇ ಒಂದು ಮಜವಿದೆ ನೋಡು. ನನ್ನ ಹತ್ತಿರ ತಲಬಾಗಿಲಿನದೊಂದು ಕೀ ಇರದೇ ಹೋಗಿದ್ದಿದ್ದರೆ, ಪುಣ್ಯಾತ್ಮ! ಮದ್ಯಾಹ್ನದ ತನಕ  ಬಾಗಿಲಲ್ಲೇ ನಿಂತಿರಬೇಕಾಗುತ್ತಿತ್ತೇನೋ.ಇಂನ್‌ಸ್ಟಾಲ್‌ಮೆಂಟಿನಲ್ಲಿ ಏಳೋ ಮಹಾಶಯ ನೀನು. ಆದರೂ ನಿದ್ದೆಯಲ್ಲಿ ನಿನ್ನನ್ನು ನೋಡುವುದೇ ಒಂದು ಚೆಂದ.  ತುಂಬ ನೀಟಾಗಿ ಬಟ್ಟೆ ಹಾಕಿಕೊಂಡು, ತಲೆ ಬಾಚಿಕೊಂಡು ಊಹುಂ, ನಿನ್ನ ಕೆದರಿದ ಕ್ರಾಪೇ ಚಂದ. ನುಣ್ಣಗೆ ಷೇವ್ ಮಾಡಿಕೊಂಡಿರುತ್ತೀಯಲ್ಲ? ಅದಕ್ಕಿಂತ ಚೂರು ಚೂರು ಗಡ್ಡ ಬೆಳೆದಿದ್ದರೇನೇ ಸರಿ. ಇನ್ನೊಂದೇ ಒಂದು ಸಲ ಮೀಸೆ ತೆಗೆದರೆ ನೋಡು, ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಬಿಡುತ್ತೇನೆ. ಬರೀ ಒಂದು ಟ್ರಾಕ್ ಪ್ಯಾಂಟ್ ಹಾಕಿಕೊಂಡು ಮಲಗಿದವನ ಎದೆ ಮೇಲಿನ ಪೊದೆಗೂದಲು ನೇವರಿಸಿ ನನ್ನ ಪುಸ್ತಕಗಳನ್ನು ಒಂದು ಕಡೆ ಎತ್ತಿಟ್ಟು ನಿನಗೋಸ್ಕರ ಕಾಫಿ ಮಾಡಲು ನಿಲ್ಲುತ್ತೇನೆ. ನಂಗೊತ್ತು, ನಿನಗೆ ರಾತ್ರಿ ಹಾಕಿಟ್ಟ ಡಿಕಾಕ್ಷನ್ನಿನ ಕಾಫಿಯೇ ಬೇಕು. ನಿದ್ರೆಯಲ್ಲೇ ಇದ್ದಿಯೇನೋ ಎಂಬಂತೆ ದಿಂಬಿಗೆ ಒರಗಿ ಕುಳಿತು ದೊಡ್ಡ ಕಪ್ಪಿನ ತುಂಬಾ ಹಾಕಿಕೊಟ್ಟ ಕಾಫಿ ಕುಡಿಯುತ್ತಿಯ. ನಿನ್ನ ಕಡುಗಪ್ಪು ಕಣ್ಣು ನನಗೊಂದು Thanks ಹೇಳಿ ಕಿಟಕಿಯಾಚೆಗೆ ಹೊರಳುತ್ತವೆ. ಅವುಗಳಲ್ಲಿನ ಸೈಲೆನ್ಸ್ ನನಗೆ ತುಂಬ ಇಷ್ಟವಾಗುತ್ತದೆ. ಜಗತ್ತಿನೊಂದಿಗೆ ಯಾವುದೇ ದೂರು, ತಕರಾರುಗಳಿಲ್ಲದ ತಣ್ಣಗಿನ ಕಣ್ಣು ಅವು.

ಹಮ್ ನೇ ದೇಖೀ ಹೈಂ

ಇನ್ ಆಂಖೋಮೆ ಮೆಹಕತೇ ಖುಷಬೂ….

ಏಳುವ ತನಕ ತಕರಾರೇ ಹೊರತು ಎದ್ದ ಮೇಲೆ ನೀನು ಪಾದರಸ. ಬೆಚ್ವಗೆ ಗೀಝರಿನಲ್ಲಿ ಕಾದ ನೀರು ನಿನ್ನ ಬಂಡೆಗಲ್ಲಿನಂತಹ ಬೆನ್ನಿಗೆ ಚೆಲ್ಲಿ ಸೋಪು ಉಜ್ಜುತ್ತಿದ್ದರೆ ಕೈ ತಡವರಿಸುತ್ತದೆ. ಎದೆ, ಭುಜ, ತೋಳು-ವಿಗ್ರಹ ಕಣೋ ನೀನು.ಟವೆಲ್ಲು ಸುತ್ತಿ ಈಚೆಗೆ ಕರೆದುಕೊಂಡು ಬರುವ ಹೊತ್ತಿಗೆ ನನಗೇ ಅರ್ಧ ಸ್ನಾನ. ಇವೆಲ್ಲ ನನಗೆ Best moments of our life ಅನ್ನಿಸುತ್ತಿರುತ್ತದೆ. ಹತ್ತೋ, ಇಪ್ಪತ್ತೋ,ಐವತ್ತೋ ವರ್ಷಗಳಾದ ಮೇಲೆ ಹೇಗಿರುತ್ತೀವೋ ಗೊತ್ತಿಲ್ಲ ಚಿರಂತ್: ಈ ಕ್ಷಣಕ್ಕೆ ಮಾತ್ರ ಭಗವಂತ ಅತ್ಯಂತ ಶ್ರದ್ದೆಯಿಂದ ಕೂತು ಮದುವೆ ಮಾಡಿಸಿದ ಅದ್ಬುತ ದಂಪತಿಗಳಂತಿದ್ದೇವೆ. ಸ್ನಾನವಾದ ಮೇಲೆ ಹತ್ತು ನಿಮಿಷ ನೀನುಂಟು, ನಿನ್ನ ದೇವರುಂಟು. ಅಷ್ಟೊತ್ತಿಗೆ ಮಾಡಿಕೊಂಡು ತಂದ ತಿಂಡಿ ಬಿಸಿ ಮಾಡಿಕೊಂಡು ನಿನಗೋಸ್ಕರ ಎತ್ತಿಟ್ಟರೆ, ಮಗುವಿನ ಹಾಗೆ ಇಷ್ಟಿಷ್ಟೇ ತಿನ್ನುವ ನೀನು.

ಸಂಕೇತ್ ಮಿಲನ್ ಕಾ

ಭೂಲ್ ನ ಜಾನಾ

ಮೇರಾ ಪ್ಯಾರ್‍‌ನ ಬಿಸರಾನಾ…

ಹೊರಡುವ ಹೊತ್ತಿಗೆ ಬಾಗಿಲ ಮರೆಯಲ್ಲಿ ನಿಂತು ಬರಸೆಳೆದೆ ನೀನು ಕೊಡುವ ಮುತ್ತು, ಅದೇ ನನಗೆ ಸಂಜೆ ಕಾಲೇಜು ಮುಗಿಯುವವರೆಗಿನ ಮುತ್ತು ಬುತ್ತಿ. ಕಾಳೇಜಿನ ಬಳಿ  ಬೈಕು ನಿಲ್ಲಿಸಿ ಇಳಿಸಿ ಹೋಗುವ ನಿನ್ನನ್ನು, ತಿರುವಿನಲ್ಲಿ ಮರೆಯಾಗುವ ತನಕ ನೋಡುತ್ತಾ ನಿಲ್ಲುತ್ತೇನೆ. ಗೆಳತಿಯರು ಛೇಡಿಸುತ್ತಾರೆ. ಮೊದಲ ಪಿರಿಯಡ್‌ನಲ್ಲಿ ನಾನೆಲ್ಲೋ, ಮನಸೆಲ್ಲೋ, ಪಾಠವೆಲ್ಲೋ..? ಮದ್ಯಾಹ್ನ ಗೆಳತಿಯರೊಂದಿಗೆ ಕೂತು ಊಟ ಮಾಡುವಾಗ ನಿನು ಆಫೀಸಿನಲ್ಲಿ ಏನು ತರಿಸಿಕೊಂಡಿರುತ್ತೀಯೋ ಅಂತ ಯೋಚನೆ. ನೋಡ ನೋಡುತ್ತಾ ಸಂಜೆಯಾಗಿಬಿಡುತ್ತದೆ. ಇಳಿಸಿ ಹೋದ ಜಾಗದಲ್ಲೇ ನೀನು, ನಿನ್ನ ಬೈಕು.

ಜಬ್ ದೀಪ್ ಜಲೇ ಆನಾ

ಜಬ್ ಶಾಮ್ ಢಲೇ ಆನಾ

ದಿನಗಳು ಹೀಗೇ ಕಳೆದುಹೋಗಿ ಬಿಡುತ್ತವೇನೋ ಅಂತ ಕಳವಳಗೊಳ್ಳುತ್ತೇನೆ ಚಿರಂತ್. ನಂಗೊತ್ತು, ನಿನ್ನ ಮನಸ್ಸು ನನ್ನ ವಿಷಯದಲ್ಲಿ ನಿಚ್ಚಳ. ನಂಗೆ ಬೇಕು ಅಂದಿದ್ಯಾವುದನ್ನೂ ನೀನು ಇಲ್ಲವೆಂದಿಲ್ಲ. ಇರುವ ಅತ್ಯುತ್ತಮ ರೆಸ್ಟುರಾಂಟ್ಸ್ ಗೆ ಕರೆದುಕೊಂಡು ಹೋಗಿದ್ದೀಯ. ಕೇಳುವುದಿರಲಿ, ಸುಮ್ಮನೆ ಆಸೆ ಪಟ್ಟ ಪ್ರತಿಯೊಂದನ್ನೂ ತೆಗೆಸಿಕೊಟ್ಟಿದ್ದೀಯ. ನಾವು ಒಟ್ಟಿಗೆ ಹೋಗದ ಜಾಗಗಗಳಿಲ್ಲ. ಆದರೂ ಒಂದು ಮದುವೆ ಅಂತ ಆಗಿಬಿಟ್ಟರೆ ಮನಸ್ಸಿನ ಈ ಕಳವಳಗಳೂ ದೂರವಾಗುತ್ತವೇನೋ? ಅಪ್ಪ ಮೇಲಿಂದ ಮೇಲೆ ಎರಡು ಸಲ ಕರೆದು ಕೇಳಿದರು. ಒಮ್ಮೆ ನೀನು ಬಂದು ಮಾತನಾಡು. ನಿಜ ಹೇಳಲಾ ಚಿರಂತ್, ಕಳೆದ ತಿಂಗಳು ನಾನು ನೀರು ಹಾಕಿಕೊಂಡಿಲ್ಲ. ಕಿಬ್ಬೊಟ್ಟೆಯಾಳದಲ್ಲೆಲ್ಲೋ ಸಣ್ಣ ಹೊರಳು. ಇನ್ನು ತಡಮಾಡಬೇಡ ಕಣೋ….

-ನಿನ್ನವಳು.


’ಜಾಣ ಮರೀ ಜಪಾನಿಗೆ ಬರ್ತೀಯಾ’ ಅಂದ್ಲಂತೆ ಶೋಭಕ್ಕ

ಅಕ್ಟೋಬರ್ 1, 2009

ಕೇಳಿ-೪

HDD

ಪ್ರಶ್ನೆ: ಪ್ರೀತ್ಸಿ ಕೈ ಕೊಡೋದು ಹುಡುಗೀರಾ ಹಾಬೀನಾ?

ಉ: ಇಲ್ಲಪ್ಪ! ಅದು ಪ್ರೊಫೆಷನ್ನು.

ಪ್ರಶ್ನೆ: ಗೌಡರ ಹೆಲಿಕಾಪ್ಟರು  ಧರೆಗೆ ಅಪ್ಪಳಿಸಿದರೆ?

ಉ: ಧರೆ ಮತ್ತು ಕಾಪ್ಟರ್‍-ಎರಡೂ ಡಿವೈಡ್ ಆಗ್ತವೆ!

ಪ್ರಶ್ನೆ: ಚೀನಾ ಪ್ರವಾಸದ ನಂತರ ಯಡ್ಡಿ ಬೇರೆ ಬೇರೆ ದೇಶಗಳಿಗೆ ಹೋಗ್ತಾರಂತಲ್ಲ?

ಉ: ’ಜಾಣ ಮರೀ ಜಪಾನಿಗೆ ಬರ್‍ತೀಯಾ’ ಅಂದ್ಲಂತೆ ಶೋಭಕ್ಕ

ಪ್ರಶ್ನೆ: ಈಗಲೂ ಬದಲಿಸಲಾಗದ ನಿನ್ನ ಕೆಟ್ಟ ಗುಣ ಯಾವುದು?

ಉ: ನೂರು ಸಲ ಮೋಸವಾದರೂ ನೂರ ಒಂದನೇ ಸಲ ನಂಬುವುದು

ಪ್ರಶ್ನೆ: ಗೌಡರು ಬಾಲ್ಯದಲ್ಲಿ ಅಂಥ ತುಂಟರೇನಾಗಿರಲಿಲ್ಲವಂತಲ್ಲ?

ಉ: ’ಅವರು ಹುಟ್ಟಿದ್ದೇ ವಯಸ್ಸಾದ ಮೇಲೆ’ ಎಂಬ ವಾದವೊಂದಿದೆ.

ಪ್ರಶ್ನೆ: ಕಡು ಬಡವನ ಸಾವಿಗೂ, ಪರಮ ಶ್ರೀಮಂತನ ಸಾವಿಗೂ ಏನು ವ್ಯತ್ಯಾಸ?

ಉ: ಇದಕ್ಕೆ ಹಂದಿಜ್ವರವೆಂದೂ, ಅದಕ್ಕೆ H1N1 ಎಂದೂ ಬರೆಯಲಾಗುತ್ತದೆ.

ಪ್ರಶ್ನೆ: ಕುಮಾರಣ್ಣ ಯಾಕೆ ಮತ್ತೆ ಪ್ಯಾಂಟ್ ಹಾಕಲು ಶುರು ಮಾಡಿದ್ದಾರೆ?

ಉ: ರೇವಣ್ಣ ಮೂಗಲ್ಲಿ ಬೆರಳಿಟ್ಟುಕೊಂಡು ಪಂಚೆಗೆ ಕೈ ಒರೆಸಿದನಂತೆ!

ಪ್ರಶ್ನೆ; ಶೋಭಾ ಕರಂದ್ಲಾಜೆಯವರು ಎಲ್ಲ ಫೋಟೋಗಳಲ್ಲೂ ನಗುತ್ತಿರಲು ಕಾರಣ?

ಉ:ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟು!

ಪ್ರಶ್ನೆ:ಪಾಪ, ರಾಧಿಕಾ ಈ ಸಲ ಯಾರಿಗೂ ರಾಖಿ ಕಟ್ಟಲಿಲ್ಲವಂತೆ?

ಉ:ಪೋಸ್ಟಲ್ಲಿ ಕಳುಹಿಸಿದ್ದನ್ನ ಚೆನ್ನಿಗಪ್ಪ ಸೊಂಟಕ್ಕೆ ಕಟ್ಟಿಕೊಂಡು ತಿರುಗುತ್ತಿದ್ದಾನಂತೆ!.

ಪ್ರಶ್ನೆ: ಮೊನ್ನೆ ಮೊನ್ನೆಯಷ್ಟೆ ದೇವೇಗೌಡರು ಮನಬಿಚ್ಚಿ ನಕ್ಕರಂತೆ?

ಉ: ಸದಾನಂದ ಗೌಡರಿಗೆ ಹಂದಿಜ್ವರ ಅಂತ ರೇವಣ್ಣ ನಂಬಿಸಿದ್ದನಂತೆ?


ಇದು ಹದಿನೈದನೇ ವರ್ಷದ ಅಫಿಡವಿಟ್ಟು

ಸೆಪ್ಟೆಂಬರ್ 30, 2009

rbimg

ದುಡ್ಡು ಕಾಸಿನ ವಿಷಯದ ಬಗ್ಗೆ ಹೇಳುವುದಾದರೆ, ಇದು ನಿವೃತ್ತಿಗೆ ಅಣಿಯಾಗುವ ಸಮಯ, ಮನುಷ್ಯ ಐವತ್ತೆಂಟಕ್ಕೆ ನಿವೃತ್ತಬಾಗಬೇಕು. ಆದರೆ ನಿನ್ನಂಥವನು ಯಾವತ್ತಿಗಾದರೂ ನಿವೃತ್ತನಾಗುವುದು ಸಾಧ್ಯವೇ ರವೀ, ಅಂತ ಗೆಳೆಯರು ತಮಾಷೆ ಮಾಡುತ್ತಾರೆ. ವೃತ್ತ ಪತ್ರಿಕೆಯವರಿಗೆ ನಿವೃತ್ತಿ ಇರುವುದಿಲ್ಲ ಎಂಬ ಮಾತು ಸತ್ಯ.

ಈ ವರ್ಷ ಒಂದು ವೋಕ್ಸ್ ವ್ಯಾಗನ್ ಕಾರು ಮತ್ತು ಆಫೀಸಿನ ಬಳಕೆಗಾಗಿ ಒಂದು ಮಾರುತಿ ಓಮ್ನಿ ಖರೀದಿಸಿದೆ. ಮಗಳ ಸೀಮಂತಕ್ಕೆ ಅಂತ ಖರೀದಿಸಿದ ಚಿನ್ನದ ಬೆಲೆ ಒಂದೂವರೆ ಲಕ್ಷ ರುಪಾಯಿ ಯಷ್ಟಾಯಿತು. ಇಂಗ್ಲೆಂಡಿನಿಂದ ಹಿಂತಿರುಗಿದ ನನ್ನ ಮಗ ಕರ್ಣ ತಾನೊಂದು ವೋಕ್ಸ್ ವ್ಯಾಗನ್ ಕಾರು ಖರೀದಿಸಿದ್ದಾನೆ. ಉಳಿದಂತೆ, ರಿಸೆಷನ್ ಕಾರಣವೋ ಏನೋ, ಹೆಚ್ಚಿನ ಖರೀದಿಗಳಾಗಿಲ್ಲ. ಹಾಗೆ ಹೇರಳವಾಗಿ ನಾನು ಖರೀದಿಸಿರುವ ವಸ್ತುಗಳೆಂದರೆ ಟೀವಿ ಕಾರ್ಯಕ್ರಮಗಳಿಗಾಗಿ ಹೊಸ ಷರ್ಟುಗಳು, ಪುಸ್ತಕಗಳು ಮತ್ತು ಸಂಗೀತದ ಸಿ.ಡಿ ಗಳು. ಆಸ್ತಿ ಖರೀದಿಯ ಗೋಜಿಗೆ ಈ ಸಲ ಹೋಗಲಿಲ್ಲ.

ಪದ್ಮನಾಭ ನಗರದ ’ಅಮ್ಮ’ ಮನೆ ಹಾಗೂ ಒಂದು ಫ್ಲಾಟ್ ಭಾವನಾಗೆ ಉಡುಗೊರೆಯಾಗಿ ಕೊಟ್ಟಿದ್ದೇನೆ. ಶೇಷಾದ್ರಿಪುರದ ಮನೆಯನ್ನು ಚೇತನಾಗೆ ಉಡುಗೊರೆಯಾಗಿ ಕೊಟ್ಟಿದ್ದೇನೆ. ಬನಶಂಕರಿಯ ಮನೆ ’ಅಮ್ಮೀಜಾನ್’ ಅವತ್ತಿಗೂ ಇವತ್ತಿಗೂ ಲಲಿತೆಯ ಸುಪರ್ದಿಯಲ್ಲಿದೆ. ನಾನು ಕುಳಿತು ಕೆಲಸ ಮಾಡುವ ಆಫೀಸು ಸ್ವಂತದ್ದು. ಇಲ್ಲಿ ಸುಮಾರು ಏಳು ಕಂಪ್ಯೂಟರ್‍‌ಗಳ ಖರೀದಿಯಾಗಿದೆ. ನಿವೇದಿತಾಳ ಮನೆಯೊಂದನ್ನು ನಾನು ಖರೀದಿಸಿದ್ದೇನೆ. ಬ್ಯಾಂಕಿನಲ್ಲಿ ಕೊಂಚ ಸಾಲವಿದೆ. ನನ್ನ ದುಡಿಮೆ ಅದನ್ನು ತೀರಿಸುತ್ತಿದೆ.

’ಹಾಯ್ ಬೆಂಗಳೂರ್‍!’ ಮತ್ತು ’ಓ ಮನಸೇ..’ ಎರಡೂ ಲಾಭದಲ್ಲಿದೆ. ಪ್ರತೀ ತಿಂಗಳು ಪತ್ರಿಕೆಯ ಸಿಬ್ಬಂದಿಗೆ ನಾನು ಕೊಡುವ ಸಂಬಳ ಐದು ಲಕ್ಷ ರುಪಾಯಿ. ಅತಿ ಹೆಚ್ಚಿನ ಸಂಬಳ ಪಡೆಯುತ್ತಿರುವಾಕೆ ನಿವೇದಿತಾ.

ನೀವೆಲ್ಲಕೊಟ್ಟ ಹಣದಿಂದ ನಾನು ಕಟ್ಟಿದ ಶಾಲೆ ’ಪ್ರಾರ್ಥನಾ’. ಇವತ್ತು ಅಲ್ಲಿ ೫೫೦೦ ಮಕ್ಕಳು ಓದುತ್ತಿದ್ದಾರೆ. ಸುಮಾರು ೩೦೦ ಜನ ಸಿಬ್ಬಂದಿಯವರಿದ್ದಾರೆ. ಅವರಿಗೆ ನಾವು ಪ್ರತಿ ತಿಂಗಳು ಕೊಡೆ ಮಾಡುವ ಸಂಬಳ ಹದಿನೇಳು ಲಕ್ಷ ರೂಪಾಯಿ. ನಾಲ್ಕು ಸ್ವಂತ ಕಟ್ಟಡಗಳಲ್ಲಿ, ಒಂದು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ’ಪ್ರಾರ್ಥನಾ’ ತನ್ನ ಸಾಲ ತೀರಿಸಿಕೊಂಡು ಲಾಭದಲ್ಲಿ ನಡೆದಿದೆ. ಅದರ ಲಾಭವನ್ನೆಲ್ಲ ಶಾಲೆಯ ಮೇಲೆಯೇ ಮತ್ತೆ ತೊಡಗಿಸುವ ಸಂಪ್ರದಾಯ ಮುಂದುವರೆಸಿಕೊಂಡು ಬಂದಿದ್ದೇನೆ.

ನನ್ನಲ್ಲಿ ಕಪ್ಪು ಹಣವಿಲ್ಲ. ’ಪತ್ರಿಕೆ’ ಪ್ರಾರಂಭವಾದಾಗಿನಿಂದ ನಿಗದಿತವಾಗಿ ಆದಾಯ ತೆರಿಗೆ ತುಂಬುತ್ತಿದ್ದೇನೆ. ಪತ್ರಿಕೆಗಳು, ಟೀವಿ ಕಾರ್ಯಕ್ರಮ, ಪುಸ್ತಕ ಪ್ರಕಾಶನ ಇವುಗಳಿಂದ ಬರುವ ಲಾಭಕ್ಕೆ ಈ ಬಾರಿ ನಾನು ತುಂಬಿರುವ ಆದಾಯ ತೆರಿಗೆ ೫೨.೪೭ ಲಕ್ಷ ರುಪಾಯಿಗಳು.

ನೀವು ಕೊಡುವ ಹಣದಲ್ಲೇ ’ಸೀತಾನದಿ ಸುರೇಂದ್ರನ ಹೆಸರಿನ ಸ್ಕಾಲರ್‌ಷಿಪ್ ಯೋಜನೆ’ ಮುಂದುವರೆದಿದೆ. ಆ ಹಣದಲ್ಲಿ ಕೆಲವು ಬಡ ಪ್ರತಿಭಾವಂತ ಮಕ್ಕಳು ಪಿ.ಯು.ಸಿ, ಬಿ.ಇ, ಎಂ.ಬಿ.ಬಿ.ಎಸ್, ಮುಂತಾದ ಕೋರ್ಸುಗಳಿಗೆ ಓದುತ್ತಿದ್ಧಾರೆ. ಅದೇ ಲಾಭದ ಹಣದಲ್ಲಿ ಕಿಡ್ನಿ ಕಾಯಿಲೆಯವರಿಗೆ, ಕ್ಯಾನ್ಸರ್‍ ರೋಗಿಗಳಿಗೆ, ಅನಾಥ ವೃದ್ದರಿಗೆ, ಎಚ್.ಐ.ವಿ ಸೋಂಕು ತಗುಲಿದವರಿಗೆ ಉಚಿತವಾಗಿ ಔಷಧಿ ಕೊಡಿಸುತ್ತಿದ್ದೇನೆ.

ಲೆಕ್ಕಾಚಾರದ ವಿಷಯದಲ್ಲಿ ನ್ನಿಂದ ಪೊರಪಾಟುಗಳಾಗಿರಬಹುದು. ಆದರೆ ಲೆಕ್ಕ ಪತ್ರದ ವಿಷಯದಲ್ಲಿ ಎಲ್ಲವೂ ನಿಸೂರು. ನಮ್ಮ ಸಂಸ್ಥೆಗಳ ಪ್ರತಿ ನೌಕರನಿಗೂ ಪ್ರಾವಿಡೆಂಟ್ ಫಂಡ್ ದೊರೆಯುತ್ತದೆ.

ನನಗೆ ದಕ್ಕುತ್ತಿರುವುದು: ಸಮಾಧಾನ.

-ಬೆಳಗೆರೆ


ಓ ಮನಸೇ ಎಪ್ಪತ್ಮೂರನೇ ಸಂಚಿಕೆ ಇದೀಗ ಮಾರುಕಟ್ಟೆಯಲ್ಲಿ

ಸೆಪ್ಟೆಂಬರ್ 3, 2009

ಓ ಮನಸೇ..೭೩

ಇದೆಂಥ ವಿಚಿತ್ರವೋ!

ಎರಡು ತಲೆಯ ಹಾವಿಗೆ, ಹದಿನಾರು ಕಾಲುಗಳ ಆಮೆಗೆ, ಕರಿ ಬೆಕ್ಕಿಗೆ, ಎಡಮುರಿ ಅಥವಾ ಬಲಮುರಿ ಶಂಖಕ್ಕೆ ಕೋಟಿ ಕೋಟಿ ರುಪಾಯಿ ಸಿಗುತ್ತಾ?

’ಸಿಗುತ್ತೇನೋ’ ಅಂತ ಅವುಗಳ ಬೆನ್ನು ಬಿದ್ದವರೆಷ್ಟೋ?

ಹಾಗಾದ್ರೆ, ಎರಡು ತಲೆ ಹಾವಿರೋದು ನಿಜಾನಾ ?

ಕರಿಬೆಕ್ಕಿನ ನಾಲಗೆ ಕಪ್ಪಗೇ ಏಕಿರಬೇಕು?

ಆ ಐನೂರು ನಾಣ್ಯಗಳು ಸಿಕ್ಕಿಬಿಟ್ಟರೆ ಇಂದಿರಾಗಾಂಧಿಯ ಸ್ವಿಸ್ ಬ್ಯಾಂಕ್ ಅಕೌಂಟ್ ನಂಬರ್‍ ಸಿಗುತ್ತಾ?

ಈ ಸಲದ ಓ ಮನಸೇ ಅತ್ಯಂತ ಕುತೂಹಲಭರಿತವಾಗಿದೆ.

ಜೊತೆಗೇ…

  • ’ಲವ್ ಲಿಕ್ವಿಡ್’ ಎಂಬ ಮಧುರ ಔಷಧ!
  • ಗ್ರಾಮೋಫೋನ್ ಯುಗದ ಸಾಮ್ರಾಜ್ಞಿ ಶಂಷಾದ್ ಬೇಗಂ!
  • ಜಗದ್ವಿಖ್ಯಾತ ಪತ್ರಿಕೆ ರೀಡರ್‍ಸ್ ಡೈಜೆಸ್ಟ್ ಮುಚ್ಚಿ ಹೋಗುತ್ತಾ?
  • ಮಹಿಳೆಯರು ಹತ್ತು ಜನ ಹೇಳಿದ್ದನ್ನೇ ಯಾಕೆ ಹೇಳ್ತಾರೆ?
  • ಇನ್ನೂ ಅಷ್ಟು ವಿಷಯ ವೈವಿಧ್ಯತೆಗಳು.

ಬದುಕಿನ ಪಾಸಿಟಿವ್ ಸೈಡನ್ನೇ ಹೆಚ್ಚಾಗಿ ಹೇಳುವ ’ಓ ಮನಸೇ’ ಖಂಡಿತಾ ನಿಮ್ಮ ಕುತೂಹಲಗಳಿಗೆ ಕನ್ನಡಿಯಾಗುತ್ತದೆ.

ಓ ಮನಸೇ ಓದಿ, ನಿಮ್ಮ ಸ್ನೇಹಿತರಿಗೂ ಪರಿಚಯಿಸಿ